ಹು(ದು)ಡುಗುಮನ

ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಮಾರ್ಚ್ 25, 2011

ಸಮಯ ಅನ್ನುವ ಬಕರಾ..

ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಜನ ಬದಲಾಗುವುದು ಮನ ಬದಲಾಗುವುದು
ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು
ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ
ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ
ತಮ್ಮಲ್ಲಿನ ಕುಸಿತಕೆ ಗೂಬೆ ಕೂರಿಸಲು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ನಿನ್ನದೇ ಮಕ್ಕಳಿಗೆ ನೀ ಹೇಳಿ ಕೊಡಲಿಲ್ಲ ನೀ ಕಲಿಸಿ ಕೊಡಲಿಲ್ಲ
ದಾರಿ ತಪ್ಪಿಸಿದವ ನೀನು ವಿಷವ ಬಿತ್ತಿದವ ನೀನು
ನಿನ್ನ ಮಕ್ಕಳ ನೋಡಿ ನೀನಂತೀಯ ಕಾಲ ಕೆಟ್ಟು ಹೋಯಿತು ಮಾರಾಯ
ಕೆಡೋಕೆ ಅದೇನು ನೀನು ಹುಳಿ ಹಿಂಡಿದ ಹಾಲೇ ಅಥವಾ ನಿನ್ನ ತಲೆಯೇ ?
ತಾನೇ ಕೆಡಿಸಿದ ಜನ ಮಾನಸಕೆ ಗೂಬೆ ಕೂರಿಸಲು ಬೇಕೊಬ್ಬ ಬಕರಾ
ಅದೋ ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಬದುಕೆಂಬುದು ಉಳಿವಿನ ಹೋರಾಟ

ಮಾನವ ಬದುಕಿನಿಂದ ಬೇಸತ್ತು
ಬೇರೆಯದೇ ಜೀವವಾಗ ಬಯಸಿದೆ.

ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ
ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ.
ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ
ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ ಬೆಚ್ಚಿಬಿದ್ದೆ!

ಇದಕಿಂತ ಬಲಶಾಲಿ ಹುಲಿಯು ಸುಖವಾಗಿರಬೇಕೆಂದು ಕೊಂಡೆ
ಯಾವಾಗಲೂ ಒಂಟಿ ಜೀವನ ತಿಂಗಳುಗಟ್ಟಲೆ ಊಟವಿಲ್ಲ
ಹೆಂಡತಿಗಾಗಿ ಪರರೊಡನೆ ಕಾದಾಟ
ಮುದಿಯಾಡೋದೇ ಬೇಟೆಗೂ ಬಲವಿಲ್ಲ. ಸೊಪ್ಪು ಹೊಟ್ಟೆಯಲಿ ನುರಿಯುವುದಿಲ್ಲ.

ಆಗಸದಿ ಗಾಳಿಯಲಿ ಹಾರಬಯಸಿದೆ ಹಕ್ಕಿಯಂತೆ
ಮಾಂಸಕೆ ಕಾದಿರುವ ಹದ್ದುಗಳ ಭಯ ಮಾನವನ ಬಲೆಯ ಭಯ
ಮಕ್ಕಳ ಸಾಕಲು ಊರೂರು ಅಳೆದು ಗೂಡು ಕಟ್ಟಬೇಕು ಗೂಡಿಗೆ ನುಗ್ಗುವ ಹಾವುಗಳ ಭಯ
ವಾಯುಗುಣ ಪಲ್ಲಟದೊಡನೆ ವಲಸೆಯ ತಲೆನೋವು.

ಗಿಡವಾಗಿ ಮರವಾಗಿ ಪೋದೆಯಾಗಿ ಬದುಕುವೇನು ಸುಖವಾಗಿ
ಬೇರೆ ಮರದ ನೆರಳಲ್ಲಿ ಬೆಳೆಯಲಾಗುವುದಿಲ್ಲ
ಒಮ್ಮೊಮ್ಮೆ ಕಾಲ್ಗಿಚು ಒಮ್ಮೊಮ್ಮೆ ಬರದ ರೊಚ್ಚು
ಕಾಪಿಟ್ಟ ಹಣ್ಣನ್ನು ತಿನ್ನುವ ಹಕ್ಕಿಗಳು ರಕ್ತ ಹೀರಿ ಬದುಕುವ ಪರಾವಲಂಬಿ ಬಳ್ಳಿಗಳು
ನೇಸರನ ಬೆಳಕಿಗಾಗಿ ಪಕ್ಕದ ಮರಗಳೊಡನೆ ಬಡಿದಾಟ

ತಿರುಗಿ ಬಂದೆನು ನನ್ನ ಲೋಕಕೆ ಜೀವನವಲ್ಲ ಸುಲಭ
ಎಲ್ಲರಿಗು ತಮ್ಮ ಬದುಕಿಗಾಗಿ ಕಿತ್ತು ತಿಂದಿದ್ದೆ ಲಾಭ
ಬದುಕಲ್ಲ ಆರಾಮದ ಚದುರಂಗದಾಟ
ಅದೊಂದು ಉಳಿವಿಗಾಗಿ ನಡೆಯುವ ದೊಡ್ಡ ಹೋರಾಟ!

ಗುರುವಾರ, ಡಿಸೆಂಬರ್ 2, 2010

ಅವರು ಹೊರಟುಹೋದರು ಅಂತ ಅನ್ನಿಸುತ್ತಿಲ್ಲ!!!


ಬೆಳಗ್ಗೆ ನಾಲ್ಕಕ್ಕೆ ಸುಭಾಷನ ಫೋನ್ ಬಂದಾಗ ಕೆಟ್ಟ ಸುದ್ದಿಯೇ ಇರಬೆಕು ಅನ್ನಿಸಿತು.ಆದರೆ ಇಷ್ಟು ಕೆಟ್ಟ ಸುದ್ದಿ ಎಂದು ಎಣಿಸಿರಲಿಲ್ಲ.ರಾಜೀವ್ ದೀಕ್ಷಿತರು ಹೋದರೆಂಬ ಸುದ್ದಿಯನ್ನು ಈಗಲೂ ನಂಬಲಾಗುತ್ತಿಲ್ಲ. ಅನೇಕರು ಫೋನ್ ಸ್ವಿಚ್ ಆಫ್ ಮಾಡಿಕೊಂಸು ಅಳುತ್ತಾ ಕೂತಿದ್ದಾರೆ. ದಿಕ್ಕು ತೋಚದಂತೆ ಕೂತಿದ್ದಾರೆ. ಶೂನ್ಯವೊಂದು ಮನವನ್ನು ಆವರಿಸಿದೆ.



ಹತ್ತು ವರ್ಷಗಳಿಂದ ರಾಜೀವ ದೀಕ್ಷಿತರ ಒಡನಾಡುವ, ಅನೇಕ ತಾಣಗಳಿಗೆ ಅವರೊಟ್ಟಿಗೆ ಪ್ರವಾಸ ಹೋಗುವ ಪುಣ್ಯವನ್ನು ಒದಗಿಸಿದ ದೇವರಿಗೆ ಸಹಸ್ರ ನಮನಗಳು. ರಾಜೀವ್ ದೀಕ್ಷಿತ್ ನಾನು ನೋಡಿದ ಅದ್ಭುತ ವ್ಯಕ್ತಿಗಳಲ್ಲೊಬ್ಬರು. ಅವರ ನೆನಪಿನ ಶಕ್ತಿ ಅಗಾಧ. ಯೋಚಿಸುವ ವೇಗ ಅಮೋಘ, ಭೂಮಿಯಷ್ಟು ಸಹನೆ, ಅವರು ಹೇಳಿದ್ದೆಲ್ಲ ಕರಾರುವಾಕ್ಕಾಗಿ ನಡೆಯುತ್ತದೆ! ವಾಕ್ ಸಿದ್ಧಿ ಪಡೆದಿರಬಹುದಾ ಎಂಬ ಅನುಮಾನ ಅನೇಕರಿಗೆ!



ನಮ್ಮದೊಂದು ಹುಡುಗರ ತಂಡ ರಾಜೀವ್ ಭಾಯಿಗೆ ಅತ್ಯಂತ ಪ್ರಿಯವಾಗಿತ್ತು. ನಮ್ಮ ಗುಂಪಿನಲ್ಲಿ ರಾಜಿವ್ ಭಾಯಿಗೆ ಅತಿಯಾಗಿ ತಲೆ ತಿಂದವನು ನಾನೇ! ನನ್ನ ನೂರು ಪ್ರಶ್ನೆಗಳಿಗೆ ಉಪಪ್ರಶ್ನೆಗಳಿಗೆ ಅತ್ಯಂತ ಸಹನೆಯಿಂದ ಉತ್ತರಿಸುತ್ತಿದ್ದರು. ಸಾಕ್ಷಿ ಕೇಳಿದಾಗೆಲ್ಲ ಸಾಕ್ಷಿ ಸಿದ್ಧವಾಗಿರುತ್ತಿತ್ತು. ರಾಜೀವ್ ಭಾಯಿ ಹೇಳಿದರೆ ಅದು ’ಅಥೆಂಟಿಕ್’ ಎಂಬುದೇ ನಮ್ಮ ನಂಬುಗೆಯಾಗಿತ್ತು. ಅವರಿಗೆ ಆಜಾದಿ ಬಚಾವೋ ಆಂದೋಲನದ ಎಲ್ಲ ಕಾರ್ಯಕರ್ತರ ಹೆಸರು ನೆನಪಿರುತ್ತಿತ್ತು.



ಆಂದೋಲನದ ಎಲ್ಲ ಹುಡುಗರಲ್ಲಿ ಕೆಲವು ಬೇಷರತ್ ಸಾಮ್ಯಗಳಿದ್ದವು. ತಿಂಡಿಪೋತತನ, ಊರೂರು ಸುತ್ತುವ ಚಟ, ಹೊತ್ತಗೆ ಓದುವುದು, ಶಾಸ್ತ್ರೀಯ ಸಂಗೀತ ಕೇಳುವುದು. ಇವೆಲ್ಲ ಚಾಳಿಗಳು ರಾಜೀವ ದೀಕ್ಷಿತರಿಗೆ ಇದ್ದವು. ಇದಕ್ಕಿಂತ ಹೆಚ್ಚಾಗಿ ರಾಜೀವ್ ಭಾಯಿಯನ್ನು ವಯಕ್ತಿಕವಾಗಿ ಅರಿಯಲು ನಾವು ಯತ್ನಿಸಲಿಲ್ಲ. ಏಕೆಂದರೆ ನಾವು ದೀಕ್ಷಿತರನ್ನು ಒಬ್ಬ

ಮನುಷ್ಯನನ್ನಾಗಿ ನೋಡುವದಕ್ಕಿಂತ ಒಂದು ತತ್ವವನ್ನಾಗಿ ನೊಡುತ್ತಿದ್ದೆವು. ರಾಜಿವ್ ದಿಕ್ಷಿತರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಗಾಂಧಿಜಿ ಹಾಗೂ ಬಸವಣ್ಣ.



ಈಗಲೂ ರಾಜೀವ್ ದಿಕ್ಷಿತರು ಮರಣಿಸಿಲ್ಲ ಎಂದು ಅನಿಸುತ್ತಿರುವುದು ಇದೇ ಕಾರಣಕ್ಕೆ! ಮನುಷ್ಯ ಸಾಯಬಹುದು, ವಿಚಾರ ಸತ್ತೀತೆ? ಚಿಂತನೆ ಸತ್ತೀತೆ? ತತ್ವ ಸತ್ತೀತೆ?

ಒಂದು ದೇಹವಾಗಿ ರಾಜಿವ್ ದೀಕಿತ್ ಇನ್ನಿಲ್ಲ. ತತ್ವಗಳು ಇನ್ನೂ ಜೀವಂತವಾಗಿವೆ.



ರಾಜೀವ್ ಭಾಯಿ ಹೇಳಿದ ಹಾದಿಯಲ್ಲಿ ನಡೆವ ಹುಡುಗರಿಗೆ ಮಾರ್ಗದರ್ಶಕ ಇಲ್ಲದಂತಾಗಿದೆ. ಬಾಬಾ ರಾಮದೇವರ ಮೆದುಳೇ ಆಗಿದ್ದವರು ರಾಜೀವ್ ಭಾಯಿ. ಅನೇಕರ ಜೀವನಕ್ಕೆ ಹೊಸ ತಿರುವು ಕೊಟ್ಟವರು. ಇಷ್ಟು ದಿನ ಯಾವುದೇ ಕೆಲಸಕ್ಕೆ ಮುನ್ನ ರಾಜೀವಣ್ಣನಿಗೆ ಕರೆ ಮಾಡಿ ಹಿಂಗೆ ಮಾಡಿದರೆ ಹೆಂಗೆ ಎಂಬ ಸಲಹೆ ಪಡೆಯುತ್ತಿದ್ದೆವು. ಅವರು ತೋರಿಸಿದ ಮಾರ್ಗ ಇದೆಯಾದರೂ ಮಾರ್ಗದರ್ಶನ ಮಾಡಲು ದೈಹಿಕವಾಗಿ ಅವರಿಲ್ಲ.



ರಾಜೀವಣ್ಣನ ಹಿಂದೆ ನಡೆದು ಸಮಾಜಸೇವೆಗೆ ಮುಂದಾದ ಹುಡುಗರು ಅನೇಕ. ಶೈಲೇಶ ಗೋಶಾಲೆ ಸ್ಥಾಪಿಸಿದರು, ಅಲ್ಲಿ ಪರ್ಯಾಯ ಇಂಧನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಹರೀಶಣ್ಣ ವಿಷದ ಸೂಜಿಗಳು, ಗಣಪತಿ ಪೂಜೆ ಮಾಡಿ ಏಡ್ಸ್ ನಿಂದ ದೂರವಿರಿ ಹೊತ್ತಗೆಗಳಿಗೆ ರಾಜೀವಣ್ಣನೇ ಸ್ಪೂರ್ತಿ, ಐತಾಳ್, ಸುಭಾಷ್, ಮಯ್ಯ ಸಾವಯವ ಕೃಷಿ ಉತ್ಪನ್ನಗಳನ್ನು ಜನರಿಗೆ ತಲುಪಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ, ತೆರಕಣಾಂಬಿಯ ಹುಡುಗರು ಪಟ್ಟಣ ಬಿಟ್ಟು ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ, ಕುಮಟಾದ ಗಣೇಶ್ ಭಟ್ಟರು ಸಾವಯವ ಕೃಷಿಯ ಜೊತೆಗೆ ಬೀಜ ಬ್ಯಾಂಕ್, ಹಳ್ಳಿಗರಲ್ಲಿ ಜಾಗೃತಿ, ಗೋಶಾಲೆಗಳನ್ನು ನಡೆಸುತ್ತಿದ್ದಾರ. ಹಳ್ಳಿಗಳಲ್ಲಿ ಸ್ವದೇಶಿ ತಂತ್ರಜ್ಞಾನ ಪಸರಿಸಲು ನಾನು ಮತ್ತು ಸಂಪತ್ ಹುಟ್ಟು ಹಾಕಿದ ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಮೂಲ ಹಾರೈಕೆ ರಾಜೀವ್ ದೀಕ್ಷಿತರದು.ಅಷ್ಟೇ ಏಕೆ ಬಾಬಾ ರಾಮದೇವರು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಸ್ಪರ್ತಿಯಾಗಿದ್ದಾರೆ ರಾಜೀವ್ ದೀಕ್ಷಿತ್. ಬಿಜಾಪುರದ ಸಾತ್ವಿಕ ಸನ್ಯಾಸಿ ಸಿದ್ದೇಶ್ವರ ಸ್ವಾಮಿಗಳ ವಯಕ್ತಿಕ ಕೋಣೆಯಲ್ಲಿ ರಾಜೀವ್ ಭಾಯಿಯ ಫೋಟೋ ಇದೆ.



ಕಡೆಗಾಲದಲ್ಲಿ ಆಸ್ಪತ್ರೆಯಲ್ಲಿ ವಿದೇಶಿ ಔಷಧಿ ಸೇವಿಸಲು ನಿರಾಕರಿಸಿ ಸಾವಿನಲ್ಲೂ ಸ್ವದೇಶಿ ತತ್ವಪ್ರೇಮ ಮೆರೆದವರು ರಾಜೀವಣ್ಣ. ಅವರ ಔಷಧಿಗಳಿಂದ ಅನೇಕರು ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಂದ ಗುಣಮುಖರಾಗಿ ಹೊಸ ಜೀವನ ಕಂಡುಕೊಂಡಿದ್ದಾರೆ.



ರಾಜೀವಣ್ಣ ನಮ್ಮನ್ನು ಬಿಟ್ಟು ಹೋದರೂ ನಾವು ಅನಾಥರಲ್ಲ. ಯಾಕೆಂದರೆ ಅವರು ತೋರಿಸಿದ ದಾರಿಯಿದೆ. ಹೇಳಿಕೊಟ್ಟ ತತ್ವಗಳಿವೆ. ಅವರ ಆಶರ್ವಾದ ಎಂದಿಗೂ ನಮ್ಮ ಮೇಲಿರುತ್ತದೆ.

ಬುಧವಾರ, ಸೆಪ್ಟೆಂಬರ್ 29, 2010

ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಸ್ವಾಗತ!


ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂಪುರೇಷೆಯನ್ನು ಪ್ರಾಯೋಗಿಕವಾಗಿ ಪ್ರಚುರಬಡಿಸಲು ಸತಂಸ ಮುಂದಾಗಿದೆ.



ಸ್ವತಂಸಂ ನ ಮೊದಲ ಗುರಿ ತಂತ್ರಜ್ಞಾನವನ್ನು ವಿಕೇಂದ್ರೀಕರಣಗೊಳಿಸಿವುದು. ಗ್ರಾಮೀಣ ಭಾಗದ ಜನರಿಗೆ ಹೊರೆಯಾಗದಂತೆ ಹೆಚ್ಚಿನ ವಿದ್ಯುತ್ ಮತ್ತು ಪರಿಸರಹಾನಿಯನ್ನು ಬೇಡದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಎಲ್ಲರ ಕೈಗೆಟಕುವಂತೆ ಮಾಡುವುದು. ರೈತರು ಬೆಳೆಯುವ ಕಚ್ಚಾ ಸರಕನ್ನು ಬಹುರಾಷ್ಟ್ರೀಯ ಕಂಪನಿಗಳು ಕಡಿಮೆ ಬೆಲೆಗೆ ಖರೀದಿಸಿ ಸಿದ್ಧವಸ್ತುಗಳನ್ನಾಗಿ ಮಾರ್ಪಡಿಸಿ ಹೆಚ್ಚಿನ ಬೆಲೆಗ ಮಾಡುತ್ತವೆ. ಇದರಿಂದ ದೇಶದ ಸಂಪತ್ತು ಕೊಳ್ಳೆಯಾಗುತ್ತಿರುವುದಲ್ಲದೇ ಜನಸಾಮಾನ್ಯರಿಗೂ ಹಣದುಬ್ಬರದ ಸಮಸ್ಯೆ ಕಾಡುತ್ತದೆ.



ರೈತರು ಕಂಪನಿಗಳಿಗೆ ಕಚ್ಚಾಸರಕನ್ನು ಕೊಡುವ ಬದಲು ತಾವೇ ಸಿದ್ಧ ಸರಕನ್ನು ತಯಾರು ಮಾಡಿಕೊಳ್ಳಬೇಕು. ಬೇಸಾಯದ ದಿನಗಳಲ್ಲಿ ಅಲ್ಲದೇ ಉಳಿದ ದಿನಗಳಲ್ಲಿಯೂ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದಾಗಿ ಧನಲಾಭ ಬಹುರಾಷ್ಟ್ರೀಯ ಕಂಪನಿಗಳಿಗೆ ಹೋಗುವ ಬದಲು ರೈತನಿಗೆ ಹೋಗುತ್ತದೆ. ಹಳ್ಳಿಗಳು ಹಣದ ಉತ್ಪಾದನೆಯ ಕೇಂದ್ರಗಳಾಗುತ್ತವೆ. ದೇಶದ ಆರ್ಥಿಕ ಚಟುವಟಿಕೆ ಹಳ್ಳಿಗಳಲ್ಲಿ ಕೇಂದ್ರೀಕೃತವಾಗುತ್ತದೆ. ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಹಳ್ಳಿಗಳು ಆರ್ಥಿಕವಾಗಿ ಸಶಕ್ತವಾಗುತ್ತವೆ.



ಹಳ್ಳಿಗಳಿಗೆ ಈ ರೀತಿ ಆರ್ಥಿಕ ಪ್ರಾಬಲ್ಯ ದೊರೆಯಲು ರೈತರಿಗೆ ತಂತ್ರಜ್ಞಾನ ಲಭ್ಯವಾಗಬೇಕು. ತಂತ್ರಜ್ಞಾನ ರೈತರಿಗೆ ಹೊರೆಯಾಗಬಾರದಲ್ಲದೇ ಪರಿಸರ ಸ್ನೇಹಿಯಾಗಿರಬೇಕು. ಈ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿ ಸ್ವತಂಸಂ ಶ್ರಮಿಸುತ್ತಿದೆ. ಕಚ್ಚಾವಸ್ತುಗಳನ್ನು ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವ ಚಿಕ್ಕ ಚಿಕ್ಕ ಯಂತ್ರಗಳನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ಕೊಡುವುದು ಸ್ವತಂಸಂ ಉದ್ದೇಶ.



ಚಿಕ್ಕ ಯಂತ್ರಗಳು ಹಳ್ಳಿಯ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಸ್ಥಳೀಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಲು ಸಹಾಯಕವಾಗುತ್ತವೆ.



ಸ್ವತಂಸಂ ಪರವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ/ತೊಡಗಲಿರುವ ಕೆಲ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಯಂತ್ರಗಳ ಉದಾಹರಣೆ ಇಲ್ಲಿದೆ,



1. ೧. ಬಯೋಗ್ಯಾಸ್ ಆಧಾರಿತ ವಿದ್ಯುತ್ ಉತ್ಪಾದನೆ.
2. ೨. ಎಣ್ಣೆಯ ಗಾಣದಿಂದ ವಿದ್ಯುತ್ ಉತ್ಪಾದೆ (ಮೂರು ಕಿ.ವ್ಯಾ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ)
3. ೩. ಮೂರು ಸಾವಿರ ರುಪಾಯಿ ವೆಚ್ಚದಲ್ಲಿ ಬಯೋಗ್ಯಾಸ್ ಪ್ಲಾಂಟ್. (ಎರಡು ಬುಟ್ಟಿ ಸಗಣಿಯಿಂದ ನಾಲ್ಕು ತಾಸು ಒಲೆ ಉರಿಸಬಹುದು)
4. ೪. ಮನುಷ್ಯ ಮತ್ತು ಪ್ರಾಣಿಗಳ ನಡಿಗೆಯ ಸಮಯದಲ್ಲಿ ಉಂಟಾಗುವ ಒತ್ತಡದಿಂದ ವಿದ್ಯುತ್ ಉತ್ಪಾದನೆ.
5. ೫. ಮೂರು ಅಡಿ ಎತ್ತರ ಎರಡು ಅಡಿ ಉದ್ದಗಲದ ಭತ್ತದಿಂದ ಅಕ್ಕಿ ತಯಾರಿಸುವ ಯಂತ್ರ. (ದಿನಕ್ಕೆ ಒಂದು ಟನ್ ಉತ್ಪಾದನೆಯ ಸಾಮರ್ಥ್ಯ)
6. ೬. ತೆಂಗಿನ ಎಣ್ಣೆ ತೆಗೆಯುವ ಯಂತ್ರ. (ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ನಲವತ್ತು ಲಕ್ಷ ರೂಪಾಯಿಗಳು. ನಾವು ತಯಾರಿಸಿರುವ ಅದೇ ಸಾಮರ್ಥ್ಯದ ಯಂತ್ರದ ಬೆಲೆ ಕೇವಲ ಇಪ್ಪತೈದು ಸಾವಿರ ರೂಪಾಯಿಗಳು. ನಮ್ಮ ಯಂತ್ರ ಕೇವಲ ಹತ್ತು ಅಡಿ X ಹತ್ತು ಅಡಿ ಜಾಗದಲ್ಲಿ ಕೂತರೆ ಅಂತರ‍್ರಾಷ್ಟ್ರೀಯ ಯಂತ್ರ ಅರವತ್ತು X ನಲವತ್ತು ಅಡಿಗಳಷ್ಟು ಜಾಗವನ್ನು ಕಬಳಿಸುತ್ತದೆ.)



ಸ್ವತಂಸಂ ನ ಸಮ್ಮೇಳನ ಬರುವ ಗಾಂಧಿ ಜಯಂತಿಯಂದು ಕುಂದಾಪುರ ಬಳಿಯ ಕುಂಭಾಸಿಯಲ್ಲಿ ನಡೆಯಲಿದೆ. ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಜೊತೆಗೆ ಲಗತ್ತಿಸಲಾಗಿದೆ. ಸಮ್ಮೇಳನಕ್ಕೆ ಎಲ್ಲರಿಗೂ ಆದರದ ಸ್ವಾಗತ.



ಸ್ವತಂಸಂ ನ ಬಾಗಿಲು ಸರ್ವರಿಗೂ ಒಳಿತನ್ನು ಬಯಸುವ ಎಲ್ಲ ಒಳ್ಳೆಯ ಮನಸ್ಸುಗಳಿಗೆ ತೆರೆದಿದೆ. ತಂತ್ರಜ್ಞರು ಉದ್ಯಮಿಗಳು ಹಾಗೂ ಸಹೃದಯಿಗಳು ಸ್ವತಂಸಂ ಗೆ ತಂತ್ರಜ್ಞಾನದ ಮೂಲಕ ಹೊಸ ಚಿಂತನೆಗಳ ಮೂಲಕ ಕೊಡುಗೆಯನ್ನು ಸಲ್ಲಿಸಬಹುದು. ನಮ್ಮೊಡನೆ ದೇಶದ ಒಳಿತಿಗಾಗಿ ಕೆಲಸ ಮಾಡಲು ಇಚ್ಛಿಸುವ ಎಲ್ಲರಿಗೂ ಆದರದ ಸ್ವಾಗತ.

ಭಾನುವಾರ, ಸೆಪ್ಟೆಂಬರ್ 5, 2010

ನದಿಗಳ ಕಥೆಗಳ ದಿಟ,ಪ್ರಕಟೇಶ್ವರ ಮತ್ತು ಪೂಜಾ ಭಾತ್ರಾ ಟ್ರಾಜಿಡಿ!

ಶ್ರೀನಗರ ದಾಟಿ ಬಾಲಟಾಲ್ ಕಡೆ ಹೊರಡುವ ದಾರಿಯಲ್ಲಿ ಒಂದರ್ಧ ಗಂಟೆ ಮುಂದೆ ಸಾಗುತ್ತಿದ್ದಂತೆ ಕಾಣಸಿಗುತ್ತದೆ ಸಿಂಧೂ ನದಿ.



"ನೋಡ್ರಿ ಹರ್ಷ ಇದು ಸಿಂದೂ ನದಿ" ಅಂತ ಸುಧೀಂದ್ರ ತೋರಿಸದಾಗ ಅಕ್ಷರಶಃ ನನಗೆ ರೋಮಾಂಚನ. ಜುಳಜುಳನೆ ಹರಿಯುತ್ತ ಬರುತ್ತಿರುವ ನೀರಿನ ಹರಿವು ನೋಡಿ ನೋಡಿದಂತೆ ಪ್ರತೀ ಕೂದಲೂ ಎದ್ದು ನಿಂತಂತೆ!



ಸಾವಿರಾರು ವರ್ಷಗಳಿಂದ ಹತ್ತಾರು ನಾಗರೀಕತೆಗಳನ್ನು ಬೆಳೆಸಿ ಕೋಟ್ಟಯಂತರ ಜನರಿಗೆ ಬದುಕು ನೀಡಿ ತನಗೇನೂ ಗೊತ್ತೇ ಇಲ್ಲವೆಂಬಂತೆ ಬಳುಕುತ್ತಾ ಹರಿಯುತ್ತಾಳಲ್ಲ ಸಿಂಧೂ! ದೊಡ್ಡವರ ಲಕ್ಷಣವೇ ಇದೇ ಏನೋ. ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ನಂತರ ತಮಗೂ ತಮ್ಮ ಸಾಧನೆಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಬಿಡುತ್ತಾರಲ್ಲ. ಹಾಗೆಯೇ ಈಕೆ! ಯಾವುದೇ ಆರ್ಭಟಗಳಿಲ್ಲದೆ ತೆಳ್ಳಗೆ ಜುಳಜುಳನೆ ಹರಿಯುತ್ತಾ ಗಾಳಿಯನ್ನು ತಂಪಾಗಿಸುತ್ತಾ ಸಾಗಿ ಈಕೆ ಸಾವಿರಾರು ಎಕರೆ ನೆಲವನ್ನು ಹಸನಾಗಿಸುತ್ತಾಳೆ ಹಸಿರಾಗಿಸುತ್ತಾಳೆ. ನಂಬಲಸಾಧ್ಯ ಸಾಧನೆಗಳಿಗೆ ಬೆಳಕಾಗಿರುವ ಈಕೆ ಇಷ್ಟು ಸರಳವಾಗಿರುತ್ತಾಳಾ? ನಂಬಲಾಗುತ್ತಿಲ್ಲ. ಇಂಥದೊಂದು ಅಪನಂಬಿಕೆಯಿಂದಲೇ ಕಿಟಕಿಯ ಮೂಲಕ ಅರ್ಧ ಗಂಟೆ ನದಿಯ ಹರಿವನ್ನು ನೋಡಿದ್ದಾಯಿತು.



ಜಮ್ಮುವಿನಿಂದ ಬಾಲಟಾಲ್ ಗೆ ಹನ್ನೆರಡು ತಾಸಿನ ಹಾದಿ. ಆಗಲೇ ತಡವಾಗಿದೆ. ನೀರು ಕಂಡಕಂಡಲ್ಲಿ ಇಳಿಯುವ ನಮ್ಮ ತೆವಲಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ. ನಮ್ಮ ಅದೃಷ್ಟವೆಂಬಂತೆ ಚಾಲಕ ಟೀ ಗಾಗಿ ನಡುವೆ ನಿಲ್ಲಿಸಿದ. ನನಗೂ ಸುಧೀಂದ್ರನಿಗೂ ಟೀ ಕುಡಿಯುವ ಅಭ್ಯಾಸ ಇಲ್ಲ. "ಆಚೆ ಈಚೆ ಹೋಗಬೇಡ್ರಪ್ಪಾ ಆಗಲೇ ತಡವಾಯ್ತು!" ಅಂದರು ಗೆಳೆಯರೆಲ್ಲ.

"ಇಲ್ಲ ಇಲ್ಲ. ಎರಡೇ ನಿಮಿಷ ಸೂಸೂ ಮಾಡಿ ಬರ್ತಿನಿ" ಅಂತ ಓಡಿದರು. ಸುದೀಂದ್ರನ ಈ ಮಾತಿನ ಹಿಂದೆ ಯಾವುದೋ conspiracy ಯ ಜಾಡು ಹಿಡಿದ ನಾನು "ನಂಗೂ ಅವಸರವಾಗಿದೆ ಕಣ್ರೀ ಬಂದೆ" ಅಂತ ಹೇಳಿ ಹಿಂಬಾಲು ಹತ್ತಿದೆ. ಮೋಹನನಿಗೆ ಯಾರ ಬಳಿಯೂ ಯಾವ ಕಾರಣವನ್ನೂ ಹೇಳುವ ಅವಶ್ಯಕತೆ ಕಾಣಲಿಲ್ಲ ಸುಮ್ಮನೆ ನಮ್ಮ ದಾಪುಗಾಲಿನ ಹೆಜ್ಜೆಗಳನ್ನು ಹಿಂಬಾಲಿಸಿ ಬಂದರು.



ನಾನೆಣಿಸಿದಂತೆ ಸುದೀಂದ್ರ ಸೀದಾ ನದಿಗೆ ಇಳಿದರು. ಹಿಂದೆಯೇ ನಾವಿಬ್ಬರು. ತಣ್ಣಗೆ ಕೊರೆಯುವ ನೀರು. ತಳದಲ್ಲಿ ಹಾಸಲಾದ ನುಣುಪುಗಲ್ಲುಗಳ ಮೇಲೆ ಕೆಳಗೆ ಹಾರಿ ಜುಳಜುಳನೆ ಸದ್ದು ಮಾಡುತ್ತ ಹರಿಯುವ ಶುದ್ಧಜಲ. ಸುತ್ತಲೂ ಮಂಜುಕವಿದ ಬೆಟ್ಟಗಳು.

"ಹಾ ಹರ್ಷ! ಸೂರ್ಯನಿಗೆ ಅರ್ಘ್ಯ ಕೊಡ್ರೀ!" ಅಂದರು ಸುದೀಂದ್ರ.

"ಸೂರ್ಯನಿಗೆ ನಾವೇನ್ರೀ ಕೊಡೋದು ಇಷ್ಟೆಲ್ಲ ವನಿಂದನೇ ಪಡೀತಿರಬೇಕಾದರೆ?"

"ಸುಮ್ಮನ ಕೊಡಪಾ ನೀನು. ತಗಾ ಬೊಗಸೆ ನೀರು ತಗೋ" ಮೋಹನ ಉವಾಚ.



ಮೂರು ಸಾರಿ "ಓಂ ಭರ್ಬುವ ಸ್ವಃ.... .....ಪ್ರಥಮಾರ್ಘ್ಯಂ ಸಮರ್ಪಯಾಮಿ" ಹಾಗೆಯೇ ದ್ವಿತೀಯ ತೃತೀಯ....



"ಯಾವುದೂ ಹೇಳುತ್ತಿರಲಿಲ್ಲ ರೀ..ಇದು ಸಿಂಧೂ ನದಿ. ಇದರಲ್ಲಿ ನಿಂತು ಅರ್ಘ್ಯ ಕೊಡೋದರ ತೂಕನೇ ಬೇರೆ...!!!!"





ಭಾಗೀರಥಿಯನ್ನು ಭಗೀರತ ಭೂಮಿಗೆ ಕರೆತಂದಾಗ ಆಕೆ ವಿಪ್ಲವವಾಡಿದಳಂತೆ. ತನ್ನ ಪಾತ್ರದಲ್ಲಿ ಸಿಕ್ಕದ್ದನ್ನೆ ಕೊಚ್ಚಿಕೊಂಡು ನಡೆದಳಂತೆ. ಪ್ರಳಯ ಸೃಷ್ಟಿಯಾಯಿತಂತೆ. ಇದೆಲ್ಲ ಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಡಬಹುದು. ಕಥೆಯಲ್ಲಿ ಕೆಲವು ಸೂಕ್ಷ್ಮಗಳನ್ನು ಗಮನಿಸಿದಾಗ ಅದರಲ್ಲಿ ಅಡಗಿರುವ ಸತ್ಯಗಳು ಅಸ್ಪಷ್ಟವಾಗಿ ಕಾಣತೊಡಗುತ್ತವೆ. ಗಂಗೋತ್ರಿಯಲ್ಲಿ ಭಾಗೀರಥಿಯು ಹರಿಯುವ ವೇಗವನ್ನು ನೋಡಿದಾಗ ನನಗನ್ನಿಸಿದ್ದು ಹಾಗೆಯೇ. ಆ ವೇಗ ವಿಪ್ಲವಕಾರಿಯೇ ಸರಿ!

ಸೂರ್ಯಕುಂಡದಲ್ಲಿ ಗಂಗೆಯು ಭೋರ್ಗರೆಯುವ ವೇಗಕ್ಕೆ ಕೆಳಗಿನ ನೀರು ಕೊತಕೊತನೆ ಕುದಿಯುತ್ತಿರುವಂತೆ ಕಾಣುತ್ತದೆ. ಗೌರೀಕುಂಡದಲ್ಲಿ ಹರಿಯುವ ನೀರಿನಲ್ಲಿ ಮನುಷ್ಯನ ದೇಹವೇನಾದರೂ ಬಿದ್ದರೆ ಕೆಲವೇ ಕ್ಷಣಗಳಲ್ಲಿ ಅದು ಅಕ್ಕಪಕ್ಕದ ಬಂಡೆಗಳಿಗೆ ಅಪ್ಪಳಿಸಿ ಚೂರುಚೂರಾಗುವುದೇ ಸರಿ. ಈ ವೇಗ ವಿಪ್ಲವದ ಇನ್ನೊಂದು ರೂಪವಾಗಿ ಕಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ.



ಗಂಗೋತ್ರಿಯಿರುವುದು ಉತ್ತರಕಾಶಿ ಜಿಲ್ಲೆಯಲ್ಲಿ. ಉತ್ತರಕಾಶಿಯಿಂದ ಕೆದಾರದ ಕಡೆ ಹೊರಡುವಾಗ ನಟ್ಟನಡುವೆ ಪ್ರಕಟೇಶ್ವರ ಲಿಂಗ ಸಿಗುತ್ತದೆ.ಗಂಗೋತ್ರಿಯಿಂದ ಕೇದಾರಕ್ಕೆ ಹೊರಡುವ ದಾರಿಯಲ್ಲಿ ಪ್ರಕಟೇಶ್ವರ ಲಿಂಗವಿದೆ. ರಸ್ತೆಯಿಂದ ಎಡಕ್ಕೆ ಒಂದು ಕಿಲೋಮೀಟರು ಬೆಟ್ಟ ಹತ್ತಿ ಹೋಗಬೇಕು. ಪ್ರಕಟೇಶ್ವರ ಲಿಂಗವಿರುವುದು ಒಂದು ಚಿಕ್ಕ ಗುಹೆ. ಒಬ್ಬರ ಹಿಂದೊಬ್ಬರಂತೆ ಸಾಲಾಗಿ ಹೋಗಬೇಕು. ಗುಹೆಯ ಒಳಗೆ ಐದು ಜನ ಮಾತ್ರ ನಿಲ್ಲುವಷ್ಟು ಜಾಗೆಯಿದೆ.ಗುಹೆಯ ಒಳಗೆ ಮೊಳಕಾಲುದ್ದ ನೀರಿದೆ. ಶುದ್ಧ ಮತ್ತು ತಣ್ಣಗೆ ಕಾಲು ಕೊರೆಯುವಂತಹ ನೀರು! ಅದೇ ನೀರು ಹೊರಗೆ ಜಲಪಾತದಂತೆ ಬಂದು ಕೆಳಗೆ ಹರಿಯುವ ಮಂದಾಕಿನಿಯನ್ನು ಕೂಡುತ್ತದೆ. ಪ್ರಕಟೇಶ್ವರ ಗುಹೆಯು ಉಳುವಿಯ ಗುಹೆಗಳಂತೆ ಸುಣ್ಣದ ಕಲ್ಲಿನಿಂದ ನಿರ್ಮಾಣವಾದ ಗುಹೆ



ಎಂದಿನಂತೆ ಇದು ಭಾರತ ದೇಶವಾದುದರಿಂದ ಇದು ದೈವಿಕ ಮಹತ್ವವುಳ್ಳ ಪ್ರದೇಶವಾಗಿದೆ. ಒಂದು ಕಡೆ ಶಿವಲಿಂಗ ಅದರಮೇಲೆ ನೀರು ಬಿದ್ದು ಸುಣ್ಣದಕಲ್ಲು ಮುದುರಿ ರುದ್ರಾಕ್ಷಿಯಂತೆ ಕಾಣುವ ಕವಚ. ಹಿಂದೆ ಸುಣ್ಣದ ಕಲ್ಲು ಇಳಿಬಿದ್ದು ಸಾವಿರಾರು ಹೆಡೆಗಳುಳ್ಳ ಹಾವು. ಸಂಪೂರ್ಣ ಚಿತ್ರದಲ್ಲಿ ಸಾವಿರಾರು ಹೆಡೆಗಳ ಹಾವಿನಿಂದ ಬಳಸಲ್ಪಟ್ಟ ರುದ್ರಾಕ್ಷಿಯ ಕವಚ ತೊಟ್ಟ ಶಿವಲಿಂಗ ಇಲ್ಲಿದೆ. ಇದು ಪ್ರಕೃತಿಯಿಂದ ಉದ್ಭವಿಸಿದ ಮೂರ್ತಿ.



ಒಂದು ಕಿಲೋಮೀಟರು ನಡೆದು ಗುಹೆಯ ಹತ್ತಿರ ಬರುತ್ತಿದ್ದಂತೆ ಮಧ್ಯ ವಯಸ್ಸಿನ ಹೆಣ್ಣುಮಗಳು ಕೂತಿದ್ದರು. ತಮ್ಮ ಪರಿವಾರದವರಿಗಿಂತ ಮುಂದೆ ಬಂದು ಅವರಿಗಾಗಿ ಕಾಯುತ್ತಾ ಪಾಳಿ ಹಿಡಿದು ಕೂತಿದ್ದರು ಎನಿಸುತ್ತದೆ. ಅಲ್ಲಿ ಅಂತಹ ಹೇಳಿಕೊಳ್ಳುನಂತಹ ಜನಜಂಗುಳಿಯೂ ಇರಲಿಲ್ಲ. ಆ ಮಹಿಳೆಯನ್ನು ಗಮನಿಸದೇ ನಮ್ಮ ಪಾಡಿಗೆ ನಾನು ಮುಂದೆ ನಡೆದೆವು. ಗುಹೆವನ್ನು ಪ್ರವೇಶಿಸಬೇಕೆಂಬುವಷ್ಟರಲ್ಲಿ ಆಕೆಯಿಂದ ತಡೆಯ ಸೂಚನೆ ಬಂತು.



ನಮಗಿಂತ ಆಕೆಯು ಮೊದಲು ಬಂದಿದ್ದರಿಂದ ಆಕೆಗೆ ಮೊದಲು ಒಳಹೋಗಲು ಅವಕಾಶ ಕೊಡಬೇಕು ಎಂಬುದು ಆಕೆಯ ಆಶಯ. ನೀವು ಕ್ಯೂನಲ್ಲಿ ನಿಂತಿರಲಿಲ್ಲವಾದುದರಿಂದ ನಿಮಗಿಂತ ಮೊದಲು ನಾವು ಸಾಲಿನಲ್ಲಿ ನಿಂತಿದ್ದೆವಾದುದರಿಂದ ನಾವು ಮೊದಲು ಒಳಹೋಗಲು ಹಕ್ಕುದಾರರು ಎಂಬುದು ನಮ್ಮ ಸುದೀಂದ್ರನ ವಾದ. ಎರಡು ವಾಕ್ಯಗಳ ವಾದವಿವಾದ ನಡೆಯುತ್ತಿದ್ದಂತೆ ಆಕೆಯ ಪರಿವಾರ ಅಲ್ಲಿಗೆ ಬಂದು ಸೇರಿತು. ಗಟವಾಣಿಯರಿಗೆ ಗಂಡ ಯಾವಾಗಲೂ ಸಂಪನ್ನರೇ ಸಿಗುತ್ತಾರೆ ಎನ್ನಿಸುತ್ತದೆ ಅಥವಾ ಅವರು ಗಂಡನನ್ನು ಸಂಪನ್ನರನ್ನಾಗಿ ಮಾಡುತ್ತಾರೋ! ಗೊತ್ತಿಲ್ಲ. ಗಂಡನಿಗೆ ಸುಧೀಂದ್ರನ ವಾದದಲ್ಲಿ ಹುರುಳಿರುವಂತೆ ಕಾಣಿಸಿತು.

ಆದರೆ ನಾನು ಗಮನಿಸಿದ್ದನ್ನು ನಮ್ಮಲ್ಲಿ ಯಾರೂ ಗಮನಿಸಿರಲಿಲ್ಲ. ಆ ಗಟವಾಣಿ ಮಹಿಳೆಗೆ ಹದಿವಯಸ್ಸಿನ ಅವಳಿ ಜವಳಿ ಮಕ್ಕಳಿದ್ದರು. ಇಬ್ಬರೂ ಒಂದೇ ಥರ. ಥೇಟ್ ಸಿನಿಮಾ ನಟಿ ಪೂಜಾ ಭಾತ್ರಾ ಹಾಗೆ!(ಅಂದ ಹಾಗೆ ನನ್ನ ಮಟ್ಟಿಗೆ ಪೂಜಾ ಭಾತ್ರಾಳ ಮಹತ್ವ ಏನು ಎಂಬುದು ಬಹಳ ಕಡಿಮೆ ಜನರಿಗೆ ಗೊತ್ತು) ಕಣ್ಣೆದುರಿಗೆ ಇಬ್ಬರು ಪೂಜಾ ಭಾತ್ರಾಗಳು ಕಾಣುತ್ತಿರುವಂತೆ ನಾನು ಚುರುಕಾದೆ. ಸುಧೀಂದ್ರರನ್ನ ಹಿಂದೆ ಅಮುಕಿ ಥೇಟ್ ಪಾಂಡಾ ರಾವಲ್ ಶೈಲಿಯಲ್ಲಿ "ಜಾಯಿಯೇ ಮಾಜಿ ಜಾಯಿಯೇ, ಆಗೆ ಬಢಿಯೇ, ದರಸನ್ ಕಾ ಆನಂದ್ ಲೀಜಿಯೇ..!!!" ಅಂದುಬಿಟ್ಟೆ. ಇಡೀ ಪರಿವಾರ ಮುಂದೆ ಹೋಯಿತು. ಎರಡನೆಯ ಪೂಜಾ ಭಾತ್ರಾ ನನ್ನ ನೋಡಿ ನಸುನಕ್ಕಳು. ನಾನು ಹಿಗ್ಗಿಹೋದೆ.



ಸಾತ್ವಿಕ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ವಾದ ಮಂಡಿಸಿ ತಮ್ಮ ಹಕ್ಕನ್ನು ಸಾಧಿಸಹೊರಟಿದ್ದ ಸುಧೀಂದ್ರರಿಗೆ ಇದರಿಂದ ರಸಭಂಗವಾದಂತಾಯಿತು. ನನ್ನ ಉದಾರತೆಯ ಹಿನ್ನೆಲೆಯರಿಯದೇ ರೇಗಿದರು. ಹಿನ್ನೆಲೆಯರಿತಿದ್ದರೆ ಬಾಲಬ್ರಹ್ಮಚಾರಿಯಾಗಿದ್ದ ಅವರು ಇನ್ನೂ ರೇಗುತ್ತಿದ್ದರೋ ಏನೋ! ಸಮಯಾವಕಾಶ ಸಾಕಷ್ಟು ಇದ್ದರೂ, ತಡವಾಗಿ ಹೋದರೆ ತೊಂದರೆ ಇಲ್ಲದಿದ್ದರೂ ತಾತ್ವಿಕವಾಗಿ ತಮಗೆ ದೊರೆಯಬೇಕಾಗಿದ್ದ ಮುನ್ನೆಲೆ ದೊರಕದೇ ಹೋದದ್ದು ಸುಧೀಂದ್ರನಿಗೆ ಅಸಮಾಧಾನವಾಗಿತ್ತು. ಸುಂದರಿಯ ಕುಡಿನೋಟಕ್ಕೆ ಪಕ್ಕಾದ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

ಥೇಟ್ ಸಾಬರ ಶೈಲಿಯಲ್ಲಿ "ಬಾಹರ್ ಆಜಾವ್ ಮಾ" ಎಂದು ಅರಚುತ್ತಿದ್ದ ಮಹೇಶನ ಮೇಲೆ ಕರುಣೆ ತೋರಿಸಿ ಕಡೆಗೂ ಒಬ್ಬೊಬ್ಬರಾಗಿ ಗುಹೆಯಿಂದ ಹೊರಬರತೊಡಗಿದರು. ಕಟ್ಟಕಡೆಗೆ ನನ್ನೆಡೆಗೆ ಕುಡಿನೋಟ ಬೀರಿದ್ದ ಹದಿಹುಡುಗಿ ಮತ್ತೆ ಒಂದು ಸ್ಮೈಲ್ ಒಗೆದಳು. ನಾನೂ ತಿರುಗಿ ಒಗೆಯುತ್ತಿದ್ದಂತೆ "ಥ್ಯಾಂಕ್ಯೂ ಭೈಯಾ!" ಎಂದು ಹೇಳಿ ನಗೆಯನ್ನು ಮುಂದುವರಿಸಿ ನಡೆಯತೊಡಗಿದಳು.



ನನಗೆ ಇದ್ದಕ್ಕಿದ್ದಂತೆ ಸುಧೀಂದ್ರರು ಆ ಮಹಿಳೆಯ ಮುಂದೆ ಮಂಡಿಸುತ್ತಿದ್ದ ಸೈದ್ಧಾಂತಿಕ ವಿಚಾರಗಳಲ್ಲಿನ ಸತ್ಯದ ಬಗ್ಗೆ ನಂಬಿಕೆ ಮೂಡತೊಡಗಿತು!