ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಸೋಮವಾರ, ಸೆಪ್ಟೆಂಬರ್ 22, 2008

ವಯೊಲಿನ್ ಮಾಂತ್ರಿಕನಿಗೆ ನುಡಿ ನಮನ


ಚೆವಾರರ ಬ್ಲಾಗಿನಲ್ಲಿ "ಪಿಟೀಲು ಮಾಂತ್ರಿಕನ ಪಿಟೀಲು ಮೌನಕ್ಕೆ ಶರಣಾಯಿತು" ಎಂಬ ವಾಕ್ಯ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಚುಳ್ಳೆಂದವು. ಬಹುಶಃ ಯಾರ ಸಾವಿಗೂ ನಾನು ಇಷ್ಟು ಭಾವುಕನಾಗಿದ್ದಿಲ್ಲವೇನೋ ! ಕುನ್ನುಕ್ಕುಡಿ ವೈದ್ಯನಾಥನ್ ಚಿರಂಜೀವಿಯಾಗಿರಲಿ ಎಂದು ನಾನು ಬಯಸಿದರೂ ಅದು ಸಾಧ್ಯವಿಲ್ಲ. ಆದರೆ ಮನಸ್ಸಿನ ದುರಾಸೆ.... ಅವರು ಇನ್ನು ಸಲ್ಪ ದಿನ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ.
ಸಾಫ್ಟ್ ವೇರ್ ಎಂಬ ಆಶಾಢಭೂತಿ ಪ್ರಪಂಚವನ್ನು ಸೇರಿ ಬೌದ್ಧಿಕ ದೈಹಿಕ ಹಾಗು ಮಾನಸಿಕವಾಗಿ ನಿಷ್ಕ್ರಿಯನಾಗುವುದಕ್ಕಿಂತ ಮುಂಚಿನ; ಓದು ಸಂಗೀತ ತಿರುಗಾಟಗಳಿಂದ ಕೂಡಿದ ಅದಮ್ಯ ಜೀವನೋತ್ಸಾಹದ ದಿನಗಳವು. ಪ್ರತಿವರ್ಷದಂತೆ ಕೆ.ಆರ್. ಮಾರುಕಟ್ಟೆ ಹತ್ತಿರದ ಕೋಟೆ ಶಾಲೆಯ ಆವರಣದಲ್ಲಿ ರಾಮನವಮಿ ಉತ್ಸವ ನಡೆಯುತ್ತಿತ್ತು. ಪ್ರತಿದಿನ ಒಬ್ಬೊಬ್ಬ ಲೆಜೆಂಡರಿ ಎಂಬಂತಹ ಕಲಾವಿದರಿಂದ ಕಛೇರಿ ಇರುತ್ತಿತ್ತು. ಕುನ್ನುಕ್ಕುಡಿಯವರ ಕಛೇರಿ ಇದ್ದ ದಿನ ಗೋಪಿ ಫೋನ್ ಮಾಡಿದ ( ಹೌದು.. ಜಾಲಿ ಬಾರಿನಲ್ಲಿ ಕೂತು ಪೊಲಿ ಗೆಳೆಯರು ಗೇಲಿ ಮಾಡುತ್ತಿದರಲ್ಲ ಅದೇ ಗೋಪಿ !) ಕುನ್ನುಕ್ಕುಡಿ ಕಛೇರಿಯ ವಿಷಯ ತಿಳಿಸಿ ’ಬಾ’ ಎಂದು ಆಜ್ಞಾಪಿಸಿದ. ಹೇಳಿ ಕೇಳಿ ಕಾರ್ನಾಟಿಕ್ ಸಂಗೀತ. ಅದರಲ್ಲು ಪಿಟೀಲು ಅಂತ ಬೇರೆ ಹೆಳ್ತಿದ್ದಿಯಾ ರಿಸ್ಕ್ ಬೇಡ ಮಾರಾಯ ಅಂದೆ.

ಹಿಂದುಸ್ತಾನಿ ಅಂದ್ರೆ ಮೈಯೆಲ್ಲ ಕಿವಿಯಾಗಿಸಿ ಕೇಳುತ್ತೇನೆ. ರಾತ್ರಿಯೆಲ್ಲ ಕೂತು, ಪರೀಕ್ಷೆಯನ್ನೂ ಲೆಕ್ಕಿಸದೆ ಪಂ.ವಿನಾಯಕ ತೊರವಿ, ವೆಂಕಟೇಶ ಕುಮಾರರ ಸಂಗೀತ ಕೇಳಿದ್ದಿದೆ. ಆದರೆ ಕಾರ್ನಾಟಿಕ್ ಅಂದರೆ ಯಾಕೊ ಮಾರು ದೂರ. ಪಂಡಿತ್ ಬಾಲಮುರುಳಿ ಹೊರತು ಪಡಿಸಿದರೆ ಯಾರ ಸಂಗೀತವೂ ತಲೆಗೆ ಹೋಗಿದ್ದೇ ಇಲ್ಲ. ವಲಯಪಟ್ಟಿ, ಸುಬ್ಬುಲಕ್ಷ್ಮಿ, ಜೇಸುದಾಸ್ ಅವರೆಲ್ಲ ಹಾಡುತ್ತಿದ್ದರೆ ಚೂಪಾದ ಮೊಳೆಯೊಂದನ್ನು ಮಿದುಳೊಳಗೆ ನೆಟ್ಟು ಆಳಕ್ಕೆ ಕೊರೆದ ಹಾಗಾಗುತ್ತದೆ. ದಯವಿಟ್ಟು ಗಮನಿಸಿ, ಇದು ನನ್ನಲ್ಲಿರುವ ಹುಳುಕೇ ಹೊರತು ಈ ಮಹಾನ್ ಸಾಧಕರದಲ್ಲ. ಅಂತದ್ರಲ್ಲಿ ಕುನ್ನುಕ್ಕುಡಿ ಕಛೇರಿಗೆ ಹೋಗಲು ಸಹಜವಾಗೇ ಹೆದರಿಕೆ ಆಗಿತ್ತು. ಅವರು ಕಲೈಮಾಮಣಿ ಕಣೋ! ಎಂದು ಆಸೆ ತೋರಿಸಲು ನೋಡಿದ. ಧಾರವಾಡದಲ್ಲಿ ಕಲ್ಲೊಗೆದರೆ ಕವಿಯೊಬ್ಬನಿಗೆ ತಾಗುವ ಹಾಗೆ, ಬೆಂಗಳೂರಲ್ಲಿ ಕಲ್ಲೊಗೆದರೆ ಟೆಕ್ಕಿಯೊಬ್ಬನಿಗೆ ತಗುಲುವ ಹಾಗೆ ತಂಜಾವೂರು ಮಧುರೈ ಕಡೆಗಳಲ್ಲಿ ಕಲೈಮಾಮಣಿಗಳಿಗೆ ತಾಗುತ್ತದೆ. ವಿಮಾ ಕಂಪನಿಯ ಏಜೆಂಟ್‍ಗಳು ಪಾಂಪ್ಲೆಟ್ ಹಂಚುವ ಹಾಗೆ ಅಲ್ಲಿ ಕಲೈಮಾಮಣಿ ಬಿರುದನ್ನು ಹಂಚುತ್ತಾರೆ ಅನ್ನಿಸುತ್ತದೆ. ಹಾಗಾಗಿ ಗೋಪಿಯ ಈ ಆಮಿಷ ನನ್ನಲ್ಲೇನೂ ಬದಲಾವಣೆ ಉಂಟುಮಾಡಲಿಲ್ಲ. ಪದ್ಮಭೂಷಣ್ ಗುರು ಅವ್ರು ... ಇವತ್ತು ಇಷ್ಟ ಆಗ್ಲಿಲ್ಲ ಅಂದ್ರೆ ಮುಂದೆ ನಿನ್ನನ್ನ ಯಾವ ಸಂಗೀತ ಕಛೇರಿಗೂ ಕರಿಯೊಲ್ಲ.. ಸುಮ್ನೆ ಬಾ ಅಂದ. ಸರಿ ಹಾಳಾಗಿ ಹೋಗಲಿ ಅರ್ಧ ಗಂಟೆ ಕೂತು ಎದ್ದು ಬಂದರಾಯಿತು ಎಂದುಕೊಂಡು ಸಂಜೆ ಕಛೇರಿಗೆ ತಲುಪಿದೆ.
ನಟ ಶಿವರಾಂರವರ ಪರಮ ಬೋರಿಂಗ್ ಸ್ವಾಗತ ಭಾಷಣದ ನಂತರ ಕಛೇರಿ ಶುರುವಾಯಿತು. ಕಛೇರಿ ಶುರುವಾಗಿತ್ತಷ್ತೇ ! ಕುನ್ನುಕ್ಕುಡಿ ಪಿಟೀಲನ್ನು ಹೆದೆಯೇರಿಸಿ ಬಿಲ್ಲಿನಿಂದ ಎರಡು ಬಾರಿ ಮೀಟಿದ್ದರಷ್ಟೇ ! "ಏನ್ ಸಿಸ್ಯಾ ಇದು.. ಮೊದಲ್ನೆ ಬಾಲೇ ಸಿಕ್ಸರ್ರು !" ಅಂತ ಉದ್ಗರಿಸಿದೆ. ಇನ್ನು ಸೆಂಚುರಿಗಳು ಬರೋದಿದೆ ಕಾದು ನೋಡು ಅಂದು ಮುಂದಕ್ಕೆ ತಿರುಗಿದ. ಮುಂದಿನ ಎರಡು ತಾಸುಗಳು ಸಭಾಂಗಣದಲ್ಲಿ ಕೂತಿದ್ದವರೆಲ್ಲ ಈ ಲೋಕದಲ್ಲೆ ಇರಲಿಲ್ಲ. ಯಾವುದೊ ಕಿನ್ನರ ಲೋಕಕ್ಕೆ ನಮ್ಮನ್ನು ಅನಾಮತ್ತಾಗಿ ಕರೆದೊಯ್ದಿದರು ಕುನ್ನುಕ್ಕುಡಿ ವೈದ್ಯನಾಥನ್ ! ನನ್ನ ಧಮನಿಗಳಾಲ್ಲಗಲೆ ಕುನ್ನುಕ್ಕುಡಿ ಎಂಬ ಮಾಯಾವಿಯ ಜಾದೂ ಹರಿಯತೊಡಗಿತ್ತು. ಕುನ್ನುಕ್ಕುಡಿಯವರ ಸಂಗೀತ ಕಛೇರಿಯೆಂದರೆ ಕೇಳುವುದಷ್ಟೇ ಅಲ್ಲ ನೋಡುವುದು ಕೂಡ. ಕುನ್ನುಕ್ಕುಡಿ ಕೈಲಿರುವ ಕೈಲಿರುವ ಪಿಟೀಲು ಸಂಗೀತ ಮಾತ್ರವಲ್ಲ ಸಾಹಿತ್ಯವನ್ನೂ ಹೊರಡಿಸುತ್ತದೆ. ಇದು ಅತಿಶಯವಲ್ಲ. ಒಮ್ಮೆ ನೇರವಾಗಿ ಕೇಳಿದರೆ ನಿಮ್ಮ ಅನುಭವಕ್ಕೂ ಬರುತ್ತದೆ. ಅವರ ಕೈಲಿ ಪಿಟೀಲು ಮಾತನಾಡುತ್ತದೆ ಎಂಬುದೂ ನಿಜ. ಕುನ್ನುಕ್ಕುಡಿಯವರ ಮುಖವನ್ನು ಅವರು ಪಿಟೀಲು ನುಡಿಸುವಾಗ ನೋಡಬೇಕು. ಪಿಟೀಲಿನೊಡನೆ ಯಾವುದೋ ಲಘು ಹರಟೆಯಲ್ಲಿದಾರೇನೋ ಅನ್ನಿಸುತ್ತದೆ. ಅವರ ಮತ್ತೆ ಅವರ ಪಿಟೀಲಿನ ವರಸೆ ಒಮ್ಮೆ ತಂದೆ ಮಗನ ಆಪ್ತ ಮಾತುಕತೆಯಂತಿದ್ದರೆ ಮತ್ತೊಮ್ಮೆ ಶಾಲೆಗೆ ಹೋಗಲು ರಚ್ಚೆ ಹಿಡಿದ ಮಗುವಿನ ಸಂಭಾಳಿಸುವ ತಾಯಿಯ ಹಾಗೆ ಕಾಣುತ್ತಾರೆ ಕುನ್ನುಕ್ಕುಡಿ. ಒಮ್ಮೊಮ್ಮೆ ಲಾಲಿ ಹಾಡಿ ಪಿಟೀಲನ್ನು ಮಲಗಿಸುತ್ತಿದ್ದಾರೇನೋ ಎಂಬಂತೆ ಕಂಡರೆ ಇನೊಮ್ಮೆ ಮೊಂಡು ಹುಡುಗನ ಪಳಗಿಸುವವರಂತೆ ತೋರುತ್ತಿದ್ದರು. ಹಣೆಯಗಲದ ಬಿಳಿ ಪಟ್ಟೆ, ನಡುವೆ ಕೆಂಪು ಕುಂಕುಮ, ಉದ್ದ ಮುಖದಲ್ಲಿ ಆಗಾಗ ಬದಲಾಗುವ ಭಾವನೆಗಳು, ಪಿಟೀಲಿಗೆ ಜೀವ ತುಂಬುವ ಧಾಟಿ...ಎಲ್ಲ ಸೇರಿ ನನ್ನ ದೃಷ್ಟಿಯಲ್ಲಿ ಕುನ್ನುಕ್ಕುಡಿಯವರನ್ನು ದೈವತ್ವಕ್ಕೇರಿಸಿದವು. ಸಾಕ್ಷಾತ್ ಸರಸ್ವತಿಯೇ ಸ್ವತಃ ನಿಂತು ನಿರ್ದೇಶಿಸಿ ಅವರಿಂದ ಸಂಗೀತವನ್ನು ಹೊರಡಿಸುತ್ತಾಳೇನೋ ಎಂಬಂತಿದ್ದ ಆ ಕಛೇರಿಯಲ್ಲಿ ಎರಡು ತಾಸು ಸ್ವಯಂ ಕಾಲವೇ ಪ್ರಚ್ಛನ್ನವಾಗಿಬಿಟ್ಟಿತ್ತು. ಕರ್ನಾಟಕ ಸಂಗೀತದ ಬಗೆಗಿನ ನನ್ನ ಅಸಡ್ಡೆಯನ್ನು ಎಡಗಾಲಿನ ಧೂಳಿನಂತೆ ಝಾಡಿಸಿ ಕೊಡವಿ ಹಾಕಿದ್ದರು ಮಾಂತ್ರಿಕ ಕುನ್ನುಕ್ಕುಡಿ ವೈದ್ಯನಾಥನ್ . ನನ್ನ ಅಜ್ಞಾನದ ಬಗ್ಗೆ, ಪೂರ್ವಾಗ್ರಹದ ಬಗ್ಗೆ ನನಗೆ ತೀರಾ ನಾಚಿಕೆಯಾಯಿತು.
ಕಛೇರಿಯ ನಂತರ ಕುನ್ನುಕ್ಕುಡಿ ಅರೆಗನ್ನಡದಲ್ಲಿ ಸಂಗೀತ ರಸಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಆ ದಿನ ಅವರ ಮಡದಿಯೂ ಬಂದಿದ್ದರು. ಅದೇ ಮೊದಲ ಬಾರಿಗೆ ಅವರು ತಮ್ಮ ಪತಿಯ ಕಛೇರಿಯನ್ನು ಆಸ್ವಾದಿಸಿದ್ದಂತೆ. ಮೊಟ್ಟಮೊದಲ ಬಾರಿಗೆ ನನ್ನ ಮನದನ್ನೆ ನನ್ನ ಕಛೇರಿಗೆ ತಮ್ಮ ಉಪಸ್ಥಿತಿಯನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದರು. ಅದಾದ ಒಂದು ವಾರದಲ್ಲಿ ಎಂಬತ್ತು ಜನ ವಿದ್ವಾಂಸರನ್ನೊಳಗೊಂಡ ಕಛೇರಿಯನ್ನು ಅದೇ ವೇದಿಕೆಯಲ್ಲಿ ತಮ್ಮ ಸಂಗೀತ ಸಂಶೋಧನಾ ಸಂಸ್ಥೆಯ ವತಿಯಿಂದ ನಡೆಸಿಕೊಟ್ಟರು. ನಡುನಡುವೆ ತಮ್ಮ ಸಂಶೋಧನೆ ರಾಗಗಳ ಮಾಹಿತಿಯನ್ನು ನೀಡಿದರು.
ಇದಾಗಿ ಕುನ್ನುಕ್ಕುಡಿಯನ್ನು ತೀರಾ ಹಚ್ಚಿಕೊಂಡು ಬಿಟ್ಟಿದ್ದೆ. ಯಾವುದೋ ವೆಬ್‍ಸೈಟ್‍ನ ಮೂಲೆಯಲ್ಲಿ ಅವರು ತೀರಿ ಹೋದ ಸುದ್ದಿಯನ್ನು ಓದಿ ಇಡೀ ದಿನ ಮಂಕು ಬಡಿದವನಂತೆ ಕೂತಿದ್ದೆ. ಮರುದಿನ ದುಃಖ ತೋಡಿಕೊಳ್ಳಲು ಗೋಪಿಗೆ ಫೋನಾಯಿಸಿದಾಗ ಎರಡು ಮಾತಿನಲ್ಲಿ ಬೇಜಾರು ವ್ಯಕ್ತ ಪಡಿಸಿದ್ದನಷ್ಟೆ. ಮಾತು ಕುನ್ನುಕ್ಕುಡಿ ಸಾವಿಗೆ ಮೀಡಿಯಾದಲ್ಲಿ ಪ್ರಚಾರ ಸಿಗದ ಬಗ್ಗೆ ತಿರುಗಿತು. ಪೇಪರ್ ನ್ಯೂಸ್ ಚಾನಲ್‍ಗಳವರು ಯಾರುಯಾರಿಗೆ ಹುಟ್ಟಿರಬಹುದು ಎಂಬುದನ್ನು ಎಲ್ಲಾಕೋನಗಳ ಮೂಲಕ ಲೆಕ್ಕ ಹಾಕಿ ಅವರ ಪರಪಿತೃಗಳನ್ನೆಲ್ಲನ್ನೆಲ್ಲ ಸೇರಿಸಿ ಬೈದು ಉಗಿದು ಹಾಕಿದ. ಅವನೇ ಹೇಳಿದಂತೆ ಅರೆನಗ್ನ ಪಾರ್ಟಿಗಳ ವಿವರವಾದ ಚಿತ್ರಣಗಳನ್ನು ಪುಟಗಟ್ಟಲೆ ಬರೆಯುವ ಟೈಂ‍ಸ್ ಆಫ್ ಇಂಡಿಯಾ ಎಂಬ ಪತ್ರಿಕೆ ಒಂದು ಮೂಲೆಯಲ್ಲಿ ಒಂದು ಪ್ಯಾರಾ ಸುದ್ದಿಯನ್ನು ಮಾತ್ರ ಪ್ರಕಟಿಸಿತ್ತು. ಪತ್ರಿಕೆಗಳಿಗೆ ಬೈದು ಬೈಗುಳಗಳನ್ನು ಅಪಮಾನಿಸಲು ಇಷ್ಟವಿಲ್ಲದೇ ಇಲ್ಲಿಗೆ ಈ ವಿಷಯವನ್ನು ಮುಗಿಸುತ್ತಿದ್ದೇನೆ.

ಕಡೆಯದಾಗಿ ಕುನ್ನುಕ್ಕುಡಿಯವರಿಗೆ ನನ್ನ ಯೋಗ್ಯತೆಗೆ ತಕ್ಕಷ್ಟು ನುಡಿ ನಮನಗಳನ್ನು ಅರ್ಪಿಸಿ ಲೇಖನವನ್ನು ಕೊನೆಗೊಳಿಸುತ್ತೇನೆ. ಚರಮವೇ ಇಲ್ಲದ ಕುನ್ನುಕ್ಕುಡಿ ವೈದ್ಯನಾಥನ್‍ರವರ ಸಂಗೀತಕ್ಕೆ, ಸೈಂಧವ ಸಾಧನೆಗೆ, ವ್ಯಕ್ತಿತ್ವಕ್ಕೆ, ಮುಖದಲ್ಲಿ ಸದಾ ಲಾಸ್ಯವಾಡುವ ನಿಷ್ಕಲ್ಮಷ ನಗುವಿಗೆ ಕೋಟಿ ಕೋಟಿ ನಮನಗಳು. ಬಿಸ್ಮಿಲ್ಲಾ ಖಾನ್‍ರಂತೆ ಸಂಗೀತ ಸಾಧನೆಯಿಂದಲೇ ದೈವತ್ವಕ್ಕೇರಿದ ಕುನ್ನುಕ್ಕುಡಿಯವರ ಕೀರ್ತಿಯೂ ಆಚಂದ್ರಾರ್ಕ. ಕುನ್ನುಕ್ಕುಡಿಯವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ನೀವೂ ಪ್ರಾರ್ಥಿಸಿದರೆ ನಾನು ಈ ಲೇಖನ ಪ್ರಕಟಿಸಿದ್ದೂ ಸಾರ್ಥಕ ಎಂದುಕೊಳ್ಳುತ್ತೇನೆ.