ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಸೋಮವಾರ, ಆಗಸ್ಟ್ 10, 2009

ಅದನ್ನೂ ದೇವರು ಎಂದು ಕರೆದುಬಿಟ್ಟರೆ ????

ರೇಲ್ವೇ ಸ್ಟೇಷನ್ನಿನಲ್ಲಿ ಹಿರಿಯ ವಿಜ್ಞಾನ ಲೇಖಕ ಎಮ್.ಆರ್. ನಾಗರಾಜ್ ಸಿಕ್ಕಿದ್ದರು. ಹೋಗಿ "ನಮಸ್ತೆ ಸರ್" ಎಂದು ಮಾತನಾಡಿಸಿದೆ.
ಅವರಿಗೆ ತಕ್ಷಣ ಗುರುತಾದಂತೆ ಕಾಣಲಿಲ್ಲ. "ಎಲ್ಲಿ ಸಿಕ್ಕಿದ್ದೆವು ಅಂತ ನೆನಪಾಗಲಿಲ್ಲ" ಎಂದರು.
"ಎರಡು ವರ್ಷದ ಹಿಂದೆ ಕೂಡಲಸಂಗಮದಲ್ಲಿ ವಿಜ್ಞಾನ ಲೇಖಕರ ಶಿಬಿರದಲ್ಲಿ ಸರ್.. ಪದೇ ಪದೇ ದೇವರನ್ನು ಎಳೆತಂದು ಚರ್ಚೆಯ ದಾರಿ ತಪ್ಪಿಸುತ್ತಿದ್ದೆನಲ್ಲ..ನಾನೇ" ಎಂದೆ.
"ಓಹ್ ..ದಾವಣಗೆರೆಯವರಲ್ಲವೇ ನೀವು? ಸಂತೋಷ!" ಕುಶಲೋಪರಿ ಮುಂದೆ ಸಾಗಿತು. ನೆನಪು ಎರಡು ವರ್ಷಗಳ ಹಿಂದಕ್ಕೋಡಿತು.

ಈ ಸಮಾವೇಶದಲ್ಲಿ ನಾಸ್ತಿಕವಾದಕ್ಕೆ ವಿಶೇಷ ಮಹತ್ವವಿತ್ತು. ದೇವರನ್ನು ಹಿಗ್ಗಾಮುಗ್ಗಾ ಬೈಯುವುದು "ಹಿಡನ್ ಅಜೆಂಡಾ" ಗಳಲ್ಲೊಂದು ಎನ್ನಬಹುದು. ನನಗೆ ನಿರೀಶ್ವರವಾದಿಗಳನ್ನು, ಕಮ್ಯುನಿಷ್ಟರನ್ನು ಮಾತನಾಡಿಸಿ ಅಣಕಿಸುವುದರಲ್ಲಿ ಭಲೇ ಮಜಾ ಬರುತ್ತದೆ. ಇದಕ್ಕಾಗಿಯೇ ಮೈಸೂರು, ಬೆಂಗಳೂರುಗಳಲ್ಲಿ ಎಸ್.ಯು.ಸಿ.ಐ ಕಚೇರಿಗಳಿಗೆ ಹೋಗಿದ್ದೇನೆ. ಬಸ್ ಸ್ಟಾಂಡ್ ಗಳಲ್ಲಿ ಡಬ್ಬಿ ಹಿಡಿದು ಹಣ ಕೇಳಲು ನಿಲ್ಲುವ ಹುಡುಗರನ್ನು ಮಾತನಾಡಿಸಿದ್ದೆನೆ. ಯಾವುದಾದರೂ ಮೇಳದಲ್ಲಿ ಇವರ ಮಳಿಗೆಯನ್ನು ಕಂಡರೆ ಅತ್ಯಂತ ಸಂಭ್ರಮದಿಂದ ಕಿಚಾಯಿಸಲು ಹೋಗುತ್ತೇನೆ. ಅವರ ಬಗೆಗಿನ ಜೋಕುಗಳನ್ನು ಹೇಳಿ ಅವರು ಸಿಟ್ಟಾಗಿ ಮುಖ ಕೆಂಪು ಮಾಡಿಕೊಳ್ಳುವುದನ್ನು ನೋಡುವುದೆಂದರೆ ನನಗೆ ಬಹಳ ಖುಷಿ.

ಈ ಶಿಬಿರದಲ್ಲಿದ್ದ ಅತ್ಯಂತ ಕಿರಿಯ ವಯಸ್ಸಿನ ಮತ್ತು ಅತ್ಯಂತ ಉದ್ಧಟ ಸದಸ್ಯ ನಾನು. ಬೇಕೆಂದೇ ಗೋಷ್ಟಿಗಳಿಗೆ ಹೋಗುವಾಗ ಹಣೆಗೆ ಢಾಳಾಗಿ ವಿಭೂತಿ ಬಳಿದುಕೊಂಡು ಹೋಗುತ್ತಿದ್ದೆ. ಸಮ್ಮೇಳನದ ಕಡೆಯ ದಿನ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಅತಿಥಿಗಳಾಗಿ ಆಗಮಿಸಿದ್ದರು. ಇವರು ನಿಜಕ್ಕೂ ಮೇಧಾವಿಗಳು. ಭೌತಶಾಸ್ತ್ರದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ಅನುವಾದಿಸಿದ್ದಾರೆ. ವೇದಿಕೆಯ ಮೇಲೆ ಮಾತನಾಡುತ್ತಾ "ವಿಜ್ಞಾನ ಎಂದರೆ ಜನರಿಗೆ ಸತ್ಯವನ್ನು ತೋರಿಸುವುದು. ವಿಜ್ಞಾನವೇ ಸತ್ಯ." ಎಂದರು.
ಪ್ರಶ್ನೋತ್ತರ ಕಾರ್ಯಕ್ರಮ ಮೊದಲಾಯಿತು. ಅನೇಕರು ಪ್ರಶ್ನೆಗಳನ್ನು ಕೇಳಿ ತಮ್ಮ ಜ್ಞಾನದಾಹವನ್ನು ತೃಪ್ತಿ ಪಡಿಸಿಕೊಂಡರು. ಕಡೆಗೆ ತಲೆಹರಟೆ ಮಾಡಲು ನಾನು ಎದ್ದೆ. ಚಿಕ್ಕ ಸಂಭಾಷಣೆ ನಡೆಯಿತು.
"ವಿಜ್ಞಾನವೇ ಸತ್ಯ ಎಂದಿರಲ್ಲ. ಹಾಗೆಂದರೇನು?"
"ವಿಜ್ಞಾನ ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸುತ್ತದೆ. ತಮ್ಮ ಸಂಶೊಧನೆಗಳಿಂದ ವಿಜ್ಞಾನಿಗಳು ಸತ್ಯವನ್ನು ಜನರಿಗೆ ತಿಳಿಸುತ್ತಾರೆ"
"ಭೊರ್ ಹೇಳಿದ್ದನ್ನೆ ರುದರ್ಫರ್ಡ್ ಅಲ್ಲಗಳೆದರು, ನ್ಯೂಟನ್ ಹೇಳ್ದಿದ್ದನ್ನ ಐಸೆನ್‍ಬರ್ಗ್ ಅಲ್ಲಗಳೆದರು. ಹಾಗಾದರೆ ಸತ್ಯ ಕಾಲಕಾಲಕ್ಕೆ ಬದಲಾಗುತ್ತಾ? ಕಾಲಕಾಲಕ್ಕೆ ಬದಲಾದರೆ ಅದನ್ನು ಸತ್ಯ ಎನ್ನಬಹುದಾ?"
"ಅದು ಹಾಗಲ್ಲ. ಆಯಾ ಸಮಯಕ್ಕೆ ಅದು ಸರಿಯಾದರೆ ಅದು ಸತ್ಯ. ವಿಜ್ಞಾನ ಸತ್ಯದ ಸಮೀಪಕ್ಕೆ ನಮ್ಮನ್ನು ಕರೆದೊಯ್ಯುತ್ತದೆ."
"ಹೇಗೆ? ಬೈನರಿ ಸರ್ಚ್ ಮಾಡಿದ ಹಾಗೆ ಸುಳ್ಳನ್ನು ನಿರಾಕರಿಸುತ್ತಾ ಹೋಗುವುದಾ? ಅಥವಾ ಹೊಸದನ್ನು ಹುಡುಕಿಕೊಂಡು ಹೋಗುವುದಾ?"
"ಎರಡೂ ಆಗಬಹುದು. ಉದಾಹರಣೆಗೆ ಈಗ ವಿಜ್ಞಾನಿಗಳು ಹೊಸ ಸಂಶೋಧನೆ ಕೈಗೊಂಡಿದ್ದಾರೆ. ಜಗತ್ತಿನ ಎಲ್ಲಾ ಶಕ್ತಿಗಳಿಗೂ ಒಂದೇ ಶಕ್ತಿಯೇ ಮೂಲವಾಗಿದೆ. ಅದೇ ಶಕ್ತಿಯೇ ಅಣುಶಕ್ತಿಯಲ್ಲಿರುವುದು. ಅದೇ ಶಕ್ತಿಯೇ ಬೆಳೆಯುವ ಹುಲ್ಲಿನಲ್ಲಿರುವುದು. ಬಹುತೇಕ ಯಶಸ್ವಿಯಾಗುವ ಹಂತಕ್ಕೆ ಬಂದಿದೆ ಅದು."
"ಅಕಸ್ಮಾತ್ ಬಿಲಿಯಾಂತರ ಹಣ ಖರ್ಚು ಮಾಡಿ ಕಂಡುಕೊಂಡ ಆ ಶಕ್ತಿಗೆ ವಿಜ್ಞಾನಿಗಳು ’ದೇವರು’ ಅಂತ ಹೆಸರಿಟ್ಟರೆ ಏನು ಮಾಡೋದು?" ಎಂದುಬಿಟ್ಟೆ.
ಮಾಜಿ ಉಪಕುಲಪತಿಗಳು ಇರಿಸುಮುರುಸುಗೊಂಡರು. ಅವರ ಮೊಗದ ಮೇಲೆ ಅಸಹನೆ ಸ್ಪಷ್ಟವಾಗಿ ಕಂಡಿತು.
ಪಕ್ಕದಲ್ಲೇ ಕುಳಿತಿದ್ದ ಸಭಾಧ್ಯಕ್ಷರು "ಒಳ್ಳೆಯ ಚರ್ಚೆ ನಡೆಯುತ್ತಿತ್ತು ನೀವು ಚರ್ಚೆಯ ಹಾದಿ ತಪ್ಪಿಸಿದಿರಿ" ಎಂದು ಸಿಡಿಮಿಡಿಗೊಂಡರು.
ನಾನು ವಿಜಯೋತ್ಸಾಹದಲ್ಲಿ ಕುರ್ಚಿಯ ಮೇಲೆ ಕುಳಿತೆ.
ನಂತರ ಅನೇಕರು ಬಂದು " ಅವರು ನಿಮಗೆ ಉತ್ತರ ಕೊಡಲಿಲ್ಲ ಅಲ್ಲವೇ? ಆ ಪ್ರಶ್ನೆಗೆ ಉತ್ತರ ಇದೆಯೇ ?" ಎಂದು ಕೇಳಿದರು. ನಿಜ ಹೇಳಬೇಕೆಂದರೆ ನನ್ನಲ್ಲೂ ಉತ್ತರ ಇರಲಿಲ್ಲ. ಆ ಕ್ಷಣದಲ್ಲಿ ನಾನು ಮೇಧಾವಿಗಳನ್ನು ತಬ್ಬಿಬ್ಬು ಮಾಡಿದೆ ಎಂಬ ಹೆಮ್ಮೆ ಇತ್ತಾದರೂ ನಂತರ ಅಂತಹ ಹಿರಿಯರ ಎದುರಿಗೆ ಅಷ್ಟು ಉದ್ಧಟತನದಿಂದ ವರ್ತಿಸಬಾರದಿತ್ತು ಎನಿಸಿತು.
ವಿಜ್ಞಾನಕ್ಕೆ ದೇವರು ನಿಲುಕುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ನಾಸ್ತಿಕನಾಗಿದ್ದ ನನ್ನನ್ನು ದೇವರೆಡೆಗೆ ಹೊರಳಿಸಿದ್ದೇ ವಿಜ್ಞಾನ ಎಂಬುದಂತೂ ಸತ್ಯ. (ಇದರೆ ಬಗ್ಗೆ ಮತ್ತೆಂದಾದರೂ ಬರೆಯುತ್ತೇನೆ.)

5 ಕಾಮೆಂಟ್‌ಗಳು:

ಸಂದೀಪ್ ಕಾಮತ್ ಹೇಳಿದರು...

ವಿಜ್ಞಾನ ಬಹಳಷ್ಟನ್ನು ಉತ್ತರಿಸುತ್ತದೆ !

ಎಲ್ಲವನ್ನೂ ಅಲ್ಲ!

ಲೋಹಿತ್ ದ್ಯಾ ಶಿವಮೂರ್ತಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಲೋಹಿತ್ ದ್ಯಾ ಶಿವಮೂರ್ತಿ ಹೇಳಿದರು...

ಪ್ರೀತಿಯ ಹರ್ಷ,
ನಾಗರೀಕತೆ ಆರಂಬ ಆಗಿದ್ದಕ್ಕು ವಿಜ್ಞಾನವೇ ಕಾರಣವ? ಇಲ್ಲಿ ವ್ಯಂಗ ಇಲ್ಲ.. ಉತ್ತರಿಸದಿದ್ದರೂ ಏನು ಲೋಪವಿಲ್ಲ.

ನಿಮ್ಮ (ನಮ್ಮ ಎಂದು ಬರೆದು ಬಿಟ್ಟಿದ್ದೆ. ಅದಕ್ಕೆ ಅದನ್ನ ಅಳಿಸಿದೆ :) ) ವಿಷಯ ಮಂಡನೆಗೆ ನನ್ನದೊಂದು ನಮಸ್ಕಾರ (ವ್ಯಂಗ್ಯವಿಲ್ಲ)

ಲೋಹಿತ್ ದ್ಯಾ ಶಿವಮೂರ್ತಿ ಹೇಳಿದರು...

ಪ್ರೀತಿಯ ಹರ್ಷ,
ನೀವು ಗಾಂಧಿಯ (ಅ)ಸತ್ಯದ ವಿಷಯದಲ್ಲಿ ಅನೇಕ ವಿಷಯಗಳನ್ನು ನಮಗೆ ತಿಳಿಸಿ ಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು.
ನಾನಾಗಿದ್ದರೆ ಒಂದೇ ಒಂದು ವಿಷಯ ಹೇಳಿ ಮುಗಿಸಿಬಿಡುತ್ತಿದ್ದೆ. ಏನು ಗೊತ್ತೇ? ಆ ಬರಹದ ಲೇಖಕರು ತಮ್ಮ ಪರಿಚಯ ಮಾಡಿಕೊಳ್ಳುವಾಗ ಬರೆದಿದ್ದು ಹೀಗಿದೆ ನೋಡಿ.
<<
ನನ್ನಂಥ ಮೃದು ಸ್ವಭಾವದವರಿಗೆ ಇದು ಸಾಧಾರಣವಾಗಿ ಕಾಡುವ ಭಯ ಇದು.
>>
ಆಗ ಇದಕ್ಕೆ ನಾನು ನೀಡಿದ ಪ್ರತಿಕ್ರಿಯೆನ ಒಮ್ಮೆ ಓದಿಕೊಳ್ಳಿ... ನಾನು ಅಲ್ಲಿ ಹೇಳಿರುವುದನ್ನೇ (ಪ್ರಾಣೇಶ್ ಕಥೆ) ನೀವು ಇನ್ನೊಮ್ಮೆ ಕಾಪಿ-ಪೇಸ್ಟ್ ಮಾಡಿದ್ದರೆ ಸಾಕಿತ್ತು ಅನ್ನಿಸುತ್ತೆ.

ಯಾಕೆಂದರೆ ನಿಮ್ಮ ಶ್ರಮ ಘೋರ್ಕಲ್ಲ ಮೇಲೆ ನೂರ್ಕಾಲ ಮಳೆ ಆಗದಿರಲಿ ಅಂತ ಅಷ್ಟೇ.

ಉಳಿದಂತೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಕೆ ಧನ್ಯವಾದಗಳು. ನಿಮಗೂ ನಿಮ್ಮ ಶಿಷ್ಯೋತ್ತಮನಿಗು (ಅಲಿಯಾಸ್ ನನ್ನ ಇಜ್ಞಾನದ ಗುರುಗಳು ;) ) ಮತ್ತು ದನು ಮೇಡಂ ಎಲ್ಲರಿಗು. ಈ ಕೆಲಸ ನಾನೇ ಅಲ್ಲಿ ಮಾಡ ಬಹುದಿತ್ತು. ಆದರೆ ಏನು ಮಾಡಲಿ hpn ಅವರು ನನ್ನ ಸಂಪದ ಖಾತೆಗೆ ಬೀಗ ಜಡಿದು ಬಿಟ್ಟಿದ್ದರೆ. ಕಾರಣ ತಿಳಿದಿಲ್ಲ. ನಾನು ನನ್ನ ಇಜ್ಞಾನದ ಗುರುಗಳಿಗೆ ಮುದಲಿಸಿದೆನಲ್ಲ ಅದಕ್ಕೆ ಅನ್ನಿಸುತ್ತೆ.

ಅನಾಮಧೇಯ ಹೇಳಿದರು...

thumba isatavayitu nimma
"ಅದನ್ನೂ ದೇವರು ಎಂದು ಕರೆದುಬಿಟ್ಟರೆ ????" bharaha , keep it