ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಮಾರ್ಚ್ 19, 2010

ಏನ ಹೇಳಲಿ ಈ ನಿನ್ನ ತುಂಟಾಟದ ಪರಿಗೆ?

ಕಲ್ಲಾರಿಸುವ ನೆಪದಲ್ಲಿ ಅಕ್ಕಿಯೊಡನೆ ಸರಸವಾಡುವ
ನಿನ್ನ ಬೆರಳುಗಳಿಂದ ನನ್ನೆದೆಯನ್ನು ಕಲಕುವಂತೆ
ಈ ನಿನ್ನ ಕುಡಿ ನೋಡದ ಪರಿಯೇನು?

ಹಸಿನೆಲದ ಮೆಲೆ ರಂಗೋಲಿಯಿಡುವಂತೆ
ಹೊಸ್ತಿಲ ಸೀಳಿಗೆ ಕೆಂಬಣ್ಣವೆಳೆಯುತಲೇ
ಭಾವಗಳ ತೀಡುವ ಈ ನಿನ್ನ ಸೊಗಸೇನು?

ಅಪ್ಪನೆದುರಿಗೆ ಬಂದೆನ್ನ ಪಕ್ಕದಲೆ ನಿಂತು
ಸೆರಗ ಮುಖದ ಮೇಲೆ ಹಾರಿಸಿ ಕೆಮ್ಮಿ
ಬಿರುಸಿನಲಿ ಹೊರಡುತಲೆ ತಿರುಗಿ ನೋಡುವ ನಿನ್ನ ಬಿಂಕವೇನು?

ಮನೆಯಲಿ ಅಪ್ಪನಿಲ್ಲ ಅಮ್ಮನಿಲ್ಲ ಎಂದು
ಗೆಳತಿಯೆದುರಿಗೆ ಸನ್ನೆ ಮಾಡುತ
ಕಣ್ಣಳತೆಯಲೆ ಕರೆಯನೀವ ಕಪಟವೇನು?

ಸಾರು ಬಡಿಸವಾಗ ಚೌಟು ಕೈಗೆ ತಾಗಿಸಿ
ಉರಿಗಣ್ಣು ನಿನ್ನೆಡೆ ಸಾಗುತಲೆ ತುಟಿಯರಳಿಸಿ
ತಂಪನೀವ ಈ ನಿನ್ನ ಮಂದಹಾಸವೇನು?

ಕತ್ತಲೆಯ ಪರಿಧಿಯಲಿ ಕೈಗೆ ಮೈ ತಾಗಿಸಿ
ಮದದಾನೆಗೇ ಮತ್ತೇರಿಸುವಂತ ಮುತ್ತನೀವ ಮನದನ್ನೆ
ನೀ ಹೇಳೆ ನೀನಲ್ಲದೆ ಬೇರೆ ನನ್ನ ಬಾಳ ಗುರಿಯೇನು?