ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಮಂಗಳವಾರ, ಡಿಸೆಂಬರ್ 30, 2008

ಬೆಳಗೆರೆಯಲ್ಲೊಂದು ಬೆಸ್ಟ್ ವೀಕೆಂಡ್



ಸಾಮ್ಮರ್‌ಫೀಲ್ಡ್ ರಷ್ಯಾದ ಪ್ರಖ್ಯಾತ ಗಣಿತಜ್ಞ. ಅವನ ಮೂರು ಜನ ಶಿಷ್ಯಂದಿರಿಗೆ ನೋಬೆಲ್ ಪ್ರಶಸ್ತಿ ಬಂದಿದೆ. ಆದರೆ ಸ್ವತಃ ಸಾಮ್ಮರ್‌ಫೀಲ್ಡ್ ಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ! ಸಾಮ್ಮರ್‌ಫೀಲ್ಡ್ ಸಂಜೆ ಐದು ನಿಮಿಷದ ಮಟ್ಟಿಗೆ ವಾಕಿಂಗ್ ಹೊರಡುತ್ತಿದ್ದ. ಅವನ ಶಿಷ್ಯಂದಿರು ಅಥವಾ ಶಿಷ್ಯರಾಗಬಯಸುವವರು ಅವನ ಹಿಂದೆ ಓಡಬೇಕಿತ್ತು. ಸಾಮ್ಮರ್‌ಫೀಲ್ಡ್ ಐದು ನಿಮಿಷದ ಮಟ್ಟಿಗೆ ಅವರೊಡನೆ ಮಾತಾಡುತ್ತಿದ್ದ. ಅವನು ಮಾತಾಡಿದ್ದು ಅವನ ಶಿಷ್ಯನಿಗೆ ಪಿ.ಹೆಚ್‍ಡಿ ಥೀಸಿಸ್! ಗುರುವಿನ ಐದು ನಿಮಿಷದ ಮಾತು ಶಿಷ್ಯನಿಗೆ ಮೂರು ವರ್ಷಗಳ ಸಂಶೋಧನೆಯ ವಿಷಯ. ಮೊನ್ನೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ಜನಪದ ಭಂಡಾರ ನಾಡೋಜ ಸಿರಿಯಜ್ಜಿಯ ಬಗ್ಗೆ ಹೇಳಿದಾಗ ಸಾಮ್ಮರ್‌ಫೀಲ್ಡ್ ನೆನಪಾದ.ಇಬ್ಬರೂ ಸಮಾನ ಜೀನಿಯಸ್‍ಗಳೇ! ಸಿರಿಯಜ್ಜಿಯ ಭಂಡಾರವನ್ನು ಉಪಯೋಗಿಸಿಕೊಂಡು ಐದು ಜನ ಪಿ.ಹೆಚ್‍ಡಿ ತೆಗೆದುಕೊಂಡಿದ್ದಾರೆ. ಸಿರಿಯಜ್ಜಿಗೆ ನೆಪಮಾತ್ರಕ್ಕೂ ಒಂದಕ್ಷರ ಓದಲು ಬರುವುದಿಲ್ಲ!
ಎಷ್ಟೇ ವೇಗದಲ್ಲಿ ಕಾರು ಓಡಿಸಿದರೂ ಜಗಳೂರು ಚಳ್ಳಕೆರೆ ತಾಲ್ಲೂಕುಗಳ ನಿರ್ಮಾನುಷ ಕೆಂಬಯಲುಗಳನ್ನು ದಾಟಿ ನಾರಾಯಣಪುರವನ್ನು ತಲುಪಲು ಮೂರು ತಾಸುಗಳೇ ಜರುಗಿ ಹೋದವು. ಹಿಂದಿನ ಸಂಜೆ ಮೋಹನ ಬಂದು ಕೃಷ್ಣಶಾಸ್ತ್ರಿ ತಾತ ಬೆಳಗೆರೆಯಲ್ಲೆ ಇದ್ದಾರಂತೆ ಎಂಬ ಸುದ್ದಿ ತಂದ ಕೂಡಲೆ ಬೆಂಗಳೂರಿಗೆ ಹೋಗುವ ಯೋಜನೆ ರದ್ದುಮಾಡಿ ಮರುದಿನ ಕಾರು ತೆಗೆದುಕೊಂಡು ಹೊರಟೇಬಿಟ್ಟೆವು. ಅವರ ಜೊತೆ ಕಳೆದ ಎರಡು ದಿನ ನನ್ನ ಜೀವನದ ಅತ್ಯಂತ ಬೆಸ್ಟ್ ವೀಕೆಂಡ್!
ಬೆಳಗೆರೆ ತಾತನ ಜೊತೆ ಕಳೆದ ಎರಡು ದಿನಗಳಲ್ಲಿ ನಾವು ತಿಳಿದುಕೊಂಡದ್ದನ್ನು ಬರೆಯುತ್ತಾ ಹೋದರೆ ಬ್ಲಾಗ್‍ನ್ನು ವರ್ಷಗಂಟಲೆ ತುಂಬಿಸಬಹುದು. ಗಾಂಧೀಜಿ, ಡಿವಿಜಿ, ಸರ್.ಎಂ.ವಿ, ಮುಕುಂದೂರು ಸ್ವಾಮಿಗಳು, ರಮಣ ಮಹರ್ಷಿಗಳು,ಅಜ್ಜಪ್ಪ ಮೇಷ್ಟ್ರು, ಮಾಸ್ತಿ, ಬೇಂದ್ರೆ, ಬೆಳಗೆರೆ ಜಾನಕಮ್ಮ, ನಲ್ನುಡಿ ನಿಘಂಟಿನ ಅಲ್ಲಿಸಾಬ್, ಕಳ್ಳನಿಂಗ,ಪೂಜಾರ ಹನುಮಂತಪ್ಪ,ಪಾರಜ್ಜಿ ಇತ್ಯಾದಿ ವ್ಯಕ್ತಿ ಚಿತ್ರಣಗಳ ಕೇವಲ ಪಟ್ಟಿಯಿಂದಲೇ ಒಂದು ಲೇಖನವನ್ನು ತುಂಬಿಸಬಹುದು. ಇದಲ್ಲದೆ ಸ್ವತಃ ಶಾಸ್ತ್ರಿಗಳ ಸಾಧನೆ, ಧ್ಯಾನ, ದೇವರು ಮುಂತಾದ ಅಧ್ಯಾತ್ಮಿಕ ವಿಷಯಗಳ ಚರ್ಚೆ. ಇಡೀ ದಿನದ ಮಾತಿನ ನಂತರ ಸಂಜೆ ವಿಹಾರದ ನಂತರ ಹರಟೆಯಲ್ಲಿ ಅಕಸ್ಮಾತಾಗಿ ಬಂದಿದ್ದು ಜನಪದ ಭಂಡಾರ ಸಿರಿಯಜ್ಜಿಯ ಸಂಗತಿ. ಇದೊಂದು ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಹೆಚ್ಚಿನ ವಿಷಯಗಳಿಗಾಗಿ ಶಾಸ್ತ್ರಿಗಳ ಮರೆಯಲಾದೀತೆ? ಯೇಗ್ದಾಗೆಲ್ಲಾ ಐತೆ (ಕಡ್ಡಾಯವಾಗಿ ಮನೆಯಲ್ಲಿ ಇರಲೇಬೇಕಾದ ಪುಸ್ತಕ!), ಹಳ್ಳೀಮೇಷ್ಟ್ರು, ಸಾಹಿತಿಗಳ ಸ್ಮೃತಿ ಓದಿ.
ಕೃಷ್ಣಶಾಸ್ತ್ರಿಗಳು ಮತ್ತು ಹನೂರು ಕೃಷ್ಣಮೂರ್ತಿಗಳು ಚಿತ್ರದುರ್ಗದಲ್ಲಿ ಸಿರಿಯಜ್ಜಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸಿರಿಯಜ್ಜಿಯ ಕೃಪೆಯಿಂದ ಪಿಎಚ್‍ಡಿ ಪಡೆದವರಲ್ಲಿ ಹನೂರು ಕೃಷ್ಣಮೂರ್ತಿಗಳೂ ಒಬ್ಬರು. ಸನ್ಮಾನದ ಆಹ್ವಾನ ಪತ್ರಿಕೆಯಲ್ಲಿ ಸಿರಿಯಜ್ಜಿ ಹತ್ತು ಸಾವಿರ ಜನಪದ ಗೀತೆಗಳನ್ನು ನೆನಪಿನಿಂದ ಹೆಕ್ಕಿ ತೆಗೆದು ಹಾಡುವುದಲ್ಲದೇ ಆ ಹಾಡುಗಳ ಅರ್ಥವನ್ನೂ ವಿವರಿಸಬಲ್ಲಳು ಎಂದು ಪ್ರಕಟಿಸಿದ್ದರು. ವಿಷಯ ತಿಳಿದ ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ಸನ್ಮಾನದ ಹಿಂದಿನ ದಿನ ಚಿತ್ರದುರ್ಗಕ್ಕೆ ಹೊರಟು ಬಂದರು. ನಾಗೇಗೌಡರಿಗೆ ಆಹ್ವಾನ ಇರಲಿಲ್ಲ. ಸಿರಿಯಜ್ಜಿಯನ್ನು ನೋಡಬೇಕೆಂದು ಬಯಕೆ ವ್ಯಕ್ತಪಡಿಸಿದ ನಾಗೇಗೌಡರ ಎದುರಿಗೆ ಸಿರಿಯಜ್ಜಿಯನ್ನು ಕರೆದೊಯ್ಯಲಾಯಿತು. ಸಿರಿಯಜ್ಜಿಯನ್ನು ಅಡಿಯಿಂದ ಮುಡಿಯವರೆಗೆ ದಿಟ್ಟೈಸಿದ ನಾಗೆಗೌಡರು ತಮ್ಮ ಬ್ಯೂರಾಕ್ರಟಿಕ್ ಗತ್ತಿನಲ್ಲಿ "ಇವಳೇನಾ ಸಿರಿಯಜ್ಜಿ ?" ಎಂದರು.
"ಹೌದು ಸ್ವಾಮಿ" ಶಾಸ್ತ್ರಿಗಳು ಉತ್ತರಿಸಿದರು.
" ಇವಳೇನು ದೆವ್ವನೋ ಇಲ್ಲ ಮನುಷ್ಯಳೋ ?"
"ನಮ್ಮ ಕಣ್ಣಿಗೇನೋ ಮನುಷ್ಯರ ಥರಾನೇ ಕಾಣಿಸ್ತಾಳೆ ಸ್ವಾಮಿ!"
"ನಾನು ಜಾನಪದ ಸಾಗರದಲಿ ಈಜಿದ್ದೇನೆ. ಎಂಥೆಂಥಾ ಜನಪದರನ್ನು ಸಂದರ್ಶಿಸಿದ್ದೇನೆ. ಹತ್ತು ಸಾವಿರ ಹಾಡುಗಳು ಒಬ್ಬಳೇ ಹೇಳುವುದೆಂದರೆ ಸುಮ್ಮನೇ ಎನ್ರೀ? ಇಷ್ಟೇಲ್ಲಾ ಉತ್ಪ್ರೇಕ್ಷೆ ಮಾಡಿ ಯಾಕೆ ಬರೆಯುತ್ತೀರಿ? ಅದಲ್ಲದೇ ಅರ್ಥ ಬೇರೆ ವಿವರಿಸುತ್ತಾಳೆ ಅಂತ ಹೇಳ್ತೀರಿ "
"ಉತ್ಪ್ರೇಕ್ಷೆ ಇಲ್ಲ ಸರ್ ಬೇಕಿದ್ದರೆ ನೀವೆ ಪರೀಕ್ಷಿಸಿ ನೋಡಿ"
ಎಂಟುವರೆಗೆ ಶುರುವಾಯಿತು ಅಜ್ಜಿಯ ಜನಪದ ಕಛೇರಿ. ಎಲ್ಲರೂ ಕೂತು ಕೇಳುತಿದ್ದರು. ನಡುವೆ ಯಾವುದೋ ಒಂದು ಗೀತೆಯಲ್ಲಿ ಚಿನಕುರುಳಿ ಎಂಬ ಪದ ಬಂತು. ಅಜ್ಜಿಯನ್ನು ಎಲ್ಲ ರೀತಿಯಿಂದಲೂ ಪರೀಕ್ಷಿಸಬೇಕೆಂದುಕೊಂಡಿದ್ದ ನಾಗೇಗೌಡರು "ನಿಲ್ಲಿಸು" ಎಂದರು.
"ಚಿನಕುರುಳಿ ಅಂದ್ರೆ ಏನು?"
"ಗೊತ್ತಿಲ್ಲ ಸ್ವಾಮಿ" ಎಂದಿತು ಅಜ್ಜಿ.
"ಎನ್ರೀ ಶಾಸ್ತ್ರಿಗಳೆ ನೀವು ಅಜ್ಜಿ ಅರ್ಥವಿವರಣೆ ಕೊಡುತ್ತಾಳೆ ಅಂತ ಬರೆದಿದ್ದೀರಿ ಗೊತ್ತಿಲ್ಲ ಅಂತಾಳಲ್ರಿ"
"ಗೊತ್ತಿದೆ ಸರ್ ಅವಳಿಗೆ ಆದರೆ ದೊಡ್ಡವರೆದುರಿಗೆ ಗೊತ್ತಿದೆ ಎಂದು ಹೇಳುವುದು ಅಹಂಕಾರ ಎನಿಸಬಹುದು ಅಂತ ಸುಮ್ಮನಿದ್ದಾಳೆ ಅನ್ನಿಸುತ್ತೆ"
" ಇರ್ಲಿ ... ಚಿನಕುರುಳಿ ಎಂದರೇನು ಎಂದು ನಾನು ಹೇಳುತ್ತೇನೆ ಕೇಳು ..." ಮುಂದುವರಿಸಿದರು ನಾಗೇಗೌಡರು " ಹಿಂದಿನ ಕಾಲದಲ್ಲಿ ದಾಸರು ದೇವರ ಭಜನೆಯನ್ನು ಮಾಡುತ್ತಾ ಭಕ್ತಿಯಲ್ಲಿ ಕುಣಿದಾಡಿಕೊಂಡು ತಿರುಪತಿಗೆ ತೆರಳುತ್ತಿದ್ದರು. ಇಡೀ ದಿನ ಕುಣಿದು ರಾತ್ರಿಯ ಹೊತ್ತಿಗೆ ಸುಸ್ತಾಗಿ ಹೋಗಿಬಿಡುತ್ತಿದ್ದರು. ಹಾಗಾಗಿ ದಣಿವು ತಿಳಿಯದಂತೆ ನಿದ್ದೆ ಮಾಡಲು ಈಚಲ ಹೆಂಡವನ್ನು ಕುಡಿಯುತಿದ್ದರು. ಹೆಂಡದ ಜೊತೆ ರುಚಿಗಾಗಿ ಬೇಳೆಯನ್ನು ಎಣ್ಣೆಯಲ್ಲಿ ಹುರಿದು ಉಪ್ಪುಖಾರ ಹಾಕಿ ತಯಾರಿಸಿದ ಚಿನಕುರುಳಿಯನ್ನು ತಿನ್ನುತಿದ್ದರು"
"ಅಂಗಲ್ಲ ತಗಿರಿ ಸಾಮಿ" ಎಂದಳು ಸಿರಿಯಜ್ಜಿ!
"ಅವಾಗೆಲ್ಲ ನಡುಕೊಂಡು ಓಬೆಕಿತ್ತು ತಿರುಪತಿಗೆ ಇಂದಿನಂಗೆ ಬಸ್ಸು ಮೊಟಾರು ಎಲ್ಲಾ ಇರ್ಲಿಲ್ಲ, ಓಗುವಾಗ ಎಂಗುಸ್ರು ಮಕ್ಳು ಎಲ್ಲಾ ಓಗ್ತಿದ್ರು. ದಾರಿಯಾಗೆ ಮಕ್ಳು ಬಾಯ್ಚಟಕ್ಕೆ ಏನಾರಾ ತಿನ್ನಕೆ ಹಟಾ ಮಾಡ್ತವೆ ಅಂತಾ ಬೇಳೆನಾ ಎಣ್ಣೇಲಿ ಹುರ್ದು ಉಪ್ಪುಖಾರ ಹಾಕೊಂಡು ತಗೊಂಡು ಹೋಗೊರು. ನಾವು ಗೊಲ್ರು ಸಾಮಿ ಯೆಂಡ ಕುಡಿಯಾಕಿಲ್ಲ. ದಾಸ್ರು ಎಲ್ಲಾರ ಯೆಂಡ ಕುಡಿಯೋದು ಕೇಳೀರಾ ಸಾಮಿ ನೀವು ?"
ಗೌಡರು ಪೆಚ್ಚಾದರು. "ಹೌದೇನ್ರಿ?" ಎಂದು ಕೇಳಿದರು ಶಾಸ್ತ್ರಿಗಳನ್ನು. ಸಮ್ಮತಿ ಸೂಚಕವೆಂಬಂತೆ ಶಾಸ್ತ್ರಿಗಳು ಸುಮ್ಮನಿದ್ದರು. "ಹೌದೇನ್ರಿ ಕೃಷ್ಣಮೂರ್ತಿ?"
"ಆಕೆ ಹೇಳುತ್ತಿದ್ದಾಳೆ ಎಂದರೆ ನಿಜವೇ ಇರಬೇಕು ಸರ್ !"
ಗೌಡರು ಸುಮ್ಮನಾದರು.
ಸರಿರಾತ್ರಿ ಎರಡೂವರೆ ವರೆಗೆ ಸತತವಾಗಿ ನಡಿಯಿತು ಅಜ್ಜಿಯ ಗೊಟ್ಟಿ. ಕೊನೆಗೆ ಸೋಲೊಪ್ಪಿಕೊಂಡ ಗೌಡರು "ತಾಯಿ ನನ್ನಿಂದ ತಪ್ಪಾಯಿತು ಕ್ಷಮಿಸಿಬಿಡು" ಎಂದರು.
ಮರುದಿನ ಸಮಾರಂಭದಲ್ಲಿ ಹಾಜರಿದ್ದ ನಾಗೇಗೌಡರು ಅಜ್ಜಿಯನ್ನು ಇದು ಜನಪದ ಲೋಕದ ಅದ್ಭುತ ಎಂದು ಪ್ರಶಂಸಿಸಿ ಜನಪದ ಭಂಡಾರ ಎಂದು ಬಿರುದು ಕೊಟ್ಟರು. ಬೆಲೆಬಾಳುವ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ನಾಗೇಗೌಡರು ಆ ರೀತಿ ನಡೆದುಕೊಂಡಿರಬಹುದು ಆದರೆ ಕಡೆಯಲ್ಲಿ ತಮ್ಮ ತಪ್ಪು ಒಪ್ಪಿಕೊಂಡು ಸರಿಪಡಿಸಿಕೊಂಡರು ಅದರಿಂದಾಗಿಯೇ ಅವರನ್ನು ನಾನು ದೊಡ್ಡ ಮನುಷ್ಯರೆಂದು ಕರೆಯುವುದು ಎಂದು ಹೇಳಿ ಮಾತು ಮುಗಿಸಿದರು ಶಾಸ್ತ್ರಿ ತಾತ.
ಅಂದ ಹಾಗೆ ಚಿತ್ರದುರ್ಗದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸಿರಿಯಜ್ಜಿಯ ಹೆಸರೂ ಚರ್ಚೆಗೆ ಬಂದಿತ್ತು. ಶಾಸ್ತ್ರಿಗಳಿಗೆ ೯೩ ವರ್ಷ. ಸಿರಿಯಜ್ಜಿ ಅವರಿಗಿಂತ ಸುಮಾರು ೧೫ ವರ್ಷ ದೊಡ್ಡವಳಿರಬಹುದು ಅಷ್ಟೆ! ಟೆಕ್ಕಿಯಾಗಿ ತೀರಾ ಅಗತ್ಯಕ್ಕಿಂತ ಹೆಚ್ಚಾಗಿಯೇ ನಾಗರೀಕನಾದ ಮೇಲೆ ನನ್ನ ಜೀವನದ ಸೊಗಡನ್ನೆಲ್ಲೊ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತ್ತು. ಕಳೆದ ಸೊಗಡನ್ನು ಸೊಗಸಾದ ರೀತಿಯಲ್ಲಿ ಹುಡುಕಿಕೊಟ್ಟವರು ಕೃಷ್ಣಶಾಸ್ತ್ರಿಗಳು.
ಎಂಬಿಎ ಎಂಬ ಹಾಳೆ ಇಟ್ಟುಕೊಂಡು ನಮ್ಮನ್ನೆಲ್ಲ ಆಟ ಆಡಿಸುವ ಹೆಚ್ ಆರ್ ಗಳ ಜೊತೆ ಜೋರಾಗಿಯೇ ಜಗಳ ಆಗಿತ್ತು. ಮೈ ಬಗ್ಗಿಸಿ ದುಡಿಯುವುದು ನಾವು, ದುಡ್ಡು ಕೊಡುವುದು ನಮ್ಮ ಕೆಲಸಕ್ಕೆ, ಇವರೆಲ್ಲ ನಮ್ಮನ್ನು ಅತ್ತ ಇತ್ತ ಜಾಲಾಡಿ ಪಗಾರ ಪಡೆಯುತ್ತಾರೆ.ಇವರೇನೂ ಐಐಎಂ ಗಳಿಂದ ಬಂದ ಜೀನಿಯಸ್‍ಗಳಲ್ಲ. ಹಣಕ್ಕಾಗಿ ರಸ್ತೆ ಬದಿ ತೆರೆದುಕೊಂಡ ಚಿಕ್ಕ ಪುಟ್ಟ ಕಾಲೇಜುಗಳ "ಔಟ್‍ಪುಟ್ಟುಗಳು". ಇವರನ್ನು ಸಾಕುವುದು ನಾವು; ಆದರೆ ನಮ್ಮ ಮೇಲೆಯೇ ಬಾಸ್ ಗಿರಿ ತೋರಿಸುತ್ತಾರೆ. ಈ ವಿಚಾರಗಳು ನನ್ನನ್ನು ಪದೇ ಪದೇ ಕೆರಳಿಸುತ್ತಿದ್ದವು. ಮನಸ್ಸು ತೀರಾ ಹಂಡಾರೆದ್ದು ಹೋಗಿತ್ತು. ಅದಕ್ಕಿಂತ ಮಿಗಿಲಾಗಿ ನನಗಾಗಿ ನಾನು ಅನೇಕ ಪ್ರಶ್ನೆಗಳ ಉತ್ತರಗಳನ್ನು ಕಂಡುಕೊಳ್ಳಬೇಕಿತ್ತು. ವಾಮಚಾರದ ಭೀಭತ್ಸ್ಯಗಳನ್ನು ಕಣ್ಣೆದುರಿಗೇ ನೋಡಿದ ಮೇಲೆ ವಿಶ್ವದಲ್ಲಿ ಶಕ್ತಿಯ ಸಂಚಯದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಮನಸ್ಸಿನ ತಾಕತ್ತನ್ನು ಅರಿಯಬೇಕಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನೇ ಮೊದಲು ಹುಡುಕಿಕೊಳ್ಳಬೇಕಿತ್ತು. ಮನೋಮಯಕೋಶಕ್ಕೊಂದು ಓರಾಯಿಲ್ ಆಗಬೇಕಿತ್ತು. ಈ ಬಾರಿಯ ಸರ್ವಿಸ್ ಸ್ಟೇಷನ್ ಬೆಳಗೆರೆ ತಾತನ ಮನೆ!
ಧ್ಯಾನದಂತಹ ಕೈವಲ್ಯ ಸಾಧಕವನ್ನು ಏಕಾಗ್ರತೆ ವೃದ್ಧಿಸಿಕೊಳ್ಳುವ, ನೆನಪಿನಶಕ್ತಿಯನ್ನು ಹೆಚ್ಚಿಸಿಕೊಳ್ಳುವ, ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದುಕೊಳ್ಳುವಂತಹ ಚಿಲ್ಲರೆ ಉಪಯೋಗಗಳಿಗಾಗಿ ಬಳಸಿಕೊಳ್ಳುವ ಜನರ ನಡುವಿನಿಂದ ಕಾಲು ಕಿತ್ತುಕೊಂಡು ಹೋಗಿ ನಿಜವಾದ ಸಾಧಕನ ನಡುವೆ ಸಮಯ ಕಳೆದಿದ್ದೆ. ಮನಸ್ಸನ್ನು ಮತ್ತೆ ತನ್ನ ದಾರ್ಢ್ಯಕ್ಕೆ ಹಿಂದಿರುಗಿಸಿದರು ಶಾಸ್ತ್ರಿಗಳು.