ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶನಿವಾರ, ಜನವರಿ 31, 2009

"ಕರ್ತವ್ಯಂ ದೈವಮಾಹ್ನಿಕಂ !!!!"

ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ ಮುಖದಲ್ಲಿದ್ದ ತುಂಟನಗೆಯನ್ನು ನೋಡಿ ನನ್ನನ್ನು ಪರೀಕ್ಷಿಸುವುದರಲ್ಲಿದ್ದಾರೆ ಎಂಬುದು ನನಗೆ ಹೊಳೆಯಿತು. ಅದರಲ್ಲೊಬ್ಬರು ’ನಿನ್ನ ಮಂಜಾಳಾಗ’ ಅಂತಾರಲ್ಲ ಹಾಗೆಂದರೇನು ? ಎಂದು ಕೇಳಿದ್ದರು.
ಅದಕ್ಕೆ ವೆಂಕಟಸುಬ್ಬಯ್ಯನವರು ಇದು ಉತ್ತರ ಕರ್ನಾಟಕದ ಶಬ್ದ. ನಿನ್ನ ಮನೆ ಜೋಳವಾಗ. ಜೋಳವಾಗುವುದು ಎಂದರೆ ನಾಶವಾಗುವುದು ಎಂದೆಲ್ಲಾ ವಿವರಣೆ ಕೊಟ್ಟಿದ್ದರು.
"ಇದು ಹೀಗಲ್ಲ" ಎಂದೆ ನಾನು. ಅದು "ನಿನ್ ಮನೆ ಜಾಳವಾಗ ಆಗಬೇಕು" ಅಂದೆ.
ಜಾಳವಾಗುವುದು ಅಂದರೆ ಸ್ವಚ್ಚವಾಗುವುದು ಅಂತ ಅರ್ಥ. "ವಿಷಯ ಜಾಳ ಅಯ್ತಾ?" ಅಂದರೆ ವಿಷಯ ತಿಳಿಯಾಯಿತೆ (ಅರ್ಥವಾಯಿತೆ?) ಎಂಬರ್ಥ ಬರುತ್ತದೆ. ಮನೆ ಜಾಳವಾಗಲಿ ಅಂದರೆ ಸರ್ವವೂ ಸ್ವಚ್ಚವಾಗಿ ಹೋಗಲಿ ಅಂದರೆ ನಾಶವಾಗಿ ಹೋಗಲಿ ಎಂಬ ಅರ್ಥ ಬರುತ್ತದೆ. ಇದೇ ರೀತಿಯ ಅನೇಕ ವಿಶ್ಲೇಷಣೆಗಳನ್ನು ’ಇಗೊ ಕನ್ನಡ’ದಲ್ಲಿ ನೋಡಿದ್ದೇನೆ. ಬಹುಷ: ಕೋಶವನ್ನರಗಿಸಿಕೊಂಡರೂ ದೇಶವನ್ನು ಸುತ್ತದ ಪರಿಣಾಮ ಇದು ಎನ್ನಬಹುದೇನೋ ?

ಇತ್ತೀಚೆಗೆ ತೀರ ಕಿರಿಕಿ ಉಂಟು ಮಾಡುತಿರುವ ಶಬ್ದ " ವಿಕಲಚೇತನರು"! ಫಿಸಿಕಲಿ ಚಾಲೆಂಜ್ಡ್ ಎಂಬುದಕ್ಕೆ ಪರ್ಯಾಯವಾಗಿ ಕನ್ನಡಕ್ಕೆ ವಿಶ್ವೇಶ್ವರ ಭಟ್ಟರ ಕೊಡುಗೆ ಇದು. ವಿಕಲಾಂಗರಿಗಾಗಿ ಹೊಸ ಶಬ್ದ ಹುಡುಕಲು ತೆಗೆದುಕೊಂಡ ಶ್ರಮವನ್ನು ವಾರಗಟ್ಟಲೆ ತಮ್ಮ ಅಂಕಣದಲ್ಲಿ ವಿಶದಿಸಿದ್ದರು ಭಟ್ಟರು . ಕೊನೆಗೆ ವೆಂಕಟಸುಬ್ಬಯ್ಯನವರ ಸಹಾಯದಿಂದ ವಿಕಲಚೇತನರು ಎಂಬ ಪದವನ್ನು ಟಂಕಿಸಿದರು. ಅವರ ಪ್ರಯತ್ನವೇನೋ ಪ್ರಶಂಸಾರ್ಹವೇ! ಆದ್ರೆ ತಾರ್ಕಿಕವಾಗಿ ನೋಡುವುದಾದರೆ ಇಂಗ್ಲಿಶ್ ನಲ್ಲಿ ಹ್ಯಾಂಡಿಕ್ಯಾಪ್ಡ್ ಎಂಬುದಕ್ಕೆ ಬದಲಾಗಿ ಚಾಲೆಂಜ್ಡ್ ಎಂಬ ಪದ ಬಂತು; ಕನ್ನಡದಲ್ಲಿ ವಿಕಲ ಮಾಯವಾಗಿ ಪರ್ಯಾಯ ಪದ ಬರಬೇಕಿತ್ತು. ಆದರೆ ಅಂಗದ ಬದಲಾಗಿ ಚೇತನ ಬಂತು. ಮೊದಲು ಅಂಗ ಮಾತ್ರ ವಿಕಲವಾಗಿತ್ತು ಈಗ ಚೇತನವೇ ವಿಕಲವಾಗಿಬಿಟ್ಟಿತು !

ಇನ್ನೊಂದು ಶಬ್ದ "ವಿಪರೀತ"! ’ವಿಪರೀತ’ ಮೂಲತಃ ಸಂಸ್ಕೃತ ಶಬ್ದ. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಶಬ್ದಗಳು ಅಪಭ್ರಂಶವಾಗುವುದು ಸಹಜ. ಆದರೆ ಇಲ್ಲಿ ಅರ್ಥವೇ ಅಪಭ್ರಂಶವಾಗಿದೆ. ವಿಪರೀತ ಎಂದರೆ ವಿರುದ್ಧ ಎಂದರ್ಥ. ’ವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ’ ವಿರುದ್ಧವಾದ ಬುದ್ಧಿ ಎಂದು ಅರ್ಥ. ಅತಿಯಾದ ಬುದ್ಧಿ ಎಂದಲ್ಲ. ಪರಿಸ್ಥಿತಿ ನಮಗೆ ವಿಪರೀತವಾಗಿದೆ ಎಂದರೆ ಪರಿಸ್ಥಿತಿ ನಮ್ಮ ಅನುಕೂಲಕ್ಕೆ ವಿರುದ್ಧವಾಗಿದೆ ಎನ್ನಬಹುದು. ಪ್ರಕೃತಿ ವೈಪರೀತ್ಯ ಅಂದರೆ ಪ್ರಕೃತಿಯ ಅನನುಕೂಲವಾದ ಸ್ಥಿತಿ ಎಂದು ಅರ್ಥೈಸಬಹುದು.

ಶಬ್ದಗಳಿಗೆ ಮಾತ್ರವಲ್ಲ ಪದ್ಯಗಳಿಗೂ ಈ ರೀತಿಯ ಗತಿ ಒದಗಿದೆ. ಅದರಲ್ಲೊಂದು ಸರ್ವಜ್ಞ ನ ಈ ವಚನ:

ಬರೆಯದೆ ಓದುವವನ ಕರೆಯದೇ ಬರುವವನ
ಬರಿಗಾಲಲ್ಲಿ ನಡೆವವನ
ಕರೆತಂದು ಕೆರದಿಂದ ಹೊಡೆಯ ಸರ್ವಜ್ಞ.

ಮನೆಗೆ ಕರೆಯದೇ ಬರುವವನನ್ನೆ ಅತಿಥಿ ಎಂದು ಕರೆಯುವುದು. ತಿಥಿ ನಕ್ಷತ್ರಗಳನ್ನು ನೋಡದೇ ಬರುವವನೇ ಅತಿಥಿ. ಅತಿಥಿ ದೇವೋಭವ ಎಂದು ನಮ್ಮ ಸಂಸ್ಕೃತಿಯೇ ಹೇಳುವಾಗ ಸರ್ವಜ್ಞನಂತಹ ಅನುಭಾವಿ ಇಂತಹ ಮಾತನ್ನೇಕೆ ಹೇಳುತ್ತಾನೆ? ಅಲ್ಲದೇ ಸರ್ವಜ್ಞನ ಕಾಲದಲ್ಲಿ ಬರಹದ ಸಾಧನಗಳೂ ಕಡಿಮೆ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದವರೂ ಕಡಿಮೆ. ಬರವಣಿಗೆಯ ಸಾಧನಗಳ ಅವಶ್ಯಕತೆ ಹೆಚ್ಚಾದದ್ದೇ ನೆನಪಿನ ಶಕ್ತಿ ಕಡಿಮೆಯಾಗತೊಡಗಿದಂದಿನಿಂದ ಇಂತಹ ಪದ್ಯ ಸರ್ವಜ್ಞನ ಬತ್ತಳಿಕೆಯಿಂದ ಬಂದದ್ದೇಕೆ ? ಎಂಬುದು ತುಂಬಾ ಹಳೆಯ ಪ್ರಶ್ನೆ. ಇದಕ್ಕೆ ಉತ್ತರ ದೊರಕಿಸಿಕೊಟ್ಟವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರೊಫ಼ೆಸರ್ ಡಾ.ಚಂದ್ರಶೇಖರ ವಸ್ತ್ರದರವರು. ಮೂಲ ಹೀಗಿದೆ.

ಬರೆಯದವನ ಓದದವನ ಬರಿಗಾಲಲ್ಲಿ ನಡೆವವನ
ಕರೆಯದೇ ಬರುವವನ ನೆನೆವವನ
ಕರೆತಂದು ಕರಮುಗಿಯ ಸರ್ವಜ್ಞ.

ಇದು ಚಂದೋಬದ್ಧವಾಗಿಯೂ ಸರಿಯಾಗಿದೆ ಅರ್ಥಬದ್ಧವಾಗಿಯೂ ಸರಿಯಾಗಿದೆ. ಇಲ್ಲಿ ಕರೆಯದೇ ಬರುವವನು ಮಳೆರಾಯ. ಬರೆಯದವನು, ಓದದವನು, ಬರಿಗಾಲಲ್ಲಿ ನಡೆವವನು, ಮಳೆರಾಯನನ್ನು ನೆನೆಯುವವನು ರೈತ. ಅನ್ನದಾತನಿಗೆ ಕೈಮುಗಿ ಎನ್ನುತ್ತಿದ್ದಾನೆ ಸರ್ವಜ್ಞ. ! ಅಪಭ್ರಂಶ ಮಾಡುವವನಿಗೆ ಕೆರದಿಂದ ಹೊಡೆಯ !

ಇನ್ನೊಂದು ಇದೇ ರೀತಿಯ ಪದಗುಚ್ಚ "ಕರ್ತವ್ಯಂ ದೈವಮಾಹ್ನಿಕಂ". ಎಲ್ಲರೂ ತಿಳಿದುಕೊಂದಿರುವ ಅರ್ಥ ಕರ್ತವ್ಯವೇ ದೇವಪೂಜೆ ಎಂದು. ಅರ್ಥವತ್ತಾಗಿ ಇದು ಸರಿಯಾಗಿಯೇ ಇದೆ. ಸಂದರ್ಭವತ್ತಾಗಿ ಇನ್ನೊಂದು ಅರ್ಥ ಬರುತ್ತದೆ. ಅಂದರೆ ಅರ್ಥೈಸುವಾಗ ದೈವಮಾಹ್ನಿಕಂ ಕರ್ತವ್ಯಂ (ದೈವಪೂಜೆಯನ್ನು ಮಾಡಬೇಕು)ಎಂದು ಅರ್ಥೈಸಬೇಕು. ಉತ್ತಿಷ್ಠ ನರಶಾರ್ಧೂಲ ಕರ್ತವ್ಯಂ ದೈವಮಾಹ್ನಿಕಂ. "ಎದ್ದೇಳು ನರಹುಲಿಯೇ ಕರ್ತವ್ಯವೇ ದೇವರು" ಎಂಬುದಕ್ಕೂ "ಎದ್ದೇಳು ನರಹುಲಿಯೇ ದೈವಪೂಜೆಯನ್ನು ಮಾಡಬೇಕು" ಎಂಬುದನ್ನು ಹೋಲಿಸಿ ನೋಡಿದಾಗ ಸಂದರ್ಭಾನುಸಾರವಾಗಿ ದೈವಮಾಹ್ನಿಕಂ ಕರ್ತವ್ಯಂ ಎನ್ನುವುದು ಸರಿಯಾದ ಬಳಕೆ. ಕರ್ತವ್ಯಂ ಎನ್ನುವುದು ’ಕೃ’ ಎಂಬ ಧಾತುವಿನಿಂದ ಬಂದದ್ದು. ತವ್ಯತ್ ಪ್ರತ್ಯಯ ಸೇರಿ ಕರ್ತವ್ಯಂ ಎಂದಾಗಿದೆ. ಪ್ರತ್ಯಯಗಳು ಬಹುತೇಕ ಉಪಯೋಗವಾಗುವುದು ವ್ಯಾಕರಣಾಬದ್ಧ ಬಳಕೆಯಲ್ಲಿ ಲೋಪ ಬಂದಾಗ. ಭಾಷೆಯ ಬೆಳವಣಿಗೆಯ ನಂತರ ವ್ಯಾಕರಣ ರಚನೆಯಾದ ಕಾರಣ ಈ ರೀತಿಯ ಲೋಪ ಕಂಡು ಬರುತ್ತವೆ. ಹಾಗಾಗಿ ಪ್ರತ್ಯಯಗಳು ವೈಜ್ಞಾನಿಕವಾದ ಭಾಷಾಬಳಾಕೆಯಲ್ಲ ಎಂಬುದು ಪಂಡಿತರ ಹೇಳಿಕೆ. ( ಇದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದಲ್ಲಿ ಕೇಳಿದ್ದು).

ಇನ್ನೊಂದು ಪದ ನಿಟ್ಟುಸಿರು. ಇದು ಅಚ್ಚ ಕನ್ನಡದ ಶಬ್ದ. ಅರ್ಥ ಎಲ್ಲರಿಗೂ ಗೊತ್ತಿರುವುದೇ. ಪದವಿಂಗಡನೆ ಮಾಡಿದಾಗ "ನಿಡಿದಾದ ಉಸಿರು". ನಮ್ಮ ಮೇಷ್ತ್ರೊಬ್ಬರು ಇದನ್ನು ನಿಟ್ಟ ಉಸಿರು ಎಂದು ಬಿಡಿಸಿ ನಗೆಪಾಟಲಿಗೀಡಾಗಿದ್ದರು.
ಮತ್ತೊಂದು ಉದ್ಯಾನವನ. ಸ್ವತಃ ತಾವೇ ವಿಹರಿಸಲು ಮಾನವರು ನಿರ್ಮಿಸಿಕೊಂಡ ವನಕ್ಕೆ ಉದ್ಯಾನ ಎಂದು ಹೆಸರು. ಉದ್ಯಾನ ಸಾಕು. ಉದ್ಯಾನ ಎಂದರೂ ಕಾಡು (ಮಾನವನಿರ್ಮಿತ) ವನ ಎಂದರೂ ಕಾಡು. ಎರಡು ಬಾರಿ ಉಚ್ಚರಿಸುವುದು ಎಂಥದು? ಹಣ್ಣು + ಫಲ ಆಡು ಮಾತಲ್ಲಿ ಹಂಪಲು ಆಗಿದೆ. ಈಗ ಹೇಳಿ "ಹಣ್ಣು ಹಂಪಲು" ಸರಿಯಾದ ಬಳಕೆಯೇ?

2 ಕಾಮೆಂಟ್‌ಗಳು:

Summu ಹೇಳಿದರು...

ಶ್ರೀಹರ್ಷ ..
ಬರಹ ತುಂಬಾ ಚೆನ್ನಾಗಿತ್ತು
ಸರ್ವಜ್ಞನ ತ್ರಿಪದಿಯ ನಿಜಾರ್ಥ ಈಗ ತಿಳಿಯಿತು . ಇಂಥದ್ದೇ ಇನ್ನೊದು ಅಪಾರ್ಥ .. "ಎಲೆ ಮನ ಮುರಾರಿಯನೆ ಕೊಂಡಾಡು" ದಾಸರ ಭಕ್ತಿಗೀತೆಯಲ್ಲಿ " ಕಾಲನ ದೂತರು ಕಾಲಿಗೆ ಬಿದ್ದೊಡೆ" ಎಂದು ಹಾಡುವುದನ್ನು ಕೇಳಿದ್ದೇನೆ ಅದು "ಕಾಲನ ದೂತರ ಕಾಲಿಗೆ ಬಿದ್ದೊಡೆ" ಎಂದಾಗಬೇಕು ಕಾಲನ ದೂತರು ಯಾಕೆ ನಮ್ಮ ಕಾಲಿಗೆ ಬೀಳುತ್ತಾರೆ ??
ಇಂಥ ಹಾಸ್ಯಾಸ್ಪದ ಅಪಭ್ರಂಶ ಭಾಷಾಪ್ರಯೋಗದ ಬಗ್ಗೆ ನನ್ನ "ಅಪಾರ್ಥಕೋಶ" ದಲ್ಲಿ ಬರೆದಿದ್ದೇನೆ

ವಂದನೆಗಳೊಂದಿಗೆ
ಸುಮಂತ ಶ್ಯಾನುಭಾಗ್

ಅನಾಮಧೇಯ ಹೇಳಿದರು...

ಕೆಲವು ಕಡೆ ಅಂಗವಿಕಲ ಪದದ ಬದಲು ಅಂಗವಿಜೇತ ಎಂಬ ಪದ ಉಪಯೋಗಿಸಿರುವುದನ್ನು ನಾನು ಕಂಡಿದ್ದೇನೆ. ಪ್ರಾಯಶಃ ಇಂಗ್ಲೀಶಿನ ಚಾಲೆಂಜ್ಡ್ ಪದದ ಸಂವಾದಿ ಪದವಾಗಲು ಇದು ಒಳ್ಳೆ ಆಯ್ಕೆ ಎಂದುಕೊಳ್ಳುತ್ತೇನೆ.
ಡಾ. ನವೀನ್ ಕುಮಾರ್ ಜಿ.ಟಿ.
drnaveengt@gmail.com