ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಗುರುವಾರ, ಡಿಸೆಂಬರ್ 2, 2010

ಅವರು ಹೊರಟುಹೋದರು ಅಂತ ಅನ್ನಿಸುತ್ತಿಲ್ಲ!!!


ಬೆಳಗ್ಗೆ ನಾಲ್ಕಕ್ಕೆ ಸುಭಾಷನ ಫೋನ್ ಬಂದಾಗ ಕೆಟ್ಟ ಸುದ್ದಿಯೇ ಇರಬೆಕು ಅನ್ನಿಸಿತು.ಆದರೆ ಇಷ್ಟು ಕೆಟ್ಟ ಸುದ್ದಿ ಎಂದು ಎಣಿಸಿರಲಿಲ್ಲ.ರಾಜೀವ್ ದೀಕ್ಷಿತರು ಹೋದರೆಂಬ ಸುದ್ದಿಯನ್ನು ಈಗಲೂ ನಂಬಲಾಗುತ್ತಿಲ್ಲ. ಅನೇಕರು ಫೋನ್ ಸ್ವಿಚ್ ಆಫ್ ಮಾಡಿಕೊಂಸು ಅಳುತ್ತಾ ಕೂತಿದ್ದಾರೆ. ದಿಕ್ಕು ತೋಚದಂತೆ ಕೂತಿದ್ದಾರೆ. ಶೂನ್ಯವೊಂದು ಮನವನ್ನು ಆವರಿಸಿದೆ.



ಹತ್ತು ವರ್ಷಗಳಿಂದ ರಾಜೀವ ದೀಕ್ಷಿತರ ಒಡನಾಡುವ, ಅನೇಕ ತಾಣಗಳಿಗೆ ಅವರೊಟ್ಟಿಗೆ ಪ್ರವಾಸ ಹೋಗುವ ಪುಣ್ಯವನ್ನು ಒದಗಿಸಿದ ದೇವರಿಗೆ ಸಹಸ್ರ ನಮನಗಳು. ರಾಜೀವ್ ದೀಕ್ಷಿತ್ ನಾನು ನೋಡಿದ ಅದ್ಭುತ ವ್ಯಕ್ತಿಗಳಲ್ಲೊಬ್ಬರು. ಅವರ ನೆನಪಿನ ಶಕ್ತಿ ಅಗಾಧ. ಯೋಚಿಸುವ ವೇಗ ಅಮೋಘ, ಭೂಮಿಯಷ್ಟು ಸಹನೆ, ಅವರು ಹೇಳಿದ್ದೆಲ್ಲ ಕರಾರುವಾಕ್ಕಾಗಿ ನಡೆಯುತ್ತದೆ! ವಾಕ್ ಸಿದ್ಧಿ ಪಡೆದಿರಬಹುದಾ ಎಂಬ ಅನುಮಾನ ಅನೇಕರಿಗೆ!



ನಮ್ಮದೊಂದು ಹುಡುಗರ ತಂಡ ರಾಜೀವ್ ಭಾಯಿಗೆ ಅತ್ಯಂತ ಪ್ರಿಯವಾಗಿತ್ತು. ನಮ್ಮ ಗುಂಪಿನಲ್ಲಿ ರಾಜಿವ್ ಭಾಯಿಗೆ ಅತಿಯಾಗಿ ತಲೆ ತಿಂದವನು ನಾನೇ! ನನ್ನ ನೂರು ಪ್ರಶ್ನೆಗಳಿಗೆ ಉಪಪ್ರಶ್ನೆಗಳಿಗೆ ಅತ್ಯಂತ ಸಹನೆಯಿಂದ ಉತ್ತರಿಸುತ್ತಿದ್ದರು. ಸಾಕ್ಷಿ ಕೇಳಿದಾಗೆಲ್ಲ ಸಾಕ್ಷಿ ಸಿದ್ಧವಾಗಿರುತ್ತಿತ್ತು. ರಾಜೀವ್ ಭಾಯಿ ಹೇಳಿದರೆ ಅದು ’ಅಥೆಂಟಿಕ್’ ಎಂಬುದೇ ನಮ್ಮ ನಂಬುಗೆಯಾಗಿತ್ತು. ಅವರಿಗೆ ಆಜಾದಿ ಬಚಾವೋ ಆಂದೋಲನದ ಎಲ್ಲ ಕಾರ್ಯಕರ್ತರ ಹೆಸರು ನೆನಪಿರುತ್ತಿತ್ತು.



ಆಂದೋಲನದ ಎಲ್ಲ ಹುಡುಗರಲ್ಲಿ ಕೆಲವು ಬೇಷರತ್ ಸಾಮ್ಯಗಳಿದ್ದವು. ತಿಂಡಿಪೋತತನ, ಊರೂರು ಸುತ್ತುವ ಚಟ, ಹೊತ್ತಗೆ ಓದುವುದು, ಶಾಸ್ತ್ರೀಯ ಸಂಗೀತ ಕೇಳುವುದು. ಇವೆಲ್ಲ ಚಾಳಿಗಳು ರಾಜೀವ ದೀಕ್ಷಿತರಿಗೆ ಇದ್ದವು. ಇದಕ್ಕಿಂತ ಹೆಚ್ಚಾಗಿ ರಾಜೀವ್ ಭಾಯಿಯನ್ನು ವಯಕ್ತಿಕವಾಗಿ ಅರಿಯಲು ನಾವು ಯತ್ನಿಸಲಿಲ್ಲ. ಏಕೆಂದರೆ ನಾವು ದೀಕ್ಷಿತರನ್ನು ಒಬ್ಬ

ಮನುಷ್ಯನನ್ನಾಗಿ ನೋಡುವದಕ್ಕಿಂತ ಒಂದು ತತ್ವವನ್ನಾಗಿ ನೊಡುತ್ತಿದ್ದೆವು. ರಾಜಿವ್ ದಿಕ್ಷಿತರ ಮೇಲೆ ಹೆಚ್ಚಿನ ಪ್ರಭಾವ ಬೀರಿದವರು ಗಾಂಧಿಜಿ ಹಾಗೂ ಬಸವಣ್ಣ.



ಈಗಲೂ ರಾಜೀವ್ ದಿಕ್ಷಿತರು ಮರಣಿಸಿಲ್ಲ ಎಂದು ಅನಿಸುತ್ತಿರುವುದು ಇದೇ ಕಾರಣಕ್ಕೆ! ಮನುಷ್ಯ ಸಾಯಬಹುದು, ವಿಚಾರ ಸತ್ತೀತೆ? ಚಿಂತನೆ ಸತ್ತೀತೆ? ತತ್ವ ಸತ್ತೀತೆ?

ಒಂದು ದೇಹವಾಗಿ ರಾಜಿವ್ ದೀಕಿತ್ ಇನ್ನಿಲ್ಲ. ತತ್ವಗಳು ಇನ್ನೂ ಜೀವಂತವಾಗಿವೆ.



ರಾಜೀವ್ ಭಾಯಿ ಹೇಳಿದ ಹಾದಿಯಲ್ಲಿ ನಡೆವ ಹುಡುಗರಿಗೆ ಮಾರ್ಗದರ್ಶಕ ಇಲ್ಲದಂತಾಗಿದೆ. ಬಾಬಾ ರಾಮದೇವರ ಮೆದುಳೇ ಆಗಿದ್ದವರು ರಾಜೀವ್ ಭಾಯಿ. ಅನೇಕರ ಜೀವನಕ್ಕೆ ಹೊಸ ತಿರುವು ಕೊಟ್ಟವರು. ಇಷ್ಟು ದಿನ ಯಾವುದೇ ಕೆಲಸಕ್ಕೆ ಮುನ್ನ ರಾಜೀವಣ್ಣನಿಗೆ ಕರೆ ಮಾಡಿ ಹಿಂಗೆ ಮಾಡಿದರೆ ಹೆಂಗೆ ಎಂಬ ಸಲಹೆ ಪಡೆಯುತ್ತಿದ್ದೆವು. ಅವರು ತೋರಿಸಿದ ಮಾರ್ಗ ಇದೆಯಾದರೂ ಮಾರ್ಗದರ್ಶನ ಮಾಡಲು ದೈಹಿಕವಾಗಿ ಅವರಿಲ್ಲ.



ರಾಜೀವಣ್ಣನ ಹಿಂದೆ ನಡೆದು ಸಮಾಜಸೇವೆಗೆ ಮುಂದಾದ ಹುಡುಗರು ಅನೇಕ. ಶೈಲೇಶ ಗೋಶಾಲೆ ಸ್ಥಾಪಿಸಿದರು, ಅಲ್ಲಿ ಪರ್ಯಾಯ ಇಂಧನದ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಹರೀಶಣ್ಣ ವಿಷದ ಸೂಜಿಗಳು, ಗಣಪತಿ ಪೂಜೆ ಮಾಡಿ ಏಡ್ಸ್ ನಿಂದ ದೂರವಿರಿ ಹೊತ್ತಗೆಗಳಿಗೆ ರಾಜೀವಣ್ಣನೇ ಸ್ಪೂರ್ತಿ, ಐತಾಳ್, ಸುಭಾಷ್, ಮಯ್ಯ ಸಾವಯವ ಕೃಷಿ ಉತ್ಪನ್ನಗಳನ್ನು ಜನರಿಗೆ ತಲುಪಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ, ತೆರಕಣಾಂಬಿಯ ಹುಡುಗರು ಪಟ್ಟಣ ಬಿಟ್ಟು ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ, ಕುಮಟಾದ ಗಣೇಶ್ ಭಟ್ಟರು ಸಾವಯವ ಕೃಷಿಯ ಜೊತೆಗೆ ಬೀಜ ಬ್ಯಾಂಕ್, ಹಳ್ಳಿಗರಲ್ಲಿ ಜಾಗೃತಿ, ಗೋಶಾಲೆಗಳನ್ನು ನಡೆಸುತ್ತಿದ್ದಾರ. ಹಳ್ಳಿಗಳಲ್ಲಿ ಸ್ವದೇಶಿ ತಂತ್ರಜ್ಞಾನ ಪಸರಿಸಲು ನಾನು ಮತ್ತು ಸಂಪತ್ ಹುಟ್ಟು ಹಾಕಿದ ಸ್ವದೇಶಿ ತಂತ್ರಜ್ಞರ ಸಂಘಕ್ಕೆ ಮೂಲ ಹಾರೈಕೆ ರಾಜೀವ್ ದೀಕ್ಷಿತರದು.ಅಷ್ಟೇ ಏಕೆ ಬಾಬಾ ರಾಮದೇವರು ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ಸ್ಪರ್ತಿಯಾಗಿದ್ದಾರೆ ರಾಜೀವ್ ದೀಕ್ಷಿತ್. ಬಿಜಾಪುರದ ಸಾತ್ವಿಕ ಸನ್ಯಾಸಿ ಸಿದ್ದೇಶ್ವರ ಸ್ವಾಮಿಗಳ ವಯಕ್ತಿಕ ಕೋಣೆಯಲ್ಲಿ ರಾಜೀವ್ ಭಾಯಿಯ ಫೋಟೋ ಇದೆ.



ಕಡೆಗಾಲದಲ್ಲಿ ಆಸ್ಪತ್ರೆಯಲ್ಲಿ ವಿದೇಶಿ ಔಷಧಿ ಸೇವಿಸಲು ನಿರಾಕರಿಸಿ ಸಾವಿನಲ್ಲೂ ಸ್ವದೇಶಿ ತತ್ವಪ್ರೇಮ ಮೆರೆದವರು ರಾಜೀವಣ್ಣ. ಅವರ ಔಷಧಿಗಳಿಂದ ಅನೇಕರು ಮಾನಸಿಕ ಹಾಗೂ ದೈಹಿಕ ಖಾಯಿಲೆಗಳಿಂದ ಗುಣಮುಖರಾಗಿ ಹೊಸ ಜೀವನ ಕಂಡುಕೊಂಡಿದ್ದಾರೆ.



ರಾಜೀವಣ್ಣ ನಮ್ಮನ್ನು ಬಿಟ್ಟು ಹೋದರೂ ನಾವು ಅನಾಥರಲ್ಲ. ಯಾಕೆಂದರೆ ಅವರು ತೋರಿಸಿದ ದಾರಿಯಿದೆ. ಹೇಳಿಕೊಟ್ಟ ತತ್ವಗಳಿವೆ. ಅವರ ಆಶರ್ವಾದ ಎಂದಿಗೂ ನಮ್ಮ ಮೇಲಿರುತ್ತದೆ.

1 ಕಾಮೆಂಟ್‌:

Prabhu ಹೇಳಿದರು...

ನಿಮ್ಮ "ವಿಷದ ಸೂಜಿಗಳು" ಪುಸ್ತಕವನ್ನು ಬೆಂಗಳೂರಲ್ಲಿ ಹುಡುಕಾಡದ ಪುಸ್ತಕ ಮಳಿಗೆಗಳಿಲ್ಲ. ನಾನು ನಿಮ್ಮನ್ನ ಭೇಟಿಮಾಡಿದ್ದು ಭೇಟಿಮಾಡಿದ್ದು ಬೀದರನ ಪಾಪನಾಶಿನಿಯಲ್ಲಿ ರಾಜೀವಣ್ಣನವರ ತರಬೇತಿಯಲ್ಲಿ 2005-06 ರಲ್ಲಿ. ಆ ಕ್ಷಣವೇ ನಿಮ್ಮ ಪುಸ್ತಕ ವಿಷದ ಸೂಜಿಗಳು ಕೊಂಡದ್ದು.ದಯವಿಟ್ಟು ಆ ಪುಸ್ತಕದ ಒಂದು ಪ್ರತಿಯಿದ್ದಲೀ ದಯವಿಟ್ಟು ನನಗೆ ನೀಡಿರಿ. ಅಥವಾ Soft Copy ನೀಡಿ i'll make print and gift to the people. as i'm working in software company people really argue with me about the injection and pulse polio. But i ll stop there itself to give evidence to them. Please Provide me any thing soft copy or Hard copy is fine for me. my mail Id is oprabu@gmail.com