ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ಡಿಸೆಂಬರ್ 17, 2009

ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ.



(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)

ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ. ಒಬ್ಪೊಬ್ಪರದು ಒಂದೊಂದು ಬೇಡಿಕೆ. ನಾನು ವಡೆ ತಿನ್ನುವುದಿಲ್ಲ, ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು, ನಾಲ್ಕು ದೋಸೆ, ಮೂರು ವಡೆ, ಎರಡು ಕೇಸರಿ ಬಾತ್. ಈ ರೀತಿ ಪ್ರತೀ ಮೇಜಿನಲ್ಲೂ ಬೇರೆ ಬೇರೆ ಬೇಡಿಕೆಗಳು. ಬೇರೆ ಮೇಜಿನ ಬೇಡಿಕೆಗಳನ್ನು ಕೇಳಿ ಬರುತ್ತಿದ್ದಂತೆ. ನಮ್ಮ ಮೆನು ಬದಲಾಗಿರುತ್ತದೆ! ವಡೆ ಮೂರರ ಬದಲು ಎರಡು ಕೊಡಿ, ಕೇಸರಿ ಬಾತ್ ಮೂರು ಇರಲಿ. ಯಾವ ಯಾವ ಮೇಜಿನಿಂದ ಯಾರು ಯಾವುದನ್ನು ಆರ್ಡರ್ ಮಾಡಿದ್ದಾರೆ, ಎಷ್ಟು ಆರ್ಡರ್ ಮಾಡಿದ್ದಾರೆ, ಮತ್ತೆ ಎಲ್ಲೆಲ್ಲಿ ಬದಲಾವಣೆ ಮಾಡಿದ್ದಾರೆ ಎಲ್ಲವನ್ನೂ ನೆನಪಿಟ್ಟುಕೊಂಡು ಹೋಟೆಲ್ 'ತಮ್ಮ' ತಂದು ಕೊಡಬೇಕು. ಅಲ್ಲದೇ ಸರಿಯಾಗಿ ಅದಕ್ಕೆ ತಕ್ಕಂತೆ ಬಿಲ್ ಮಾಡಬೇಕು! ಬಿಲ್ಲಿನಲ್ಲಿ ಕೊಂಚ ಏರುಪೇರಾದರೂ ಮಾಲಿಕನ ಬಳಿ ಇಲ್ಲವೇ ಗಿರಾಕಿಯ ಬಳಿ ಬೈಸಿಕೊಳ್ಳಬೇಕು. ಆದರೆ ಈ ಹುಡುಗರು ಸರಿಯಾಗಿ ತಂದು ಕೊಡುತ್ತಾರೆ, ಸರಿಯಾಗಿ ಬಿಲ್ಲಿಂಗ್ ಮಾಡುತ್ತಾರೆ. ತಪ್ಪುವುದು ತೀರಾ ಕಮ್ಮಿ! ಹತ್ತನೆಯ ತರಗತಿಯನ್ನೂ ಪಾಸು ಮಾಡಲಾಗದ ಆ ಹುಡುಗರು ಅಷ್ಟು ನಿಖರವಾಗಿ ಹೇಗೆ ಕೆಲಸ ಮಾಡುತ್ತಾರೆ? ಎಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತಾರೆ?
ಬಟ್ಟೆ ಇಸ್ತ್ರಿ ಮಾಡುವವನು ಅಥವಾ ತೊಳೆಯುವವನ ಉದಾಹರಣೆ ಎಲ್ಲರಿಗೂ ಚಿರಪರಿಚಿತ. ಯಾರ ಮನೆಯಿಂದ ಯಾರ ಬಟ್ಟೆ, ಯಾರು ಎಷ್ಟು ಕೊಟ್ಟಿದ್ದಾರೆ, ಯಾವಾಗ ವಾಪಸು ಕೊಡಬೇಕು ಎಲ್ಲವನ್ನೂ ಆ ಗಮಾರ(?) ನೆನಪಿಟ್ಟುಕೊಂಡು ತಂದು ಕೊಡುತ್ತಾನಲ್ಲ. ಅನೇಕ ಅಗಸರು ತಿಂಗಳ ಕಡೆಯಲ್ಲಿ ಅಥವಾ ವಾರದ ಕಡೆಯಲ್ಲಿ ಹಣ ಪಡೆಯುತ್ತಾರೆ. ಆಗಲೂ ಅವರಿಗೆ ವಾರ ಪೂರ್ತಿಯ ಯಾರ ಯಾರ ಮನೆಯ ಎಷ್ಟೆಷ್ಟು ಬಟ್ಟೆ, ಒಬ್ಬೊಬ್ಬರದು ಎಷ್ಟೆಷ್ಟು ಬಾಕಿ ಹಣ ಎಲ್ಲವನ್ನೂ ನೆನಪಿಟ್ಟುಕೊಂಡಿರುತ್ತಾರೆ. ಕಿಂಚಿತ್ ತಪ್ಪೂ ಆಗುವುದಿಲ್ಲ. ಒಂದು ಬಾರಿಯೂ ಒಬ್ಬರ ಮನೆಯ ಬಟ್ಟೇ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ! ಯಾವ ವ್ಯವಸ್ಥೆ ಇವರನ್ನು ಇಷ್ಟು "ಅಕ್ಯುರೇಟ್" ಆಗಿಸುತ್ತದೆ?
ಪೇಪರ್ ಹಾಕುವ ಹುಡುಗ. ನೂರಾರು ಇಂಗ್ಲಿಶ್, ಕನ್ನಡ ಪತ್ರಿಕೆಗಳ ನಡುವೆ ಯಾವುದು ಯಾರ ಮನೆಗೆ ಹೋಗಬೇಕು ಎಂದು ನೆನಪಿಟ್ಟುಕೊಳ್ಳುತ್ತಾನೆ. ಕೆಲ ತಿಕ್ಕಲು ಓದುಗರು ಹೇಗಿರುತ್ತಾರೆ ಎಂದರೆ ಭಾನುವಾರ ಪ್ರಜಾವಾಣಿ ಮಾತ್ರ ಹಾಕು, ಬುಧವಾರ ವಿತ್ತಪ್ರಭ ಮಾತ್ರ ಹಾಕು, ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಾತ್ರ ಸಾಕು ಎಂದೆಲ್ಲಾ ಕಂಡಿಶನ್ನುಗಳನ್ನು ಇಟ್ಟಿರುತ್ತಾರೆ. ಇದನ್ನೆಲ್ಲ ಪ್ರತಿಯೊಂದು ಮನೆಯ ಮಟ್ಟಿಗೂ ನೆನಪಿಡಬೇಕು. ಸರಿಯಾಗಿ ಆಯಾ ಪತ್ರಿಕೆಯನ್ನು ಬೆಳಗಿನ ಚಹಾ ಸಮಯದೊಳಗೆ ತಲುಪಿಸಬೇಕು. ಇಲ್ಲದಿದ್ದರೆ ಬೈಗುಳ ಗ್ಯಾರಂಟಿ! ಸಾಲದೆಂಬಂತೆ ಈ ತಿಂಗಳಲ್ಲಿ ಯಾವ ಪತ್ರಿಕೆಯದು ಎಷ್ಟು ರಜೆಗಳು ಬಂದಿವೆ, ಯಾವ ದಿನ ಗಿರಾಕಿಗಳು ಊರಿಗೆ ಹೋಗಿದ್ದರಿಂದ ಪೇಪರ್ ಹಾಕಲಾಗಿಲ್ಲ ಎಂದು ನೆನಪಿಟ್ಟು ಬಿಲ್ಲಿಂಗ್ ಮಾಡಬೇಕು. ಪೇಪರ್ ಹಾಕುವ ಹುಡುಗನ ಕೆಲಸ ಎಂದರೆ ಸಾಮಾನ್ಯ ವಿಷಯವೇ?
ಮುಂಬಯಿ ಡಬ್ಬಾವಾಲಾಗಳ ಕೆಲಸದ ನಿಖರತೆಗೆ ದೇಶವಿದೇಶದ ಮ್ಯಾನೇಜ್ ಮೆಂಟ್ ಕಾಲೇಜುಗಳು ಮಾರು ಹೋಗಿವೆ. ರಾಜಕುಮಾರ ಚಾರ್ಲ್ಸ್ ಸ್ವತಃ ಬಂದು ಅಭಿನಂದಿಸಿದ್ದಾನೆ! ಮುಂಬಯಿ ಡಬ್ಬಾವಾಲಾಗಳ ಬಳಿ ಊಟದ ಡಬ್ಬಿ ಬದಲಾಗುವುದು ಕೋಟಿಗೊಮ್ಮೆ ಮಾತ್ರ! ಡಬ್ಬಾವಾಲಾಗಳು ಯಾವುದೇ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದವರಲ್ಲ, ಹೋಗಲಿ ಯಾವ ಡಿಗ್ರಿಯನ್ನೂ ಪಡೆದವರಲ್ಲ!


ಸಿಕ್ಸ್ ಸಿಗ್ಮಾ ಎಂಬ ಪದವಿದೆ. ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿರುವವರಿಗೆ ಇದು ಪರಿಚಿತ ಹೆಸರು. ಇದು ಸೇವಾ ಕ್ಷೇತ್ರದಲ್ಲಿನ ದಕ್ಷತೆಯ ಅಳತೆಗೋಲು. ಸಿಕ್ಸ್ ಸಿಗ್ಮಾ ಎಂದರೆ ಸೇವೆ ನೀಡುವ ಹತ್ತು ಲಕ್ಷ (ಒಂದು ಮಿಲಿಯನ್) ಯುನಿಟ್ ಗಳಲ್ಲಿ ಒಂದು ಬಾರಿ ಮಾತ್ರ ದೋಷ ಬರಬಹುದು! ಅಂದರೆ ನೀವು ವಾಚಿನ ತಯಾರಕರಾಗಿದ್ದರೆ ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚು ಮಾತ್ರ ದೋಶಪೂರಿತವಾಗಿರಬಹುದು. ಆಗ ಮಾತ್ರ ನಿಮಗೆ ಸಿಕ್ಸ್ ಸಿಗ್ಮಾ ಛಾಪು ಸಿಗುತ್ತದೆ. ಸಾಫ್ಟ್ ವೇರ್ ನ ಹತ್ತು ಲಕ್ಷ ಸಾಲಿನ 'ಕೋಡ್' ನಲ್ಲಿ ಹೆಚ್ಚೆಂದರೆ ಒಂದು ಸಾಲು ಮಾತ್ರ ದೋಷದಿಂದ ಕೂಡಿರಬಹುದು! ಅಗಸರವನು ಹತ್ತು ಲಕ್ಷ ಬಟ್ಟೆಗಳ ಪೈಕಿ ಒಂದು ಬಟ್ಟೇಯನ್ನು ಮಾತ್ರ ಕಳೆದು ಹಾಕಬಹುದು. ನಮ್ಮ ಡಬ್ಬಾವಾಲಾಗಳ ಡಬ್ಬಿ ಕೋಟಿಗೆ ಒಂದು ಬಾರಿ ಮಾತ್ರ ವ್ಯತ್ಯಾಸ ಬರುತ್ತದೆ. ಅವರ ಸೇವೆಯ ದಕ್ಷತೆಯ ಮುಂದೆ ಸಿಕ್ಸ್ ಸಿಗ್ಮಾ ಅಳತೆಗೋಲೇ ಚಿಕ್ಕದಾಗಿ ಹೋಯಿತು! ನಮ್ಮ ಹೋಟೆಲ್ ಮಾಣಿಗಳು, ಅಗಸರವನು ಯಾವ ಸಿಕ್ಸ್ ಸಿಗ್ಮಾಕ್ಕೂ ಕಡಿಮೆಯಿಲ್ಲ!
ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳು ಸಿಕ್ಸ್ ಸಿಗ್ಮಾ ಪಡೆಯಲು ಹೆಣಗುತ್ತವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಬುದ್ಧಿವಂತರಾದ 'ಕ್ವಾಲಿಫೈಡ್' ಇಂಜಿನಿಯರುಗಳು, ಮ್ಯಾನೇಜ್ ಮೆಂಟ್ ಕುಳಗಳು! ಆದರೂ ನಮ್ಮ ದೇಶದಲ್ಲಿ ಸಿಕ್ಸ್ ಸಿಗ್ಮಾ ಪಡೆದ ಕಂಪನಿಗಳು ಕೆಲವೇ ಕೆಲವು ಅದೂ ಕೆಲವು ಪ್ರಾಜೆಕ್ಟ್ ಗಳಿಗೆ ಮಾತ್ರ! ನಮ್ಮ ಹೋಟೆಲ್ ತಮ್ಮಂದಿರು, ಅಗಸರು, ಡಬ್ಬವಾಲಾಗಳು, ಪೇಪರ್ ಹುಡುಗರು ಸಾಧಿಸಿರುವ ದಕ್ಷತೆಯನ್ನು ಸಾಧಿಸಲು ನಮ್ಮ ಮಹಾಬುದ್ಧಿವಂತ ಐ ಎ ಎಸ್ ಆಫೀಸರುಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ!

ಶುಕ್ರವಾರ, ಡಿಸೆಂಬರ್ 4, 2009

ಕವಿ ಸಂಭಾಷಣೆ


ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ್ರಶಂಸೆ ಪಡೆದ ಒಬ್ಬ ಕವಯಿತ್ರಿ ಬೆಳಗೆರೆ ಜಾನಕಮ್ಮನವರು. ಸಂಚಿ ಹೊನ್ನಮ್ಮ. ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮ್ಮನಂತಹವರ ಸಾಲಿನಲ್ಲಿ ನಿಲ್ಲುವವರು.

ಜಾನಕಮ್ಮ ಬರೆದದ್ದು ಬಹಳ ಕಡಿಮೆ. ಆದರೂ ಅವರ ಹೆಸರು ಆಗಿನ ಅನೇಕ ಸಾಹಿತಿಗಳ ಬಾಯಲ್ಲಿ ನಲಿದಾಡುತ್ತಿತ್ತು. ಡಿವಿಜಿ, ಬೇಂದ್ರೆ, ಮಾಸ್ತಿ,ರಾಜರತ್ನಂ ರಂತವರು ಜಾನಕಮ್ಮನವರ ಅಭಿಮಾನಿ ಬಳಗದಲ್ಲಿದ್ದರು. ಬಳ್ಳಾರಿಗೆ ಹೋದಾಗಲೆಲ್ಲಾ ಸಾಹಿತಿಗಳೆಲ್ಲಾ ಜಾನಕಮ್ಮನ ಮನೆಗೆ ಭೇಟಿ ಕೊಡುತ್ತಿದ್ದರು.

ಈ ಕವಿಗಳದೇ ವಿಚಿತ್ರ ಲೋಕ. ಅವರು ಹೃದಯಗಳನ್ನು ಹೇಗೆ ಬೆಸೆದುಕೊಳ್ಳುತ್ತಾರೋ ಅವರೇ ಬಲ್ಲರು. ಅಂತಹ ಯೋಚನೆಗಳು ಅವರಿಗೆ ಅಂತರಾಳದಿಂದ ಆವಾಹನೆಯಾಗುವ ಪರಿ ಅವರಿಗೇ ತಿಳಿದುದು. ಜಾನಕಮ್ಮ ಮತ್ತು ಬೇಂದ್ರೆ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೆ ಜಾನಕಮ್ಮನ ಸಾವಿಗೆ ಬೇಂದ್ರೆ ಸ್ವಂತ ಮಗಳನ್ನು ಕಳೆದುಕೊಂಡಂತೆ ದುಃಖಿಸಿದ್ದರು. ಸಂಪರ್ಕವೇ ಅತ್ಯಂತ ಕಷ್ಟವಾಗಿದ್ದ ಕಾಲದಲ್ಲಿ ಕವಿತೆಯೊಂದು ಈ ಹೃದಯಗಳನ್ನು ಬೆಸೆಯಿತು.

ಕವಿತೆಯ ರಚನೆಗಳನ್ನು ಮುಂದುವರಿಸಬೇಕೆ ಬೇಡವೇ ಎಂಬ ಯೋಚನೆಯಲ್ಲಿದ್ದ ಜಾನಕಮ್ಮ ತಂದೆಯ ಸಲಹೆಯಂತೆ ಬೇಂದ್ರೆಯವರಿಗೆ ಒಂದು ಕವನವನ್ನು ಬರೆದು ಕಳುಹಿಸಿದರು. ಬೇಂದ್ರೆಯವರಿಂದ ಉತ್ತರ ಬಂದರೆ ಮುಂದುವರಿಸುವುದು, ಇಲ್ಲದಿದ್ದರೆ ನಿಲ್ಲಿಸುವುದು ಎಂಬುದು ಅವರ ಯೋಚನೆ. ಅವರು ವರಕವಿಗೆ ಬರೆದ ಕವನ ಹೀಗಿತ್ತು.



ದೋಷರಾಹಿತ್ಯದ ಕಲ್ಪನಾ ರಾಜ್ಯದಲ್ಲಿ

ಸಗ್ಗದೂಟವನುಣುವ ಪಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂದ

ಇಣುಕಿಣುಕಿ ನೋಡುತಿದೆ ಈ ಸಣ್ಣ ಮನವು

ಕವಿಯ ಬರಹವ ಕಂಡು ರಸ ಬಿಂದುಗಳ ಸವಿಗೆ

ಸುಳಿಯುತಿದೆ ಭೃಂಗದೊಡಲು ಭಾವಪರಿಯದೆಯೇ

ಜಡಾ ಮನಕೆ ಚೇತನವ ಕಲ್ಪಿಸುವ ಮಾನ್ಯ

ತೇಲಿ ಬಿಡು ಆ ನಿನ್ನ ಭಾವಗಳನ್ನೊಮ್ಮೆ.



ನಾಲ್ಕನೆಯ ದಿನವೇ ಈ ಪತ್ರಕ್ಕೆ ಬೇಂದ್ರೆಯವರಿಂದ ಉತ್ತರ ಬಂದಿತು.



ತಂಗಿ ಜಾನಕೀ ನಿನ್ನ ವೈದೇಹನೊಲವಿನಲಿ

ಓಲೆ ಬಂದಿತು ಇತ್ತ ತೇಲಿ

ಆರಿಗಾರೋ ಎನ್ನುವ ನಾಸ್ತಿಕತೆಯನು ನೂಕಿ

ದಾಟಿ ದಿಕ್ ಕಾಲಗಳ ಸುತ್ತು ಬೇಲಿ

ಕವಿಯು ಮಾನಸ ಪುತ್ರ ಅವನು ಆಗಸದೇಹಿ

ಮಾತಿನಲಿ ಮೂಡುವ ಭಾವ ಜೀವಿ

ಮೈಯಾಚೆ ಉಸಿರಾಚೆ ಬಗೆಯ ಬಣ್ಣಗಳಾಚೆ

ಅವನ ಹೂವು ಅರಳುವುದು ಭಾವದೇವಿ



ಬೇಂದ್ರೆಯವರ ಕವನ ಕುಸುರಿ, ಚಾತುರ್ಯವನ್ನು ನಾವು ಗಮನಿಸಬೇಕು. ಅದೆಂತಹ ಅಮೋಘ ಒಳನೋಟ. ಬೇಂದ್ರೆಗೆ ಬೇಂದ್ರೆಯೇ ಸಮ!

’ವೈದೇಹನೊಲವಿನಲಿ’ ಎಂಬ ಪದ ಗಮನಿಸಿ. ವೈದೇಹಿ ಎಂದರೆ ಸೀತೆ. ಜಾನಕಿ ಎಂದರೂ ಸೀತೆ. ಮಗದೊಂದು ಅರ್ಥ ಬರುವಂತೆ ಇಲ್ಲಿ ಪದಗಳೊಡನೆ ಆಟವಾಡಿದ್ದಾರೆ ಬೇಂದ್ರೆ! ವೈದೇಹನೊಲವು ಅಂದರೆ ವೈ-ದೇಹ ’ದೇಹ ಸಂಬಂಧವಿಲ್ಲದ’ ಒಲವು! ಯಾಕೆಂದರೆ ಅವರಿಬ್ಬರೂ ಪರಸ್ಪರರನ್ನು ನೋಡಿಯೇ ಇಲ್ಲ! ಆದರೂ ಅವರಿಬ್ಬರ ನಡುವೆ ಬೆಸುಗೆ! ಮೂರನೆಯ ಮತ್ತು ನಾಲ್ಕನೆಯ ಸಾಲಿನಲ್ಲಿ ಇನ್ನೊಂದು ಸೂಕ್ಷ್ಮವನ್ನು ವ್ಯಕ್ತ ಪಡಿಸಿದ್ದಾರೆ. ಆಗಿನ ಕಾಲದಲ್ಲಿ ಅಂದರೆ ತೀರಾ ಮಡಿವಂತಿಕೆಯಿದ್ದ ಕಾಲದಲ್ಲಿ ಒಬ್ಬ ಹೆಣ್ಣುಮಗಳು ಬೇರೆ ಗಂಡಸಿನೊಡನೆ ಮಾತನಾಡಾಲೂ ಅಸಾಧ್ಯವೆಂಬಂತಿತ್ತು. ಅಂತಹದರಲ್ಲಿ ಪತ್ರ ಬರೆದಿದ್ದಾರೆ ಜಾನಕಮ್ಮ! ಹಾಗಾಗಿ ಸಮಾಜ ಹಾಕಿದ ಬೇಲಿಯನ್ನು ದಾಟಿದ್ದಾರೆ! ಆದರೇನಂತೆ? ಕವಿಗೆ ಬೇಲಿ ಎಂಬುದು ಎಲ್ಲಿದೆ? ಬಾನಿನಂತೆ ಅವನಿಗೆ ಎಲ್ಲೆ ಇಲ್ಲ, ಬಂಧನಗಳಿಲ್ಲ, ಏಕೆಂದರೆ ಅವನು ಭಾವಜೀವಿ!!!! ಇದು ಕಡೆಯ ನಾಲ್ಕು ಸಾಲುಗಳ ಭಾವ. ಈ ಕವನ ಹೀಗೆ ಮುಕ್ತಾಯವಾಗುತ್ತದೆ.



ಅದನು ನೀ ಕಂಡವಳು ಬೇರೆ ಕಾಣಿಕೆ ಏಕೆ

ಕ್ಷೀರ ಸಾಗರದಲೆಯ ತಲೆಯ ಪೆರೆಯೆ

ಪೂರ್ಣಿಮಾ ದೃಷ್ಟಿಯಲಿ ತೆರೆದಂದು ಸೃಷ್ಟಿಯಲಿ

ನಿನ್ನ ನಂದನಕೇನು ಮುಚ್ಚು ಮರೆಯೇ?



ಈ ಸಾಲುಗಳನ್ನು ಬಣ್ಣಿಸಿ ರಸಭಂಗ ಮಾಡಲಾರೆ. ಅವುಗಳನ್ನು ಹಾಗೆಯೇ ಅನುಭವಿಸಬೇಕು!



ಖ್ಯಾತ ಲೇಖಕಿ ನೇಮಿಚಂದ್ರ ಅವರ ಸಂಪಾದಕತ್ವದಲ್ಲಿ "ಬೆಳಗೆರೆ ಜಾನಕಮ್ಮ-ಬದುಕು ಬರಹ" ಪುಸ್ತಕ ಪ್ರಕಟವಾಗಿದೆ.ಸಧ್ಯಕ್ಕೆಇ-ರೂಪದಲ್ಲಿ ಇಲ್ಲಿ ಲಭ್ಯವಿದೆ. ಇವರ ಕವನ ಸಂಕಲನವನ್ನು ಮತ್ತೊಮ್ಮೆ ಪ್ರಕಟಿಸುವ ಇರಾದೆಯನ್ನು ಕೆಲ ಗೆಳೆಯರು ವ್ಯಕ್ತಪಡಿಸಿದ್ದಾರೆ. ನನಗಂತೂ ಅವರ ಕವನಗಳು ಹುಚ್ಚು ಹಿಡಿಸಿವೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಇಹಲೋಕದ ಪ್ರಯಾಣ ಮುಗಿಸಿದ ಜಾನಕಮ್ಮನ ಜೀವನ ದೃಷ್ಟಿಕೋನ, ಚಿಂತನೆ, ವಿಚಾರ ಲಹರಿ, ಸೃಜನಶೀಲತೆ ಅಮೋಘ ಎನ್ನಿಸುತ್ತವೆ. ಇವರ ಕವಿತೆಗಳ ಬಗ್ಗೆ ಮತ್ತು ಜೀವನದ ಬಗ್ಗೆ ಒಮ್ಮೆ ಬರೆಯುತ್ತೇನೆ! ಅಂದಹಾಗೆ ಜಾನಕಮ್ಮ ಓದಿದ್ದು ಒಂದನೆಯ ತರಗತಿಯವರೆಗೆ ಮಾತ್ರ!



ಒಂದು ಸ್ಯಾಂಪಲ್ ನಿಮಗಾಗಿ!



ಗುಬ್ಬಿ ಗುಬ್ಬಿ ತರವಲ್ಲ

ಮನೆಯಿದು ನನ್ನದು ನಿನದಲ್ಲ !

ಕಿಚಿ ಕಿಚಿ ಎಂದು ಕರೆಯದೆ ಇಲ್ಲಿ

ಬಯಲಿದೆ ಹೊರಗಡೆ ಸಾಯಲ್ಲಿ.!!



ಮೇಲುನೋಟಕ್ಕೆ ಇದು ಗುಬ್ಬಿಯನ್ನು ಓಡಿಸಲು ಬರೆದ ಕವನ. ಗುಬ್ಬಿ ಎಂದರೆ ಅರಿಷಡ್ವರ್ಗ, ಅಹಂ, ಸ್ವಾರ್ಥ ಇತ್ಯಾದಿ ’ವಿಷಯ’ಗಳು, ಮನೆ ಅಂದರೆ ನಮ್ಮ ಮನಸ್ಸು ಆಗಬಹುದು. ಮನಕ್ಕೆ ತೊಂದರೆ ಕೊಟ್ಟು ಶಾಂತಿಯನ್ನೆ ಕದಡದೇ ಬಯಲಲಿ ಹೋಗಿ ಸಾಯಿ ಎಂದು ವಿಷಯಂಗಳಿಗೆ ಹೇಳುತ್ತಿದ್ದಾರೆ ಜಾನಕಮ್ಮ. ಬಯಲು ಎಂದರೆ ಅರಿವು, ಸಾಕ್ಷಾತ್ಕಾರ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ. ಈ ಪ್ರಕಾರ "ಗುಬ್ಬಿ ಬಯಲಲ್ಲಿ ಹೋಗಿ ಸಾಯಿ!" ಎಂದರೆ ಏನಂತ ಅರ್ಥವಾಯಿತಲ್ಲ!!!!

ಗುರುವಾರ, ನವೆಂಬರ್ 26, 2009

ಟೀಚರ್‍ ಎಂಬ ದೇವರುಗಳು.

ಬಾಲವಾಡಿ (ಈಗ ಎಲ್.ಕೆ.ಜಿ, ಯುಕೆಜಿ ಅಂತಾರೆ), ಒಂದನೆಯ ತರಗತಿಯ ಮಕ್ಕಳಿಗೆ ತಮ್ಮ ಶಿಕ್ಷಕರಿಗಿಂತ ಹೆಚ್ಚಿನದು ಯಾವುದೂ ಕಾಣುವುದಿಲ್ಲ. ಟೀಚರುಗಳ ವಾಕ್ಯವೇ ವೇದವಾಕ್ಯ. ಮಿಸ್ಸು ಹಾಕಿದ ಗೆರೆಯನ್ನು ಯಾವ ಕಾರಣಕ್ಕೂ ದಾಟರು. ಅಪ್ಪ ಅಮ್ಮನ ಮಾತಿಗಿಂತ ಟೀಚರುಗಳ ಮಾತಿಗೆ ಬೆಲೆ ಜಾಸ್ತಿ.
ನಾನೂ ಹೊರತಲ್ಲ. ನಮ್ಮ ಮಿಸ್ ಹೆಸರು ಮಂಗಳಾ ಮಿಸ್. (ಈಗ ಮೇಡಮ್ ಎಂದು ಕರೆಯುತ್ತೇನೆ!). ನನ್ನ ಬಗ್ಗೆ ಬಹಳ ಪ್ರೀತಿ! ಈಗಲೂ ನನ್ನ ಬಗ್ಗೆ ಅಕ್ಕರೆ. ಅವರಷ್ಟೇ ಅಲ್ಲ. ನನ್ನ ಎಲ್ಲ ಗುರುವರ್ಗದವರೂ ಅಷ್ಟೇ. ನಮ್ಮ ಅಪ್ಪ ಅಮ್ಮ ಸಿಕ್ಕಾಗಲೆಲ್ಲ ನಾನು ಮತ್ತು ತಂಗಿ ಏನು ಮಾಡುತ್ತಿದ್ದೇವೆ ಎಂದು ಪ್ರಗತಿಯನ್ನು ಕೇಳಿ ತಿಳಿದುಕೊಂಡು ಸಂತಸಗೊಳ್ಳುತ್ತಾರೆ.
ಮೊದಲನೆಯ ತರಗತಿಯಲ್ಲಿದ್ದಾಗ ನಡೆದದ್ದಿದು. ಆಗಾಗ ತರಗತಿಗಳಿಗೆ ಪೆನ್ನುಗಳನ್ನೋ, ಪುಸ್ತಕಗಳನ್ನೋ, ಮ್ಯಾಪುಗಳನ್ನೋ ಮಾರಲು ತರಗತಿಗಳಿಗೆ ಕೆಲವರು ಬರುತ್ತಿದ್ದರು. ಒಮ್ಮೆ ಮ್ಯಾಜಿಕ್ ಸ್ಲೇಟಿನವನು ಬಂದ. ಆ ಸ್ಲೇಟಿನ ಮೇಲೆ ಮಸಿ ಬಳಸದೇ ಬರೆಯಬಹುದುತ್ತು. ಪೆನ್ನಿನ ಹಿಂಬಾಗದಿಂದ ಬರೆಯಬಹುದಿತ್ತು. ಬರೆದ ಪುಟವನ್ನು ಹಿಂಬದಿಯ ಕಪ್ಪು ಭಾಗದಿಂದ ಬೇರ್ಪಡಿಸಿದರೆ ಬರೆದದ್ದು ಅಳಿಸಿ ಹೋಗುತ್ತಿತ್ತು. ನನಗೆ ಇದು ಆಕರ್ಷಕವಾಗಿ ಕಂಡರೂ ಕೊಂಡುಕೊಳ್ಳಲೇಬೆಕೆಂದು ಅನಿಸಲಿಲ್ಲ. ಸೇಲ್ಸಹುಡುಗ "ನೀವೊಮ್ಮೆ ಹೇಳಿ ಮೇಡಮ್" ಅಂತ ಮಂಗಳಾ ಮಿಸ್ಸಿಗೆ ಕೇಳಿದ.
"ನಾಳೆ ನಿಮ್ಮ ಅಪ್ಪ ಅಮ್ಮನ್ನ ಕೇಳಿ ಸ್ಲೇಟನ್ನು ಕೊಂಡುಕೊಳ್ಳಿ" ಎಂದು ಮಿಸ್ಸು ಹೇಳಿದರು.
ಅಲ್ಲಿಂದ ನನಗೆ ತುಡಿತ ಶುರುವಾಯಿತು! ಮನೆಗೆ ಹೋಗಿ ಮಿಸ್ಸು ಹೇಳಿದ್ದಾರೆ ಆ ಸ್ಲೇಟು ಬೇಕೇ ಬೇಕು ಅಂತ ರಚ್ಚೆ ಹಿಡಿದೆ. ನಾನು ಅಂಥ ಹಟಮಾರಿಯಲ್ಲ. ಆದರೆ ಅವತ್ತು ರಚ್ಚೆ ಹಿಡಿದೆ ಯಾಕೆಂದರೆ ಮಿಸ್ಸು ಹೇಳಿದ್ದರಲ್ಲ!
ಮರುದಿನ ಅಮ್ಮ ಶಾಲೆಗೆ ಬಂದರು. "ಇವಾ ನೋಡ್ರಿ, ಅದ್ಯಾದೋ ಮ್ಯಾಜಿಕ ಸ್ಲೇಟ್ ಬೇಕು ಅಂತ ಹಠ ಮಾಡತಾನ" ಅಂತ ದೂರಿದರು. ಮಂಗಳಾ ಮಿಸ್ಸು "ಯಾಕೋ ಸ್ಲೇಟ್ ಬೇಕು ಅಂತ ಹಟ ಮಾಡ್ತೀಯಾ?" ಅಂತ ಕಿವಿ ಹಿಂಡಿದರು! ನನಗೆ ಅವತ್ತು ಕಿವಿ ಹಿಂಡಿದ್ದಕ್ಕಿಂತ ಹೆಚ್ಚಿನ ಆಘಾತವಾದದ್ದು ಮಂಗಳಾ ಮಿಸ್ಸು ಪ್ಲೇಠ್ ತಿರುವಿ ಹಾಕಿದ್ದರಿಂದ. ನಿನ್ನೆ ತಾನೇ ಸ್ಲೇಟ್ ಕೊಂಡುಕೊಳ್ಳಿ ಎಂದವರು ಇವತ್ತು ಕಿವಿ ಹಿಂಡಿಬಿಡುವುದೇ? ಅವರು ಹೇಳಿದ್ದಕ್ಕೆ ತಾನೇ ನಾನು ಹಟ ಹಿಡಿದದ್ದು! ಮಂಗಳಾ ಮಿಸ್ಸು ನನಗೆ ಈ ಮೂಲಕ ದ್ರೋಹ ಬಗೆದರು ಎಂದೇ ಅಂದುಕೊಂಡೆ. ಅನೇಕ ದಿನಗಳವರೆಗೆ ಮಿಸ್ಸಿನ ಮೇಲೆ ಸಿಟ್ಟಿತ್ತು. ಮನಿಸಿಕೊಂಡೇ ಅಡ್ಡಾಡಿದ್ದಾಯಿತು! ಆಮೇಲೆ ಹಾಗೆಯೇ ರಮಿಸಿ ಕರಗಿಸಿದರೆನ್ನಿ!
ಇಲ್ಲಿ ತಪ್ಪು ಯಾರೆಂದು ತಿಳಿಯುತ್ತಿಲ್ಲ. ಸಹಜವಾಗಿ ’ಕೊಂಡುಕೊಳ್ಳಿ’ ಎಂದು ಹೇಳಿದ ಮಿಸ್ಸಿನದೋ? ಸಹಜವಾಗಿ ಹೇಳಿದ್ದನ್ನು ಸಿರಿಯಸ್ ಆಗಿ ತೆಗೆದುಕೊಂಡ ನನ್ನದೋ? ದೂರು ಹೇಳಿ ಮಿಸ್ಸು ಮತ್ತು ನನ್ನ ನಡುವೆ ತಂದಿಟ್ಟ ಅಮ್ಮನದೋ!

ಸೋಮವಾರ, ನವೆಂಬರ್ 23, 2009

ಎಲ್ಲಾ ಪ್ರಚಾರವೂ ಒಳ್ಳೆಯದೇ!

" Any Publicity is good publicity" ಅಂತಾರೆ. ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ.
ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ. ಇಷ್ಟು ಸಂತೋಷ ನನ್ನ ಲೇಖನ ಪ್ರಕಟ ಆದಾಗಲೂ ಆಗಿರಲಿಲ್ಲ!
ಶಾಂತಾರಾಂ ಅವರನ್ನು ಅವರ ನಿವೇಶದಲ್ಲೇ ತಿಂಗಳ ಹಿಂದೆ ನನನ್ನ ಸ್ನೇಹಿತರೊಂದಿಗೆ ಭೇಟಿಯಾಗಿದ್ದೆ. ಅವತ್ತು ಸಾಹಸಸಿಂಹ ವಿಷ್ಣುವರ್ಧನ ಜನುಮದಿನ.
"ನಾನೂ ಚಾಮರಾಜಪೇಟೆಯಲ್ಲಿ ಓದಿದವನು. ನಾನೂ ನಿಮ್ಮ ಸಾಹಸಸಿಂಹ ಕ್ಲಾಸ್ ಮೇಟುಗಳು. ಸಂಪತ ಕುಮಾರ ಅಂತ ಅವನ ಹೆಸರು. ಕಡೆಗೆ
ಓದು ಮುಗಿದ ಮೇಲೆ ಇಲ್ಲಿ ಬದುಕಲು ಜಾಗವಿಲ್ಲದೇ ಹೊಟ್ಟೆಪಾಡಿಗಾಗಿ ಅಮೇರಿಕೆಗೆ ತೆರಳಿದೆ" ಎಂದು ಮಾತಿಗಾರಂಭಿಸಿದರು.
ತಾತ್ವಿಕವಾಗಿ ನಾವು ವಿರೋಧಿಗಳಾದರೂ ವಯಕ್ತಿಕಮಟ್ಟದಲ್ಲಿ ಅವರ ತೋರಿದ ಸ್ನೇಹ ನನಗಿಷ್ಟವಾಯಿತು! ಮೊದಲು ಬಿಯರಗಾಗಿ ಆಹ್ವಾನಸಿದವರು ನಮಗೆ ಅಭ್ಯಾಸವಿಲ್ಲವೆಂದು ತಿಳಿದು
ಕಾಫಿಯಿಂದ ಆದರಿಸಿದರು.
ಪ್ರಸ್ತುತ ಲೇಖನ ಎರಡು ಮೂರು ತಿಂಗಳ ಹಿಂದೆಯೇ ಪ್ರಕಟವಾಗಬೇಕಿತ್ತು. ಭಟ್ಟರು ಈಗ ಕೃಪೆತೋರಿದರೆನಿಸುತ್ತದೆ! ಈ ಲೇಖನದ ಬಗ್ಗೆ ಹೇಳಿ ನಿಮ್ಮನ್ನು ಖಂಡಿಸಿದ್ದೇನೆ, ವ್ಯಂಗ್ಯವಾಡಿದ್ದೇನೆ ಎಂದರು. ಆದರೆ ಈ ಲೇಖನದಲ್ಲಿ ಒಂದು ಕಡೆ ಮಾತ್ರ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ.ಅದೂ ಜೆಫರಿ ಬಗ್ಗೆ ಹೇಳುವಾಗ. ನನ್ನೆದುರಿಗಿನ ಮಾತಿಗೂ ಲೇಖನಕ್ಕೂ ಸಂಪೂರ್ಣ ಸಾಮ್ಯಗಳಿವೆ. ಸೆರಾಲಿನಿ, ಜೆಫರಿ, ವಂದನಾಶಿವ, ನಾಗೇಶ ಹೆಗಡೆ ಇವರೆಲ್ಲ ಕಳ್ಳರು; ಇವರಿಗೇನು ತಿಳಿದಿದೆ ಎಂದು ಹಂಗಿಸಿದರು. ಬಿಟಿ ಹತ್ತಿಯ ಬಗ್ಗೆ ಅಧ್ಯಯನ ನಡೆಸಿದ ಝಕಾರಿಯಾ ಮತ್ತಿತರರ ಸಂಶೋಧನೆಯನ್ನು ಅಲ್ಲಗಳೆದು ಅವರೆಲ್ಲ ಯಾವುದೋ ಭ್ರಮೆಗೊಳಗಾಗಿದ್ದಾರೆ ಎಂದು ಜರಿದರು. ನಾನು ಗಮನಿಸಿದ ಒಂದು ಅಂಶವೆಂದರೆ ಇವರ ಪ್ರಕಾರ ಬಿಟಿ ಬಗ್ಗೆ ಮಾತಾಡಲು ಪಿಎಚ್.ಡಿ ಇದ್ದವರಿಗೆ ಮಾತ್ರ ಹಕ್ಕು ಇದೆ! ಕಣ್ಣೆದುರಿಗೆ ಕಂಡ ಸತ್ಯವನ್ನು ಹೇಳಿದರೂ ಅದು ಪಿಎಚ್.ಡಿ ಹೊಂದಿದವನು ಹೇಳಿದರೆ ಮಾತ್ರ ಸತ್ಯ! ಡಾಕ್ಟರೇಟ ಗಳನ್ನು ಬಿಟ್ಟು ಬೇರೆಯವರು ಬಿಟಿ ಬಗ್ಗೆ ಮಾತನಾಡಲು ಅರ್ಹರಲ್ಲ!
ಇನ್ನು Horizontal gene transfer ಎಂಬ ಮಾತೇ ಸುಳ್ಳು. gene transfer, ಪ್ರಕೃತಿಯಲ್ಲಿ ಲಕ್ಷಾಂತರ ವರ್ಷಗಳಿಂದ ನಡೆಯುತ್ತಿದೆ ಎಂಬ ವಾದ ಮುಂದಿಟ್ಟರು. ಅದೇನೋ ದಿಟ ಆದರೆ ಅಕ್ಕಿಯಿಂದ ಅಕ್ಕಿಗೆ ಜೋಳದಿಂದ ಜೋಳಕ್ಕೆ ಅಂದರೆ ಒಂದೇ ತಳಿಯ ಸಸ್ಯಗಳ ನಡುವೆ gene transfer ಆಗಿವೆಯೇ ಹೊರತು ಇವರು ಮಾಡಿರುವಂತೆ ಣಿಗಳ,ಬ್ಯಾಕ್ಟೀರಿಯಾಗಳ ನಡುವೆ ಮತ್ತು ಸಸ್ಯಗಳ ನಡುವೆ gene transfer ಆಗಿಲ್ಲ! ರಸಾಯನಿಕ ಗೊಬ್ಬರಗಳಿಂದ ಯಾವ ಹಾನಿಯೂ ಇಲ್ಲ. ಅದಕ್ಕೆ ನಮ್ಮ ಶರೀರ ಹೊಂದಿಕೊಳ್ಳುತ್ತದೆ ಎಂದು ನಮ್ಮ ಕಿವಿಯ ಮೇಲೆ ಹೂವಿಡಲು ನೋಡಿದರು. ಶರೀರ ಹೊಂದಿಕೊಳ್ಳುತ್ತದೆ ಎಂಬುದು ನಿಜ, ಹೊಂದಿಕೊಳ್ಳಲು ಹತ್ತಾರು ತಲೆಮಾರುಗಳು ಹೋಗಬೆಕು. ಅಷ್ಟರಲ್ಲಿ ಮನುಕುಲಕ್ಕೆ ಆಗಬಬೇಕಾದ ಹಾನಿ ಆಗಿಹೋಗಿರುತ್ತದೆ!
ಸುಮಾರು ಎರಡು ತಾಸುಗಳ ಕಾಲ ನಡೆದ ಸಂಭಾಷಣೆಯನ್ನು ಇಲ್ಲಿಡುವುದು ಕಷ್ಟ. ಕನಿಷ್ಟ ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಮೇಲಿನ ಅಂಶಗಳು ಅರ್ಥವಾಗುತ್ತವೆ. ಇದಕ್ಕೆ ಸಾಕ್ಷಿ ಬೇರೆ ಬೇಕು ಅಂತ ಕೇಳುತ್ತಾರೆ. ಹಾಳಾಗಿ ಹೋಗಲಿ ಎಂದು ಸಾಕ್ಷಿಗಳನ್ನು ಮುಂದಿಟ್ಟರೂ ಒಪ್ಪಲು ಕೆಲ ಮೂರ್ಖರು ತಯಾರಿರುವುದಿಲ್ಲ. ಅಮೇರಿಕ ಎಂದರೆ ಸಾಚಾತನದ ಪಳೆಯುಳಿಕೆ ಎಂಬಂತೆ ವರ್ತಿಸುವ ವಿತಂಡರಿಗೆ ಏನು ಹೇಳಲಾದೀತು?

ಬುಧವಾರ, ನವೆಂಬರ್ 11, 2009

ಭೂರಮೆಯು ಬಸಿರಾಗಿ

ಭೂರಮೆಯನು ಆ ಬಾನು
ಸರಸಾಟಕೆ ತಾ ಕರೆವ.
ಭೋರ್ಗರಿಸಿ ಆರ್ಭಟಿಸಿ
ಪ್ರೀತಿಯ ಸೋನೆಯಗರೆವ.

ಭೂದೇವಿ ನಾಚಿ ಕೆಂಪಾಗಿ
ನದಿತೊರೆಗಳಲಿ ಮೇಲುಕ್ಕಿ
ಮಳೆರಾಯನ ರೇತದಲಿ
ಇಳೆಯೊಡಲು ಬಸಿರಾಗಿ

ಎಲ್ಲೆಲ್ಲೂ ಹಸಿರುಕ್ಕಿ
ಭೂಮಕ್ಕಳ ಪಾಲಿಸಿ ಫಲಿಸಿ
ಜೀವಕೆ ಕಳೆ ಮುತ್ತಿಕ್ಕಿ
ಜಗದೊಳಗೆ ಸಂಚಯವಾಗಿ

ಬುಧವಾರ, ಆಗಸ್ಟ್ 26, 2009

'ಮೊಕ್ಷಕೆರಡಕ್ಷರ' ಯಾವುದು ಗೊತ್ತಾ ?

ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ

ಮಿಕ್ಕ ಓದುಗಳು ತಿರುಪೆಗೆ

ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ;

ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ.
ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು ಹೇಳಿ ನೋಡೋಣ ?" ಅಂದ.
" ಇನ್ಯಾವುದು ' ಮೊ .ಕ್ಷ ' ಎರಡಕ್ಷರ ಆಯ್ತಲ್ಲಾ ?" ಅಂದೆ.

"ಅಲ್ಲ " ಅಂದ.
"ಯೋಗ ?"
"ಅಲ್ಲ "
" ಧ್ಯಾನ ?"
"ಅಲ್ಲ "
" ಸತ್ಯ?"
"ಅಲ್ಲ "
" ಜ್ಞಾನ ?"
"ಅಲ್ಲ "
" ಕರ್ಮ ?"
"ಅಲ್ಲ "
" ಭಕ್ತಿ ?"
"ಅಲ್ಲ "
" ತಪ ?"
"ಅಲ್ಲ "
" ವೇದ ?"
"ಅಲ್ಲ "
" ಶಿವ ?"
"ಅಲ್ಲ "
" ಕೃಷ್ಣ ?"
"ಅಲ್ಲ "
" ರಾಮ ?"
"ಅಲ್ಲ "
" ಗುರು ?"
"ಅಲ್ಲ "
" ಮಣ್ಣು ?"
"ಅಲ್ಲ "
" ದಾನ ?"
"ಅಲ್ಲ "
" ದಯೆ ?"
"ಅಲ್ಲ "
" ಮನ ?"
"ಅಲ್ಲ "
" ಪೂಜೆ ?"
"ಅಲ್ಲ "
" ಜಪ ?"
"ಅಲ್ಲ "
"ಗೊತ್ತಾಗಲಿಲ್ಲ ಹೇಳಪ್ಪ !"
"ಹಳೆ ಕಾಲದಲ್ಲಿ ಇದ್ದೀರಲ್ಲ ಹರ್ಷಣ್ಣ ! ಕಾಲದ ಜೊತೆ ಅಪಡೆಟ್ ಆಗ್ತಿರಬೇಕು !ಎರಡಕ್ಷರ ಯಾವ್ದು ಗೊತ್ತಾ? "
" ವಿಸ್ಕಿ, ರಮ್, ವೋಡ್ಕಾ, ಸ್ಕಾಚ್, ಬ್ರಾಂಡಿ, ವೈನ್, ನೀರಾ, ಬೀಡಿ, ಗಾಂಜಾ..ಹ್ಹೆ...ಹ್ಹೆ...ಹ್ಹೆ.... ಎಲ್ಲಾ ಎರಡಕ್ಷರ ! "
"ಇದ್ರಿಂದ ಮೋಕ್ಷ ಸಿಗೋದು ನಮಗಲ್ಲಪ್ಪಾ ಬಾಟಲಿಗಳಿಗೆ! ಬಾಟಲಿಯೋಳಗಿನ 'ಮತ್ತು' ಖಾಲಿಯಾಗುತ್ತದೆ . ನಿನಗೆ ಮೋಕ್ಷ ಸಿಗಬೇಕು ಅಂದ್ರೆ ನಿನ್ನೊಳಗಿನ 'ಮತ್ತು' ಖಾಲಿಯಾಗಬೇಕು!"

ಸೋಮವಾರ, ಆಗಸ್ಟ್ 10, 2009

ಅದನ್ನೂ ದೇವರು ಎಂದು ಕರೆದುಬಿಟ್ಟರೆ ????

ರೇಲ್ವೇ ಸ್ಟೇಷನ್ನಿನಲ್ಲಿ ಹಿರಿಯ ವಿಜ್ಞಾನ ಲೇಖಕ ಎಮ್.ಆರ್. ನಾಗರಾಜ್ ಸಿಕ್ಕಿದ್ದರು. ಹೋಗಿ "ನಮಸ್ತೆ ಸರ್" ಎಂದು ಮಾತನಾಡಿಸಿದೆ.
ಅವರಿಗೆ ತಕ್ಷಣ ಗುರುತಾದಂತೆ ಕಾಣಲಿಲ್ಲ. "ಎಲ್ಲಿ ಸಿಕ್ಕಿದ್ದೆವು ಅಂತ ನೆನಪಾಗಲಿಲ್ಲ" ಎಂದರು.
"ಎರಡು ವರ್ಷದ ಹಿಂದೆ ಕೂಡಲಸಂಗಮದಲ್ಲಿ ವಿಜ್ಞಾನ ಲೇಖಕರ ಶಿಬಿರದಲ್ಲಿ ಸರ್.. ಪದೇ ಪದೇ ದೇವರನ್ನು ಎಳೆತಂದು ಚರ್ಚೆಯ ದಾರಿ ತಪ್ಪಿಸುತ್ತಿದ್ದೆನಲ್ಲ..ನಾನೇ" ಎಂದೆ.
"ಓಹ್ ..ದಾವಣಗೆರೆಯವರಲ್ಲವೇ ನೀವು? ಸಂತೋಷ!" ಕುಶಲೋಪರಿ ಮುಂದೆ ಸಾಗಿತು. ನೆನಪು ಎರಡು ವರ್ಷಗಳ ಹಿಂದಕ್ಕೋಡಿತು.

ಈ ಸಮಾವೇಶದಲ್ಲಿ ನಾಸ್ತಿಕವಾದಕ್ಕೆ ವಿಶೇಷ ಮಹತ್ವವಿತ್ತು. ದೇವರನ್ನು ಹಿಗ್ಗಾಮುಗ್ಗಾ ಬೈಯುವುದು "ಹಿಡನ್ ಅಜೆಂಡಾ" ಗಳಲ್ಲೊಂದು ಎನ್ನಬಹುದು. ನನಗೆ ನಿರೀಶ್ವರವಾದಿಗಳನ್ನು, ಕಮ್ಯುನಿಷ್ಟರನ್ನು ಮಾತನಾಡಿಸಿ ಅಣಕಿಸುವುದರಲ್ಲಿ ಭಲೇ ಮಜಾ ಬರುತ್ತದೆ. ಇದಕ್ಕಾಗಿಯೇ ಮೈಸೂರು, ಬೆಂಗಳೂರುಗಳಲ್ಲಿ ಎಸ್.ಯು.ಸಿ.ಐ ಕಚೇರಿಗಳಿಗೆ ಹೋಗಿದ್ದೇನೆ. ಬಸ್ ಸ್ಟಾಂಡ್ ಗಳಲ್ಲಿ ಡಬ್ಬಿ ಹಿಡಿದು ಹಣ ಕೇಳಲು ನಿಲ್ಲುವ ಹುಡುಗರನ್ನು ಮಾತನಾಡಿಸಿದ್ದೆನೆ. ಯಾವುದಾದರೂ ಮೇಳದಲ್ಲಿ ಇವರ ಮಳಿಗೆಯನ್ನು ಕಂಡರೆ ಅತ್ಯಂತ ಸಂಭ್ರಮದಿಂದ ಕಿಚಾಯಿಸಲು ಹೋಗುತ್ತೇನೆ. ಅವರ ಬಗೆಗಿನ ಜೋಕುಗಳನ್ನು ಹೇಳಿ ಅವರು ಸಿಟ್ಟಾಗಿ ಮುಖ ಕೆಂಪು ಮಾಡಿಕೊಳ್ಳುವುದನ್ನು ನೋಡುವುದೆಂದರೆ ನನಗೆ ಬಹಳ ಖುಷಿ.

ಈ ಶಿಬಿರದಲ್ಲಿದ್ದ ಅತ್ಯಂತ ಕಿರಿಯ ವಯಸ್ಸಿನ ಮತ್ತು ಅತ್ಯಂತ ಉದ್ಧಟ ಸದಸ್ಯ ನಾನು. ಬೇಕೆಂದೇ ಗೋಷ್ಟಿಗಳಿಗೆ ಹೋಗುವಾಗ ಹಣೆಗೆ ಢಾಳಾಗಿ ವಿಭೂತಿ ಬಳಿದುಕೊಂಡು ಹೋಗುತ್ತಿದ್ದೆ. ಸಮ್ಮೇಳನದ ಕಡೆಯ ದಿನ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಅತಿಥಿಗಳಾಗಿ ಆಗಮಿಸಿದ್ದರು. ಇವರು ನಿಜಕ್ಕೂ ಮೇಧಾವಿಗಳು. ಭೌತಶಾಸ್ತ್ರದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ಅನುವಾದಿಸಿದ್ದಾರೆ. ವೇದಿಕೆಯ ಮೇಲೆ ಮಾತನಾಡುತ್ತಾ "ವಿಜ್ಞಾನ ಎಂದರೆ ಜನರಿಗೆ ಸತ್ಯವನ್ನು ತೋರಿಸುವುದು. ವಿಜ್ಞಾನವೇ ಸತ್ಯ." ಎಂದರು.
ಪ್ರಶ್ನೋತ್ತರ ಕಾರ್ಯಕ್ರಮ ಮೊದಲಾಯಿತು. ಅನೇಕರು ಪ್ರಶ್ನೆಗಳನ್ನು ಕೇಳಿ ತಮ್ಮ ಜ್ಞಾನದಾಹವನ್ನು ತೃಪ್ತಿ ಪಡಿಸಿಕೊಂಡರು. ಕಡೆಗೆ ತಲೆಹರಟೆ ಮಾಡಲು ನಾನು ಎದ್ದೆ. ಚಿಕ್ಕ ಸಂಭಾಷಣೆ ನಡೆಯಿತು.
"ವಿಜ್ಞಾನವೇ ಸತ್ಯ ಎಂದಿರಲ್ಲ. ಹಾಗೆಂದರೇನು?"
"ವಿಜ್ಞಾನ ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸುತ್ತದೆ. ತಮ್ಮ ಸಂಶೊಧನೆಗಳಿಂದ ವಿಜ್ಞಾನಿಗಳು ಸತ್ಯವನ್ನು ಜನರಿಗೆ ತಿಳಿಸುತ್ತಾರೆ"
"ಭೊರ್ ಹೇಳಿದ್ದನ್ನೆ ರುದರ್ಫರ್ಡ್ ಅಲ್ಲಗಳೆದರು, ನ್ಯೂಟನ್ ಹೇಳ್ದಿದ್ದನ್ನ ಐಸೆನ್‍ಬರ್ಗ್ ಅಲ್ಲಗಳೆದರು. ಹಾಗಾದರೆ ಸತ್ಯ ಕಾಲಕಾಲಕ್ಕೆ ಬದಲಾಗುತ್ತಾ? ಕಾಲಕಾಲಕ್ಕೆ ಬದಲಾದರೆ ಅದನ್ನು ಸತ್ಯ ಎನ್ನಬಹುದಾ?"
"ಅದು ಹಾಗಲ್ಲ. ಆಯಾ ಸಮಯಕ್ಕೆ ಅದು ಸರಿಯಾದರೆ ಅದು ಸತ್ಯ. ವಿಜ್ಞಾನ ಸತ್ಯದ ಸಮೀಪಕ್ಕೆ ನಮ್ಮನ್ನು ಕರೆದೊಯ್ಯುತ್ತದೆ."
"ಹೇಗೆ? ಬೈನರಿ ಸರ್ಚ್ ಮಾಡಿದ ಹಾಗೆ ಸುಳ್ಳನ್ನು ನಿರಾಕರಿಸುತ್ತಾ ಹೋಗುವುದಾ? ಅಥವಾ ಹೊಸದನ್ನು ಹುಡುಕಿಕೊಂಡು ಹೋಗುವುದಾ?"
"ಎರಡೂ ಆಗಬಹುದು. ಉದಾಹರಣೆಗೆ ಈಗ ವಿಜ್ಞಾನಿಗಳು ಹೊಸ ಸಂಶೋಧನೆ ಕೈಗೊಂಡಿದ್ದಾರೆ. ಜಗತ್ತಿನ ಎಲ್ಲಾ ಶಕ್ತಿಗಳಿಗೂ ಒಂದೇ ಶಕ್ತಿಯೇ ಮೂಲವಾಗಿದೆ. ಅದೇ ಶಕ್ತಿಯೇ ಅಣುಶಕ್ತಿಯಲ್ಲಿರುವುದು. ಅದೇ ಶಕ್ತಿಯೇ ಬೆಳೆಯುವ ಹುಲ್ಲಿನಲ್ಲಿರುವುದು. ಬಹುತೇಕ ಯಶಸ್ವಿಯಾಗುವ ಹಂತಕ್ಕೆ ಬಂದಿದೆ ಅದು."
"ಅಕಸ್ಮಾತ್ ಬಿಲಿಯಾಂತರ ಹಣ ಖರ್ಚು ಮಾಡಿ ಕಂಡುಕೊಂಡ ಆ ಶಕ್ತಿಗೆ ವಿಜ್ಞಾನಿಗಳು ’ದೇವರು’ ಅಂತ ಹೆಸರಿಟ್ಟರೆ ಏನು ಮಾಡೋದು?" ಎಂದುಬಿಟ್ಟೆ.
ಮಾಜಿ ಉಪಕುಲಪತಿಗಳು ಇರಿಸುಮುರುಸುಗೊಂಡರು. ಅವರ ಮೊಗದ ಮೇಲೆ ಅಸಹನೆ ಸ್ಪಷ್ಟವಾಗಿ ಕಂಡಿತು.
ಪಕ್ಕದಲ್ಲೇ ಕುಳಿತಿದ್ದ ಸಭಾಧ್ಯಕ್ಷರು "ಒಳ್ಳೆಯ ಚರ್ಚೆ ನಡೆಯುತ್ತಿತ್ತು ನೀವು ಚರ್ಚೆಯ ಹಾದಿ ತಪ್ಪಿಸಿದಿರಿ" ಎಂದು ಸಿಡಿಮಿಡಿಗೊಂಡರು.
ನಾನು ವಿಜಯೋತ್ಸಾಹದಲ್ಲಿ ಕುರ್ಚಿಯ ಮೇಲೆ ಕುಳಿತೆ.
ನಂತರ ಅನೇಕರು ಬಂದು " ಅವರು ನಿಮಗೆ ಉತ್ತರ ಕೊಡಲಿಲ್ಲ ಅಲ್ಲವೇ? ಆ ಪ್ರಶ್ನೆಗೆ ಉತ್ತರ ಇದೆಯೇ ?" ಎಂದು ಕೇಳಿದರು. ನಿಜ ಹೇಳಬೇಕೆಂದರೆ ನನ್ನಲ್ಲೂ ಉತ್ತರ ಇರಲಿಲ್ಲ. ಆ ಕ್ಷಣದಲ್ಲಿ ನಾನು ಮೇಧಾವಿಗಳನ್ನು ತಬ್ಬಿಬ್ಬು ಮಾಡಿದೆ ಎಂಬ ಹೆಮ್ಮೆ ಇತ್ತಾದರೂ ನಂತರ ಅಂತಹ ಹಿರಿಯರ ಎದುರಿಗೆ ಅಷ್ಟು ಉದ್ಧಟತನದಿಂದ ವರ್ತಿಸಬಾರದಿತ್ತು ಎನಿಸಿತು.
ವಿಜ್ಞಾನಕ್ಕೆ ದೇವರು ನಿಲುಕುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ನಾಸ್ತಿಕನಾಗಿದ್ದ ನನ್ನನ್ನು ದೇವರೆಡೆಗೆ ಹೊರಳಿಸಿದ್ದೇ ವಿಜ್ಞಾನ ಎಂಬುದಂತೂ ಸತ್ಯ. (ಇದರೆ ಬಗ್ಗೆ ಮತ್ತೆಂದಾದರೂ ಬರೆಯುತ್ತೇನೆ.)

ಶುಕ್ರವಾರ, ಜುಲೈ 24, 2009

ಮಿನಿ ಮಿನಿ ಕಥೆಗಳು....!!!!

ಎಲ್ಲಿದೆ ಸೌಂದರ್ಯ?

ಛೆ! ಎಂಥ ಕುರೂಪಿ ಹುಡುಗಿ ಇವಳು! ಹಲ್ಲುಬ್ಬು. ಅಲ್ಲಿನ ಮೇಲೆಲ್ಲ ಹಳದಿ ಕಲೆಗಳು. ಎಣ್ಣೆಗೆಂಪು ಬಣ್ಣ. ಮೋಟುಜಡೆ. ಹಲ್ಲಿನ ನಡುವೆ ಬಸ್ಸು ಹೋಗುವಷ್ಟು ಅಗಲ ಕಿಂಡಿಗಳು. ಯಾವ ಮೂಡಿನಲ್ಲಿದ್ದನೋ ಪರಮಾತ್ಮ ಇವಳನ್ನು ನಿರ್ಮಿಸುವಾಗ!
ಮದುವೆ ಮನೆ. ಅಸ್ತಮಾ ಪೀಡಿತ ನಾಯಿಯಂತೆ ಸದ್ದು ಹೊರಡಿಸುತ್ತಾ ಒಬ್ಬ ಜೋರಾಗಿ ತೇಕತೊಡಗಿದ. ಬಾಯಿಯಿಂದ ನೊರೆ ಉಕ್ಕತೊಡಗಿತು. ಅವನ ತಲೆ ಜೋರಾಗಿ ಮಧ್ಯಕ್ಕೂ ಬಲಕ್ಕೂ ತೊಯ್ದಾಡತೊಡಗಿತು. ನಮ್ಮ ಕುರೂಪಿ ಹುಡುಗಿ ಓಡಿ ಬಂದಳು. ಅವನು ಆಕೆಯ ಗಂಡ! ಯಾರೋ ಕೀಗೊಂಚಲು ಕೊಟ್ಟರು. ಕೀಗೊಂಚಲನ್ನು ಅವನ ಕೈಯಲ್ಲಿಟ್ಟು ಇನೊಂದು ಕೈಯಾಲ್ಲಿ ತೋಳನ್ನು ಬಿಗಿಯಾಗಿ ಹಿಡಿದು ಸಂತೈಸತೊಡಗಿದಳು. ಚಪ್ಪಲಿ ಬಿಚ್ಚಿ ತೆಗೆದು ಅಂಗಾಲನ್ನು ತಿಕ್ಕತೊಡಗಿದಳು. ಅವನು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಪ್ರಜ್ಞೆ ಮರುಕಳಿಸಿದಂತೆ ಹುಚ್ಚು ಹಿಡಿದವನಂತೆ ಆಡತೊಡಗಿದ. ಚಪ್ಪಲಿ ತೆಗೆದಿದ್ದಕ್ಕೆ ಅವಳ ಮೇಲೆ ರೇಗಿದ. ಅವನು ದೂಕಿದ ಜೋರಿಗೆ ಆಕೆ ಎರಡು ಮಾರಾಚೆ ಹೋಗಿ ಬಿದ್ದಳು. ನಿಧಾನವಾಗಿ ಹಸನ್ಮುಖಿಯಾಗಿ ಎದ್ದು ಬಂದಳು. ಚಪ್ಪಲಿ ತೊಡಿಸಲು ಮುಂದಾದಳು. ಅವಳ ಕಪಾಳಕ್ಕೆ ಹೊಡೆದು ಝಾಡಿಸಿ ಸೊಂಟಕ್ಕೆ ಒದ್ದ. ಈ ಬಾರಿ ನಾಕು ಮಾರು ದೂರಕ್ಕೆ ಬಿದ್ದಳು. ಅವಳ ದೇಹ ಬಡಿದ ರಭಸಕ್ಕೆ ಕುರ್ಚಿಗಳು ಚೆದುರಿ ಹೋದವು. ಅವಳ ಮುಖದ ಮುಗುಳ್ನಗು ಮಾಯವಾಗಲಿಲ್ಲ. ಚಿಮ್ಮಿದ ಕಣ್ಣೀರನ್ನು ಅಲ್ಲೇ ಅದುಮಿ ತೊರುಬೆರಳಿಂದ ಒರೆಸಿಕೊಂಡು ಗಂಡನ ತೋಳು ಹಿಡಿದಳು. ನಗುಮುಖದಿಂದ ಸುತ್ತಲಿದ್ದವರಿಗೆ ಕ್ಷಮೆ ಕೇಳಿ ಕೋಣೆಯೆಡೆಗೆ ಗಂಡನನ್ನು ಕರೆದೊಯ್ದಳು.

ಇದ್ದಕ್ಕಿದ್ದಂತೆ ಆ ಹುಡುಗಿಯ ಮುಖದ ಮೇಲೆ ಸೌಂದರ್ಯ ನಳನಳಿಸತೊಡಗಿತು!

**************************************************************************************************************************************

ದೊಡ್ಡವರ ವಿಷಯ!

ಈ ಊರಿಗೆ ಹೊಸದಾಗಿ ಜಿಲ್ಲಾ ಮಟ್ಟದ ಗೆಝೆಟೆಡ್ ಅಧಿಕಾರಿ ವರ್ಗವಾಗಿ ಬಂದರು. ಅವರ ಗತ್ತು, ಗಾಂಭೀರ್ಯ ಹೆಸರುವಾಸಿಯಾಗಿದ್ದವು. ಈ ಹೊಸ ಆಫ಼ೀಸಿನ ಜವಾನನಿಗೆ ಇಪ್ಪತ್ತೇಳೋ ಇಪ್ಪತೆಂಟೋ ವರ್ಷದ ಅನುಭವ. ಇಲಾಖೆಯ ರಾಜಕೀಯ, ಕಾರ್ಯವೈಖರಿ, ದಕ್ಷತೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿತವ. ನುರಿತವ! ಅಗಾಗ ಅಧಿಕಾರಿಗಳಿಗೆ ಕೆಲ ಸೂಕ್ಷ್ಮಗಳನ್ನು ತಿಳಿಸಲು ಯತ್ನಿಸುತ್ತಿದ್ದ. ಅವರಿಗೆ ರೇಗುತ್ತಿತ್ತು. "ನಿನ್ನ ಕೆಲಸ ನೀನು ನೋಡು" ಎಂದು ಗದರುತ್ತಿದ್ದರು. "ದೊಡ್ಡವರ ವಿಷಯ ನಿಂಗ್ಯಾಕೆ?" ಎಂದು ಅಬ್ಬರಿಸುತ್ತಿದ್ದರು. ಅನುಭವಿ ಜವಾನ ದೊಡ್ಡವರ ವಿಷಯದಲ್ಲಿ ತಲೆ ಹಾಕದಿರುವುದನ್ನು ಬಹಳ ಬೇಗ ಕಲಿತುಕೊಂಡ.
ಅಧಿಕಾರಿಗಳ ಮಗಳ ಮದುವೆ ಆ ಊರಿನ ಪ್ರಸಿದ್ಧ ಪತ್ರಿಕೆಯ ಸಂಪಾದಕರೊಂದಿಗೆ ನಿಶ್ಚಯವಾಯಿತು. ಸಂತಸ ಸಂಭ್ರಮಗಳಿಂದ ಸಿದ್ಧತೆಗಳು ಜರುಗತೊಡಗಿದವು. ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂತು. ಹುಡುಗ ಮೊದಲೇ ಪ್ರ್‍ಏಮಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಒಂದು ಮಗುವೂ ಇತ್ತು. ತಮಗೆ ಇಷ್ಟ ಇಲ್ಲದ ಸೊಸೆಗೆ ಬಲವಂತವಾಗಿ ಮಗನಿಂದ ಡೈವರ್ಸ್ ಕೊಡಿಸಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಹೊರಟಿದ್ದರು. ಹುಡುಗನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಮದುವೆ ಮುರಿಯಿತು.
ಖಿನ್ನರಾಗಿ ಅಫ಼ೀಸಿನ ಖುರ್ಚಿಯ ಮೇಲೆ ಕುಳಿತ ಅಧಿಕಾರಿ ಗೊಣಗಿದರು. "ಆ ಹುಡುಗನಿಗೆ ಮೊದಲೇ ಮದುವೆ ಆಗಿತ್ತಂತೆ! ಮೋಸ ಮಾಡಿಬಿಟ್ಟರು. ನಿಂಗೆ ಅವರ ಬಗ್ಗೆ ಗೊತ್ತಾ?" ಅಂತ ಜವಾನನನ್ನು ಕೇಳಿದರು.
"ಹೌದು ಸರ್! ಆ ಹುಡುಗಿ ನಮ್ಮೂರಿನವಳು. ಪಾಪಿಗಳು ದೂರ ಮಾಡಿಬಿಟ್ಟರು. ಅದೇ ಕೊರಗನ್ನು ಹಚ್ಚಿಕೊಂಡು ಅವನು ದಿನಾ ಕುಡೀತಾನೆ."
"ಹೌದಾ? ಎಲ್ಲಾ ವಿಷಯ ಗೊತ್ತಿದ್ದೂ ಮೊದಲೇ ಯಾಕೆ ಹೇಳಲಿಲ್ಲ?"
"ದೊಡ್ಡವರ ವಿಷಯ ನನಗ್ಯಾಕೆ ಅಂತ ಸುಮ್ಮನಿದ್ದೆ ಸರ್!" ಅಂದ ಜವಾನ ವಿನಯದಿಂದ!

*************************************************************************************************************************************

ನಾನೂ ಹೊಸಬ

"ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಕಟ್ಟಡದ ಹಣೆಯ ಮೇಲೆ ದೊಡ್ಡದಾಗಿ ಬರೆದಿದ್ದ ಹೆಸರನ್ನು ಓದುತ್ತಿದ್ದೆ. ಪಕ್ಕದಲ್ಲಿ ಬಂದು ನಿಂತ ಧುಡೂತಿ ಹೆಂಗಸು "ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಜೋರಾಗಿ ಓದಿದಳು. ಕಟ್ಟಡದ ಕಡೆ ಬೊಟ್ಟು ಮಾಡಿ ತೋರಿಸುತ್ತಾ ನನ್ನನ್ನುದ್ದೇಶಿಸಿ "ಹಲೋ,.. ಇದು ಕಲ್ಯಾಣ ಮಂಟಪಾನಾ?" ಅಂತ ಕೇಳಿದಳು.
"ಗೊತ್ತಿಲ್ಲ. ನಾನೂ ಈ ಊರಿಗೆ ಹೊಸಬ" ಎಂದು ಹೇಳಿ ಬೆನ್ನು ತಿರುಗಿಸಿ ನಡೆದೆ.

********************************************************************************************************************************

ಹೆತ್ತವರ್‍ಯಾರು?

ಅರ್ಜಿಯಲ್ಲಿ "ಹೆತ್ತವರ ಸಹಿ" ಎಂಬಲ್ಲಿ ಸಹಿ ಮಾಡಲು ಹೊರಟ ತಂದೆಯನ್ನು ತಡೆದ ಮುದ್ದಿನ ಮಗಳು
"ನನ್ನನ್ನು ಹೆತ್ತದ್ದು ಅಮ್ಮ. ನೀನೇಕೆ ಸಹಿಮಾಡುತ್ತೀಯಾ?" ಎಂದು ಕೇಳಿದಳು ಮುದ್ದಾದ ಪದಗಳಲ್ಲಿ.

**************************************************************************************************************************

ಕಾಸಿಗೆ ತಕ್ಕ ಕಜ್ಜಾಯ.

ಹುಡುಗಿಯನ್ನು ನೋಡಲು ಬಂದವರು ಸಣ್ಣಗೆ ಮೂಗು ಮುರಿದರು.
"ಹುಡುಗಿಯ ಕಣ್ಣು ಸಲ್ಪ ಮೆಳ್ಳೆ" ಎಂದಳು ತಾಯಿ.
"ಹುಡುಗಿಯ ಪಾದ ಫ಼್ಲಾಟು. ಒಳ್ಳೆದಾಗಲ್ಲ" ಎಂದರು ಪುರೋಹಿತರು.
"ದನಿ ಸಲ್ಪ ಗೊಗ್ಗರು" ಎಂದಳು ತಂಗಿ.
"ಹುಡುಗಿ ಅಣ್ಣ ರೌಡಿ ಥರ ಕಾಣ್ತಾನೆ" ಎಂದ ಹುಡುಗನ ಮಾವ.
ಒಂದೊಂದು ಲಕ್ಷಕ್ಕೊಂದರಂತೆ ಹುಡುಗಿಯ ಐಬುಗಳನ್ನು ಮುಚ್ಚಲಾಯಿತು. ಮದುವೆ ಸಾಂಗೊಪಸಾಂಗವಾಗಿ ನೆರವೇರಿತು.

******************************************************************************************************************

ದೀಪದ ಕೆಳಗೆ....

ಪಿ.ಟಿ ಮೇಷ್ಟ್ರು ಹುಡುಗರಿಗೆ ಬೈಯುತ್ತಿದ್ದರು. "ನಿಮ್ಮಲ್ಲಿ ಸಂಸ್ಕಾರ ಇಲ್ಲ ಕಣ್ರಯ್ಯ! ನಿಮ್ಮಪ್ಪ ಅಮ್ಮ ಏನು ಹೇಳಿಕೊಟ್ಟಿದ್ದಾರೆ ನಿಮಗೆ. ಮಾತು ಮಾತಿಗೆ ’ಲೇ’ ಅಂತೀರಾ. ’ಹೋಗ್ರಲೇ... ಬರ್ರಲೇ’ ಛೆ! ಕೇಳಲಿಕ್ಕೇ ಎಂಥ ಅಸಹ್ಯ!"
ಅದೇ ಸಂಜೆ ಐದೋ ಆರು ವರ್ಷದ ಹುಡುಗನೊಬ್ಬ ತನಗಿಂತ ಎತ್ತರದ ಬ್ಯಾಟನ್ನು ಹಿಡಿದು ಕ್ರಿಕೆಟ್ ಆಡುತ್ತಿದ್ದ. ಬಾಲೆಸೆಯುವ ಹುಡುಗ ನಿಧಾನವಾಗಿ ಚೆಂಡನ್ನು ಎಸೆಯುತ್ತಿದ್ದ. ಎತ್ತರದ ಬ್ಯಾಟನ್ನು ಎತ್ತಿ ಹೊಡೆಯಲಾಗದೇ ಹುಡುಗ ಸೋಲುತ್ತಿದ್ದ. ಚೆಂಡೆಸೆಯುವನನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ. "ಲೇ..ಲೇ ಹಲ್ಕಟ್... ನೆಟ್ಟಗೆ ಬಾಲ್ ಹಾಕೊಕಾಗಲ್ವೇನಲೇ ....ಸುವ್ವರ್.."
ಅಲ್ಲಿಗೆ ಪಿ.ಟಿ. ಮೇಷ್ಟ್ರು ಬಂದರು. ಕೈಲಿದ್ದ ಬ್ಯಾಟನ್ನು ಎಸೆದ ಹುಡುಗ "ಅಪ್ಪಾ" ಎಂದು ಓಡಿ ಹೋಗಿ ಮೇಷ್ಟ್ರ ಮಡಿಲನ್ನೇರಿದ. ಮಗನನ್ನೆತ್ತಿಕೊಂಡ ಮೇಷ್ಟ್ರು ಕೆನ್ನೆಗೆ ಹಣೆಗೆ ಲೊಚಲೊಚನೆ ಮುತ್ತಿಟ್ಟರು!

***********************************************************************************************************************************

ಮದುವೆ ಸ್ವರ್ಗದಲ್ಲಿ...

"ಮದುವೆ ಸ್ವರ್ಗದಲ್ಲಿ ಫ಼ಿಕ್ಸ್ ಆಗುತ್ತಂತೆ" ಎಂದಳು ಹೆಂಡತಿ.
"ಹೌದು, ಆದರೆ ನಂತರದ ಬದುಕು ನಡೆಯೋದು ಮಾತ್ರ ನರಕದಲ್ಲಿ" ಎಂದ ಗಂಡ.

********************************************************************************************************************

ಶತ್ರು ಹಿಂಜರಿದಾಗ.

ಬೆನ್ನಟ್ಟಿ ಬಂದ ಹುಲಿಯನ್ನು ಗುರುಗುಟ್ಟಿ ನೋಡಿತು ಜಿಂಕೆ.
ಹುಲಿ ಎರಡು ಹೆಜ್ಜೆ ಹಿಂದೆ ಸರಿಯಿತು. ತನಗೆ ಹೆದರಿಕೊಂಡು ಹಿಂದೆ ಸರಿದ ಹುಲಿಯ ಕಂಡು ಬೀಗಿತು ಜಿಂಕೆ ಮನದೊಳಗೆ.
ಮರುಕ್ಷಣದಲ್ಲಿಯೇ ಜಿಂಕೆಯ ಕತ್ತು ಹಿಡಿದು ಕೊಂದು ಹಾಕಿತು ಹುಲಿ.
ಮರೆಯಿಂದ ನೋಡುತ್ತಿದ್ದ ಹಿರಿಯ ಜಿಂಕೆ ಉಸುರಿತು. "ಹೆಚ್ಚಿನ ವೇಗ ಪಡೆಯಲು ಹುಲಿ ಹಿಂದೆ ಸರಿಯುತ್ತದೆ ಅಂತ ಆ ಜಂಬಗಾರನಿಗೆ ಗೊತ್ತೇ ಆಗಲಿಲ್ಲ."

ಭಾನುವಾರ, ಮೇ 17, 2009

ನಾನಾದೇನು ಹಿಮಾಲಯ..

ಅರಿವುದೆಂತು ನೇಸರನ
ಹೆಬ್ಬಾಂದಳಗಳ ಕಾರ್ದೆರೆಯ ಸರಿಸಿ.
ಪುಟಕ್ಕಿಡಲೆಂತು ಹೊನ್ನ
ಇಳೆಯ ಎದೆಯಾಳವ ಬಗೆದು

ಹೆಕ್ಕಿ ತರಲೇ ಹುರಿಗಾಳ
ಘೋಂಡ ಕಾನದ ನಡುವೆ ನುಗ್ಗಿ
ಹುಡುಕಿ ತರಲೇ ಮುತ್ತ
ಕಡಲಾಳದ ಚಿಪ್ಪನೊಡೆದು

ಲಯವಾಗಬೇಕಂತೆ ಹಿಮ
ನಾ ಹಿಮಾಲಯವಾಗಲು
ಮುಸಿದ ಮಂಜ ಸರಿಸಿ
ಹಿಮ ಕರಗಿಸಿ ಭೊರ್ಗಲ್ಲ
ನುರಿಸಿದೊಡೆ ಕಾಣುವೆನೆ ನನ್ನ ನಾನು ?

ಮಂಗಳವಾರ, ಮಾರ್ಚ್ 24, 2009

ವಾಮಾಚಾರದ ಭೀಕರ ಅನುಭವಗಳು

ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ್ಲಿ ನನ್ನ ಮನಃಸ್ಥಿತಿ ಸಾವಿರ ಹೊರಳಾಟಗಳನ್ನು ಕಂಡು ಕಡೆಗೆ ಶಾಂತವಾಗಿದ್ದನ್ನು ಶಬ್ದಗಳಲ್ಲಿ ವಿವರಿಸಲಾರೆ. ನಂಬಿಕೆಗಳು ದಿನದಿನಕ್ಕೂ ನೂರು ಹೊಸ ದಿಕ್ಕುಗಳನ್ನು ಪಡೆಯುತ್ತಿದ್ದವು. ದೈವದ ಬಗ್ಗೆ ವಿಶ್ವದಲ್ಲಿ ಶಕ್ತಿಯ ಸಂಚಯದ ಬಗ್ಗೆ ಎಷ್ಟೋ ಪ್ರಶ್ನೆಗಳೇಳುತ್ತಿದ್ದವು. ಕೊನೆಗೆ ಸತ್ಯ ಯಾವುದು ಸುಳ್ಳು ಯಾವುದು ಎಂದೂ ತಿಳಿಯದೇ ಗೊಂದಲದ ಮಧ್ಯೆ ಕೆಲವು ಸತ್ಕಾರಣಗಳಿಗಾಗಿ ನಾನು ನೋಡಿದ್ದೆಲ್ಲಾ ಸುಳ್ಳು ಎಂದು ನನಗೆ ನಾನೇ ಆದೇಶಿಸಿಕೊಂಡೆ. ಅನುಭವವನ್ನು ಹಂಚಿಕೊಳ್ಳುವ ಆಸೆ ಇದನ್ನು ಬರೆಯಲು ಪ್ರೇರೇಪಿಸಿತು.
ಮನೆಗೆ ಬಂದ ಮಂತ್ರವಾದಿ ಮನೆಯನ್ನೊಮ್ಮೆ ತನ್ನ ಬಟ್ಟಲ ಕಂಗಳಲ್ಲಿ ಕೋಣೆಯನ್ನು ಅಳತೆ ಮಾಡಿದ. "ಏನು ತೊಂದರೆ?" ಎಂದು ಕೇಳಿದ.
ವಿವರಣೆ ಶುರು ಮಾಡಿ ಒಂದು ವಾಕ್ಯವಾಗುತ್ತಿದ್ದಂತೆ "ಒಂದು ತಟ್ಟೆ ಚೊಂಬ್‍ನೆಗ ನೀರು ತರ್ರಿ" ಅಂದ.
ಅವನ ಎದುರಿಗೆ ಸ್ಟೂಲ್ ಇಟ್ಟು ತಟ್ಟೆಯಲ್ಲಿ ನೀರು ಹಾಕಿದೆ. ಕರ್ಪೂರ ಕಡ್ಡಿಪೆಟ್ಟಿಗೆ ಬೇಕು ಅಂದ. ತಂದು ಕೊಟ್ಟೆ. ಮಾಂತ್ರಿಕನ ಶಿಷ್ಯ ತಟ್ಟೆಯಲ್ಲಿ ನೀರು ಹಾಕಿ ಎರಡು ಸಾಲಿಗ್ರಾಮಗಳನ್ನಿಟ್ಟ. ಸಾಲಿಗ್ರಾಮದ ಮೇಲೆ ತಲಾ ಎರಡೆರಡು ಕರ್ಪೂರ ಹಚ್ಚಿ ನೀರಿನಲ್ಲಿ ಎರಡು ಕರ್ಪೂರಗಳನ್ನು ಹಚ್ಚಿ ತೇಲಿಬಿಟ್ಟ. ಕರ್ಪೂರಗಳು ಗರಗರನೆ ವೇಗವಾಗಿ 8 ಆಕಾರದಲ್ಲಿ ಸಾಲಿಗ್ರಾಮದ ಸುತ್ತಲೂ ಸುತ್ತತೊಡಗಿದವು. ಸುಮಾರು ಹೊತ್ತು ಸುತ್ತಿ ನೀರಿನ ನಡುವೆ ಸ್ಥಿರವಾದವು. "ಭಾಳಾ ಜೋರಾಗೆ ಐತ್ರಿ ಮಾಟ ಮನ್ಯಾಗೆ!" ಎಂದು ಹೇಳಿ ಮಾಂತ್ರಿಕ ಕೈಯಲ್ಲಿ ಕಪ್ಪನೆಯ ಆಂಜನ ಹಿಡಿದು ಎದ್ದು ನಿಂತ. ಇದೆಲ್ಲಾ ನಡೆಯುವಾಗ ಇಬ್ಬರು ಅಪ್ಪಟ ಆಸ್ತಿಕರು, ಇಬ್ಬರು ಪರಮ ನಾಸ್ತಿಕರು, ಮಾಂತ್ರಿಕ ಮತ್ತು ಅವನ ಇಬ್ಬರು ಶಿಷ್ಯರು ಹಾಗೂ ನಾನು ಇಷ್ಟು ಜನ ಇದ್ದೆವು. ಅಪ್ಪ ಅಮ್ಮ ಇಬ್ಬರನ್ನೂ ಯಾವುದೋ ನೆಪದಲ್ಲಿ ಬೆಂಗಳೂರಿಗೆ ಕಳುಹಿಸಿದ್ದೆ.

"ನಿಮ್ಮ ಮನೇಲಿ ಯಾರದೊ ಮಾಟದ ಕೈವಾಡ ಇರಬೇಕು ನೋಡಪ್ಪಾ!" ಎಂದಿದ್ದರು ಅನೇಕ ಜನ. "ನೀವು ಈಗಿನ ಹುಡುಗರು ಇದನ್ನೆಲ್ಲಾ ನಂಬೋದಿಲ್ಲ. ಆದರೆ ನಾವು ಅನುಭವಿಸಿರೊರು ಇದ್ದಿವಿ. ಮನೆಗಳೇ ಸರ್ವನಾಶ ಆಗಿಹೋಗಿಬಿಟ್ಟಿದ್ದಾವೆ. ಸಲ್ಪ ಯಾರ ಹತ್ರನಾದ್ರು ಕೇಳ್ಸಪ್ಪ." ಅಂತೆಲ್ಲ ಹೇಳಿದ್ರು. "ಮಂತ್ರ ಹಾಕೋನು ಯಾವನಾದ್ರೇನು ಅವನೇನು ದೇವರಿಗಿಂತ ದೊಡ್ಡೊನಾ ?" "ಕಾಯೊನೊಬ್ಬ ಇದ್ದಾನೆ ಬಿಡಿ ಯಾಕೆ ಅದೆಲ್ಲಾ?" ಅಂಬುದು ನನ್ನ ವಾದ. ಕೊನೆಗೆ ಮೂರು ಜನ ಜ್ಯೊತಿಷಿಗಳನ್ನು ಬೇರೆಬೇರೆಯಾಗಿ ಸಂಪರ್ಕಿಸಿದ್ದಾಯಿತು. ಮೂವರೂ ಸಹ ನಿಮ್ಮ ಮನೆಯಲ್ಲಿ ಮಾಟದ ಕಾಟವಿದೆ. ತಕ್ಷಣ ತೆಗೆಸಿರಿ. ಸುದರ್ಶನ ಹೋಮ ಮಾಡಿಸಿರಿ ಎಂದರು. ಒಬ್ಬರಂತೂ "ನಿಮ್ಮ ಮನೆಯ ನೀರಿನ ತಾಣದ ಆಗ್ನೇಯ ದಿಕ್ಕಿಗೆ ಮಾಟದ ವಸ್ತುಗಳಿವೆ. ಇಷ್ಟು ಹೊತ್ತಿಗೆ ನಿಮ್ಮ ಮನೆಯಲ್ಲಿ ಒಂದು ಸಾವು ಸಂಭವಿಸಬೇಕಿತ್ತು. ಮನೆದೇವರ ಕೃಪೆ ನಿಮ್ಮ ಮೇಲಿರುವುದರಿಂದ ಅಂಥದು ಆಗಿಲ್ಲ." ಎಂದು ಬಿಟ್ಟರು. ಸರಿ ಮಾಟ ತೆಗೆಸಲು ಮಾಂತ್ರಿಕನನ್ನು ಹುಡುಕಿ ಎರಡು ದಿನ ಪರ್ಯಂತ ಕಾದು ಮನೆಗೆ ಕರೆತಂದದ್ದಾಯಿತು.
ಕೈಯಲ್ಲಿ ಅಂಜನ ಹಿಡಿದುಕೊಂಡ ಮಾಂತ್ರಿಕ ಮನೆಯ ಹಿತ್ತಲಿನಿಂದ ಹುಡುಕಾಟ ಶುರುಮಾಡಿದ. ಮನೆಯ ಮುಂದೆ ಬರುತಿದ್ದಂತೆ ಗಿಡಗಳನ್ನು ನೆಟ್ಟಿದ್ದ ಪಾತಿಯ ಬಳಿ ಬಂದು "ಇಲ್ಲಿ ಐತಿ ನೋಡ್ರಿ!" ಅಂದ. ಮಂತ್ರಿಕನ ಶಿಷ್ಯ ತನ್ನ ಗುರು ಹೇಳಿದ ಜಾಗೆಯಲ್ಲಿ ಅಗೆಯತೊಡಗಿದ. ಒಂದಡಿ ಅಗೆಯುತ್ತಿದಂತೆ ಪ್ಯಾಂಟಿನ ಬಟ್ಟೆಯಿಂದ ಮಾಡಿದ ಒಂದು ಗೊಂಬೆ ಮತ್ತು ದಾರದಲ್ಲಿ ಸುತ್ತಿದ್ದ ಮಡಚಿದ ತಾಮ್ರದ ಹಾಳೆಯನ್ನು ಹೊರತೆಗೆದ. ಇವೆರಡೂ ವಸ್ತುಗಳ ಸುತ್ತ ಗಟ್ಟಿಯಾಗಿ ಮಣ್ಣು ಮೆತ್ತಿಕೊಂಡಿತ್ತು. ಇದನ್ನು ತೆಗೆಯುತ್ತಿದ್ದಂತೆ ಎರಡು ಹೆಜ್ಜೆ ಹಿಂದೆ ಸರಿದ ಮಂತ್ರವಾದಿ ಹಾರೆಯಿಂದ ನೆಲವನ್ನು ಎರಡು ಸಲ ಕೆರೆದ. ಅಲ್ಲಿಂದ ಮತ್ತೆರಡು ಮಣ್ಣು ಮೆತ್ತಿದ ಸೂತ್ರ ಬಂಧಿತ ತಾಮ್ರದ ತಗಡುಗಳು ಹೊರಬಂದವು.
ಮಂತ್ರವಾದಿ ಇನ್ನೊಂದೆರಡು ಹೆಜ್ಜೆ ಮುಂದೆ ಹೋಗಿ ಹುಡುಕಿಕೊಂಡು ಬಂದ. ಅಷ್ಟರಲ್ಲಿ ನಾನು ಮತ್ತು ಗೆಳೆಯರು ಗೊಂಬೆಯನ್ನು ಮತ್ತು ತಾಮ್ರದ ತಗಡುಗಳೊಂದಿಗೆ ಆಟವಾಡಾತೊಡಗೊದ್ದೆವು. "ಅದನ್ಯಾಕ ಬಿಚ್ಚಿದ್ರಿ? ಇವನ್ನ ಮುಟ್ಟಕೂ ಮೀಟರ್ ಬೇಕು!" ಅಂದ. ಹೆದರಿಕೊಂಡು ಎಲ್ಲರೂ ವಸ್ತುಗಳನ್ನು ಕೆಳಗೆ ಹಾಕಿದೆವು.

ಮಾಂತ್ರಿಕ ಒಂದೊಂದಾಗಿ ವಸ್ತುಗಳನ್ನು ಬಿಚ್ಚತೊಡಗಿದ. ಗೊಂಬೆಯ ತಲೆಯನ್ನು ಮೊದಲು ಕತ್ತರಿಸಿದ. ಅದರಿಂದ ಉಪ್ಪು ಹೊರಗೆ ಸುರಿಯಿತು. ತಾಮ್ರದ ತಗಡನ್ನು ಸುತ್ತಿದ ದಾರ ಸಾಕಷ್ಟು ಉದ್ದವಾಗಿಯೇ ಇತ್ತು. ದಾರ ತೆಗೆದು ತಾಮ್ರದ ತಗಡನ್ನು ಬಿಚ್ಚಿದರೆ ಒಳಗೆ ಹಸಿ ಹಸಿ ರಕ್ತ! ರಕ್ತದಲ್ಲಿ ತೋಯ್ದ ಮನುಷ್ಯನ ತಲೆಬುರುಡೆಯ ಚೂರು, ಒಂದು ಸೂಜಿ, ಬಳೆ ಚೂರುಗಳು! ಹಸಿ ರಕ್ತದ ಕಮಟು ವಾಸನೆ ಮುಖಕ್ಕೆ ಬಡಿದು ಎಲ್ಲರೂ ಒಂದು ಹೆಜ್ಜೆ ಹಿಂದೆ ಸರಿದೆವು. "ಇದು ಭಾರೀ ಖರ್ಚ ಮಾಡಿ ಹಾಕ್ಯಾರ್ರಿ. ಎಲ್ಲಾರ್ಗೂ ತಡ್ಕಳಕ ಆಗಲ್ರಿ ಇದು. ಭಾರಿ ಗಟ್ಟಿ ಬಿಡ್ರಿ ನೀವು" ಅಂದ ಮಾಂತ್ರಿಕ. ಎಲ್ಲರ ಮುಖದಲ್ಲೂ ಭಯ, ಆತಂಕಗಳು ಮಡುವುಗಟ್ಟಿತ್ತು. " ದೇವರು ಅದಾನ ಬಿಡ್ರಿ ನೊಡ್ಕೆಳ್ಳಕ! ಬೇರೆ ಏನ್ ಕೆಲ್ಸ ಅವ್ನಿಗೆ ..ಹ್ಹೆ..ಹ್ಹೆ." ಅಂದೆ. ನನ್ನ ಡಬ್ಬಾ ಜೋಕಿಗೆ ನಗುವ ದುಃಸ್ಸಾಹಸವನ್ನು ಯಾರೂ ಅಲ್ಲಿ ಮಾಡಲಿಲ್ಲ. ಅವರ ಮುಖಗಳಲ್ಲಿದ್ದ ಆತಂಕದ ಗೆರೆಗಳು ಕತ್ತಲಲ್ಲೂ ಸ್ಪಷ್ಟವಾಗಿ ಕಾಣುತ್ತಿದ್ದವು.
"ಇವ್ನೆಲ್ಲಾ ಸುಟ್ಟು ಹಾಕ್ಬಕು ಸೀಮೆ ಎಣ್ಣಿನರ ಡೀಜಲ್‍ನರ ತರ್ರಿ ಅಂದ, ಹಂಗ ಕಟ್ಟಿಗೀನು ತರ್ರಿ" ಅಂದ. ಕಟ್ಟಿಗೆ ತಂದು ಸಿಕ್ಕ ಮಂತ್ರದ ಸಾಮಾನುಗಳನ್ನು ಕಟ್ಟಿಗೆಯ ನಡುವೆ ಇಟ್ಟು ಬೆಂಕಿ ಹಚ್ಚಿದೆ. ಹಸಿ ಮಣ್ಣು ಮೆತ್ತಿದ್ದಕ್ಕೊ ಏನೋ ಬಟ್ಟೆಯ ಗೊಂಬೆ ದಾರ ಯಾವುದೂ ಸುಡಲೇ ಇಲ್ಲ. ಸಾಕಷ್ಟು ಡೀಸಲ್ ಸುರಿದಾಯಿತು."ಇನ್ನು ಸಲ್ಪ ಕಟ್ಟಿಗಿ ಬೇಕಾಕತಿ ತರ್ರಿ" ಅಂದ ಮಂತ್ರವಾದಿ.
ಕಟ್ಟಿಗೆ ತರಲು ಹಿತ್ತಲಿಗೆ ಹೋದೆ. ಕಟ್ಟಿಗೆ ಆಯ್ದುಕೊಳ್ಳುವಾಗ ವಿಕಾರವಾದ ಊಳಿಡುವ ಶಬ್ದವೊಂದು ಕೇಳಿತು. ನಾಯಿ ಇಷ್ಟೊಂದು ವಿಕಾರವಾಗಿ ಊಳಿಡುವುದಿಲ್ಲ. ಮನೆಯಿಂದ ಹೊರಬಂದು ಯಾರಿಗಾದರೂ ಈ ಶಬ್ದ ಕೇಳಿತೆ ಎಂದು ವಿಚಾರಿಸಿದೆ. ಎಲ್ಲರೂ ಇಲ್ಲವೆಂದರು. ಸಂಪೂರ್ಣವಾಗಿ ಸುಟ್ಟು ಹಾಕಿದ ನಂತರ ಅವಶೇಷಗಳನ್ನೆಲ್ಲ ಶಿಷ್ಯ ಖಾಲಿ ಸೈಟೊಂದರಲ್ಲಿ ಬಿಸಾಡಿ ಬಂದ. ಸುಟ್ಟು ಅರ್ಧ ಗಂಟೆಯಾದರೂ ರಕ್ತದ ಹಸಿ ಕಮಟು ವಾಸನೆ ಹವೆಯಲ್ಲಿ ಹರಡಿಕೊಂಡಿತ್ತು. ರಕ್ತ ಹೆಪ್ಪುಗಟ್ಟದೆ ಅಷ್ಟು ಹಸಿಹಸಿಯಾಗಿ ಇದ್ದದ್ದು ಹೇಗೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿತ್ತು. ಜ್ಯೋತಿಷಿಯೊಬ್ಬರು ನೀರಿನ ಟ್ಯಾಂಕಿನ ಆಗ್ನೇಯ ಭಾಗಕ್ಕೆ ಎಂದು ಹೇಳಿದ ಜಾಗೆಯಲ್ಲೆ ಮಾಟದ ವಸ್ತುಗಳು ಸಿಕ್ಕಿದ್ದು ನನಗೆ ಇನ್ನೊಂಡು ಅಚ್ಚರಿಯಾಗಿತ್ತು.

ಮತ್ತೆ ತಟ್ಟೆಯಲ್ಲಿ ನೀರು ಹಾಕಿ ಕರ್ಪೂರವನ್ನು ಸುಡುವ ಪ್ರಕ್ರಿಯೆ ನಡೆಯಿತು. ಈ ಬಾರಿ ಕರ್ಪೂರಗಳು ಹೆಚ್ಚು ಸುತ್ತಾಡದೆ ನಡುವೆ ಸ್ಥಿರವಾದವು. "ಕ್ಲಿಯರ್ ಆಗೆತಿ. ನಾಳೆ ನಮ್ಮನಿಗೆ ಬರ್ರಿ ದಿಗ್ಭಂದನ ಹಾಕಿ ಕೊಡ್ತೆನಿ." ಅಂದ. ಮೊದಲಿನಿಂದಲೂ ಮಾಂತ್ರಿಕ ಏನಾದರೂ ಕಣ್ಕಟ್ಟು ಮಾಡುತ್ತಾನೇನೊ ಎಂದು ನಾವೆಲ್ಲ ಜಾಗರೂಕರಾಗಿ ಗಮನಿಸುತ್ತಿದ್ದೆವು. ಎರಡು ಬಾರಿಯೂ ನೀರು ಕರ್ಪೂರ ತಟ್ಟೆ ಎಲ್ಲ ತಂದು ಕೊಟ್ಟವನು ನಾನೇ! ಎಲ್ಲವೂ ಎಷ್ಟು ಭಯಾನಕವಾಗಿತ್ತೆಂದರೆ ಮಾಂತ್ರಿಕ ಮತ್ತು ಅವನ ಶಿಷ್ಯರನ್ನು ಬಿಟ್ಟು ಉಳಿದವರೆಲ್ಲರ ಮುಖ ಕಳೆಗುಂದಿ ಹೋಗಿತ್ತು. ದೇವರಿಗೇ ಎಂದೂ ಕೈಮುಗಿಯದ ಅಪ್ಪಟ ಆಸ್ತಿಕ ಗೆಳೆಯ ಮಾಂತ್ರಿಕನ ಕಾಲಿಗೆ ಉದ್ಧಂಡ ನಮಸ್ಕಾರ ಹಾಕಿಬಿಟ್ಟ!


ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಅವನ ಮನೆಯಲ್ಲಿ ಹಾಜರಿದ್ದೆವು. ಮಾಂತ್ರಿಕನನ್ನು ಕಾಯುತ್ತಾ ಹಲವರು ಕುಳಿತಿದ್ದರು. ಒಂದು ಮಗು ಅತ್ಯಂತ ಕಳಾಹೀನವಾಗಿ ಕುಳಿತಿತ್ತು. ಮಗುವಿಗೆ ಜಾಂಡೀಸ್ ಆಗಿತ್ತಂತೆ. ಆ ಮಗುವನ್ನು ತಂದೆ ತಾಯಿಗಳು ನೆಲಮಂಗಲದಿಂದ ಮಾಂತ್ರಿಕನಲ್ಲಿಗೆ ಕರೆತಂದಿದ್ದರು. ಅಲ್ಲೇ ಬೆಂಗಳೂರಲ್ಲಿ ಒಳ್ಳೆಯ ವೈದ್ಯರಿಗೆ ತೋರಿಸುವುದನ್ನು ಬಿಟ್ಟು ಇಲ್ಲಿಗೆ ಕರೆತಂದಿದ್ದಾರಲ್ಲ ಎಂದು ಮನಸ್ಸಲ್ಲೆ ಅಂದುಕೊಂಡೆ. ಮಾಂತ್ರಿಕ ತನ್ನ ಕುರ್ಚಿಯ ಮೇಲೆ ಕುಳಿತು "ಏ ವಾಟೆವ್ ಕೊಡ!" ಎಂದು ಹೆಂಡತಿಗೆ ಆದೇಶಿಸಿದ. ಹೆಂಡತಿ ಕೊಟ್ಟ ಲೋಟದಲ್ಲಿ ಒಂದು ಬಾಟಲಿನಿಂದ ಜೇನುತುಪ್ಪದಂತಿದ್ದ ಔಷಧವನ್ನು ತೆಗೆದು ಮಗುವಿಗೆ ಕುಡಿಸಿದ. ಈಗ ನಮ್ಮ ಸರದಿ. ಆರು ತಾಮ್ರದ ಹಾಳೆಯ ಮೇಲೆ ಚಕ್ರ ಕಮಂಡಲಗಳನ್ನು ಬರೆದು ಎಲ್ಲವನ್ನೂ ತಲಾ ಒಂದು ನಿಂಬೆ ಹಣ್ಣಿನ ಸುತ್ತ ಸುತ್ತಿ ದಾರವನ್ನು ಬಿಗಿದ. ನಾಲ್ಕು ಮಡಕೆಗಳನ್ನು ಕೊಟ್ಟು "ಇವನ್ನ ಕಾವಿ ಬಟ್ಟೆಗ ಸುತ್ತಿ ಮನಿ ನಾಕೂ ಮೂಲಿಗೂ ಕಟ್ರಿ, ಹಂಗ ಆರೂ ನಿಂಬೆ ಹಣ್ಣುಗೊಳನ್ನ ತಗಂಡು ಸ್ಮಶಾನದಗ ಮೂರು ಮೂಲಿಗೆ ಎರಡೆರಡ್ರಂಗ ಹುಗಿರಿ " ಅಂದ. "ಮುಂದೇನು ಮಾಡ್ಬಕ್ರಿ ? ತಿರುಗಿಸ್ಬಿಡನ ಮಂತ್ರ ಹಾಕಿದರಿಗೆ ?" ಅಂತ ಕೇಳಿದ.
"ಬ್ಯಾಡ್ರಿ. ಅವರ್ನೆಲ್ಲ ದೇವರು ನೋಡ್ಕೆಂತಾನ. ನಾ ಇದರ್ ಸುಳಿ ಒಳಗ ಸಿಕ್ಕಳಕೆ ಒಲ್ಲೆ. ಸಾತ್ವಿಕ ಏನರ ಇದ್ರ ಹೇಳ್ರಿ" ಅಂದೆ. ಮಾಂತ್ರಿಕನ ’ಫ಼ೀಸ್’ ತೆತ್ತು ಅಲ್ಲಿಂದ ಹೊರಟೆವು. ಇಷ್ಟು ಹೊತ್ತಿಗಾಗಲೇ ಜಾಂಡೀಸ್ ಪೀಡಿತ ಮಗು ಸಂಪೂರ್ಣ ಗೆಲುವಾಗಿ ತನ್ನ ಎಂದಿನ ತುಂಟತನದಿಂದ ಓಡಾಡಿ ಆಟವಾಡತೊಡಗಿತ್ತು!
ಸಂಜೆಯ ಹೊತ್ತಿಗೆ ಸ್ಮಶಾನಕ್ಕೆ ಬಂದೆವು. ಮೊದಲೆ ಇಂಥವುಗಳ ಪರಿಚಯವಿದ್ದ ಕಾವಲುಗಾರ ಸಾವಿರ ರೂಪಾಯಿ ಆಗುತ್ತದೆ ಅಂದ. ಚೌಕಾಸಿ ಮಾಡಿ ನೂರೈವತ್ತಕ್ಕೆ ಇಳಿಸಿ ಒಳಗೆ ಹೋದೆವು. ಗುದ್ದು ತೆಗೆಯುವವ ಒಂದೊಂದು ಏಟಿನಲ್ಲಿ ಮೂರು ಕಡೆ ಚಿಕ್ಕ ಗುಂಡಿಗಳನ್ನು ತೆಗೆದ. ಅವುಗಳಲ್ಲಿ ನಿಂಬೆಹಣ್ಣುಗಳನ್ನು ಹಾಕಿ ಮುಚ್ಚಿದೆ. ಮನೆಗೆ ಬಂದು ನಾಲ್ಕು ಮೂಲೆಗೆ ಮಡಕೆಗಳನ್ನು ಕಾವಿ ಬಟ್ಟೆಯಲ್ಲಿ ಸುತ್ತಿ ನೇತು ಹಾಕಿದೆ. ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರೊಂದಿಗೆ ಅಂದಿನ ದಿನ ಮುಗಿಯಿತು.

ಇದಾಗಿ ಹದಿನೈದು ದಿನಗಳಾಗಿರಬಹುದು. ಮನೆಯ ಅಂಗಳದಲ್ಲಿ ಮತ್ತು ಗಿಡಗಳ ಮಧ್ಯೆ ಅನ್ನ ಚೆಲ್ಲಿತ್ತು. ಅದು ಆಕಸ್ಮಿಕ ಚೆಲ್ಲಿದ್ದಲ್ಲ ಉದ್ದೇಶಪೂರ್ವಕವಾಗಿವೇ ಹರಡಿದ್ದು ಎಂದು ಹರಡಿದ ವ್ಯಾಪ್ತಿ ಮತ್ತು ಮೂಲೆಯ ಜಾಗೆಗಳನ್ನು ನೋಡಿದರೇ ತಿಳಿಯುತ್ತಿತ್ತು. ಅನ್ನವನ್ನೆಲ್ಲ ಶೇಖರಿಸಿದಾಗ ಒಂದು ಮುಷ್ಟಿಯಷ್ಟಾಯಿತು. ಅನ್ನದ ಮೇಲೆ ಡೀಸೆಲ್ ಹಾಕಿ ಸುಡಲು ಪ್ರಯತ್ನಿಸಿದೆ. ಡೀಸೆಲ್ ಖಾಲಿಯಾಯಿತೆ ಹೊರತು ಅನ್ನ ಸುಡುವುದಿರಲಿ ಕಪ್ಪುಗಟ್ಟಲೂ ಇಲ್ಲ! ಮಾಂತ್ರಿಕನಿಗೆ ಫೊನಾಯಿಸಿದೆ. "ಏನೂ ಆಗಲ್ಲ. ಹೆದರ್ಬ್ಯಾಡ್ರಿ. ಕಟ್ಟಿಗಿ ಒಳಗ ಹಾಕಿ ಸುಟ್ಟುಬಿಡ್ರಿ" ಅಂದ ಮಾಂತ್ರಿಕ. ಅನ್ನ ಸುಟ್ಟು ಕರಕಲಾಗಿಯೂ ಹೋಯಿತು!


ನೇರ ಅನುಭವ ಇದು. ಇದರ ಜೊತೆ ನಾನು ಸಂಗ್ರಹಿಸಿದ, ಇನ್ನು ಕೆಲವರು ಹಂಚಿಕೊಂಡ ಮಾಹಿತಿ ಇದಕ್ಕಿಂತಲೂ ಭಯಾನಕವಾಗಿದೆ. ನಾನು ಸ್ವಭಾವತಃ ಹೆದರು ಪುಕ್ಕಲ. ಕತ್ತಲು, ಮಸಣ, ಹೆಣಗಳು ಎಂದರೆ ಭಯ. ಆ ದಿನ ಸ್ಮಶಾನಕ್ಕೆ ಹೋದಾಗ ಅದೆಲ್ಲಿಂದ ಅಂತಹ ಧೈರ್ಯ ಬಂದಿತ್ತೊ! ಹಸಿ ಸಾಮಾಧಿಗಳ ಮೇಲೆ ಕಾಲಿಟ್ಟು ನಡೆದಿದ್ದೆ. ಈ ನಂತರ ಕತ್ತಲ ಬಗ್ಗೆ ಇದ್ದ ಭಯ ಸಾಕಷ್ಟು ಕಡಿಮೆಯಾಯಿತು. ಚಿಕ್ಕಂದಿನಿಂದ ಕಷ್ಟಗಳನ್ನು ನೋಡಿಕೊಂಡೇ ಬೆಳೆದಿದ್ದರಿಂದ " ಕಷ್ಟಗಳೆಂದರೆ ಇಷ್ಟೆ ತಾನೆ ?" ಎಂಬ ಉಡಾಫ಼ೆಯೊಂದು ಜೀವನದ ಬಗ್ಗೆ ಬೆಳೆದಿತ್ತು. ಈ ಉಡಾಫ಼ೆ ಇನ್ನೂ ಜಾಸ್ತಿ ಆಯಿತು! ಏನೇ ಆದರೂ ನಮಗೆ ನಾವು ಸಹಿಸಲು ಸಾಧ್ಯವಾಗುವುದಕ್ಕಿಂಟ ಹೆಚ್ಚಿನ ಕಷ್ಟ ನಮಗೆ ಬರಲಾರದು ಎಂಬುದು ಈ ನಂತರ ಖಾತ್ರಿಯಾಗಿ ಹೋಯಿತು. ಕಾಯುವ ಕೈಯೊಂದು ಸಮಯಕ್ಕೆ ಸರಿಯಾಗಿ ಕಾಯುತ್ತಿರುತ್ತದೆ ಎಂಬುದು ದಿಟ ಎನಿಸಿತು.
ಇಷ್ಟು ವರ್ಷದ ಜೀವನದಲ್ಲಿ ನಾನು ಗಳಿಸಿದ ಸಂಪತ್ತೇನು ಎಂಬುದೂ ಅರಿವಿಗೆ ಬಂದಿತು. ನನ್ನ ಗೆಳೆಯರು ಈ ನಾಲ್ಕು ದಿನ ತಮ್ಮ ಕೆಲಸಗಳಿಗೆ ರಜೆ ಹಾಕಿ, ವ್ಯವಹಾರವನ್ನು ಬಿಟ್ಟು ನನ್ನ ಜೊತೆ ನಿಂತಿದ್ದರು. "ವರ್ಷಗಟ್ಟಲೇ ನಿನ್ನ ಕಷ್ಟದ ಬಗ್ಗೆ ಯಾಕೆ ಮುಚ್ಚಿಟ್ಟಿದ್ದೆ? ನಾವೇನು ಸತ್ತು ಹೋಗಿದ್ವಾ" ಎಂದು ಪ್ರೀತಿಯಿಂದ ಗದರಿ ಮನೆ, ಮನ ಶುಚಿಗೊಳಿಸಿ ಕಾಯ್ದರು.


ನಾನು ಮಂತ್ರ ತಂತ್ರಗಳು ಸತ್ಯ ಎಂಬ ಮಾತನ್ನು ತಳ್ಳಿಹಾಕಲು ಕಾರಣವಿದೆ. ಯಾವುದೇ ಅಡ್ಡಿ ಬಂದರೂ ನಮ್ಮ ಮನಸ್ಸು ಅದನ್ನು ನಿವಾರಿಸಲು ಪ್ರಯತ್ನಿಸದೇ ಇದು ಮಾಟದ್ದೇ ತೊಂದರೆ ಇರಬೇಕು ಎಂದು ಶಂಕಿಸತೊಡಗುತ್ತದೆ. ಆಗ ನಾವು ಸುಮ್ಮನೆ ಮಾಂತ್ರಿಕರ ಹಿಂದೆ ಬಿದ್ದು ಮನಸ್ಸು ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸಿಕೊಳ್ಳುವ ಅಪಾಯವಿದೆ. ಆದ್ದರಿಂದಲೇ ಮಾಟವನ್ನು ನಂಬುವುದು ತರವಲ್ಲ ಅಂತ ನನ್ನ ಅಭಿಪ್ರಾಯ. ಇದೆಲ್ಲಾ ನಡೆಯುವುದರ ಸಾಕಷ್ಟು ಮೊದಲೇ ಸ್ವಾಮಿರಾಮ, ಯೋಗಾನಂದರ ಅನುಭವಗಳು, ಸತ್ಯಕಾಮರ ತಂತ್ರಯೋನಿ ಪಂಚಮಗಳ ನಡುವೆ, ಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಇತ್ಯಾದಿ ಅನುಭಾವಿಗಳ ಅಧ್ಯಾತ್ಮಿಕ ಪುಸ್ತಕಗಳನ್ನು ಓದಿದ್ದೆ. ಇವುಗಳೂ ನನಗೆ ಸ್ವಲ್ಪ ಮಾನಸಿಕವಾಗಿ ಗಟ್ಟಿತನವನ್ನು ಕೊಟ್ಟಿದ್ದವು ಎಂದರೆ ಸುಳ್ಳಲ್ಲ.


ಮಾಟ ಮಂತ್ರ ಪೂಜೆ ಇತ್ಯಾದಿಗಳ ಬಗ್ಗೆ ಅನೇಕರ ಬಳಿ ಸಾಕಷ್ಟು ಚರ್ಚಿಸಿ ಬೇರೆ ಬೇರೆ ಪುಸ್ತಕಗಳನ್ನು ಓದಿದ ನಂತರ ಈ ವಿಷಯವಾಗಿ ಅನೇಕ ಸಂಗತಿಗಳನ್ನು ಸಂಗ್ರಹಿಸಿದ್ದೇನೆ. ನಮ್ಮ ಅಜ್ಜಿ( ಇವರಿಗೆ ಸುಮಾರು ೮೦ ವರ್ಷ ವಯಸ್ಸು) ನಾನು ಮಾಂತ್ರಿಕನ ಮನೆಗೆ ಹೊರಟಿರುವುದನ್ನು ತಿಳಿದು "ಅವನ್ನೆಲ್ಲಾ ನಂಬಬಾರ್ದು. ಶಿವ ಶಿವಾ ಅನ್ನು. ಶಿವ ಎಲ್ಲ ಒಳ್ಳೇದು ಮಾಡ್ತಾನ" ಅಂದಿದ್ದರು. ಈ ಅನುಭವದ ಆಮೇಲಿನ ಓದು ಚರ್ಚೆಗಳ ನಂತರ ಅಜ್ಜಿಯ ಮಾತು ನಿಜ ಅನ್ನಿಸ್ತಿದೆ ನನಗೆ!

ಮಂಗಳವಾರ, ಫೆಬ್ರವರಿ 10, 2009

ಮೂರು ಮಹಾಜಾತ್ರೆಗಳು




ಮೊದಲನೆಯದು ಸಿದ್ಧಗಂಗೆಯ ಯತಿಗಳ ಶತಮಾನೋತ್ಸವ. ಉಳುವಿಯ ನಂತರ ನನಗೆ ಅತ್ಯಂತ ಇಷ್ಟವಾದ ತಾಣ ಸಿದ್ಧಗಂಗಾ ಕ್ಷೇತ್ರ. ಸಿದ್ದಗಂಗಾ ಶ್ರೀಗಳ ಮುಂಜಾನೆಯ ಪೂಜೆಯನ್ನು ನೋಡಲೂ ಪುಣ್ಯ ಬೇಕು ಎನ್ನುತಾರೆ. ಆ ಪ್ರಕಾರ ಪುಣ್ಯವಂತ ನಾನು. ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತದೆ ಇಷ್ಟಲಿಂಗ ಪೂಜೆ. ನಮಗೆ (ಸಾಮಾನ್ಯ ಜನರಿಗೆ) ಸುಮಾರು ನಾಲ್ಕು ಮುಕ್ಕಾಲಿಗೆ ಒಳಪ್ರವೇಶ. ಕೌಪೀನಧಾರಿಗಳಾದ ಸ್ವಾಮಿಗಳು ತಮ್ಮ ಕೊನೆಯ ಪೂಜೆಗೆ ಸಿದ್ಧರಾಗಿರುತ್ತಾರೆ. ಪೂಜಾ ಸಮಯಕ್ಕೆ ತೆರಳಿದವರಿಗೆ ಸ್ವಾಮಿಗಳು ಸ್ವತಃ ಕೈಯಿಂದ ವಿಭೂತಿ ಹಚ್ಚುತ್ತಾರೆ. ನಂತರ ಜೊತೆಗೆ ಲಿಂಗಪೂಜೆ. ಪೂಜೆ ಮುಗಿದ ಮೇಲೆ ತಿಂಡಿ ಬೆಳಿಗ್ಗೆ ಸುಮಾರು ಐದು ಗಂಟೆಗೆ! ನಂತರ ಸ್ವಾಮಿಗಳು ತಮ್ಮ ನಿತ್ಯಾಕಾರ್ಯಾರ್ಥ ತೆರಳುತ್ತಾರೆ. ಅಷ್ಟು ಬಾಗಿದ್ದಾಗಿಯೂ ಸ್ವಾಮಿಗಳ ಎತ್ತರ ಆರಡಿಗಿಂತಲೂ ಹೆಚ್ಚು. ಅವರ ನಡಿಗೆಯ ವೇಗಕ್ಕೆ ಹೊಂದಿಕೊಳ್ಳಲಾಗದೆ ಅವರ ಶಿಷ್ಯಂದಿರು ಓಡುತ್ತಾ ಹಿಂಬಾಲಿಸುತ್ತಾರೆ. ನನಗೆ ಅವರ ವೇಗ ಗಾಂಧೀಜಿಯನ್ನು ನೆನಪಿಸುತ್ತದೆ. ಈಗಲೂ ’ಬುದ್ಧಿ’ಯವರು ಕನ್ನಡಕ ಹಾಕುವುದಿಲ್ಲ. ಬರಹವೂ ಸ್ಪಷ್ಟ. ದಿನಕ್ಕೆ ಹೆಚ್ಚೆಂದರೆ ಎರಡು ತಾಸು ನಿದ್ದೆ. ಶಿಷ್ಯರು ಇದನ್ನು ನಾಯಿನಿದ್ದೆ ಎನ್ನುತ್ತಾರೆ!
ಕಾಲೇಜು ದಿನಗಳಲ್ಲಿ ಅಪ್ಪ ಅಮ್ಮನೊಂದಿಗೆ ಬೆಂಗಳೂರಿಗೆ ಹೊರಟೆನೆಂದರೆ ಕ್ಯಾತ್ಸಂದ್ರದಲ್ಲಿ(ಸಿದ್ಧಗಂಗೆಯಲ್ಲಿ) ಒಂದು ದಿನ ನಮ್ಮ ವಸತಿ. ಸಂಜೆ ಮಠದ ಹುಡುಗರು ಹೇಳುವ ಪ್ರಾರ್ಥನೆ ಕೇಳಿಕೊಂಡು ಬೆಟ್ಟ ಹತ್ತಿ ಗಂಗೆಯ ದರ್ಶನ ಮಾಡಿಕೊಂಡು ಚಂದ್ರಮೌಳೀಶ್ವರನಿಗೆ ಕೈಮುಗಿದು ಗೆಸ್ಟ್ ಹೌಸ್‍ನಲ್ಲಿ ತಂಗುತ್ತಿದ್ದೆವು. ಮರುದಿನ ಬೆಳಿಗ್ಗೆ ಸ್ವಾಮಿಗಳ ಜೊತೆ ಪೂಜೆ ಮುಗಿಸಿಕೊಂಡು ಮುಂದೆ ಹೊರಡುತ್ತಿದ್ದೆವು.




ಶತಮಾನೋತ್ಸವ ಸಮಾರಂಭದಲ್ಲಿ ಲಕ್ಷಾಂತರ ಜನ ಪ್ರವಾಹದಂತೆ ಹರಿದು ಬರುತ್ತಿದ್ದರು. ಎಲ್ಲೂ ಗೊಂದಲವಿಲ್ಲ. ನೂಕು ನುಗ್ಗಲಿಲ್ಲ. ಮಠದ ಹಳೆಯ ಶಿಷ್ಯಂದಿರು ಅರವಟಿಗೆಗಳನ್ನು ನಿರ್ಮಿಸಿಕೊಡು ನೀರಡಿಸಿದವರಿಗೆ ನೀರುಣಿಸುತ್ತಿದ್ದರು. ಇನ್ನು ಕೆಲವರು ಅಭಿನಂದನಾ ಗ್ರಂಥಗಳನ್ನು ಮಾರುತ್ತಿದ್ದರು. ಉಳಿದವರೆಲ್ಲ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಪ್ರತಿದಿನ ಉಂಡವರ ಸಂಖ್ಯೆ ಹತ್ತಿರ ಹತ್ತಿರ ಒಂದೂವರೆ ಲಕ್ಷ! ಎಲ್ಲರಿಗೂ ಕರೆದು ಕರೆದು ಪ್ರಸಾದ ಉಣಬಡಿಸುತ್ತಿದ್ದರು ಸ್ವಯಂಸೇವಕರು! ಲಕ್ಷಾಂತರ ಜನರಿಗೆ ಒಟ್ಟಿಗೆ ಅಡಿಗೆ ಮಾಡಿದ್ದರೂ ರುಚಿ ಕೆಟ್ಟಿರಲಿಲ್ಲ. ಎಲ್ಲವೂ ಶಿಸ್ತುಬದ್ಧ!




ತುಮಕೂರಿನಿಂದ ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ನಾಲ್ಕು ಗಂಟೆಗೆ ತಲುಪಿದೆ. ಸಾಹಿತ್ಯಪ್ರಿಯರು ಆಗಲೇ ಕಿಟ್‍ಗಾಗಿ ಹೊಡೆದಾಡಿ ಬೇಸತ್ತು ಧಿಕ್ಕಾರ ಕೂಗತೊಡಗಿದ್ದರು. ಮೈಕಿನಲ್ಲಿ ವಂಧಿಮಾಗದನೊಬ್ಬ ಅತಿಥಿಗಳನ್ನು ಇಂದ್ರಚಂದ್ರ ಎಂದೆಲ್ಲಾ ಹೊಗಳಿ ಎಲ್ಲರಿಗೂ "ಹಾದರದ" ಸ್ವಾಗತ ಎಂದು ಚೀರುತ್ತಿದ್ದ. ತಿಂಡಿಯ, ಪುಸ್ತಕದ, ವಸ್ತುಪ್ರದರ್ಶನದ ಮಳಿಗೆಗಳೆಲ್ಲಾ ಒಂದೇ ಕಡೆ ಸ್ಥಾಪಿಸಿ ಎಲ್ಲಾ ಅಧ್ವಾನವಾಗಿತ್ತು. ಜೊತೆಗೆ ಧೂಳು, ಮಣ್ಣು! ಹತ್ತು ಸಾವಿರ ಜನರಿಗೆ ಊಟದ ಕೂಪನ್ ಹಂಚಿದು ಗೊತ್ತಿದ್ದೂ ಅಷ್ಟು ಜನರಿಗೆ ಊಟ ತಯಾರಿಸಲು ಸಾಧ್ಯವಾಗಿರಲಿಲ್ಲ ಸಮ್ಮೇಳನದ ಆಯೋಜಕರಿಗೆ! ಪ್ರವಾಹದಂತೆ ಹರಿದು ಬರುವ ಲಕ್ಷ ಲಕ್ಷ ಜನರಿಗೆ ಪೂರ್ವ ಅಂದಾಜಿಲ್ಲದೆಯೂ ಸುವ್ಯವಸ್ಥಿತವಾದ ಊಟ ತಯಾರಾಗಿತ್ತು ಸಿದ್ಧಗಂಗೆಯಲ್ಲಿ. ಕೆಲಸಕ್ಕೂ ಸೇವೆಗೆ ಇದೇ ವ್ಯತ್ಯಾಸ!




ಅಧ್ವಾನಗಳು ಕ್ಷಮಾರ್ಹವೇ! ಸಹಿಸಲಾಗದ್ದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರ ಅರಳು ಮರಳು ಅಧ್ಯಕ್ಷ ಭಾಷಣ! ಅತ್ಯುತ್ತಮ ವಾಗ್ಮಿ, ಬಸವರಾಜು ಮಾತಾಡುತ್ತಿದ್ದರೆ ಸುತ್ತಲಿದವರು ಕಿವಿಯಾಗಬೇಕು ಎಂಬೆಲ್ಲಾ ಸ್ತುತಿಗಳನ್ನು ಕೇಳಿ ಹೋಗಿದ್ದೆ. ಭಾಷಣದಲ್ಲಿ ವಿನಾಕಾರಣ ಬೇಡರು ಬ್ರಾಹ್ಮಣರನ್ನು ಎಳೆತಂದು ಕೊನೆಗೆ " ಇಷ್ಟು ಹೇಳಿದ್ದೇನೆ. ಇನ್ನೇನೂ ಹೇಳುವುದಿಲ್ಲ, ಹೇಳಬೇಕಾಗಿಯೂ ಇಲ್ಲ! " ಎಂದು ಅಪದ್ಧವಾಗಿ ಭಾಷಣ ಮುಗಿಸಿದರು. ಸಮ್ಮೇಳನಾಧ್ಯಕ್ಷ ಸ್ಥಾನದ ಘನತೆ ಎಂಬುದು ಪಾತಾಳ ಚುಂಬಿಸಿತು! ಇಲ್ಲಿಯವರೆಗೆ ನಾನು ಕೇಳಿದ ಯಾವ ಸಮ್ಮೆಳನಾಧ್ಯಕ್ಷ ಭಾಷಣವೂ ಇಷ್ಟು ಕಳಪೆಯಾಗಿರಲಿಲ್ಲ.
ಸಮ್ಮೇಳನದಲ್ಲಿ ನನಗೆ ಪ್ರಮುಖ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳದ್ದು. ಅದರಲ್ಲೂ ಕೆಲ ಪ್ರಕಾಶಕರು ಮರಾಟವಾಗದ ಹಳೆಯ ಪುಸ್ತಕಗಳನ್ನು ಅರ್ಧ ಬೆಲೆಗೆ ಮಾರುತ್ತಿರುತ್ತಾರೆ. ಇಂತಹ ಕಡೆಗಳಲ್ಲಿ ಅಪರೂಪದ ಪುಸ್ತಕಗಳು ದೊರೆಯುತ್ತವೆ. ಈ ಬಾರಿಯೂ ನಿರಾಶೆಯಾಗಲಿಲ್ಲ. ನನ್ನ ಮೆಚ್ಚಿನ ಪಾವೆಂ ಹಾಗೂ ದೇವುಡು ಅವರ ಸಂಗ್ರಹಗಳು ದೊರಕಿದವು. ಇದು ಬಿಟ್ಟರೆ ದುರ್ಗದ ಸಮ್ಮೇಳನದಲ್ಲಿ ಖುಶಿ ಕೊಟ್ಟಿದ್ದು ನಡೆದಾಡುವ ಶಿಕ್ಷಕ ರುದ್ರಸ್ವಾಮಿಯವರ ಭೇಟಿ ಹಾಗೂ ಲಕ್ಷ್ಮಿ ಭವನದ ದೋಸೆ! ರುದ್ರಸ್ವಾಮಿಯವರು ತಮ್ಮ ಮಳಿಗೆಯಲ್ಲಿ ತಾವು ಮಕ್ಕಳಿಗಾಗಿ ತಯಾರಿಸಿದ ಕಲಿಕೆಯ ಆಟಿಕೆಗಳ ಬಗ್ಗೆ ಬೇಸರವಿಲ್ಲದೇ ಇಡೀ ದಿನ ಬಂದವರಿಗೆಲ್ಲಾ ವಿವರಿಸುತ್ತಿದ್ದರು. (ನನ್ನ ಡಿಜಿಟಲ್ ಕ್ಯಾಮೆರಾ ದಾವಣಗೆರೆಯಲ್ಲಿ ಮರೆತು ಬಂದು ಇವರ ಫೊಟೊ ಹಾಕಿಲ್ಲ. ಮುಂದೆಂದಾರೂ ಹಾಕುತ್ತೇನೆ.)






ದಾವಣಗೆರೆಯಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿತ್ತು. ಸಿರಿಗೆರೆ ಜಗದ್ಗುರುಗಳ ನೇತೃತ್ವದಲ್ಲಿ ಇದು ನಡೆಯುತ್ತದೆ. ಹಾಗೆ ನೋಡಿದರೆ ತರಳಬಾಳು ಹುಣ್ಣಿಮೆಯ ಬಗ್ಗೆ ನನಗೆ ಹೆಚ್ಚಿನ ಹೆಮ್ಮೆ ಇರಬೇಕು ಏಕೆಂದರೆ ನಾನು ತರಳಬಾಳು ಸಂಸ್ಥೆಯ ಶಾಲೆಯ ವಿದ್ಯಾರ್ಥಿ. ನನಗೆ ಹೆಮ್ಮೆ ಇಲ್ಲ ಏಕೆಂದರೆ ತರಳಬಾಳು ಶಾಲೆಯಲ್ಲಿ ನಾನು ವಿದ್ಯೆಯನ್ನು ಕೊಂಡುಕೊಂಡಿದ್ದೇನೆ. ಸಿದ್ಧಗಂಗೆಯ ಹುಡುಗರಂತೆ ದಾನವಾಗಿ ಪಡೆದಿಲ್ಲ. ಅಪ್ಪ ನನಗಾಗಿ ರೊಕ್ಕ ತೆತ್ತು ವಿದ್ಯೆಯನ್ನು ಖರೀದಿಸಿದ್ದಾರೆ. ಕೊಡುವ ಸವಲತ್ತಿಗೆ ತಕ್ಕಂತೆ ಹಣ ಪಡೆಯಲಿ; ನನಗೆ ಅಭ್ಯಂತರವಿಲ್ಲ. ಪಡೆದ ಹಣಕ್ಕೆ ರಸೀದಿ ಕೊಡಬೇಡವೇ? ಹತ್ತಾರು ಸಾವಿರ ರೂಪಾಯಿ ಹಣ ಪಡೆದು ಇನ್ನೂರೊ ಮುನ್ನೂರೋ ರೂಪಾಯಿಗೆ ರಸೀದಿ ಬರೆದು ಕೊಡುತ್ತಿದ್ದರು ನಮ್ಮ ಶಾಲೆಯಲ್ಲಿ. ರಸೀದಿಯ ಹಿಂದಕ್ಕೆ ಮೂಲೆಯಲ್ಲಿ ಚಿಕ್ಕದಾಗಿ ಉಳಿದ ಹಣದ ಬಗ್ಗೆ ಬರೆಯುತ್ತಿದ್ದರು! ಯಾರೋ ರಾಜಕಾರಣಿ ಈ ಥರ ಮಾಡಿದ್ದರೆ ಬೈದುಕೊಳ್ಳಬಹುದಿತ್ತು. ಸಮಾಜಕ್ಕೆ ದಾರಿ ತೋರಬೇಕಾದ ಮಠಾಧೀಶರೇ ಕಪ್ಪುಹಣ ಸಂಗ್ರಹಿಸಿದರೆ? ಒಲೆಹತ್ತಿ ಉರಿದೊಡೆ ನಿಲ್ಲಬಹುದು ಧರೆಹತ್ತಿ ಉರಿದರೆ ? ಆದರೂ ತರಳಬಾಳು ಹುಣ್ಣಿಮೆಯಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳಿರುತ್ತವೆ. ದೇಶದೆಲ್ಲೆಡೆಯಿಂದ ಬಂದ ಕಲಾವಿದರಿಂದ ಜನಪದ ನರ್ತನ ಗಾಯನಗಳಿರುತ್ತವೆ. ಅನೇಕ ವಿಶೇಷಜ್ಞರಿಂದ ಉಪನ್ಯಾಸಗಳಿರುತ್ತವೆ. ಸ್ವತಃ ಮಠಾಧೀಶರು ಅತ್ಯುತ್ತಮ ವಾಗ್ಮಿಗಳು. ಅವರ ಭಾಷಣವೂ ಕೇಳಲು ಸೊಗಸಾಗಿರುತ್ತದೆ. ಇಲ್ಲಿ ದಾಸೋಹದ ವ್ಯವಸ್ಥೆ ಇರುವುದಿಲ್ಲ.




ಮೂರೂ ಜಾತ್ರೆಗಳನ್ನು ನೋಡಿ ರಾತ್ರಿ ಮನೆಗೆ ಬಂದು ಮಲಗುವಾಗ ಶರೀಫ್ ಸಾಹೇಬರ ಈ ಸಾಲುಗಳು ಯಾಕೋ ನೆನಪಾದವು.
ತಾಬೂತಿನೊಳಗೊಂದು ತಗಡಿನ ಹಸ್ತವ ಕಂಡು
ಮೆಹಬೂಬ ಶಿಶುನಾಳ ಧೀಶಗ ನಗಿ ಬಂತು !!!

ಇನ್ನೊಂದು ಮಾತು: ಬೆಳಗೆರೆ ಶಾಸ್ತ್ರಿ ತಾತ ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ನಾನು ನೋಡಲು ಹೋಗಿಲ್ಲ. ಕಾರಣವಿದೆ. ಹಿಂದೆ ರಾಜೀವ್ ದೀಕ್ಷಿತರ ಜೊತೆ ವಿದ್ಯಾನಂದ ಶೆಣೈರನ್ನು ನೋಡಲು ನಿಮ್ಹಾನ್ಸ್‍ಗೆ ಹೋಗಿದ್ದೆ. ರಾಜೀವ್ ದೀಕ್ಷಿತರೇನೋ ಹೋಗಿ ನೋಡಿಕೊಂಡು ಬಂದರು. ನಾವು ಒಳ ಹೊರಟಾಗ ಅವರನ್ನು ಕಾಯುತ್ತಿದ್ದ ಪೋಲೀಸ್ ಪೇದೆ " ನೀವೇನೋ ಅಭಿಮಾನದಿಂದ ಅವರನ್ನು ನೋಡಲು ಬರುತ್ತೀರಿ. ಆದರೆ ಅವರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತೆ ಗೊತ್ತೆ?" ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡ. ಅವನು ಹೇಳಿದ್ದು ಸರಿಯೇ! ಹೇಗೋ ಅನುಮತಿ ಪಡೆದು ಒಬ್ಬೊಬ್ಬರಾಗಿ ನೋಡಿಕೊಂಡು ಬಂದೆವು. ಎರಡನೆಯ ದಿನವೇ ಶೆಣೈ ನಿಧನರಾದ ದುಃಖಕರ ಸುದ್ದಿ ಬಂತು. ಮೊನ್ನೆ ತಾತನನ್ನು ನೋಡಲು ಹೊರಟಾಗ ಈ ಪೋಲಿಸ್ ನೆನಪಾದ. ಅಷ್ಟರಲ್ಲಿ ತಾತ ಹುಶಾರಾಗಿ ಆಗಲೇ ನೆನಪಿನ ಬುತ್ತಿಯನ್ನು ಬಿಚ್ಚಿ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಕೇಳಿ ನಿರುಮ್ಮಳನಾದೆ.

ಶನಿವಾರ, ಜನವರಿ 31, 2009

"ಕರ್ತವ್ಯಂ ದೈವಮಾಹ್ನಿಕಂ !!!!"

ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ ಮುಖದಲ್ಲಿದ್ದ ತುಂಟನಗೆಯನ್ನು ನೋಡಿ ನನ್ನನ್ನು ಪರೀಕ್ಷಿಸುವುದರಲ್ಲಿದ್ದಾರೆ ಎಂಬುದು ನನಗೆ ಹೊಳೆಯಿತು. ಅದರಲ್ಲೊಬ್ಬರು ’ನಿನ್ನ ಮಂಜಾಳಾಗ’ ಅಂತಾರಲ್ಲ ಹಾಗೆಂದರೇನು ? ಎಂದು ಕೇಳಿದ್ದರು.
ಅದಕ್ಕೆ ವೆಂಕಟಸುಬ್ಬಯ್ಯನವರು ಇದು ಉತ್ತರ ಕರ್ನಾಟಕದ ಶಬ್ದ. ನಿನ್ನ ಮನೆ ಜೋಳವಾಗ. ಜೋಳವಾಗುವುದು ಎಂದರೆ ನಾಶವಾಗುವುದು ಎಂದೆಲ್ಲಾ ವಿವರಣೆ ಕೊಟ್ಟಿದ್ದರು.
"ಇದು ಹೀಗಲ್ಲ" ಎಂದೆ ನಾನು. ಅದು "ನಿನ್ ಮನೆ ಜಾಳವಾಗ ಆಗಬೇಕು" ಅಂದೆ.
ಜಾಳವಾಗುವುದು ಅಂದರೆ ಸ್ವಚ್ಚವಾಗುವುದು ಅಂತ ಅರ್ಥ. "ವಿಷಯ ಜಾಳ ಅಯ್ತಾ?" ಅಂದರೆ ವಿಷಯ ತಿಳಿಯಾಯಿತೆ (ಅರ್ಥವಾಯಿತೆ?) ಎಂಬರ್ಥ ಬರುತ್ತದೆ. ಮನೆ ಜಾಳವಾಗಲಿ ಅಂದರೆ ಸರ್ವವೂ ಸ್ವಚ್ಚವಾಗಿ ಹೋಗಲಿ ಅಂದರೆ ನಾಶವಾಗಿ ಹೋಗಲಿ ಎಂಬ ಅರ್ಥ ಬರುತ್ತದೆ. ಇದೇ ರೀತಿಯ ಅನೇಕ ವಿಶ್ಲೇಷಣೆಗಳನ್ನು ’ಇಗೊ ಕನ್ನಡ’ದಲ್ಲಿ ನೋಡಿದ್ದೇನೆ. ಬಹುಷ: ಕೋಶವನ್ನರಗಿಸಿಕೊಂಡರೂ ದೇಶವನ್ನು ಸುತ್ತದ ಪರಿಣಾಮ ಇದು ಎನ್ನಬಹುದೇನೋ ?

ಇತ್ತೀಚೆಗೆ ತೀರ ಕಿರಿಕಿ ಉಂಟು ಮಾಡುತಿರುವ ಶಬ್ದ " ವಿಕಲಚೇತನರು"! ಫಿಸಿಕಲಿ ಚಾಲೆಂಜ್ಡ್ ಎಂಬುದಕ್ಕೆ ಪರ್ಯಾಯವಾಗಿ ಕನ್ನಡಕ್ಕೆ ವಿಶ್ವೇಶ್ವರ ಭಟ್ಟರ ಕೊಡುಗೆ ಇದು. ವಿಕಲಾಂಗರಿಗಾಗಿ ಹೊಸ ಶಬ್ದ ಹುಡುಕಲು ತೆಗೆದುಕೊಂಡ ಶ್ರಮವನ್ನು ವಾರಗಟ್ಟಲೆ ತಮ್ಮ ಅಂಕಣದಲ್ಲಿ ವಿಶದಿಸಿದ್ದರು ಭಟ್ಟರು . ಕೊನೆಗೆ ವೆಂಕಟಸುಬ್ಬಯ್ಯನವರ ಸಹಾಯದಿಂದ ವಿಕಲಚೇತನರು ಎಂಬ ಪದವನ್ನು ಟಂಕಿಸಿದರು. ಅವರ ಪ್ರಯತ್ನವೇನೋ ಪ್ರಶಂಸಾರ್ಹವೇ! ಆದ್ರೆ ತಾರ್ಕಿಕವಾಗಿ ನೋಡುವುದಾದರೆ ಇಂಗ್ಲಿಶ್ ನಲ್ಲಿ ಹ್ಯಾಂಡಿಕ್ಯಾಪ್ಡ್ ಎಂಬುದಕ್ಕೆ ಬದಲಾಗಿ ಚಾಲೆಂಜ್ಡ್ ಎಂಬ ಪದ ಬಂತು; ಕನ್ನಡದಲ್ಲಿ ವಿಕಲ ಮಾಯವಾಗಿ ಪರ್ಯಾಯ ಪದ ಬರಬೇಕಿತ್ತು. ಆದರೆ ಅಂಗದ ಬದಲಾಗಿ ಚೇತನ ಬಂತು. ಮೊದಲು ಅಂಗ ಮಾತ್ರ ವಿಕಲವಾಗಿತ್ತು ಈಗ ಚೇತನವೇ ವಿಕಲವಾಗಿಬಿಟ್ಟಿತು !

ಇನ್ನೊಂದು ಶಬ್ದ "ವಿಪರೀತ"! ’ವಿಪರೀತ’ ಮೂಲತಃ ಸಂಸ್ಕೃತ ಶಬ್ದ. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಶಬ್ದಗಳು ಅಪಭ್ರಂಶವಾಗುವುದು ಸಹಜ. ಆದರೆ ಇಲ್ಲಿ ಅರ್ಥವೇ ಅಪಭ್ರಂಶವಾಗಿದೆ. ವಿಪರೀತ ಎಂದರೆ ವಿರುದ್ಧ ಎಂದರ್ಥ. ’ವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ’ ವಿರುದ್ಧವಾದ ಬುದ್ಧಿ ಎಂದು ಅರ್ಥ. ಅತಿಯಾದ ಬುದ್ಧಿ ಎಂದಲ್ಲ. ಪರಿಸ್ಥಿತಿ ನಮಗೆ ವಿಪರೀತವಾಗಿದೆ ಎಂದರೆ ಪರಿಸ್ಥಿತಿ ನಮ್ಮ ಅನುಕೂಲಕ್ಕೆ ವಿರುದ್ಧವಾಗಿದೆ ಎನ್ನಬಹುದು. ಪ್ರಕೃತಿ ವೈಪರೀತ್ಯ ಅಂದರೆ ಪ್ರಕೃತಿಯ ಅನನುಕೂಲವಾದ ಸ್ಥಿತಿ ಎಂದು ಅರ್ಥೈಸಬಹುದು.

ಶಬ್ದಗಳಿಗೆ ಮಾತ್ರವಲ್ಲ ಪದ್ಯಗಳಿಗೂ ಈ ರೀತಿಯ ಗತಿ ಒದಗಿದೆ. ಅದರಲ್ಲೊಂದು ಸರ್ವಜ್ಞ ನ ಈ ವಚನ:

ಬರೆಯದೆ ಓದುವವನ ಕರೆಯದೇ ಬರುವವನ
ಬರಿಗಾಲಲ್ಲಿ ನಡೆವವನ
ಕರೆತಂದು ಕೆರದಿಂದ ಹೊಡೆಯ ಸರ್ವಜ್ಞ.

ಮನೆಗೆ ಕರೆಯದೇ ಬರುವವನನ್ನೆ ಅತಿಥಿ ಎಂದು ಕರೆಯುವುದು. ತಿಥಿ ನಕ್ಷತ್ರಗಳನ್ನು ನೋಡದೇ ಬರುವವನೇ ಅತಿಥಿ. ಅತಿಥಿ ದೇವೋಭವ ಎಂದು ನಮ್ಮ ಸಂಸ್ಕೃತಿಯೇ ಹೇಳುವಾಗ ಸರ್ವಜ್ಞನಂತಹ ಅನುಭಾವಿ ಇಂತಹ ಮಾತನ್ನೇಕೆ ಹೇಳುತ್ತಾನೆ? ಅಲ್ಲದೇ ಸರ್ವಜ್ಞನ ಕಾಲದಲ್ಲಿ ಬರಹದ ಸಾಧನಗಳೂ ಕಡಿಮೆ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದವರೂ ಕಡಿಮೆ. ಬರವಣಿಗೆಯ ಸಾಧನಗಳ ಅವಶ್ಯಕತೆ ಹೆಚ್ಚಾದದ್ದೇ ನೆನಪಿನ ಶಕ್ತಿ ಕಡಿಮೆಯಾಗತೊಡಗಿದಂದಿನಿಂದ ಇಂತಹ ಪದ್ಯ ಸರ್ವಜ್ಞನ ಬತ್ತಳಿಕೆಯಿಂದ ಬಂದದ್ದೇಕೆ ? ಎಂಬುದು ತುಂಬಾ ಹಳೆಯ ಪ್ರಶ್ನೆ. ಇದಕ್ಕೆ ಉತ್ತರ ದೊರಕಿಸಿಕೊಟ್ಟವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರೊಫ಼ೆಸರ್ ಡಾ.ಚಂದ್ರಶೇಖರ ವಸ್ತ್ರದರವರು. ಮೂಲ ಹೀಗಿದೆ.

ಬರೆಯದವನ ಓದದವನ ಬರಿಗಾಲಲ್ಲಿ ನಡೆವವನ
ಕರೆಯದೇ ಬರುವವನ ನೆನೆವವನ
ಕರೆತಂದು ಕರಮುಗಿಯ ಸರ್ವಜ್ಞ.

ಇದು ಚಂದೋಬದ್ಧವಾಗಿಯೂ ಸರಿಯಾಗಿದೆ ಅರ್ಥಬದ್ಧವಾಗಿಯೂ ಸರಿಯಾಗಿದೆ. ಇಲ್ಲಿ ಕರೆಯದೇ ಬರುವವನು ಮಳೆರಾಯ. ಬರೆಯದವನು, ಓದದವನು, ಬರಿಗಾಲಲ್ಲಿ ನಡೆವವನು, ಮಳೆರಾಯನನ್ನು ನೆನೆಯುವವನು ರೈತ. ಅನ್ನದಾತನಿಗೆ ಕೈಮುಗಿ ಎನ್ನುತ್ತಿದ್ದಾನೆ ಸರ್ವಜ್ಞ. ! ಅಪಭ್ರಂಶ ಮಾಡುವವನಿಗೆ ಕೆರದಿಂದ ಹೊಡೆಯ !

ಇನ್ನೊಂದು ಇದೇ ರೀತಿಯ ಪದಗುಚ್ಚ "ಕರ್ತವ್ಯಂ ದೈವಮಾಹ್ನಿಕಂ". ಎಲ್ಲರೂ ತಿಳಿದುಕೊಂದಿರುವ ಅರ್ಥ ಕರ್ತವ್ಯವೇ ದೇವಪೂಜೆ ಎಂದು. ಅರ್ಥವತ್ತಾಗಿ ಇದು ಸರಿಯಾಗಿಯೇ ಇದೆ. ಸಂದರ್ಭವತ್ತಾಗಿ ಇನ್ನೊಂದು ಅರ್ಥ ಬರುತ್ತದೆ. ಅಂದರೆ ಅರ್ಥೈಸುವಾಗ ದೈವಮಾಹ್ನಿಕಂ ಕರ್ತವ್ಯಂ (ದೈವಪೂಜೆಯನ್ನು ಮಾಡಬೇಕು)ಎಂದು ಅರ್ಥೈಸಬೇಕು. ಉತ್ತಿಷ್ಠ ನರಶಾರ್ಧೂಲ ಕರ್ತವ್ಯಂ ದೈವಮಾಹ್ನಿಕಂ. "ಎದ್ದೇಳು ನರಹುಲಿಯೇ ಕರ್ತವ್ಯವೇ ದೇವರು" ಎಂಬುದಕ್ಕೂ "ಎದ್ದೇಳು ನರಹುಲಿಯೇ ದೈವಪೂಜೆಯನ್ನು ಮಾಡಬೇಕು" ಎಂಬುದನ್ನು ಹೋಲಿಸಿ ನೋಡಿದಾಗ ಸಂದರ್ಭಾನುಸಾರವಾಗಿ ದೈವಮಾಹ್ನಿಕಂ ಕರ್ತವ್ಯಂ ಎನ್ನುವುದು ಸರಿಯಾದ ಬಳಕೆ. ಕರ್ತವ್ಯಂ ಎನ್ನುವುದು ’ಕೃ’ ಎಂಬ ಧಾತುವಿನಿಂದ ಬಂದದ್ದು. ತವ್ಯತ್ ಪ್ರತ್ಯಯ ಸೇರಿ ಕರ್ತವ್ಯಂ ಎಂದಾಗಿದೆ. ಪ್ರತ್ಯಯಗಳು ಬಹುತೇಕ ಉಪಯೋಗವಾಗುವುದು ವ್ಯಾಕರಣಾಬದ್ಧ ಬಳಕೆಯಲ್ಲಿ ಲೋಪ ಬಂದಾಗ. ಭಾಷೆಯ ಬೆಳವಣಿಗೆಯ ನಂತರ ವ್ಯಾಕರಣ ರಚನೆಯಾದ ಕಾರಣ ಈ ರೀತಿಯ ಲೋಪ ಕಂಡು ಬರುತ್ತವೆ. ಹಾಗಾಗಿ ಪ್ರತ್ಯಯಗಳು ವೈಜ್ಞಾನಿಕವಾದ ಭಾಷಾಬಳಾಕೆಯಲ್ಲ ಎಂಬುದು ಪಂಡಿತರ ಹೇಳಿಕೆ. ( ಇದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದಲ್ಲಿ ಕೇಳಿದ್ದು).

ಇನ್ನೊಂದು ಪದ ನಿಟ್ಟುಸಿರು. ಇದು ಅಚ್ಚ ಕನ್ನಡದ ಶಬ್ದ. ಅರ್ಥ ಎಲ್ಲರಿಗೂ ಗೊತ್ತಿರುವುದೇ. ಪದವಿಂಗಡನೆ ಮಾಡಿದಾಗ "ನಿಡಿದಾದ ಉಸಿರು". ನಮ್ಮ ಮೇಷ್ತ್ರೊಬ್ಬರು ಇದನ್ನು ನಿಟ್ಟ ಉಸಿರು ಎಂದು ಬಿಡಿಸಿ ನಗೆಪಾಟಲಿಗೀಡಾಗಿದ್ದರು.
ಮತ್ತೊಂದು ಉದ್ಯಾನವನ. ಸ್ವತಃ ತಾವೇ ವಿಹರಿಸಲು ಮಾನವರು ನಿರ್ಮಿಸಿಕೊಂಡ ವನಕ್ಕೆ ಉದ್ಯಾನ ಎಂದು ಹೆಸರು. ಉದ್ಯಾನ ಸಾಕು. ಉದ್ಯಾನ ಎಂದರೂ ಕಾಡು (ಮಾನವನಿರ್ಮಿತ) ವನ ಎಂದರೂ ಕಾಡು. ಎರಡು ಬಾರಿ ಉಚ್ಚರಿಸುವುದು ಎಂಥದು? ಹಣ್ಣು + ಫಲ ಆಡು ಮಾತಲ್ಲಿ ಹಂಪಲು ಆಗಿದೆ. ಈಗ ಹೇಳಿ "ಹಣ್ಣು ಹಂಪಲು" ಸರಿಯಾದ ಬಳಕೆಯೇ?

ಬುಧವಾರ, ಜನವರಿ 28, 2009

ಉದರನಿಮಿತ್ಥಂ ......

ಷಡಕ್ಷರಮೂರ್ತಿಯವರ ಆರ್ಕುಟ್ ಪ್ರೊಫೈಲ್ ನಲ್ಲಿ ಕಂಡ ವಿಡಿಯೋ ಇದು. ಈ ಪುಣ್ಯಾತ್ಮನಿಗೆ ಇಂತಹ ವಿಡಿಯೋಗಳು ಹೇಗೆ ಸಿಗುತ್ತವೋ ಗೊತ್ತಿಲ್ಲ. ಹಿಂದೆಯೂ ಇದೆ ತರಹದ ವಿಡಿಯೋಗಳನ್ನು ಹಾಕಿದ್ದಾರೆ. ಈ ಬಾರಿಯದು ನಿಜಕ್ಕೂ ಸುಪರ್ಬ್. ವಿಜಯ ಕರ್ನಾಟಕದಲ್ಲಿ ನಡೆದ ಮತಾಂತರ ಚರ್ಚೆಯನ್ನು ಚೆನ್ನೈಲಿದ್ದ ನನಗೆ ಸ್ಕ್ಯಾನ್ ಮಾಡಿ ಕಳುಹಿಸಿ ಉಪಕಾರ ಮಾಡಿದ್ದರು. ಥ್ಯಾಂಕ್ಸ್ ಮೂರ್ತಿ!


ಪ್ರತಿಭೆಗಳು ಎಲ್ಲೆಲ್ಲಿರುತ್ತವೆ ಅಂತ ಹೇಳೋಕಾಗಲ್ಲ. ಈ ಹುಡುಗರ ಇಂಗ್ಲಿಶ್ ವ್ಯಾಕರಣಬದ್ಧವಾಗಿದೆ ಎನ್ನಲಾರೆ. ಆದರೆ ಕೇಳುಗರಿಗಂತೂ ಅರ್ಥವಾಗುತ್ತದೆ. ನನ್ನ ಸಾಫ್ಟ್ವೇರ್ ಸಹಯೋಗಿಗಳಿಗಿಂತಲೂ ಇವರ ಭಾಷೆ ಚೆನ್ನಾಗಿದೆ. ಕೇವಲ ಪ್ರವಾಸಿಗರೊಡನೆ ಮಾತಾಡಿ ಬಹುತೇಕ ಎಲ್ಲ ಯುರೋಪಿಯನ್ ಭಾಷೆಗಳನ್ನು ಮಾತಾಡುವ ಮಕ್ಕಳು ಇವು . ಅಪ್ಪನ ಬಳಿ ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ದೇಶದ ಕಸುವಾಗಿರಬೇಕಿದ್ದ ಇಂಥ ಪ್ರತಿಭೆಗಳು ಕಸವಾಗಿರುವುದು ಎಂಥ ದುರಂತ!!!!




ಗುರುವಾರ, ಜನವರಿ 22, 2009

ಕರ್ನಾಟಕ ಸಂಗೀತ ಎಂದೇ ಹೇಳಿ ...



ಕುನ್ನುಕ್ಕುಡಿಯವರ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿ ಹಂಸಾನಂದಿಯವರು ತುಸು ಬೇಸರಿಸಿಕೊಂಡೇ ಕಾರ್ನಾಟಿಕ್ ಪದಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ನನ್ನ ಮಾಹಿತಿಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾದ ಅಗತ್ಯ ತೋರಿತು. ಕೂಡಲೆ ದಾಖಲೆಗಳನ್ನು, ಸಾಕ್ಷ್ಯಗಳನ್ನು ಕಲೆಹಾಕಲು ಹುಡುಕಲು ಶುರುಮಾಡಿದೆ. ನಡುವೆ ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆ, ಬೆಳಗೆರೆ, ಸೇವಾಗ್ರಾಮ, ಚಿಕ್ಕಮಗಳೂರು, ತಿರುವಯ್ಯಾರ್ ಪ್ರವಾಸಗಳಿಂದಾಗಿ ಕೆಲಸ ತಡವಾಯಿತು. ಚೆನ್ನೈನ ರಣಬಿಸಿಲಿನಿಂದ ಬೆಂಗಳೂರಿನ ರಕ್ಕಸ ಚಳಿಗೆ ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಸಮಯವೇ ಬೇಕಾಯಿತು.
ಎರಡೂ ರೀತಿಯ ಹೆಸರುಗಳಿಗೂ ದಾಖಲೆಗಳು ಸಿಕ್ಕಿದವು. ಕೆಲಸ ಇನ್ನೂ ಮುಗಿದಿಲ್ಲ. ಸಿಕ್ಕಷ್ಟು ಹೇಳುತ್ತಿದ್ದೇನೆ.


ಸಧ್ಯಕ್ಕೆ ಕಾರ್ನಾಟಿಕ್ ಗಿಂತ ಕರ್ನಾಟಕ ಎಂಬ ಕಡೆಗೇ ದಾಖಲೆಗಳ ತಕ್ಕಡಿ ಹೆಚ್ಚು ವಾಲುತ್ತಿದೆ. ಕರ್ನಾಟಕದ ಚರಿತ್ರೆಯ ಬಗ್ಗೆ ತುಂಬಾ ಹಳೆಯ ದಾಖಲೆಗಳು ಸಿಗುತ್ತವೆ. ಕೈಕೇಯಿ ರಾಮನನ್ನು ಅಟ್ಟಿದ ಗೋಂಡಾರಣ್ಯದ ಒಂದು ಭಾಗವಾಗಿತ್ತು ಕರ್ನಾಟಕ. ಸುಗ್ರೀವ ಹನುಮಂತರ ಪರಿಚಯ ರಾಮನಿಗಾದದ್ದು ಇಲ್ಲಿಯೇ. ಅಂಬೆ ಅಂಬಾಲಿಕೆಯರ ಸ್ವಯಂವರಕ್ಕೆ ಬಂದಿದ್ದ ಛಪ್ಪನ್ನಾರು ದೇಶಗಳ ರಾಜರಲ್ಲಿ ಕರ್ಣಾಟ ದೇಶದ ರಾಜನೂ ಒಬ್ಬ ಎಂದು ಮಹಾಭಾರತದಲ್ಲಿದೆ. ಕರ್ಣೇ ಅಟತಿ ಇತಿ ಕರ್ಣಾಟ (ಕಿವಿಗೆ ಇಂಪು) ಎಂದು ಹೇಳಲಾಗುತ್ತದೆ. ಕರುನಾಡು ಎಂಬುದರ ಅರ್ಥ ಎಲ್ಲರಿಗೂ ಗೊತ್ತು. ಇನ್ನೊಂದು ದಾಖಲೆ (ಹಟ್ಟಂಗಡಿ ನಾರಾಯಣ ರ್ಆವ್) ಎತ್ತರದ ಭೂಭಾಗ ಎಂದು ಅರ್ಥ ಹೇಳುತ್ತದೆ. ಕರ್ನಾಟಕದ ಭೂಭಾಗ ಉಬ್ಬಿಕೊಂಡಿರುವುದರಿಂದ ಹೆಸರು. ಸಹ್ಯಾದ್ರಿಯ ನದಿಗಳನ್ನು ಹೊರತುಪಡಿಸಿ ಎಲ್ಲಾ ನದಿಗಳು ಪೂರ್ವಕ್ಕೆ ಹರಿಯುವುದು ಇದೇ ಕಾರಣಕ್ಕೆ.
ನಾನು ಸೇವಾಗ್ರಾಮದಲ್ಲಿದ್ದಾಗ ಕುಂಭಕೋಣಕ್ಕೆ ಪಯಣಗೈದಿದ್ದ ಗೋಪಿ ಫೋನಾಯಿಸಿಮಗಾ ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತ ಎಂದು ಯಾಕೆ ಕರೆಯಬೇಕೆಂದು ಪುರಾವೆ ಸಿಕ್ಕಿತುಅಂತ ಹೇಳಿದ. ತ್ಯಾಗರಾಜರ ಆರಾಧನೆಯ ಉತ್ಸವಕ್ಕೆ ಹೋದಾಗ ಕುಂಭಕೋಣಕ್ಕೆ ಭೇಟಿ ನೀಡಿ ನಾನೂ ನೋಡಿದೆ. ಸಾರಾಂಶವನ್ನು ಇಲ್ಲಿಡುತ್ತಿದ್ದೇನೆ.


ಹದಿನಾರನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕುಂಭಕೋಣದವನ್ನು ರಾಜಧಾನಿಯನ್ನಾಗಿಸಿ ಆಳುತ್ತಿದ್ದವರು ಸೇವಪ್ಪ, ಅಚ್ಯುತಪ್ಪ ಹಾಗೂ ರಘುನಾಥ ನಾಯಕರು. ಇವರ ಸಮರ್ಥ ಆಡಳಿತಕ್ಕೆ ಬೆನ್ನೆಲುಬಾಗಿ ನಿಂತವರು ಅಮಾತ್ಯರಾಗಿದ್ದ ಗೋವಿಂದ ದೀಕ್ಷಿತರು. ಗೋವಿಂದ ದೀಕ್ಷಿತರು ಅತ್ಯುತ್ತಮ ಮುತ್ಸದಿಗಳಲ್ಲದೇ ಸಾಹಿತಿ ಮತ್ತು ಸಂಗೀತ ವಿದ್ವಾಂಸರಾಗಿದ್ದರು. ಉಪಮನ್ಯು ವಶಿಷ್ಠಗೋತ್ರದ ಅಚ್ಚ ಕನ್ನಡಿಗ ಸ್ಮಾರ್ಥ ಸಂಪ್ರದಾಯದ ಬ್ರಾಹ್ಮಣರು. ಗೋವಿಂದ ದೀಕ್ಷಿತರು ತಮ್ಮ ಆಡಳಿತ ಸಾಮರ್ಥ್ಯದಿಂದಾಗಿ ತಮಿಳಿನಾಡಿನಾದ್ಯಂತ ಜನಪ್ರೀಯರಾಗಿದ್ದರು. ಇಂದಿಗೂ ತಂಜಾವೂರಿನಿಂದ ತಿರುವಣ್ಣಾಮಲ್ಲೈ ವರೆಗೆ ಗೋವಿಂದ ದೀಕ್ಷಿತರ ಹೆಸರಿನ ಗೋವಿಂದಪುರಂ, ಗೋವಿಂದನಲ್ಲುರ್, ಗೋವಿಂದವಾಡಿ, ಅಯ್ಯಂಪೆಟ್ ಇತ್ಯಾದಿ ಊರುಗಳು ಗೋವಿಂದ ದೀಕ್ಷಿತರ ಕೀರ್ತಿಯನ್ನು ಸಾರುತ್ತಿವೆ. ಇಂದಿಗೂ ಅನೇಕ ರಸ್ತೆ, ಬಡಾವಣೆಗಳಿಗೆ ಗೋವಿಂದ ದೀಕ್ಷಿತರ ಹೆಸರನ್ನಿಡಲಾಗುತ್ತಿದೆ. ರಾಮೇಶ್ವರಂ , ಕುಂಭಕೋಣಂ, ವೃದ್ಧಾಚಲಂ, ವಿಲಾನಗರದ ಗುಡಿಗಳನ್ನು ಕಟ್ಟಿಸಿದವರು ಗೋವಿಂದ ದೀಕ್ಷಿತರು. ಸಾಹಿತ್ಯಸೇವೆಯ ಅಂಗವಾಗಿ ಕುಮಾರಿಲ ದರ್ಶನ ಮತ್ತು ಜೈಮಿನಿ ಸೂತ್ರಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಜೊತೆಗೆ ಸಂಗೀತ ಸಂಶೊಧನಾ ಗ್ರಂಥ ಸಂಗೀತಸುಧಾ ಸಂಗೀತ ಸಂಶೊಧನೆಯಲ್ಲೊಂದು ಮೈಲಿಗಲ್ಲು. ತಂಜಾವೂರು ಮೇಳವೀಣೆಯನ್ನು ಗೋವಿಂದ ದೀಕ್ಷಿತರೇ ವಿನ್ಯಾಸಗೊಳಿಸಿದ್ದು. ಇದರ ಜೊತೆಗೆ ಅನೇಕ ಸಂಸ್ಕೃತ ಗ್ರಂಥಗಳ ತಮಿಳು ಅನುವಾದಗಳೂ ಗೋವಿಂದ ದೀಕ್ಷಿತರ ಕೊಡುಗೆಗಳು. ತಮಿಳುನಾಡಿನ ಅರೆಭಾಗವನ್ನು ಮುಕ್ಕಾಲು ಶತಮಾನಗಳ ಕಾಲ ಸಮರ್ಥವಾಗಿ ಆಳಿದ ಗೋವಿಂದ ದೀಕ್ಷಿತರ ಸಾಧನೆಗಳು ಎಣಿಕೆಗೆ ನಿಲುಕುವಂತಹುದಲ್ಲ.
ಗೋವಿಂದ ದೀಕ್ಷಿತರಿಗೆ ಎಂಟು ಜನ ಗಂಡುಮಕ್ಕಳು ಒಬ್ಬ ಹೆಣ್ಣುಮಗಳು. ತಂದೆಯಂತೆಯೇ ಮಕ್ಕಳು ಮಹಾಮೇಧಾವಿಗಳು. ಹಿರಿಯ ಮಗ ಲಿಂಗದ್ವಾರಿ ಶಿವಸಹಸ್ರನಾಮದ ಮೇಲೆ ಭಾಷ್ಯವನ್ನು ಬರೆದಿದ್ದಾರೆ. ಎರಡನೆಯ ಮಗ ಯಜ್ಞನಾರಾಯಣ ದೀಕ್ಷಿತರು ರಘುನಾಥಾಭ್ಯುತಂ, ಸಾಹಿತ್ಯರತ್ನಕರಂ ಕೃತಿಗಳ ಕರ್ತೃ. ಇವೆರಡು ಗ್ರಂಥಗಳು ಅಂದಿನ ರಾಜರುಗಳ ಹಾಗೂ ಗೋವಿಂದ ದೀಕ್ಷಿತರ ವಿವರವಾದ ವರ್ಣನೆಯನ್ನು ನೀಡುತ್ತವೆ. ಇವರ ಮೂರನೆಯ ಸತ್ಪುತ್ರರೇ ವೆಂಕಟಮಖಿ! ಕರ್ನಾಟದ ಸಂಗೀತದಲ್ಲಿ ವೆಂಕಟಮಖಿ ಚಿರಪರಿಚಿತ ಹೆಸರು. ಕರ್ನಾಟದ ಸಂಗೀತದ ಎಪ್ಪತ್ತೆರಡು ಮೇಳಕರ್ತಗಳ ಸೃಷ್ಠಿಕರ್ತರು ವೆಂಕಟಮಖಿಯವರು. ಎಪ್ಪತ್ತೆರಡು ಮೇಳಕರ್ತಗಳನ್ನು ವೆಂಕಟಮಖಿಗಳು ತಮ್ಮ ಸಂಗೀತ ಸಂಶೋಧನಾ ಗ್ರಂಥಚತುರ್ದಂಡಿ ಪ್ರಕಾಶಿಕಾದಲ್ಲಿ ವಿವರಿಸುತ್ತಾರೆ. ಕರ್ನಾಟಕ ಸಂಗೀತದಲ್ಲಿ ಮೇಳಕರ್ತಗಳ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು. ಮಧ್ವಾಚಾರ್ಯರೂ ಸಂಗೀತದ ಮೂಲಕವೇ ದೈವಸಾಕ್ಷತ್ಕಾರಕ್ಕೆ ಮೊದಲು ಮಾಡಿದವರು. ಕರ್ನಾಟಕ ಎಂದರೆ ಈಗಿರುವ ಇಪ್ಪತ್ತೊಂಬತ್ತು ಜಿಲ್ಲೆಗಳ ಕರ್ನಾಟಕವಲ್ಲ. ಉತ್ತರದಲ್ಲಿ ಬೀದರ್ನಿಂದ ಸೇರಿ ದಕ್ಷಿಣದ ಪಾಲಕ್ಕಾಡ್ ಪ್ರದೇಶದವರೆಗೆ ಪಶ್ಚಿಮದಲ್ಲಿ ಸಹ್ಯಾದ್ರಿಯ ಘಟ್ಟಗಳಿಂದ ಪೂರ್ವದ ಕೋರಮಂಡಲ ತೀರದವರೆಗಿನ ಪ್ರದೇಶ ಕರ್ನಾಟಕವಾಗಿತ್ತು. ಬಹಮನಿ ರಾಜರ ನಂತರ ಕರ್ನಾಟಕ ಛಿದ್ರವಾಯಿತು. ಪ್ರಕಾರ ಕರ್ನಾಟಕವನ್ನು ಪರಿಗಣಿಸಿದರೆ ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಅನೇಕಾನೇಕ ಸಂಗೀತ ದಿಗ್ಗಜರು ಕರ್ನಾಟಕದಲ್ಲೇ ಓಡಾಡಿಕೊಂಡಿದ್ದರು. ಮೇಲೆ ಹೇಳಿದ ಗೋವಿಂದ ದೀಕ್ಷಿತರು ಹಾಗೂ ವೆಂಕಟಾಮಖಿಗಳು ಅಪ್ಪಟ ಕನ್ನಡಿಗರು. ಹಾಗಾಗಿ ದಕ್ಷಿಣಾದಿ ಸಂಗೀತಕ್ಕೆ ಯಾವುದೇ ಸಂಶಯಕ್ಕೆ ಎಡೆಯಿಲ್ಲದೇ ಕರ್ನಾಟಕ ಸಂಗೀತ ಎಂದು ಕರೆಯಬಹುದು. ಸ್ವತಃ ಪಾಲಕ್ಕಾಡಿನವರೇ ಚಂಬೈ ವೈದ್ಯನಾಥ, ಡಿವಿಜಿ ಅನೇಕ ಹಿರಿಯರು ಕರ್ನಾಟಕ ಸಂಗೀತ ಎಂದೇ ಸಂಬೊಧಿಸುತಿದ್ದರು.


ಹುಡುಕಾಟದ ನಡುವೆ ಕರ್ನಾಟಕದ ಬಗ್ಗೆ ನನಗೆ ಇನ್ನೂ ಅನೇಕ ಮಹತ್ವದ ಮಾಹಿತಿಗಳು ದೊರಕಿವೆ. ವಿಷಯಪಲ್ಲಟವಾಗುವುದರಿಂದ ಇಲ್ಲಿ ಹೇಳಲಾರೆ. ಮುಂದೆ ಸಂದರ್ಭಕ್ಕೆ ತಕ್ಕಂತೆ ಹಂಚಿಕೊಳ್ಳುತ್ತೇನೆ. ಮೊದಲೇ ಹೇಳಿದ ಹಾಗೆ ಹುಡುಕಾಟ ಇನ್ನೂ ಮುಗಿದಿಲ್ಲ. ಕರ್ನಾಟಕ ಸಂಗೀತದ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಅಥವಾ ದಾಖಲೆಗಳೇನಾದರೂ ಇದ್ದರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಿ. ವೆಂಕಟಮಖಿಗಳ ಪುಸ್ತಕಗಳು ದೊರೆಯುತ್ತವೆ. ಆದರೆ ಗೋವಿಂದ ದೀಕ್ಷಿತರ ಪುಸ್ತಕಗಳು ಲಭ್ಯವಿಲ್ಲ ಅಥವಾ ನನಗೆ ದೊರೆಯಲಿಲ್ಲ. ಇವು ಯಾರಲ್ಲಾದರೂ ಲಭ್ಯವಿದ್ದರೆ ದಯವಿಟ್ಟು ನನಗೆ ತಿಳಿಸಿ. ಜೆರಾಕ್ಸ ಪ್ರತಿ ಮಾಡಿಸಿಕೊಂಡು ವಾಪಸು ಕೊಡುತ್ತೇನೆ.
ಚಿತ್ರ : ತಿರುವಯ್ಯಾರ್ ತ್ಯಾಗರಾಜರ ಗುಡಿಯ ಪುತ್ಥಳಿ.