ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶನಿವಾರ, ಜನವರಿ 31, 2009

"ಕರ್ತವ್ಯಂ ದೈವಮಾಹ್ನಿಕಂ !!!!"

ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ ಮುಖದಲ್ಲಿದ್ದ ತುಂಟನಗೆಯನ್ನು ನೋಡಿ ನನ್ನನ್ನು ಪರೀಕ್ಷಿಸುವುದರಲ್ಲಿದ್ದಾರೆ ಎಂಬುದು ನನಗೆ ಹೊಳೆಯಿತು. ಅದರಲ್ಲೊಬ್ಬರು ’ನಿನ್ನ ಮಂಜಾಳಾಗ’ ಅಂತಾರಲ್ಲ ಹಾಗೆಂದರೇನು ? ಎಂದು ಕೇಳಿದ್ದರು.
ಅದಕ್ಕೆ ವೆಂಕಟಸುಬ್ಬಯ್ಯನವರು ಇದು ಉತ್ತರ ಕರ್ನಾಟಕದ ಶಬ್ದ. ನಿನ್ನ ಮನೆ ಜೋಳವಾಗ. ಜೋಳವಾಗುವುದು ಎಂದರೆ ನಾಶವಾಗುವುದು ಎಂದೆಲ್ಲಾ ವಿವರಣೆ ಕೊಟ್ಟಿದ್ದರು.
"ಇದು ಹೀಗಲ್ಲ" ಎಂದೆ ನಾನು. ಅದು "ನಿನ್ ಮನೆ ಜಾಳವಾಗ ಆಗಬೇಕು" ಅಂದೆ.
ಜಾಳವಾಗುವುದು ಅಂದರೆ ಸ್ವಚ್ಚವಾಗುವುದು ಅಂತ ಅರ್ಥ. "ವಿಷಯ ಜಾಳ ಅಯ್ತಾ?" ಅಂದರೆ ವಿಷಯ ತಿಳಿಯಾಯಿತೆ (ಅರ್ಥವಾಯಿತೆ?) ಎಂಬರ್ಥ ಬರುತ್ತದೆ. ಮನೆ ಜಾಳವಾಗಲಿ ಅಂದರೆ ಸರ್ವವೂ ಸ್ವಚ್ಚವಾಗಿ ಹೋಗಲಿ ಅಂದರೆ ನಾಶವಾಗಿ ಹೋಗಲಿ ಎಂಬ ಅರ್ಥ ಬರುತ್ತದೆ. ಇದೇ ರೀತಿಯ ಅನೇಕ ವಿಶ್ಲೇಷಣೆಗಳನ್ನು ’ಇಗೊ ಕನ್ನಡ’ದಲ್ಲಿ ನೋಡಿದ್ದೇನೆ. ಬಹುಷ: ಕೋಶವನ್ನರಗಿಸಿಕೊಂಡರೂ ದೇಶವನ್ನು ಸುತ್ತದ ಪರಿಣಾಮ ಇದು ಎನ್ನಬಹುದೇನೋ ?

ಇತ್ತೀಚೆಗೆ ತೀರ ಕಿರಿಕಿ ಉಂಟು ಮಾಡುತಿರುವ ಶಬ್ದ " ವಿಕಲಚೇತನರು"! ಫಿಸಿಕಲಿ ಚಾಲೆಂಜ್ಡ್ ಎಂಬುದಕ್ಕೆ ಪರ್ಯಾಯವಾಗಿ ಕನ್ನಡಕ್ಕೆ ವಿಶ್ವೇಶ್ವರ ಭಟ್ಟರ ಕೊಡುಗೆ ಇದು. ವಿಕಲಾಂಗರಿಗಾಗಿ ಹೊಸ ಶಬ್ದ ಹುಡುಕಲು ತೆಗೆದುಕೊಂಡ ಶ್ರಮವನ್ನು ವಾರಗಟ್ಟಲೆ ತಮ್ಮ ಅಂಕಣದಲ್ಲಿ ವಿಶದಿಸಿದ್ದರು ಭಟ್ಟರು . ಕೊನೆಗೆ ವೆಂಕಟಸುಬ್ಬಯ್ಯನವರ ಸಹಾಯದಿಂದ ವಿಕಲಚೇತನರು ಎಂಬ ಪದವನ್ನು ಟಂಕಿಸಿದರು. ಅವರ ಪ್ರಯತ್ನವೇನೋ ಪ್ರಶಂಸಾರ್ಹವೇ! ಆದ್ರೆ ತಾರ್ಕಿಕವಾಗಿ ನೋಡುವುದಾದರೆ ಇಂಗ್ಲಿಶ್ ನಲ್ಲಿ ಹ್ಯಾಂಡಿಕ್ಯಾಪ್ಡ್ ಎಂಬುದಕ್ಕೆ ಬದಲಾಗಿ ಚಾಲೆಂಜ್ಡ್ ಎಂಬ ಪದ ಬಂತು; ಕನ್ನಡದಲ್ಲಿ ವಿಕಲ ಮಾಯವಾಗಿ ಪರ್ಯಾಯ ಪದ ಬರಬೇಕಿತ್ತು. ಆದರೆ ಅಂಗದ ಬದಲಾಗಿ ಚೇತನ ಬಂತು. ಮೊದಲು ಅಂಗ ಮಾತ್ರ ವಿಕಲವಾಗಿತ್ತು ಈಗ ಚೇತನವೇ ವಿಕಲವಾಗಿಬಿಟ್ಟಿತು !

ಇನ್ನೊಂದು ಶಬ್ದ "ವಿಪರೀತ"! ’ವಿಪರೀತ’ ಮೂಲತಃ ಸಂಸ್ಕೃತ ಶಬ್ದ. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಶಬ್ದಗಳು ಅಪಭ್ರಂಶವಾಗುವುದು ಸಹಜ. ಆದರೆ ಇಲ್ಲಿ ಅರ್ಥವೇ ಅಪಭ್ರಂಶವಾಗಿದೆ. ವಿಪರೀತ ಎಂದರೆ ವಿರುದ್ಧ ಎಂದರ್ಥ. ’ವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ’ ವಿರುದ್ಧವಾದ ಬುದ್ಧಿ ಎಂದು ಅರ್ಥ. ಅತಿಯಾದ ಬುದ್ಧಿ ಎಂದಲ್ಲ. ಪರಿಸ್ಥಿತಿ ನಮಗೆ ವಿಪರೀತವಾಗಿದೆ ಎಂದರೆ ಪರಿಸ್ಥಿತಿ ನಮ್ಮ ಅನುಕೂಲಕ್ಕೆ ವಿರುದ್ಧವಾಗಿದೆ ಎನ್ನಬಹುದು. ಪ್ರಕೃತಿ ವೈಪರೀತ್ಯ ಅಂದರೆ ಪ್ರಕೃತಿಯ ಅನನುಕೂಲವಾದ ಸ್ಥಿತಿ ಎಂದು ಅರ್ಥೈಸಬಹುದು.

ಶಬ್ದಗಳಿಗೆ ಮಾತ್ರವಲ್ಲ ಪದ್ಯಗಳಿಗೂ ಈ ರೀತಿಯ ಗತಿ ಒದಗಿದೆ. ಅದರಲ್ಲೊಂದು ಸರ್ವಜ್ಞ ನ ಈ ವಚನ:

ಬರೆಯದೆ ಓದುವವನ ಕರೆಯದೇ ಬರುವವನ
ಬರಿಗಾಲಲ್ಲಿ ನಡೆವವನ
ಕರೆತಂದು ಕೆರದಿಂದ ಹೊಡೆಯ ಸರ್ವಜ್ಞ.

ಮನೆಗೆ ಕರೆಯದೇ ಬರುವವನನ್ನೆ ಅತಿಥಿ ಎಂದು ಕರೆಯುವುದು. ತಿಥಿ ನಕ್ಷತ್ರಗಳನ್ನು ನೋಡದೇ ಬರುವವನೇ ಅತಿಥಿ. ಅತಿಥಿ ದೇವೋಭವ ಎಂದು ನಮ್ಮ ಸಂಸ್ಕೃತಿಯೇ ಹೇಳುವಾಗ ಸರ್ವಜ್ಞನಂತಹ ಅನುಭಾವಿ ಇಂತಹ ಮಾತನ್ನೇಕೆ ಹೇಳುತ್ತಾನೆ? ಅಲ್ಲದೇ ಸರ್ವಜ್ಞನ ಕಾಲದಲ್ಲಿ ಬರಹದ ಸಾಧನಗಳೂ ಕಡಿಮೆ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದವರೂ ಕಡಿಮೆ. ಬರವಣಿಗೆಯ ಸಾಧನಗಳ ಅವಶ್ಯಕತೆ ಹೆಚ್ಚಾದದ್ದೇ ನೆನಪಿನ ಶಕ್ತಿ ಕಡಿಮೆಯಾಗತೊಡಗಿದಂದಿನಿಂದ ಇಂತಹ ಪದ್ಯ ಸರ್ವಜ್ಞನ ಬತ್ತಳಿಕೆಯಿಂದ ಬಂದದ್ದೇಕೆ ? ಎಂಬುದು ತುಂಬಾ ಹಳೆಯ ಪ್ರಶ್ನೆ. ಇದಕ್ಕೆ ಉತ್ತರ ದೊರಕಿಸಿಕೊಟ್ಟವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರೊಫ಼ೆಸರ್ ಡಾ.ಚಂದ್ರಶೇಖರ ವಸ್ತ್ರದರವರು. ಮೂಲ ಹೀಗಿದೆ.

ಬರೆಯದವನ ಓದದವನ ಬರಿಗಾಲಲ್ಲಿ ನಡೆವವನ
ಕರೆಯದೇ ಬರುವವನ ನೆನೆವವನ
ಕರೆತಂದು ಕರಮುಗಿಯ ಸರ್ವಜ್ಞ.

ಇದು ಚಂದೋಬದ್ಧವಾಗಿಯೂ ಸರಿಯಾಗಿದೆ ಅರ್ಥಬದ್ಧವಾಗಿಯೂ ಸರಿಯಾಗಿದೆ. ಇಲ್ಲಿ ಕರೆಯದೇ ಬರುವವನು ಮಳೆರಾಯ. ಬರೆಯದವನು, ಓದದವನು, ಬರಿಗಾಲಲ್ಲಿ ನಡೆವವನು, ಮಳೆರಾಯನನ್ನು ನೆನೆಯುವವನು ರೈತ. ಅನ್ನದಾತನಿಗೆ ಕೈಮುಗಿ ಎನ್ನುತ್ತಿದ್ದಾನೆ ಸರ್ವಜ್ಞ. ! ಅಪಭ್ರಂಶ ಮಾಡುವವನಿಗೆ ಕೆರದಿಂದ ಹೊಡೆಯ !

ಇನ್ನೊಂದು ಇದೇ ರೀತಿಯ ಪದಗುಚ್ಚ "ಕರ್ತವ್ಯಂ ದೈವಮಾಹ್ನಿಕಂ". ಎಲ್ಲರೂ ತಿಳಿದುಕೊಂದಿರುವ ಅರ್ಥ ಕರ್ತವ್ಯವೇ ದೇವಪೂಜೆ ಎಂದು. ಅರ್ಥವತ್ತಾಗಿ ಇದು ಸರಿಯಾಗಿಯೇ ಇದೆ. ಸಂದರ್ಭವತ್ತಾಗಿ ಇನ್ನೊಂದು ಅರ್ಥ ಬರುತ್ತದೆ. ಅಂದರೆ ಅರ್ಥೈಸುವಾಗ ದೈವಮಾಹ್ನಿಕಂ ಕರ್ತವ್ಯಂ (ದೈವಪೂಜೆಯನ್ನು ಮಾಡಬೇಕು)ಎಂದು ಅರ್ಥೈಸಬೇಕು. ಉತ್ತಿಷ್ಠ ನರಶಾರ್ಧೂಲ ಕರ್ತವ್ಯಂ ದೈವಮಾಹ್ನಿಕಂ. "ಎದ್ದೇಳು ನರಹುಲಿಯೇ ಕರ್ತವ್ಯವೇ ದೇವರು" ಎಂಬುದಕ್ಕೂ "ಎದ್ದೇಳು ನರಹುಲಿಯೇ ದೈವಪೂಜೆಯನ್ನು ಮಾಡಬೇಕು" ಎಂಬುದನ್ನು ಹೋಲಿಸಿ ನೋಡಿದಾಗ ಸಂದರ್ಭಾನುಸಾರವಾಗಿ ದೈವಮಾಹ್ನಿಕಂ ಕರ್ತವ್ಯಂ ಎನ್ನುವುದು ಸರಿಯಾದ ಬಳಕೆ. ಕರ್ತವ್ಯಂ ಎನ್ನುವುದು ’ಕೃ’ ಎಂಬ ಧಾತುವಿನಿಂದ ಬಂದದ್ದು. ತವ್ಯತ್ ಪ್ರತ್ಯಯ ಸೇರಿ ಕರ್ತವ್ಯಂ ಎಂದಾಗಿದೆ. ಪ್ರತ್ಯಯಗಳು ಬಹುತೇಕ ಉಪಯೋಗವಾಗುವುದು ವ್ಯಾಕರಣಾಬದ್ಧ ಬಳಕೆಯಲ್ಲಿ ಲೋಪ ಬಂದಾಗ. ಭಾಷೆಯ ಬೆಳವಣಿಗೆಯ ನಂತರ ವ್ಯಾಕರಣ ರಚನೆಯಾದ ಕಾರಣ ಈ ರೀತಿಯ ಲೋಪ ಕಂಡು ಬರುತ್ತವೆ. ಹಾಗಾಗಿ ಪ್ರತ್ಯಯಗಳು ವೈಜ್ಞಾನಿಕವಾದ ಭಾಷಾಬಳಾಕೆಯಲ್ಲ ಎಂಬುದು ಪಂಡಿತರ ಹೇಳಿಕೆ. ( ಇದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದಲ್ಲಿ ಕೇಳಿದ್ದು).

ಇನ್ನೊಂದು ಪದ ನಿಟ್ಟುಸಿರು. ಇದು ಅಚ್ಚ ಕನ್ನಡದ ಶಬ್ದ. ಅರ್ಥ ಎಲ್ಲರಿಗೂ ಗೊತ್ತಿರುವುದೇ. ಪದವಿಂಗಡನೆ ಮಾಡಿದಾಗ "ನಿಡಿದಾದ ಉಸಿರು". ನಮ್ಮ ಮೇಷ್ತ್ರೊಬ್ಬರು ಇದನ್ನು ನಿಟ್ಟ ಉಸಿರು ಎಂದು ಬಿಡಿಸಿ ನಗೆಪಾಟಲಿಗೀಡಾಗಿದ್ದರು.
ಮತ್ತೊಂದು ಉದ್ಯಾನವನ. ಸ್ವತಃ ತಾವೇ ವಿಹರಿಸಲು ಮಾನವರು ನಿರ್ಮಿಸಿಕೊಂಡ ವನಕ್ಕೆ ಉದ್ಯಾನ ಎಂದು ಹೆಸರು. ಉದ್ಯಾನ ಸಾಕು. ಉದ್ಯಾನ ಎಂದರೂ ಕಾಡು (ಮಾನವನಿರ್ಮಿತ) ವನ ಎಂದರೂ ಕಾಡು. ಎರಡು ಬಾರಿ ಉಚ್ಚರಿಸುವುದು ಎಂಥದು? ಹಣ್ಣು + ಫಲ ಆಡು ಮಾತಲ್ಲಿ ಹಂಪಲು ಆಗಿದೆ. ಈಗ ಹೇಳಿ "ಹಣ್ಣು ಹಂಪಲು" ಸರಿಯಾದ ಬಳಕೆಯೇ?

ಬುಧವಾರ, ಜನವರಿ 28, 2009

ಉದರನಿಮಿತ್ಥಂ ......

ಷಡಕ್ಷರಮೂರ್ತಿಯವರ ಆರ್ಕುಟ್ ಪ್ರೊಫೈಲ್ ನಲ್ಲಿ ಕಂಡ ವಿಡಿಯೋ ಇದು. ಈ ಪುಣ್ಯಾತ್ಮನಿಗೆ ಇಂತಹ ವಿಡಿಯೋಗಳು ಹೇಗೆ ಸಿಗುತ್ತವೋ ಗೊತ್ತಿಲ್ಲ. ಹಿಂದೆಯೂ ಇದೆ ತರಹದ ವಿಡಿಯೋಗಳನ್ನು ಹಾಕಿದ್ದಾರೆ. ಈ ಬಾರಿಯದು ನಿಜಕ್ಕೂ ಸುಪರ್ಬ್. ವಿಜಯ ಕರ್ನಾಟಕದಲ್ಲಿ ನಡೆದ ಮತಾಂತರ ಚರ್ಚೆಯನ್ನು ಚೆನ್ನೈಲಿದ್ದ ನನಗೆ ಸ್ಕ್ಯಾನ್ ಮಾಡಿ ಕಳುಹಿಸಿ ಉಪಕಾರ ಮಾಡಿದ್ದರು. ಥ್ಯಾಂಕ್ಸ್ ಮೂರ್ತಿ!


ಪ್ರತಿಭೆಗಳು ಎಲ್ಲೆಲ್ಲಿರುತ್ತವೆ ಅಂತ ಹೇಳೋಕಾಗಲ್ಲ. ಈ ಹುಡುಗರ ಇಂಗ್ಲಿಶ್ ವ್ಯಾಕರಣಬದ್ಧವಾಗಿದೆ ಎನ್ನಲಾರೆ. ಆದರೆ ಕೇಳುಗರಿಗಂತೂ ಅರ್ಥವಾಗುತ್ತದೆ. ನನ್ನ ಸಾಫ್ಟ್ವೇರ್ ಸಹಯೋಗಿಗಳಿಗಿಂತಲೂ ಇವರ ಭಾಷೆ ಚೆನ್ನಾಗಿದೆ. ಕೇವಲ ಪ್ರವಾಸಿಗರೊಡನೆ ಮಾತಾಡಿ ಬಹುತೇಕ ಎಲ್ಲ ಯುರೋಪಿಯನ್ ಭಾಷೆಗಳನ್ನು ಮಾತಾಡುವ ಮಕ್ಕಳು ಇವು . ಅಪ್ಪನ ಬಳಿ ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ದೇಶದ ಕಸುವಾಗಿರಬೇಕಿದ್ದ ಇಂಥ ಪ್ರತಿಭೆಗಳು ಕಸವಾಗಿರುವುದು ಎಂಥ ದುರಂತ!!!!




ಗುರುವಾರ, ಜನವರಿ 22, 2009

ಕರ್ನಾಟಕ ಸಂಗೀತ ಎಂದೇ ಹೇಳಿ ...



ಕುನ್ನುಕ್ಕುಡಿಯವರ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿ ಹಂಸಾನಂದಿಯವರು ತುಸು ಬೇಸರಿಸಿಕೊಂಡೇ ಕಾರ್ನಾಟಿಕ್ ಪದಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ನನ್ನ ಮಾಹಿತಿಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾದ ಅಗತ್ಯ ತೋರಿತು. ಕೂಡಲೆ ದಾಖಲೆಗಳನ್ನು, ಸಾಕ್ಷ್ಯಗಳನ್ನು ಕಲೆಹಾಕಲು ಹುಡುಕಲು ಶುರುಮಾಡಿದೆ. ನಡುವೆ ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆ, ಬೆಳಗೆರೆ, ಸೇವಾಗ್ರಾಮ, ಚಿಕ್ಕಮಗಳೂರು, ತಿರುವಯ್ಯಾರ್ ಪ್ರವಾಸಗಳಿಂದಾಗಿ ಕೆಲಸ ತಡವಾಯಿತು. ಚೆನ್ನೈನ ರಣಬಿಸಿಲಿನಿಂದ ಬೆಂಗಳೂರಿನ ರಕ್ಕಸ ಚಳಿಗೆ ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಸಮಯವೇ ಬೇಕಾಯಿತು.
ಎರಡೂ ರೀತಿಯ ಹೆಸರುಗಳಿಗೂ ದಾಖಲೆಗಳು ಸಿಕ್ಕಿದವು. ಕೆಲಸ ಇನ್ನೂ ಮುಗಿದಿಲ್ಲ. ಸಿಕ್ಕಷ್ಟು ಹೇಳುತ್ತಿದ್ದೇನೆ.


ಸಧ್ಯಕ್ಕೆ ಕಾರ್ನಾಟಿಕ್ ಗಿಂತ ಕರ್ನಾಟಕ ಎಂಬ ಕಡೆಗೇ ದಾಖಲೆಗಳ ತಕ್ಕಡಿ ಹೆಚ್ಚು ವಾಲುತ್ತಿದೆ. ಕರ್ನಾಟಕದ ಚರಿತ್ರೆಯ ಬಗ್ಗೆ ತುಂಬಾ ಹಳೆಯ ದಾಖಲೆಗಳು ಸಿಗುತ್ತವೆ. ಕೈಕೇಯಿ ರಾಮನನ್ನು ಅಟ್ಟಿದ ಗೋಂಡಾರಣ್ಯದ ಒಂದು ಭಾಗವಾಗಿತ್ತು ಕರ್ನಾಟಕ. ಸುಗ್ರೀವ ಹನುಮಂತರ ಪರಿಚಯ ರಾಮನಿಗಾದದ್ದು ಇಲ್ಲಿಯೇ. ಅಂಬೆ ಅಂಬಾಲಿಕೆಯರ ಸ್ವಯಂವರಕ್ಕೆ ಬಂದಿದ್ದ ಛಪ್ಪನ್ನಾರು ದೇಶಗಳ ರಾಜರಲ್ಲಿ ಕರ್ಣಾಟ ದೇಶದ ರಾಜನೂ ಒಬ್ಬ ಎಂದು ಮಹಾಭಾರತದಲ್ಲಿದೆ. ಕರ್ಣೇ ಅಟತಿ ಇತಿ ಕರ್ಣಾಟ (ಕಿವಿಗೆ ಇಂಪು) ಎಂದು ಹೇಳಲಾಗುತ್ತದೆ. ಕರುನಾಡು ಎಂಬುದರ ಅರ್ಥ ಎಲ್ಲರಿಗೂ ಗೊತ್ತು. ಇನ್ನೊಂದು ದಾಖಲೆ (ಹಟ್ಟಂಗಡಿ ನಾರಾಯಣ ರ್ಆವ್) ಎತ್ತರದ ಭೂಭಾಗ ಎಂದು ಅರ್ಥ ಹೇಳುತ್ತದೆ. ಕರ್ನಾಟಕದ ಭೂಭಾಗ ಉಬ್ಬಿಕೊಂಡಿರುವುದರಿಂದ ಹೆಸರು. ಸಹ್ಯಾದ್ರಿಯ ನದಿಗಳನ್ನು ಹೊರತುಪಡಿಸಿ ಎಲ್ಲಾ ನದಿಗಳು ಪೂರ್ವಕ್ಕೆ ಹರಿಯುವುದು ಇದೇ ಕಾರಣಕ್ಕೆ.
ನಾನು ಸೇವಾಗ್ರಾಮದಲ್ಲಿದ್ದಾಗ ಕುಂಭಕೋಣಕ್ಕೆ ಪಯಣಗೈದಿದ್ದ ಗೋಪಿ ಫೋನಾಯಿಸಿಮಗಾ ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತ ಎಂದು ಯಾಕೆ ಕರೆಯಬೇಕೆಂದು ಪುರಾವೆ ಸಿಕ್ಕಿತುಅಂತ ಹೇಳಿದ. ತ್ಯಾಗರಾಜರ ಆರಾಧನೆಯ ಉತ್ಸವಕ್ಕೆ ಹೋದಾಗ ಕುಂಭಕೋಣಕ್ಕೆ ಭೇಟಿ ನೀಡಿ ನಾನೂ ನೋಡಿದೆ. ಸಾರಾಂಶವನ್ನು ಇಲ್ಲಿಡುತ್ತಿದ್ದೇನೆ.


ಹದಿನಾರನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕುಂಭಕೋಣದವನ್ನು ರಾಜಧಾನಿಯನ್ನಾಗಿಸಿ ಆಳುತ್ತಿದ್ದವರು ಸೇವಪ್ಪ, ಅಚ್ಯುತಪ್ಪ ಹಾಗೂ ರಘುನಾಥ ನಾಯಕರು. ಇವರ ಸಮರ್ಥ ಆಡಳಿತಕ್ಕೆ ಬೆನ್ನೆಲುಬಾಗಿ ನಿಂತವರು ಅಮಾತ್ಯರಾಗಿದ್ದ ಗೋವಿಂದ ದೀಕ್ಷಿತರು. ಗೋವಿಂದ ದೀಕ್ಷಿತರು ಅತ್ಯುತ್ತಮ ಮುತ್ಸದಿಗಳಲ್ಲದೇ ಸಾಹಿತಿ ಮತ್ತು ಸಂಗೀತ ವಿದ್ವಾಂಸರಾಗಿದ್ದರು. ಉಪಮನ್ಯು ವಶಿಷ್ಠಗೋತ್ರದ ಅಚ್ಚ ಕನ್ನಡಿಗ ಸ್ಮಾರ್ಥ ಸಂಪ್ರದಾಯದ ಬ್ರಾಹ್ಮಣರು. ಗೋವಿಂದ ದೀಕ್ಷಿತರು ತಮ್ಮ ಆಡಳಿತ ಸಾಮರ್ಥ್ಯದಿಂದಾಗಿ ತಮಿಳಿನಾಡಿನಾದ್ಯಂತ ಜನಪ್ರೀಯರಾಗಿದ್ದರು. ಇಂದಿಗೂ ತಂಜಾವೂರಿನಿಂದ ತಿರುವಣ್ಣಾಮಲ್ಲೈ ವರೆಗೆ ಗೋವಿಂದ ದೀಕ್ಷಿತರ ಹೆಸರಿನ ಗೋವಿಂದಪುರಂ, ಗೋವಿಂದನಲ್ಲುರ್, ಗೋವಿಂದವಾಡಿ, ಅಯ್ಯಂಪೆಟ್ ಇತ್ಯಾದಿ ಊರುಗಳು ಗೋವಿಂದ ದೀಕ್ಷಿತರ ಕೀರ್ತಿಯನ್ನು ಸಾರುತ್ತಿವೆ. ಇಂದಿಗೂ ಅನೇಕ ರಸ್ತೆ, ಬಡಾವಣೆಗಳಿಗೆ ಗೋವಿಂದ ದೀಕ್ಷಿತರ ಹೆಸರನ್ನಿಡಲಾಗುತ್ತಿದೆ. ರಾಮೇಶ್ವರಂ , ಕುಂಭಕೋಣಂ, ವೃದ್ಧಾಚಲಂ, ವಿಲಾನಗರದ ಗುಡಿಗಳನ್ನು ಕಟ್ಟಿಸಿದವರು ಗೋವಿಂದ ದೀಕ್ಷಿತರು. ಸಾಹಿತ್ಯಸೇವೆಯ ಅಂಗವಾಗಿ ಕುಮಾರಿಲ ದರ್ಶನ ಮತ್ತು ಜೈಮಿನಿ ಸೂತ್ರಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಜೊತೆಗೆ ಸಂಗೀತ ಸಂಶೊಧನಾ ಗ್ರಂಥ ಸಂಗೀತಸುಧಾ ಸಂಗೀತ ಸಂಶೊಧನೆಯಲ್ಲೊಂದು ಮೈಲಿಗಲ್ಲು. ತಂಜಾವೂರು ಮೇಳವೀಣೆಯನ್ನು ಗೋವಿಂದ ದೀಕ್ಷಿತರೇ ವಿನ್ಯಾಸಗೊಳಿಸಿದ್ದು. ಇದರ ಜೊತೆಗೆ ಅನೇಕ ಸಂಸ್ಕೃತ ಗ್ರಂಥಗಳ ತಮಿಳು ಅನುವಾದಗಳೂ ಗೋವಿಂದ ದೀಕ್ಷಿತರ ಕೊಡುಗೆಗಳು. ತಮಿಳುನಾಡಿನ ಅರೆಭಾಗವನ್ನು ಮುಕ್ಕಾಲು ಶತಮಾನಗಳ ಕಾಲ ಸಮರ್ಥವಾಗಿ ಆಳಿದ ಗೋವಿಂದ ದೀಕ್ಷಿತರ ಸಾಧನೆಗಳು ಎಣಿಕೆಗೆ ನಿಲುಕುವಂತಹುದಲ್ಲ.
ಗೋವಿಂದ ದೀಕ್ಷಿತರಿಗೆ ಎಂಟು ಜನ ಗಂಡುಮಕ್ಕಳು ಒಬ್ಬ ಹೆಣ್ಣುಮಗಳು. ತಂದೆಯಂತೆಯೇ ಮಕ್ಕಳು ಮಹಾಮೇಧಾವಿಗಳು. ಹಿರಿಯ ಮಗ ಲಿಂಗದ್ವಾರಿ ಶಿವಸಹಸ್ರನಾಮದ ಮೇಲೆ ಭಾಷ್ಯವನ್ನು ಬರೆದಿದ್ದಾರೆ. ಎರಡನೆಯ ಮಗ ಯಜ್ಞನಾರಾಯಣ ದೀಕ್ಷಿತರು ರಘುನಾಥಾಭ್ಯುತಂ, ಸಾಹಿತ್ಯರತ್ನಕರಂ ಕೃತಿಗಳ ಕರ್ತೃ. ಇವೆರಡು ಗ್ರಂಥಗಳು ಅಂದಿನ ರಾಜರುಗಳ ಹಾಗೂ ಗೋವಿಂದ ದೀಕ್ಷಿತರ ವಿವರವಾದ ವರ್ಣನೆಯನ್ನು ನೀಡುತ್ತವೆ. ಇವರ ಮೂರನೆಯ ಸತ್ಪುತ್ರರೇ ವೆಂಕಟಮಖಿ! ಕರ್ನಾಟದ ಸಂಗೀತದಲ್ಲಿ ವೆಂಕಟಮಖಿ ಚಿರಪರಿಚಿತ ಹೆಸರು. ಕರ್ನಾಟದ ಸಂಗೀತದ ಎಪ್ಪತ್ತೆರಡು ಮೇಳಕರ್ತಗಳ ಸೃಷ್ಠಿಕರ್ತರು ವೆಂಕಟಮಖಿಯವರು. ಎಪ್ಪತ್ತೆರಡು ಮೇಳಕರ್ತಗಳನ್ನು ವೆಂಕಟಮಖಿಗಳು ತಮ್ಮ ಸಂಗೀತ ಸಂಶೋಧನಾ ಗ್ರಂಥಚತುರ್ದಂಡಿ ಪ್ರಕಾಶಿಕಾದಲ್ಲಿ ವಿವರಿಸುತ್ತಾರೆ. ಕರ್ನಾಟಕ ಸಂಗೀತದಲ್ಲಿ ಮೇಳಕರ್ತಗಳ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು. ಮಧ್ವಾಚಾರ್ಯರೂ ಸಂಗೀತದ ಮೂಲಕವೇ ದೈವಸಾಕ್ಷತ್ಕಾರಕ್ಕೆ ಮೊದಲು ಮಾಡಿದವರು. ಕರ್ನಾಟಕ ಎಂದರೆ ಈಗಿರುವ ಇಪ್ಪತ್ತೊಂಬತ್ತು ಜಿಲ್ಲೆಗಳ ಕರ್ನಾಟಕವಲ್ಲ. ಉತ್ತರದಲ್ಲಿ ಬೀದರ್ನಿಂದ ಸೇರಿ ದಕ್ಷಿಣದ ಪಾಲಕ್ಕಾಡ್ ಪ್ರದೇಶದವರೆಗೆ ಪಶ್ಚಿಮದಲ್ಲಿ ಸಹ್ಯಾದ್ರಿಯ ಘಟ್ಟಗಳಿಂದ ಪೂರ್ವದ ಕೋರಮಂಡಲ ತೀರದವರೆಗಿನ ಪ್ರದೇಶ ಕರ್ನಾಟಕವಾಗಿತ್ತು. ಬಹಮನಿ ರಾಜರ ನಂತರ ಕರ್ನಾಟಕ ಛಿದ್ರವಾಯಿತು. ಪ್ರಕಾರ ಕರ್ನಾಟಕವನ್ನು ಪರಿಗಣಿಸಿದರೆ ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಅನೇಕಾನೇಕ ಸಂಗೀತ ದಿಗ್ಗಜರು ಕರ್ನಾಟಕದಲ್ಲೇ ಓಡಾಡಿಕೊಂಡಿದ್ದರು. ಮೇಲೆ ಹೇಳಿದ ಗೋವಿಂದ ದೀಕ್ಷಿತರು ಹಾಗೂ ವೆಂಕಟಾಮಖಿಗಳು ಅಪ್ಪಟ ಕನ್ನಡಿಗರು. ಹಾಗಾಗಿ ದಕ್ಷಿಣಾದಿ ಸಂಗೀತಕ್ಕೆ ಯಾವುದೇ ಸಂಶಯಕ್ಕೆ ಎಡೆಯಿಲ್ಲದೇ ಕರ್ನಾಟಕ ಸಂಗೀತ ಎಂದು ಕರೆಯಬಹುದು. ಸ್ವತಃ ಪಾಲಕ್ಕಾಡಿನವರೇ ಚಂಬೈ ವೈದ್ಯನಾಥ, ಡಿವಿಜಿ ಅನೇಕ ಹಿರಿಯರು ಕರ್ನಾಟಕ ಸಂಗೀತ ಎಂದೇ ಸಂಬೊಧಿಸುತಿದ್ದರು.


ಹುಡುಕಾಟದ ನಡುವೆ ಕರ್ನಾಟಕದ ಬಗ್ಗೆ ನನಗೆ ಇನ್ನೂ ಅನೇಕ ಮಹತ್ವದ ಮಾಹಿತಿಗಳು ದೊರಕಿವೆ. ವಿಷಯಪಲ್ಲಟವಾಗುವುದರಿಂದ ಇಲ್ಲಿ ಹೇಳಲಾರೆ. ಮುಂದೆ ಸಂದರ್ಭಕ್ಕೆ ತಕ್ಕಂತೆ ಹಂಚಿಕೊಳ್ಳುತ್ತೇನೆ. ಮೊದಲೇ ಹೇಳಿದ ಹಾಗೆ ಹುಡುಕಾಟ ಇನ್ನೂ ಮುಗಿದಿಲ್ಲ. ಕರ್ನಾಟಕ ಸಂಗೀತದ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಅಥವಾ ದಾಖಲೆಗಳೇನಾದರೂ ಇದ್ದರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಿ. ವೆಂಕಟಮಖಿಗಳ ಪುಸ್ತಕಗಳು ದೊರೆಯುತ್ತವೆ. ಆದರೆ ಗೋವಿಂದ ದೀಕ್ಷಿತರ ಪುಸ್ತಕಗಳು ಲಭ್ಯವಿಲ್ಲ ಅಥವಾ ನನಗೆ ದೊರೆಯಲಿಲ್ಲ. ಇವು ಯಾರಲ್ಲಾದರೂ ಲಭ್ಯವಿದ್ದರೆ ದಯವಿಟ್ಟು ನನಗೆ ತಿಳಿಸಿ. ಜೆರಾಕ್ಸ ಪ್ರತಿ ಮಾಡಿಸಿಕೊಂಡು ವಾಪಸು ಕೊಡುತ್ತೇನೆ.
ಚಿತ್ರ : ತಿರುವಯ್ಯಾರ್ ತ್ಯಾಗರಾಜರ ಗುಡಿಯ ಪುತ್ಥಳಿ.