ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ಜನವರಿ 22, 2009

ಕರ್ನಾಟಕ ಸಂಗೀತ ಎಂದೇ ಹೇಳಿ ...ಕುನ್ನುಕ್ಕುಡಿಯವರ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿ ಹಂಸಾನಂದಿಯವರು ತುಸು ಬೇಸರಿಸಿಕೊಂಡೇ ಕಾರ್ನಾಟಿಕ್ ಪದಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ನನ್ನ ಮಾಹಿತಿಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾದ ಅಗತ್ಯ ತೋರಿತು. ಕೂಡಲೆ ದಾಖಲೆಗಳನ್ನು, ಸಾಕ್ಷ್ಯಗಳನ್ನು ಕಲೆಹಾಕಲು ಹುಡುಕಲು ಶುರುಮಾಡಿದೆ. ನಡುವೆ ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆ, ಬೆಳಗೆರೆ, ಸೇವಾಗ್ರಾಮ, ಚಿಕ್ಕಮಗಳೂರು, ತಿರುವಯ್ಯಾರ್ ಪ್ರವಾಸಗಳಿಂದಾಗಿ ಕೆಲಸ ತಡವಾಯಿತು. ಚೆನ್ನೈನ ರಣಬಿಸಿಲಿನಿಂದ ಬೆಂಗಳೂರಿನ ರಕ್ಕಸ ಚಳಿಗೆ ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಸಮಯವೇ ಬೇಕಾಯಿತು.
ಎರಡೂ ರೀತಿಯ ಹೆಸರುಗಳಿಗೂ ದಾಖಲೆಗಳು ಸಿಕ್ಕಿದವು. ಕೆಲಸ ಇನ್ನೂ ಮುಗಿದಿಲ್ಲ. ಸಿಕ್ಕಷ್ಟು ಹೇಳುತ್ತಿದ್ದೇನೆ.


ಸಧ್ಯಕ್ಕೆ ಕಾರ್ನಾಟಿಕ್ ಗಿಂತ ಕರ್ನಾಟಕ ಎಂಬ ಕಡೆಗೇ ದಾಖಲೆಗಳ ತಕ್ಕಡಿ ಹೆಚ್ಚು ವಾಲುತ್ತಿದೆ. ಕರ್ನಾಟಕದ ಚರಿತ್ರೆಯ ಬಗ್ಗೆ ತುಂಬಾ ಹಳೆಯ ದಾಖಲೆಗಳು ಸಿಗುತ್ತವೆ. ಕೈಕೇಯಿ ರಾಮನನ್ನು ಅಟ್ಟಿದ ಗೋಂಡಾರಣ್ಯದ ಒಂದು ಭಾಗವಾಗಿತ್ತು ಕರ್ನಾಟಕ. ಸುಗ್ರೀವ ಹನುಮಂತರ ಪರಿಚಯ ರಾಮನಿಗಾದದ್ದು ಇಲ್ಲಿಯೇ. ಅಂಬೆ ಅಂಬಾಲಿಕೆಯರ ಸ್ವಯಂವರಕ್ಕೆ ಬಂದಿದ್ದ ಛಪ್ಪನ್ನಾರು ದೇಶಗಳ ರಾಜರಲ್ಲಿ ಕರ್ಣಾಟ ದೇಶದ ರಾಜನೂ ಒಬ್ಬ ಎಂದು ಮಹಾಭಾರತದಲ್ಲಿದೆ. ಕರ್ಣೇ ಅಟತಿ ಇತಿ ಕರ್ಣಾಟ (ಕಿವಿಗೆ ಇಂಪು) ಎಂದು ಹೇಳಲಾಗುತ್ತದೆ. ಕರುನಾಡು ಎಂಬುದರ ಅರ್ಥ ಎಲ್ಲರಿಗೂ ಗೊತ್ತು. ಇನ್ನೊಂದು ದಾಖಲೆ (ಹಟ್ಟಂಗಡಿ ನಾರಾಯಣ ರ್ಆವ್) ಎತ್ತರದ ಭೂಭಾಗ ಎಂದು ಅರ್ಥ ಹೇಳುತ್ತದೆ. ಕರ್ನಾಟಕದ ಭೂಭಾಗ ಉಬ್ಬಿಕೊಂಡಿರುವುದರಿಂದ ಹೆಸರು. ಸಹ್ಯಾದ್ರಿಯ ನದಿಗಳನ್ನು ಹೊರತುಪಡಿಸಿ ಎಲ್ಲಾ ನದಿಗಳು ಪೂರ್ವಕ್ಕೆ ಹರಿಯುವುದು ಇದೇ ಕಾರಣಕ್ಕೆ.
ನಾನು ಸೇವಾಗ್ರಾಮದಲ್ಲಿದ್ದಾಗ ಕುಂಭಕೋಣಕ್ಕೆ ಪಯಣಗೈದಿದ್ದ ಗೋಪಿ ಫೋನಾಯಿಸಿಮಗಾ ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತ ಎಂದು ಯಾಕೆ ಕರೆಯಬೇಕೆಂದು ಪುರಾವೆ ಸಿಕ್ಕಿತುಅಂತ ಹೇಳಿದ. ತ್ಯಾಗರಾಜರ ಆರಾಧನೆಯ ಉತ್ಸವಕ್ಕೆ ಹೋದಾಗ ಕುಂಭಕೋಣಕ್ಕೆ ಭೇಟಿ ನೀಡಿ ನಾನೂ ನೋಡಿದೆ. ಸಾರಾಂಶವನ್ನು ಇಲ್ಲಿಡುತ್ತಿದ್ದೇನೆ.


ಹದಿನಾರನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕುಂಭಕೋಣದವನ್ನು ರಾಜಧಾನಿಯನ್ನಾಗಿಸಿ ಆಳುತ್ತಿದ್ದವರು ಸೇವಪ್ಪ, ಅಚ್ಯುತಪ್ಪ ಹಾಗೂ ರಘುನಾಥ ನಾಯಕರು. ಇವರ ಸಮರ್ಥ ಆಡಳಿತಕ್ಕೆ ಬೆನ್ನೆಲುಬಾಗಿ ನಿಂತವರು ಅಮಾತ್ಯರಾಗಿದ್ದ ಗೋವಿಂದ ದೀಕ್ಷಿತರು. ಗೋವಿಂದ ದೀಕ್ಷಿತರು ಅತ್ಯುತ್ತಮ ಮುತ್ಸದಿಗಳಲ್ಲದೇ ಸಾಹಿತಿ ಮತ್ತು ಸಂಗೀತ ವಿದ್ವಾಂಸರಾಗಿದ್ದರು. ಉಪಮನ್ಯು ವಶಿಷ್ಠಗೋತ್ರದ ಅಚ್ಚ ಕನ್ನಡಿಗ ಸ್ಮಾರ್ಥ ಸಂಪ್ರದಾಯದ ಬ್ರಾಹ್ಮಣರು. ಗೋವಿಂದ ದೀಕ್ಷಿತರು ತಮ್ಮ ಆಡಳಿತ ಸಾಮರ್ಥ್ಯದಿಂದಾಗಿ ತಮಿಳಿನಾಡಿನಾದ್ಯಂತ ಜನಪ್ರೀಯರಾಗಿದ್ದರು. ಇಂದಿಗೂ ತಂಜಾವೂರಿನಿಂದ ತಿರುವಣ್ಣಾಮಲ್ಲೈ ವರೆಗೆ ಗೋವಿಂದ ದೀಕ್ಷಿತರ ಹೆಸರಿನ ಗೋವಿಂದಪುರಂ, ಗೋವಿಂದನಲ್ಲುರ್, ಗೋವಿಂದವಾಡಿ, ಅಯ್ಯಂಪೆಟ್ ಇತ್ಯಾದಿ ಊರುಗಳು ಗೋವಿಂದ ದೀಕ್ಷಿತರ ಕೀರ್ತಿಯನ್ನು ಸಾರುತ್ತಿವೆ. ಇಂದಿಗೂ ಅನೇಕ ರಸ್ತೆ, ಬಡಾವಣೆಗಳಿಗೆ ಗೋವಿಂದ ದೀಕ್ಷಿತರ ಹೆಸರನ್ನಿಡಲಾಗುತ್ತಿದೆ. ರಾಮೇಶ್ವರಂ , ಕುಂಭಕೋಣಂ, ವೃದ್ಧಾಚಲಂ, ವಿಲಾನಗರದ ಗುಡಿಗಳನ್ನು ಕಟ್ಟಿಸಿದವರು ಗೋವಿಂದ ದೀಕ್ಷಿತರು. ಸಾಹಿತ್ಯಸೇವೆಯ ಅಂಗವಾಗಿ ಕುಮಾರಿಲ ದರ್ಶನ ಮತ್ತು ಜೈಮಿನಿ ಸೂತ್ರಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಜೊತೆಗೆ ಸಂಗೀತ ಸಂಶೊಧನಾ ಗ್ರಂಥ ಸಂಗೀತಸುಧಾ ಸಂಗೀತ ಸಂಶೊಧನೆಯಲ್ಲೊಂದು ಮೈಲಿಗಲ್ಲು. ತಂಜಾವೂರು ಮೇಳವೀಣೆಯನ್ನು ಗೋವಿಂದ ದೀಕ್ಷಿತರೇ ವಿನ್ಯಾಸಗೊಳಿಸಿದ್ದು. ಇದರ ಜೊತೆಗೆ ಅನೇಕ ಸಂಸ್ಕೃತ ಗ್ರಂಥಗಳ ತಮಿಳು ಅನುವಾದಗಳೂ ಗೋವಿಂದ ದೀಕ್ಷಿತರ ಕೊಡುಗೆಗಳು. ತಮಿಳುನಾಡಿನ ಅರೆಭಾಗವನ್ನು ಮುಕ್ಕಾಲು ಶತಮಾನಗಳ ಕಾಲ ಸಮರ್ಥವಾಗಿ ಆಳಿದ ಗೋವಿಂದ ದೀಕ್ಷಿತರ ಸಾಧನೆಗಳು ಎಣಿಕೆಗೆ ನಿಲುಕುವಂತಹುದಲ್ಲ.
ಗೋವಿಂದ ದೀಕ್ಷಿತರಿಗೆ ಎಂಟು ಜನ ಗಂಡುಮಕ್ಕಳು ಒಬ್ಬ ಹೆಣ್ಣುಮಗಳು. ತಂದೆಯಂತೆಯೇ ಮಕ್ಕಳು ಮಹಾಮೇಧಾವಿಗಳು. ಹಿರಿಯ ಮಗ ಲಿಂಗದ್ವಾರಿ ಶಿವಸಹಸ್ರನಾಮದ ಮೇಲೆ ಭಾಷ್ಯವನ್ನು ಬರೆದಿದ್ದಾರೆ. ಎರಡನೆಯ ಮಗ ಯಜ್ಞನಾರಾಯಣ ದೀಕ್ಷಿತರು ರಘುನಾಥಾಭ್ಯುತಂ, ಸಾಹಿತ್ಯರತ್ನಕರಂ ಕೃತಿಗಳ ಕರ್ತೃ. ಇವೆರಡು ಗ್ರಂಥಗಳು ಅಂದಿನ ರಾಜರುಗಳ ಹಾಗೂ ಗೋವಿಂದ ದೀಕ್ಷಿತರ ವಿವರವಾದ ವರ್ಣನೆಯನ್ನು ನೀಡುತ್ತವೆ. ಇವರ ಮೂರನೆಯ ಸತ್ಪುತ್ರರೇ ವೆಂಕಟಮಖಿ! ಕರ್ನಾಟದ ಸಂಗೀತದಲ್ಲಿ ವೆಂಕಟಮಖಿ ಚಿರಪರಿಚಿತ ಹೆಸರು. ಕರ್ನಾಟದ ಸಂಗೀತದ ಎಪ್ಪತ್ತೆರಡು ಮೇಳಕರ್ತಗಳ ಸೃಷ್ಠಿಕರ್ತರು ವೆಂಕಟಮಖಿಯವರು. ಎಪ್ಪತ್ತೆರಡು ಮೇಳಕರ್ತಗಳನ್ನು ವೆಂಕಟಮಖಿಗಳು ತಮ್ಮ ಸಂಗೀತ ಸಂಶೋಧನಾ ಗ್ರಂಥಚತುರ್ದಂಡಿ ಪ್ರಕಾಶಿಕಾದಲ್ಲಿ ವಿವರಿಸುತ್ತಾರೆ. ಕರ್ನಾಟಕ ಸಂಗೀತದಲ್ಲಿ ಮೇಳಕರ್ತಗಳ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು. ಮಧ್ವಾಚಾರ್ಯರೂ ಸಂಗೀತದ ಮೂಲಕವೇ ದೈವಸಾಕ್ಷತ್ಕಾರಕ್ಕೆ ಮೊದಲು ಮಾಡಿದವರು. ಕರ್ನಾಟಕ ಎಂದರೆ ಈಗಿರುವ ಇಪ್ಪತ್ತೊಂಬತ್ತು ಜಿಲ್ಲೆಗಳ ಕರ್ನಾಟಕವಲ್ಲ. ಉತ್ತರದಲ್ಲಿ ಬೀದರ್ನಿಂದ ಸೇರಿ ದಕ್ಷಿಣದ ಪಾಲಕ್ಕಾಡ್ ಪ್ರದೇಶದವರೆಗೆ ಪಶ್ಚಿಮದಲ್ಲಿ ಸಹ್ಯಾದ್ರಿಯ ಘಟ್ಟಗಳಿಂದ ಪೂರ್ವದ ಕೋರಮಂಡಲ ತೀರದವರೆಗಿನ ಪ್ರದೇಶ ಕರ್ನಾಟಕವಾಗಿತ್ತು. ಬಹಮನಿ ರಾಜರ ನಂತರ ಕರ್ನಾಟಕ ಛಿದ್ರವಾಯಿತು. ಪ್ರಕಾರ ಕರ್ನಾಟಕವನ್ನು ಪರಿಗಣಿಸಿದರೆ ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಅನೇಕಾನೇಕ ಸಂಗೀತ ದಿಗ್ಗಜರು ಕರ್ನಾಟಕದಲ್ಲೇ ಓಡಾಡಿಕೊಂಡಿದ್ದರು. ಮೇಲೆ ಹೇಳಿದ ಗೋವಿಂದ ದೀಕ್ಷಿತರು ಹಾಗೂ ವೆಂಕಟಾಮಖಿಗಳು ಅಪ್ಪಟ ಕನ್ನಡಿಗರು. ಹಾಗಾಗಿ ದಕ್ಷಿಣಾದಿ ಸಂಗೀತಕ್ಕೆ ಯಾವುದೇ ಸಂಶಯಕ್ಕೆ ಎಡೆಯಿಲ್ಲದೇ ಕರ್ನಾಟಕ ಸಂಗೀತ ಎಂದು ಕರೆಯಬಹುದು. ಸ್ವತಃ ಪಾಲಕ್ಕಾಡಿನವರೇ ಚಂಬೈ ವೈದ್ಯನಾಥ, ಡಿವಿಜಿ ಅನೇಕ ಹಿರಿಯರು ಕರ್ನಾಟಕ ಸಂಗೀತ ಎಂದೇ ಸಂಬೊಧಿಸುತಿದ್ದರು.


ಹುಡುಕಾಟದ ನಡುವೆ ಕರ್ನಾಟಕದ ಬಗ್ಗೆ ನನಗೆ ಇನ್ನೂ ಅನೇಕ ಮಹತ್ವದ ಮಾಹಿತಿಗಳು ದೊರಕಿವೆ. ವಿಷಯಪಲ್ಲಟವಾಗುವುದರಿಂದ ಇಲ್ಲಿ ಹೇಳಲಾರೆ. ಮುಂದೆ ಸಂದರ್ಭಕ್ಕೆ ತಕ್ಕಂತೆ ಹಂಚಿಕೊಳ್ಳುತ್ತೇನೆ. ಮೊದಲೇ ಹೇಳಿದ ಹಾಗೆ ಹುಡುಕಾಟ ಇನ್ನೂ ಮುಗಿದಿಲ್ಲ. ಕರ್ನಾಟಕ ಸಂಗೀತದ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಅಥವಾ ದಾಖಲೆಗಳೇನಾದರೂ ಇದ್ದರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಿ. ವೆಂಕಟಮಖಿಗಳ ಪುಸ್ತಕಗಳು ದೊರೆಯುತ್ತವೆ. ಆದರೆ ಗೋವಿಂದ ದೀಕ್ಷಿತರ ಪುಸ್ತಕಗಳು ಲಭ್ಯವಿಲ್ಲ ಅಥವಾ ನನಗೆ ದೊರೆಯಲಿಲ್ಲ. ಇವು ಯಾರಲ್ಲಾದರೂ ಲಭ್ಯವಿದ್ದರೆ ದಯವಿಟ್ಟು ನನಗೆ ತಿಳಿಸಿ. ಜೆರಾಕ್ಸ ಪ್ರತಿ ಮಾಡಿಸಿಕೊಂಡು ವಾಪಸು ಕೊಡುತ್ತೇನೆ.
ಚಿತ್ರ : ತಿರುವಯ್ಯಾರ್ ತ್ಯಾಗರಾಜರ ಗುಡಿಯ ಪುತ್ಥಳಿ.

3 ಕಾಮೆಂಟ್‌ಗಳು:

ಹಂಸಾನಂದಿ Hamsanandi ಹೇಳಿದರು...

ಶ್ರೀಹರ್ಷ ಅವರೆ,

ಗೋವಿಂದ ದೀಕ್ಷಿತ ಮತ್ತು ವೆಂಕಟಮಖಿಯರ ಬಗ್ಗೆ ಚೆನ್ನಾಗಿ ಬರ್ದಿದ್ದೀರ. ಮತ್ತೂ ಹೀಗೇ ಬರೆಯುತ್ತಿರಿ.

ಗೋವಿಂದದೀಕ್ಷಿತನ ಸಂಗೀತಸುಧಾವನ್ನು ನಾನೂ ನೋಡಿಲ್ಲ.

೨೦೦೭ ರಲ್ಲಿ ನಾನು ಈ ವಿಷಯವಾಗಿ ಸಂಪದದಲ್ಲಿ ಬರೆದಿದ್ದೆ.ನೋಡಿಲ್ಲದಿದ್ದರೆ ಕೊಂಡಿಗಳು ಕೆಳಗಿವೆ:

http://www.sampada.net/blog/hamsanandi/02/08/2007/5214

http://www.sampada.net/blog/hamsanandi/08/08/2007/5296

ಹೀಗೇ ಬರೆಯುತ್ತಿರಿ. ಮತ್ತೆ ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಮನೆಯ ಇಂದಿನ ಸ್ಥಿತಿ ಹೇಗಿದೆ, ಮತ್ತು ಚಿತ್ರಗಳೇನಾದರೂ ಇದ್ದರೆ ಅದರ ಬಗ್ಗೆ ಬರೆಯಿರಿ.

ಸಂದೀಪ್ ಕಾಮತ್ ಹೇಳಿದರು...

ನನಗೆ ಸಂಗೀತದ ತಲೆ ಬುಡ ಗೊತ್ತಿಲ್ಲ ಆದ್ರೆ ನೀವು ಬರೆದಿರೋ ವಿಷಯ ಮಾತ್ರ ತುಂಬಾ ಚೆನ್ನಾಗಿದೆ.

ಶ್ರೀಹರ್ಷ Salimath ಹೇಳಿದರು...

ಧನ್ಯವಾದಗಳು. ತಿರುಮಂಜರಿ ವೀದಿಯಲ್ಲಿರುವ ತ್ಯಾಗರಾಜರ ಮನೆಯನ್ನು ಒಡೆದು ಹಾಕಿ ಈಗ ಹೊಸ ಕಟ್ಟಡವನ್ನು ಕಟ್ಟಿದ್ದಾರೆ. ಅಲ್ಲಿ ತ್ಯಾಗರಾಜರ ಬಳಕೆಯ ತಂಬೂರಿ,ವೀಣೆ ಇತ್ಯಾದಿಗಳು ಈಗ ಅಲ್ಲಿಲ್ಲ.

ಧ್ಯನ್ಯವಾದಗಳು ಸಂದೀಪ್.