ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಮಂಗಳವಾರ, ಡಿಸೆಂಬರ್ 30, 2008

ಬೆಳಗೆರೆಯಲ್ಲೊಂದು ಬೆಸ್ಟ್ ವೀಕೆಂಡ್



ಸಾಮ್ಮರ್‌ಫೀಲ್ಡ್ ರಷ್ಯಾದ ಪ್ರಖ್ಯಾತ ಗಣಿತಜ್ಞ. ಅವನ ಮೂರು ಜನ ಶಿಷ್ಯಂದಿರಿಗೆ ನೋಬೆಲ್ ಪ್ರಶಸ್ತಿ ಬಂದಿದೆ. ಆದರೆ ಸ್ವತಃ ಸಾಮ್ಮರ್‌ಫೀಲ್ಡ್ ಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ! ಸಾಮ್ಮರ್‌ಫೀಲ್ಡ್ ಸಂಜೆ ಐದು ನಿಮಿಷದ ಮಟ್ಟಿಗೆ ವಾಕಿಂಗ್ ಹೊರಡುತ್ತಿದ್ದ. ಅವನ ಶಿಷ್ಯಂದಿರು ಅಥವಾ ಶಿಷ್ಯರಾಗಬಯಸುವವರು ಅವನ ಹಿಂದೆ ಓಡಬೇಕಿತ್ತು. ಸಾಮ್ಮರ್‌ಫೀಲ್ಡ್ ಐದು ನಿಮಿಷದ ಮಟ್ಟಿಗೆ ಅವರೊಡನೆ ಮಾತಾಡುತ್ತಿದ್ದ. ಅವನು ಮಾತಾಡಿದ್ದು ಅವನ ಶಿಷ್ಯನಿಗೆ ಪಿ.ಹೆಚ್‍ಡಿ ಥೀಸಿಸ್! ಗುರುವಿನ ಐದು ನಿಮಿಷದ ಮಾತು ಶಿಷ್ಯನಿಗೆ ಮೂರು ವರ್ಷಗಳ ಸಂಶೋಧನೆಯ ವಿಷಯ. ಮೊನ್ನೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ಜನಪದ ಭಂಡಾರ ನಾಡೋಜ ಸಿರಿಯಜ್ಜಿಯ ಬಗ್ಗೆ ಹೇಳಿದಾಗ ಸಾಮ್ಮರ್‌ಫೀಲ್ಡ್ ನೆನಪಾದ.ಇಬ್ಬರೂ ಸಮಾನ ಜೀನಿಯಸ್‍ಗಳೇ! ಸಿರಿಯಜ್ಜಿಯ ಭಂಡಾರವನ್ನು ಉಪಯೋಗಿಸಿಕೊಂಡು ಐದು ಜನ ಪಿ.ಹೆಚ್‍ಡಿ ತೆಗೆದುಕೊಂಡಿದ್ದಾರೆ. ಸಿರಿಯಜ್ಜಿಗೆ ನೆಪಮಾತ್ರಕ್ಕೂ ಒಂದಕ್ಷರ ಓದಲು ಬರುವುದಿಲ್ಲ!
ಎಷ್ಟೇ ವೇಗದಲ್ಲಿ ಕಾರು ಓಡಿಸಿದರೂ ಜಗಳೂರು ಚಳ್ಳಕೆರೆ ತಾಲ್ಲೂಕುಗಳ ನಿರ್ಮಾನುಷ ಕೆಂಬಯಲುಗಳನ್ನು ದಾಟಿ ನಾರಾಯಣಪುರವನ್ನು ತಲುಪಲು ಮೂರು ತಾಸುಗಳೇ ಜರುಗಿ ಹೋದವು. ಹಿಂದಿನ ಸಂಜೆ ಮೋಹನ ಬಂದು ಕೃಷ್ಣಶಾಸ್ತ್ರಿ ತಾತ ಬೆಳಗೆರೆಯಲ್ಲೆ ಇದ್ದಾರಂತೆ ಎಂಬ ಸುದ್ದಿ ತಂದ ಕೂಡಲೆ ಬೆಂಗಳೂರಿಗೆ ಹೋಗುವ ಯೋಜನೆ ರದ್ದುಮಾಡಿ ಮರುದಿನ ಕಾರು ತೆಗೆದುಕೊಂಡು ಹೊರಟೇಬಿಟ್ಟೆವು. ಅವರ ಜೊತೆ ಕಳೆದ ಎರಡು ದಿನ ನನ್ನ ಜೀವನದ ಅತ್ಯಂತ ಬೆಸ್ಟ್ ವೀಕೆಂಡ್!
ಬೆಳಗೆರೆ ತಾತನ ಜೊತೆ ಕಳೆದ ಎರಡು ದಿನಗಳಲ್ಲಿ ನಾವು ತಿಳಿದುಕೊಂಡದ್ದನ್ನು ಬರೆಯುತ್ತಾ ಹೋದರೆ ಬ್ಲಾಗ್‍ನ್ನು ವರ್ಷಗಂಟಲೆ ತುಂಬಿಸಬಹುದು. ಗಾಂಧೀಜಿ, ಡಿವಿಜಿ, ಸರ್.ಎಂ.ವಿ, ಮುಕುಂದೂರು ಸ್ವಾಮಿಗಳು, ರಮಣ ಮಹರ್ಷಿಗಳು,ಅಜ್ಜಪ್ಪ ಮೇಷ್ಟ್ರು, ಮಾಸ್ತಿ, ಬೇಂದ್ರೆ, ಬೆಳಗೆರೆ ಜಾನಕಮ್ಮ, ನಲ್ನುಡಿ ನಿಘಂಟಿನ ಅಲ್ಲಿಸಾಬ್, ಕಳ್ಳನಿಂಗ,ಪೂಜಾರ ಹನುಮಂತಪ್ಪ,ಪಾರಜ್ಜಿ ಇತ್ಯಾದಿ ವ್ಯಕ್ತಿ ಚಿತ್ರಣಗಳ ಕೇವಲ ಪಟ್ಟಿಯಿಂದಲೇ ಒಂದು ಲೇಖನವನ್ನು ತುಂಬಿಸಬಹುದು. ಇದಲ್ಲದೆ ಸ್ವತಃ ಶಾಸ್ತ್ರಿಗಳ ಸಾಧನೆ, ಧ್ಯಾನ, ದೇವರು ಮುಂತಾದ ಅಧ್ಯಾತ್ಮಿಕ ವಿಷಯಗಳ ಚರ್ಚೆ. ಇಡೀ ದಿನದ ಮಾತಿನ ನಂತರ ಸಂಜೆ ವಿಹಾರದ ನಂತರ ಹರಟೆಯಲ್ಲಿ ಅಕಸ್ಮಾತಾಗಿ ಬಂದಿದ್ದು ಜನಪದ ಭಂಡಾರ ಸಿರಿಯಜ್ಜಿಯ ಸಂಗತಿ. ಇದೊಂದು ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಹೆಚ್ಚಿನ ವಿಷಯಗಳಿಗಾಗಿ ಶಾಸ್ತ್ರಿಗಳ ಮರೆಯಲಾದೀತೆ? ಯೇಗ್ದಾಗೆಲ್ಲಾ ಐತೆ (ಕಡ್ಡಾಯವಾಗಿ ಮನೆಯಲ್ಲಿ ಇರಲೇಬೇಕಾದ ಪುಸ್ತಕ!), ಹಳ್ಳೀಮೇಷ್ಟ್ರು, ಸಾಹಿತಿಗಳ ಸ್ಮೃತಿ ಓದಿ.
ಕೃಷ್ಣಶಾಸ್ತ್ರಿಗಳು ಮತ್ತು ಹನೂರು ಕೃಷ್ಣಮೂರ್ತಿಗಳು ಚಿತ್ರದುರ್ಗದಲ್ಲಿ ಸಿರಿಯಜ್ಜಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಸಿರಿಯಜ್ಜಿಯ ಕೃಪೆಯಿಂದ ಪಿಎಚ್‍ಡಿ ಪಡೆದವರಲ್ಲಿ ಹನೂರು ಕೃಷ್ಣಮೂರ್ತಿಗಳೂ ಒಬ್ಬರು. ಸನ್ಮಾನದ ಆಹ್ವಾನ ಪತ್ರಿಕೆಯಲ್ಲಿ ಸಿರಿಯಜ್ಜಿ ಹತ್ತು ಸಾವಿರ ಜನಪದ ಗೀತೆಗಳನ್ನು ನೆನಪಿನಿಂದ ಹೆಕ್ಕಿ ತೆಗೆದು ಹಾಡುವುದಲ್ಲದೇ ಆ ಹಾಡುಗಳ ಅರ್ಥವನ್ನೂ ವಿವರಿಸಬಲ್ಲಳು ಎಂದು ಪ್ರಕಟಿಸಿದ್ದರು. ವಿಷಯ ತಿಳಿದ ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ಸನ್ಮಾನದ ಹಿಂದಿನ ದಿನ ಚಿತ್ರದುರ್ಗಕ್ಕೆ ಹೊರಟು ಬಂದರು. ನಾಗೇಗೌಡರಿಗೆ ಆಹ್ವಾನ ಇರಲಿಲ್ಲ. ಸಿರಿಯಜ್ಜಿಯನ್ನು ನೋಡಬೇಕೆಂದು ಬಯಕೆ ವ್ಯಕ್ತಪಡಿಸಿದ ನಾಗೇಗೌಡರ ಎದುರಿಗೆ ಸಿರಿಯಜ್ಜಿಯನ್ನು ಕರೆದೊಯ್ಯಲಾಯಿತು. ಸಿರಿಯಜ್ಜಿಯನ್ನು ಅಡಿಯಿಂದ ಮುಡಿಯವರೆಗೆ ದಿಟ್ಟೈಸಿದ ನಾಗೆಗೌಡರು ತಮ್ಮ ಬ್ಯೂರಾಕ್ರಟಿಕ್ ಗತ್ತಿನಲ್ಲಿ "ಇವಳೇನಾ ಸಿರಿಯಜ್ಜಿ ?" ಎಂದರು.
"ಹೌದು ಸ್ವಾಮಿ" ಶಾಸ್ತ್ರಿಗಳು ಉತ್ತರಿಸಿದರು.
" ಇವಳೇನು ದೆವ್ವನೋ ಇಲ್ಲ ಮನುಷ್ಯಳೋ ?"
"ನಮ್ಮ ಕಣ್ಣಿಗೇನೋ ಮನುಷ್ಯರ ಥರಾನೇ ಕಾಣಿಸ್ತಾಳೆ ಸ್ವಾಮಿ!"
"ನಾನು ಜಾನಪದ ಸಾಗರದಲಿ ಈಜಿದ್ದೇನೆ. ಎಂಥೆಂಥಾ ಜನಪದರನ್ನು ಸಂದರ್ಶಿಸಿದ್ದೇನೆ. ಹತ್ತು ಸಾವಿರ ಹಾಡುಗಳು ಒಬ್ಬಳೇ ಹೇಳುವುದೆಂದರೆ ಸುಮ್ಮನೇ ಎನ್ರೀ? ಇಷ್ಟೇಲ್ಲಾ ಉತ್ಪ್ರೇಕ್ಷೆ ಮಾಡಿ ಯಾಕೆ ಬರೆಯುತ್ತೀರಿ? ಅದಲ್ಲದೇ ಅರ್ಥ ಬೇರೆ ವಿವರಿಸುತ್ತಾಳೆ ಅಂತ ಹೇಳ್ತೀರಿ "
"ಉತ್ಪ್ರೇಕ್ಷೆ ಇಲ್ಲ ಸರ್ ಬೇಕಿದ್ದರೆ ನೀವೆ ಪರೀಕ್ಷಿಸಿ ನೋಡಿ"
ಎಂಟುವರೆಗೆ ಶುರುವಾಯಿತು ಅಜ್ಜಿಯ ಜನಪದ ಕಛೇರಿ. ಎಲ್ಲರೂ ಕೂತು ಕೇಳುತಿದ್ದರು. ನಡುವೆ ಯಾವುದೋ ಒಂದು ಗೀತೆಯಲ್ಲಿ ಚಿನಕುರುಳಿ ಎಂಬ ಪದ ಬಂತು. ಅಜ್ಜಿಯನ್ನು ಎಲ್ಲ ರೀತಿಯಿಂದಲೂ ಪರೀಕ್ಷಿಸಬೇಕೆಂದುಕೊಂಡಿದ್ದ ನಾಗೇಗೌಡರು "ನಿಲ್ಲಿಸು" ಎಂದರು.
"ಚಿನಕುರುಳಿ ಅಂದ್ರೆ ಏನು?"
"ಗೊತ್ತಿಲ್ಲ ಸ್ವಾಮಿ" ಎಂದಿತು ಅಜ್ಜಿ.
"ಎನ್ರೀ ಶಾಸ್ತ್ರಿಗಳೆ ನೀವು ಅಜ್ಜಿ ಅರ್ಥವಿವರಣೆ ಕೊಡುತ್ತಾಳೆ ಅಂತ ಬರೆದಿದ್ದೀರಿ ಗೊತ್ತಿಲ್ಲ ಅಂತಾಳಲ್ರಿ"
"ಗೊತ್ತಿದೆ ಸರ್ ಅವಳಿಗೆ ಆದರೆ ದೊಡ್ಡವರೆದುರಿಗೆ ಗೊತ್ತಿದೆ ಎಂದು ಹೇಳುವುದು ಅಹಂಕಾರ ಎನಿಸಬಹುದು ಅಂತ ಸುಮ್ಮನಿದ್ದಾಳೆ ಅನ್ನಿಸುತ್ತೆ"
" ಇರ್ಲಿ ... ಚಿನಕುರುಳಿ ಎಂದರೇನು ಎಂದು ನಾನು ಹೇಳುತ್ತೇನೆ ಕೇಳು ..." ಮುಂದುವರಿಸಿದರು ನಾಗೇಗೌಡರು " ಹಿಂದಿನ ಕಾಲದಲ್ಲಿ ದಾಸರು ದೇವರ ಭಜನೆಯನ್ನು ಮಾಡುತ್ತಾ ಭಕ್ತಿಯಲ್ಲಿ ಕುಣಿದಾಡಿಕೊಂಡು ತಿರುಪತಿಗೆ ತೆರಳುತ್ತಿದ್ದರು. ಇಡೀ ದಿನ ಕುಣಿದು ರಾತ್ರಿಯ ಹೊತ್ತಿಗೆ ಸುಸ್ತಾಗಿ ಹೋಗಿಬಿಡುತ್ತಿದ್ದರು. ಹಾಗಾಗಿ ದಣಿವು ತಿಳಿಯದಂತೆ ನಿದ್ದೆ ಮಾಡಲು ಈಚಲ ಹೆಂಡವನ್ನು ಕುಡಿಯುತಿದ್ದರು. ಹೆಂಡದ ಜೊತೆ ರುಚಿಗಾಗಿ ಬೇಳೆಯನ್ನು ಎಣ್ಣೆಯಲ್ಲಿ ಹುರಿದು ಉಪ್ಪುಖಾರ ಹಾಕಿ ತಯಾರಿಸಿದ ಚಿನಕುರುಳಿಯನ್ನು ತಿನ್ನುತಿದ್ದರು"
"ಅಂಗಲ್ಲ ತಗಿರಿ ಸಾಮಿ" ಎಂದಳು ಸಿರಿಯಜ್ಜಿ!
"ಅವಾಗೆಲ್ಲ ನಡುಕೊಂಡು ಓಬೆಕಿತ್ತು ತಿರುಪತಿಗೆ ಇಂದಿನಂಗೆ ಬಸ್ಸು ಮೊಟಾರು ಎಲ್ಲಾ ಇರ್ಲಿಲ್ಲ, ಓಗುವಾಗ ಎಂಗುಸ್ರು ಮಕ್ಳು ಎಲ್ಲಾ ಓಗ್ತಿದ್ರು. ದಾರಿಯಾಗೆ ಮಕ್ಳು ಬಾಯ್ಚಟಕ್ಕೆ ಏನಾರಾ ತಿನ್ನಕೆ ಹಟಾ ಮಾಡ್ತವೆ ಅಂತಾ ಬೇಳೆನಾ ಎಣ್ಣೇಲಿ ಹುರ್ದು ಉಪ್ಪುಖಾರ ಹಾಕೊಂಡು ತಗೊಂಡು ಹೋಗೊರು. ನಾವು ಗೊಲ್ರು ಸಾಮಿ ಯೆಂಡ ಕುಡಿಯಾಕಿಲ್ಲ. ದಾಸ್ರು ಎಲ್ಲಾರ ಯೆಂಡ ಕುಡಿಯೋದು ಕೇಳೀರಾ ಸಾಮಿ ನೀವು ?"
ಗೌಡರು ಪೆಚ್ಚಾದರು. "ಹೌದೇನ್ರಿ?" ಎಂದು ಕೇಳಿದರು ಶಾಸ್ತ್ರಿಗಳನ್ನು. ಸಮ್ಮತಿ ಸೂಚಕವೆಂಬಂತೆ ಶಾಸ್ತ್ರಿಗಳು ಸುಮ್ಮನಿದ್ದರು. "ಹೌದೇನ್ರಿ ಕೃಷ್ಣಮೂರ್ತಿ?"
"ಆಕೆ ಹೇಳುತ್ತಿದ್ದಾಳೆ ಎಂದರೆ ನಿಜವೇ ಇರಬೇಕು ಸರ್ !"
ಗೌಡರು ಸುಮ್ಮನಾದರು.
ಸರಿರಾತ್ರಿ ಎರಡೂವರೆ ವರೆಗೆ ಸತತವಾಗಿ ನಡಿಯಿತು ಅಜ್ಜಿಯ ಗೊಟ್ಟಿ. ಕೊನೆಗೆ ಸೋಲೊಪ್ಪಿಕೊಂಡ ಗೌಡರು "ತಾಯಿ ನನ್ನಿಂದ ತಪ್ಪಾಯಿತು ಕ್ಷಮಿಸಿಬಿಡು" ಎಂದರು.
ಮರುದಿನ ಸಮಾರಂಭದಲ್ಲಿ ಹಾಜರಿದ್ದ ನಾಗೇಗೌಡರು ಅಜ್ಜಿಯನ್ನು ಇದು ಜನಪದ ಲೋಕದ ಅದ್ಭುತ ಎಂದು ಪ್ರಶಂಸಿಸಿ ಜನಪದ ಭಂಡಾರ ಎಂದು ಬಿರುದು ಕೊಟ್ಟರು. ಬೆಲೆಬಾಳುವ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು. ನಾಗೇಗೌಡರು ಆ ರೀತಿ ನಡೆದುಕೊಂಡಿರಬಹುದು ಆದರೆ ಕಡೆಯಲ್ಲಿ ತಮ್ಮ ತಪ್ಪು ಒಪ್ಪಿಕೊಂಡು ಸರಿಪಡಿಸಿಕೊಂಡರು ಅದರಿಂದಾಗಿಯೇ ಅವರನ್ನು ನಾನು ದೊಡ್ಡ ಮನುಷ್ಯರೆಂದು ಕರೆಯುವುದು ಎಂದು ಹೇಳಿ ಮಾತು ಮುಗಿಸಿದರು ಶಾಸ್ತ್ರಿ ತಾತ.
ಅಂದ ಹಾಗೆ ಚಿತ್ರದುರ್ಗದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಸಿರಿಯಜ್ಜಿಯ ಹೆಸರೂ ಚರ್ಚೆಗೆ ಬಂದಿತ್ತು. ಶಾಸ್ತ್ರಿಗಳಿಗೆ ೯೩ ವರ್ಷ. ಸಿರಿಯಜ್ಜಿ ಅವರಿಗಿಂತ ಸುಮಾರು ೧೫ ವರ್ಷ ದೊಡ್ಡವಳಿರಬಹುದು ಅಷ್ಟೆ! ಟೆಕ್ಕಿಯಾಗಿ ತೀರಾ ಅಗತ್ಯಕ್ಕಿಂತ ಹೆಚ್ಚಾಗಿಯೇ ನಾಗರೀಕನಾದ ಮೇಲೆ ನನ್ನ ಜೀವನದ ಸೊಗಡನ್ನೆಲ್ಲೊ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತ್ತು. ಕಳೆದ ಸೊಗಡನ್ನು ಸೊಗಸಾದ ರೀತಿಯಲ್ಲಿ ಹುಡುಕಿಕೊಟ್ಟವರು ಕೃಷ್ಣಶಾಸ್ತ್ರಿಗಳು.
ಎಂಬಿಎ ಎಂಬ ಹಾಳೆ ಇಟ್ಟುಕೊಂಡು ನಮ್ಮನ್ನೆಲ್ಲ ಆಟ ಆಡಿಸುವ ಹೆಚ್ ಆರ್ ಗಳ ಜೊತೆ ಜೋರಾಗಿಯೇ ಜಗಳ ಆಗಿತ್ತು. ಮೈ ಬಗ್ಗಿಸಿ ದುಡಿಯುವುದು ನಾವು, ದುಡ್ಡು ಕೊಡುವುದು ನಮ್ಮ ಕೆಲಸಕ್ಕೆ, ಇವರೆಲ್ಲ ನಮ್ಮನ್ನು ಅತ್ತ ಇತ್ತ ಜಾಲಾಡಿ ಪಗಾರ ಪಡೆಯುತ್ತಾರೆ.ಇವರೇನೂ ಐಐಎಂ ಗಳಿಂದ ಬಂದ ಜೀನಿಯಸ್‍ಗಳಲ್ಲ. ಹಣಕ್ಕಾಗಿ ರಸ್ತೆ ಬದಿ ತೆರೆದುಕೊಂಡ ಚಿಕ್ಕ ಪುಟ್ಟ ಕಾಲೇಜುಗಳ "ಔಟ್‍ಪುಟ್ಟುಗಳು". ಇವರನ್ನು ಸಾಕುವುದು ನಾವು; ಆದರೆ ನಮ್ಮ ಮೇಲೆಯೇ ಬಾಸ್ ಗಿರಿ ತೋರಿಸುತ್ತಾರೆ. ಈ ವಿಚಾರಗಳು ನನ್ನನ್ನು ಪದೇ ಪದೇ ಕೆರಳಿಸುತ್ತಿದ್ದವು. ಮನಸ್ಸು ತೀರಾ ಹಂಡಾರೆದ್ದು ಹೋಗಿತ್ತು. ಅದಕ್ಕಿಂತ ಮಿಗಿಲಾಗಿ ನನಗಾಗಿ ನಾನು ಅನೇಕ ಪ್ರಶ್ನೆಗಳ ಉತ್ತರಗಳನ್ನು ಕಂಡುಕೊಳ್ಳಬೇಕಿತ್ತು. ವಾಮಚಾರದ ಭೀಭತ್ಸ್ಯಗಳನ್ನು ಕಣ್ಣೆದುರಿಗೇ ನೋಡಿದ ಮೇಲೆ ವಿಶ್ವದಲ್ಲಿ ಶಕ್ತಿಯ ಸಂಚಯದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಮನಸ್ಸಿನ ತಾಕತ್ತನ್ನು ಅರಿಯಬೇಕಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನೇ ಮೊದಲು ಹುಡುಕಿಕೊಳ್ಳಬೇಕಿತ್ತು. ಮನೋಮಯಕೋಶಕ್ಕೊಂದು ಓರಾಯಿಲ್ ಆಗಬೇಕಿತ್ತು. ಈ ಬಾರಿಯ ಸರ್ವಿಸ್ ಸ್ಟೇಷನ್ ಬೆಳಗೆರೆ ತಾತನ ಮನೆ!
ಧ್ಯಾನದಂತಹ ಕೈವಲ್ಯ ಸಾಧಕವನ್ನು ಏಕಾಗ್ರತೆ ವೃದ್ಧಿಸಿಕೊಳ್ಳುವ, ನೆನಪಿನಶಕ್ತಿಯನ್ನು ಹೆಚ್ಚಿಸಿಕೊಳ್ಳುವ, ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದುಕೊಳ್ಳುವಂತಹ ಚಿಲ್ಲರೆ ಉಪಯೋಗಗಳಿಗಾಗಿ ಬಳಸಿಕೊಳ್ಳುವ ಜನರ ನಡುವಿನಿಂದ ಕಾಲು ಕಿತ್ತುಕೊಂಡು ಹೋಗಿ ನಿಜವಾದ ಸಾಧಕನ ನಡುವೆ ಸಮಯ ಕಳೆದಿದ್ದೆ. ಮನಸ್ಸನ್ನು ಮತ್ತೆ ತನ್ನ ದಾರ್ಢ್ಯಕ್ಕೆ ಹಿಂದಿರುಗಿಸಿದರು ಶಾಸ್ತ್ರಿಗಳು.

ಸೋಮವಾರ, ಸೆಪ್ಟೆಂಬರ್ 22, 2008

ವಯೊಲಿನ್ ಮಾಂತ್ರಿಕನಿಗೆ ನುಡಿ ನಮನ


ಚೆವಾರರ ಬ್ಲಾಗಿನಲ್ಲಿ "ಪಿಟೀಲು ಮಾಂತ್ರಿಕನ ಪಿಟೀಲು ಮೌನಕ್ಕೆ ಶರಣಾಯಿತು" ಎಂಬ ವಾಕ್ಯ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಚುಳ್ಳೆಂದವು. ಬಹುಶಃ ಯಾರ ಸಾವಿಗೂ ನಾನು ಇಷ್ಟು ಭಾವುಕನಾಗಿದ್ದಿಲ್ಲವೇನೋ ! ಕುನ್ನುಕ್ಕುಡಿ ವೈದ್ಯನಾಥನ್ ಚಿರಂಜೀವಿಯಾಗಿರಲಿ ಎಂದು ನಾನು ಬಯಸಿದರೂ ಅದು ಸಾಧ್ಯವಿಲ್ಲ. ಆದರೆ ಮನಸ್ಸಿನ ದುರಾಸೆ.... ಅವರು ಇನ್ನು ಸಲ್ಪ ದಿನ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ.
ಸಾಫ್ಟ್ ವೇರ್ ಎಂಬ ಆಶಾಢಭೂತಿ ಪ್ರಪಂಚವನ್ನು ಸೇರಿ ಬೌದ್ಧಿಕ ದೈಹಿಕ ಹಾಗು ಮಾನಸಿಕವಾಗಿ ನಿಷ್ಕ್ರಿಯನಾಗುವುದಕ್ಕಿಂತ ಮುಂಚಿನ; ಓದು ಸಂಗೀತ ತಿರುಗಾಟಗಳಿಂದ ಕೂಡಿದ ಅದಮ್ಯ ಜೀವನೋತ್ಸಾಹದ ದಿನಗಳವು. ಪ್ರತಿವರ್ಷದಂತೆ ಕೆ.ಆರ್. ಮಾರುಕಟ್ಟೆ ಹತ್ತಿರದ ಕೋಟೆ ಶಾಲೆಯ ಆವರಣದಲ್ಲಿ ರಾಮನವಮಿ ಉತ್ಸವ ನಡೆಯುತ್ತಿತ್ತು. ಪ್ರತಿದಿನ ಒಬ್ಬೊಬ್ಬ ಲೆಜೆಂಡರಿ ಎಂಬಂತಹ ಕಲಾವಿದರಿಂದ ಕಛೇರಿ ಇರುತ್ತಿತ್ತು. ಕುನ್ನುಕ್ಕುಡಿಯವರ ಕಛೇರಿ ಇದ್ದ ದಿನ ಗೋಪಿ ಫೋನ್ ಮಾಡಿದ ( ಹೌದು.. ಜಾಲಿ ಬಾರಿನಲ್ಲಿ ಕೂತು ಪೊಲಿ ಗೆಳೆಯರು ಗೇಲಿ ಮಾಡುತ್ತಿದರಲ್ಲ ಅದೇ ಗೋಪಿ !) ಕುನ್ನುಕ್ಕುಡಿ ಕಛೇರಿಯ ವಿಷಯ ತಿಳಿಸಿ ’ಬಾ’ ಎಂದು ಆಜ್ಞಾಪಿಸಿದ. ಹೇಳಿ ಕೇಳಿ ಕಾರ್ನಾಟಿಕ್ ಸಂಗೀತ. ಅದರಲ್ಲು ಪಿಟೀಲು ಅಂತ ಬೇರೆ ಹೆಳ್ತಿದ್ದಿಯಾ ರಿಸ್ಕ್ ಬೇಡ ಮಾರಾಯ ಅಂದೆ.

ಹಿಂದುಸ್ತಾನಿ ಅಂದ್ರೆ ಮೈಯೆಲ್ಲ ಕಿವಿಯಾಗಿಸಿ ಕೇಳುತ್ತೇನೆ. ರಾತ್ರಿಯೆಲ್ಲ ಕೂತು, ಪರೀಕ್ಷೆಯನ್ನೂ ಲೆಕ್ಕಿಸದೆ ಪಂ.ವಿನಾಯಕ ತೊರವಿ, ವೆಂಕಟೇಶ ಕುಮಾರರ ಸಂಗೀತ ಕೇಳಿದ್ದಿದೆ. ಆದರೆ ಕಾರ್ನಾಟಿಕ್ ಅಂದರೆ ಯಾಕೊ ಮಾರು ದೂರ. ಪಂಡಿತ್ ಬಾಲಮುರುಳಿ ಹೊರತು ಪಡಿಸಿದರೆ ಯಾರ ಸಂಗೀತವೂ ತಲೆಗೆ ಹೋಗಿದ್ದೇ ಇಲ್ಲ. ವಲಯಪಟ್ಟಿ, ಸುಬ್ಬುಲಕ್ಷ್ಮಿ, ಜೇಸುದಾಸ್ ಅವರೆಲ್ಲ ಹಾಡುತ್ತಿದ್ದರೆ ಚೂಪಾದ ಮೊಳೆಯೊಂದನ್ನು ಮಿದುಳೊಳಗೆ ನೆಟ್ಟು ಆಳಕ್ಕೆ ಕೊರೆದ ಹಾಗಾಗುತ್ತದೆ. ದಯವಿಟ್ಟು ಗಮನಿಸಿ, ಇದು ನನ್ನಲ್ಲಿರುವ ಹುಳುಕೇ ಹೊರತು ಈ ಮಹಾನ್ ಸಾಧಕರದಲ್ಲ. ಅಂತದ್ರಲ್ಲಿ ಕುನ್ನುಕ್ಕುಡಿ ಕಛೇರಿಗೆ ಹೋಗಲು ಸಹಜವಾಗೇ ಹೆದರಿಕೆ ಆಗಿತ್ತು. ಅವರು ಕಲೈಮಾಮಣಿ ಕಣೋ! ಎಂದು ಆಸೆ ತೋರಿಸಲು ನೋಡಿದ. ಧಾರವಾಡದಲ್ಲಿ ಕಲ್ಲೊಗೆದರೆ ಕವಿಯೊಬ್ಬನಿಗೆ ತಾಗುವ ಹಾಗೆ, ಬೆಂಗಳೂರಲ್ಲಿ ಕಲ್ಲೊಗೆದರೆ ಟೆಕ್ಕಿಯೊಬ್ಬನಿಗೆ ತಗುಲುವ ಹಾಗೆ ತಂಜಾವೂರು ಮಧುರೈ ಕಡೆಗಳಲ್ಲಿ ಕಲೈಮಾಮಣಿಗಳಿಗೆ ತಾಗುತ್ತದೆ. ವಿಮಾ ಕಂಪನಿಯ ಏಜೆಂಟ್‍ಗಳು ಪಾಂಪ್ಲೆಟ್ ಹಂಚುವ ಹಾಗೆ ಅಲ್ಲಿ ಕಲೈಮಾಮಣಿ ಬಿರುದನ್ನು ಹಂಚುತ್ತಾರೆ ಅನ್ನಿಸುತ್ತದೆ. ಹಾಗಾಗಿ ಗೋಪಿಯ ಈ ಆಮಿಷ ನನ್ನಲ್ಲೇನೂ ಬದಲಾವಣೆ ಉಂಟುಮಾಡಲಿಲ್ಲ. ಪದ್ಮಭೂಷಣ್ ಗುರು ಅವ್ರು ... ಇವತ್ತು ಇಷ್ಟ ಆಗ್ಲಿಲ್ಲ ಅಂದ್ರೆ ಮುಂದೆ ನಿನ್ನನ್ನ ಯಾವ ಸಂಗೀತ ಕಛೇರಿಗೂ ಕರಿಯೊಲ್ಲ.. ಸುಮ್ನೆ ಬಾ ಅಂದ. ಸರಿ ಹಾಳಾಗಿ ಹೋಗಲಿ ಅರ್ಧ ಗಂಟೆ ಕೂತು ಎದ್ದು ಬಂದರಾಯಿತು ಎಂದುಕೊಂಡು ಸಂಜೆ ಕಛೇರಿಗೆ ತಲುಪಿದೆ.
ನಟ ಶಿವರಾಂರವರ ಪರಮ ಬೋರಿಂಗ್ ಸ್ವಾಗತ ಭಾಷಣದ ನಂತರ ಕಛೇರಿ ಶುರುವಾಯಿತು. ಕಛೇರಿ ಶುರುವಾಗಿತ್ತಷ್ತೇ ! ಕುನ್ನುಕ್ಕುಡಿ ಪಿಟೀಲನ್ನು ಹೆದೆಯೇರಿಸಿ ಬಿಲ್ಲಿನಿಂದ ಎರಡು ಬಾರಿ ಮೀಟಿದ್ದರಷ್ಟೇ ! "ಏನ್ ಸಿಸ್ಯಾ ಇದು.. ಮೊದಲ್ನೆ ಬಾಲೇ ಸಿಕ್ಸರ್ರು !" ಅಂತ ಉದ್ಗರಿಸಿದೆ. ಇನ್ನು ಸೆಂಚುರಿಗಳು ಬರೋದಿದೆ ಕಾದು ನೋಡು ಅಂದು ಮುಂದಕ್ಕೆ ತಿರುಗಿದ. ಮುಂದಿನ ಎರಡು ತಾಸುಗಳು ಸಭಾಂಗಣದಲ್ಲಿ ಕೂತಿದ್ದವರೆಲ್ಲ ಈ ಲೋಕದಲ್ಲೆ ಇರಲಿಲ್ಲ. ಯಾವುದೊ ಕಿನ್ನರ ಲೋಕಕ್ಕೆ ನಮ್ಮನ್ನು ಅನಾಮತ್ತಾಗಿ ಕರೆದೊಯ್ದಿದರು ಕುನ್ನುಕ್ಕುಡಿ ವೈದ್ಯನಾಥನ್ ! ನನ್ನ ಧಮನಿಗಳಾಲ್ಲಗಲೆ ಕುನ್ನುಕ್ಕುಡಿ ಎಂಬ ಮಾಯಾವಿಯ ಜಾದೂ ಹರಿಯತೊಡಗಿತ್ತು. ಕುನ್ನುಕ್ಕುಡಿಯವರ ಸಂಗೀತ ಕಛೇರಿಯೆಂದರೆ ಕೇಳುವುದಷ್ಟೇ ಅಲ್ಲ ನೋಡುವುದು ಕೂಡ. ಕುನ್ನುಕ್ಕುಡಿ ಕೈಲಿರುವ ಕೈಲಿರುವ ಪಿಟೀಲು ಸಂಗೀತ ಮಾತ್ರವಲ್ಲ ಸಾಹಿತ್ಯವನ್ನೂ ಹೊರಡಿಸುತ್ತದೆ. ಇದು ಅತಿಶಯವಲ್ಲ. ಒಮ್ಮೆ ನೇರವಾಗಿ ಕೇಳಿದರೆ ನಿಮ್ಮ ಅನುಭವಕ್ಕೂ ಬರುತ್ತದೆ. ಅವರ ಕೈಲಿ ಪಿಟೀಲು ಮಾತನಾಡುತ್ತದೆ ಎಂಬುದೂ ನಿಜ. ಕುನ್ನುಕ್ಕುಡಿಯವರ ಮುಖವನ್ನು ಅವರು ಪಿಟೀಲು ನುಡಿಸುವಾಗ ನೋಡಬೇಕು. ಪಿಟೀಲಿನೊಡನೆ ಯಾವುದೋ ಲಘು ಹರಟೆಯಲ್ಲಿದಾರೇನೋ ಅನ್ನಿಸುತ್ತದೆ. ಅವರ ಮತ್ತೆ ಅವರ ಪಿಟೀಲಿನ ವರಸೆ ಒಮ್ಮೆ ತಂದೆ ಮಗನ ಆಪ್ತ ಮಾತುಕತೆಯಂತಿದ್ದರೆ ಮತ್ತೊಮ್ಮೆ ಶಾಲೆಗೆ ಹೋಗಲು ರಚ್ಚೆ ಹಿಡಿದ ಮಗುವಿನ ಸಂಭಾಳಿಸುವ ತಾಯಿಯ ಹಾಗೆ ಕಾಣುತ್ತಾರೆ ಕುನ್ನುಕ್ಕುಡಿ. ಒಮ್ಮೊಮ್ಮೆ ಲಾಲಿ ಹಾಡಿ ಪಿಟೀಲನ್ನು ಮಲಗಿಸುತ್ತಿದ್ದಾರೇನೋ ಎಂಬಂತೆ ಕಂಡರೆ ಇನೊಮ್ಮೆ ಮೊಂಡು ಹುಡುಗನ ಪಳಗಿಸುವವರಂತೆ ತೋರುತ್ತಿದ್ದರು. ಹಣೆಯಗಲದ ಬಿಳಿ ಪಟ್ಟೆ, ನಡುವೆ ಕೆಂಪು ಕುಂಕುಮ, ಉದ್ದ ಮುಖದಲ್ಲಿ ಆಗಾಗ ಬದಲಾಗುವ ಭಾವನೆಗಳು, ಪಿಟೀಲಿಗೆ ಜೀವ ತುಂಬುವ ಧಾಟಿ...ಎಲ್ಲ ಸೇರಿ ನನ್ನ ದೃಷ್ಟಿಯಲ್ಲಿ ಕುನ್ನುಕ್ಕುಡಿಯವರನ್ನು ದೈವತ್ವಕ್ಕೇರಿಸಿದವು. ಸಾಕ್ಷಾತ್ ಸರಸ್ವತಿಯೇ ಸ್ವತಃ ನಿಂತು ನಿರ್ದೇಶಿಸಿ ಅವರಿಂದ ಸಂಗೀತವನ್ನು ಹೊರಡಿಸುತ್ತಾಳೇನೋ ಎಂಬಂತಿದ್ದ ಆ ಕಛೇರಿಯಲ್ಲಿ ಎರಡು ತಾಸು ಸ್ವಯಂ ಕಾಲವೇ ಪ್ರಚ್ಛನ್ನವಾಗಿಬಿಟ್ಟಿತ್ತು. ಕರ್ನಾಟಕ ಸಂಗೀತದ ಬಗೆಗಿನ ನನ್ನ ಅಸಡ್ಡೆಯನ್ನು ಎಡಗಾಲಿನ ಧೂಳಿನಂತೆ ಝಾಡಿಸಿ ಕೊಡವಿ ಹಾಕಿದ್ದರು ಮಾಂತ್ರಿಕ ಕುನ್ನುಕ್ಕುಡಿ ವೈದ್ಯನಾಥನ್ . ನನ್ನ ಅಜ್ಞಾನದ ಬಗ್ಗೆ, ಪೂರ್ವಾಗ್ರಹದ ಬಗ್ಗೆ ನನಗೆ ತೀರಾ ನಾಚಿಕೆಯಾಯಿತು.
ಕಛೇರಿಯ ನಂತರ ಕುನ್ನುಕ್ಕುಡಿ ಅರೆಗನ್ನಡದಲ್ಲಿ ಸಂಗೀತ ರಸಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಆ ದಿನ ಅವರ ಮಡದಿಯೂ ಬಂದಿದ್ದರು. ಅದೇ ಮೊದಲ ಬಾರಿಗೆ ಅವರು ತಮ್ಮ ಪತಿಯ ಕಛೇರಿಯನ್ನು ಆಸ್ವಾದಿಸಿದ್ದಂತೆ. ಮೊಟ್ಟಮೊದಲ ಬಾರಿಗೆ ನನ್ನ ಮನದನ್ನೆ ನನ್ನ ಕಛೇರಿಗೆ ತಮ್ಮ ಉಪಸ್ಥಿತಿಯನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದರು. ಅದಾದ ಒಂದು ವಾರದಲ್ಲಿ ಎಂಬತ್ತು ಜನ ವಿದ್ವಾಂಸರನ್ನೊಳಗೊಂಡ ಕಛೇರಿಯನ್ನು ಅದೇ ವೇದಿಕೆಯಲ್ಲಿ ತಮ್ಮ ಸಂಗೀತ ಸಂಶೋಧನಾ ಸಂಸ್ಥೆಯ ವತಿಯಿಂದ ನಡೆಸಿಕೊಟ್ಟರು. ನಡುನಡುವೆ ತಮ್ಮ ಸಂಶೋಧನೆ ರಾಗಗಳ ಮಾಹಿತಿಯನ್ನು ನೀಡಿದರು.
ಇದಾಗಿ ಕುನ್ನುಕ್ಕುಡಿಯನ್ನು ತೀರಾ ಹಚ್ಚಿಕೊಂಡು ಬಿಟ್ಟಿದ್ದೆ. ಯಾವುದೋ ವೆಬ್‍ಸೈಟ್‍ನ ಮೂಲೆಯಲ್ಲಿ ಅವರು ತೀರಿ ಹೋದ ಸುದ್ದಿಯನ್ನು ಓದಿ ಇಡೀ ದಿನ ಮಂಕು ಬಡಿದವನಂತೆ ಕೂತಿದ್ದೆ. ಮರುದಿನ ದುಃಖ ತೋಡಿಕೊಳ್ಳಲು ಗೋಪಿಗೆ ಫೋನಾಯಿಸಿದಾಗ ಎರಡು ಮಾತಿನಲ್ಲಿ ಬೇಜಾರು ವ್ಯಕ್ತ ಪಡಿಸಿದ್ದನಷ್ಟೆ. ಮಾತು ಕುನ್ನುಕ್ಕುಡಿ ಸಾವಿಗೆ ಮೀಡಿಯಾದಲ್ಲಿ ಪ್ರಚಾರ ಸಿಗದ ಬಗ್ಗೆ ತಿರುಗಿತು. ಪೇಪರ್ ನ್ಯೂಸ್ ಚಾನಲ್‍ಗಳವರು ಯಾರುಯಾರಿಗೆ ಹುಟ್ಟಿರಬಹುದು ಎಂಬುದನ್ನು ಎಲ್ಲಾಕೋನಗಳ ಮೂಲಕ ಲೆಕ್ಕ ಹಾಕಿ ಅವರ ಪರಪಿತೃಗಳನ್ನೆಲ್ಲನ್ನೆಲ್ಲ ಸೇರಿಸಿ ಬೈದು ಉಗಿದು ಹಾಕಿದ. ಅವನೇ ಹೇಳಿದಂತೆ ಅರೆನಗ್ನ ಪಾರ್ಟಿಗಳ ವಿವರವಾದ ಚಿತ್ರಣಗಳನ್ನು ಪುಟಗಟ್ಟಲೆ ಬರೆಯುವ ಟೈಂ‍ಸ್ ಆಫ್ ಇಂಡಿಯಾ ಎಂಬ ಪತ್ರಿಕೆ ಒಂದು ಮೂಲೆಯಲ್ಲಿ ಒಂದು ಪ್ಯಾರಾ ಸುದ್ದಿಯನ್ನು ಮಾತ್ರ ಪ್ರಕಟಿಸಿತ್ತು. ಪತ್ರಿಕೆಗಳಿಗೆ ಬೈದು ಬೈಗುಳಗಳನ್ನು ಅಪಮಾನಿಸಲು ಇಷ್ಟವಿಲ್ಲದೇ ಇಲ್ಲಿಗೆ ಈ ವಿಷಯವನ್ನು ಮುಗಿಸುತ್ತಿದ್ದೇನೆ.

ಕಡೆಯದಾಗಿ ಕುನ್ನುಕ್ಕುಡಿಯವರಿಗೆ ನನ್ನ ಯೋಗ್ಯತೆಗೆ ತಕ್ಕಷ್ಟು ನುಡಿ ನಮನಗಳನ್ನು ಅರ್ಪಿಸಿ ಲೇಖನವನ್ನು ಕೊನೆಗೊಳಿಸುತ್ತೇನೆ. ಚರಮವೇ ಇಲ್ಲದ ಕುನ್ನುಕ್ಕುಡಿ ವೈದ್ಯನಾಥನ್‍ರವರ ಸಂಗೀತಕ್ಕೆ, ಸೈಂಧವ ಸಾಧನೆಗೆ, ವ್ಯಕ್ತಿತ್ವಕ್ಕೆ, ಮುಖದಲ್ಲಿ ಸದಾ ಲಾಸ್ಯವಾಡುವ ನಿಷ್ಕಲ್ಮಷ ನಗುವಿಗೆ ಕೋಟಿ ಕೋಟಿ ನಮನಗಳು. ಬಿಸ್ಮಿಲ್ಲಾ ಖಾನ್‍ರಂತೆ ಸಂಗೀತ ಸಾಧನೆಯಿಂದಲೇ ದೈವತ್ವಕ್ಕೇರಿದ ಕುನ್ನುಕ್ಕುಡಿಯವರ ಕೀರ್ತಿಯೂ ಆಚಂದ್ರಾರ್ಕ. ಕುನ್ನುಕ್ಕುಡಿಯವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ನೀವೂ ಪ್ರಾರ್ಥಿಸಿದರೆ ನಾನು ಈ ಲೇಖನ ಪ್ರಕಟಿಸಿದ್ದೂ ಸಾರ್ಥಕ ಎಂದುಕೊಳ್ಳುತ್ತೇನೆ.

ಗುರುವಾರ, ಜುಲೈ 3, 2008

ಅಘನಾಶಿನಿ ಕಾನನದ ನಡುವೆ...

ಕುಮುಟಾದಿಂದ ಸುಮಾರು ಇಪ್ಪತ್ತು ಕಿ ಮೀ ದೂರದಲ್ಲಿದೆ ಕಂದವಳ್ಳಿ ಎಂಬ ಗ್ರಾಮ. ವಿದ್ಯುತ್ ಮತ್ತು ಮೊಬೈಲ್ ಗಳು ಈ ಊರಿನಲ್ಲಿ ಅಷ್ಟಕ್ಕಷ್ಟೆ. ಇದೇ ಊರಿನಲ್ಲಿ ನನ್ನ ಸ್ನೇಹಿತ ಗಣೇಶ ಭಟ್ಟರಿರುವುದು. ಗಣೇಶ ಭಟ್ಟರು ಮೆಕ್ಯಾನಿಕಲ್ ಇಂಜಿನೀರಿಂಗ್ ಪದವೀಧರ. ಆಝಾದಿ ಬಚಾವೊ ಆಂದೋಲನದ ಕಾರ್ಯಕರ್ತ. ರಾಜೀವ್ ದೀಕ್ಷಿತರ ಮಾತಿನಿಂದ ಪ್ರೇರಿತರಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಔಷಧೀಯ ಸಸ್ಯಗಳನ್ನು ಬೆಳೆಯುವುದು, ದೆಶೀಯ ಸಸ್ಯ ತಳಿಗಳ ಸಂರಕ್ಷಣೆಗಾಗಿ ಬೀಜ ಬ್ಯಾಂಕ್, ಗೋ ಸಂರಕ್ಷ್ಣಣೆ, ಸ್ವದೇಶಿಯ ವೈದ್ಯ ಪದ್ಧತಿಯ ಪುನರುತ್ಥಾನ ಇತ್ಯಾದಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಕಂದವಳ್ಳಿಗೆ ಈ ಬಾರಿ ಭೇಟಿ ಕೊಡುವ ಆವಕಾಶ ಒದಗಿ ಬಂತು. ಭಟ್ಟರ ಪ್ರೀತಿಯ ಕರೆಯ ಮುಂದೆ ಕಾಲ ಹೆಬ್ಬೆರಳಿನ ಉಗುರು ಕಿತ್ತು ಯಮಯಾತನೆ ಕೊಡುತ್ತಿದ್ದ ಗಾಯವೂ ಲೆಕ್ಕಕ್ಕೆ ಬರಲಿಲ್ಲ. ಮುಂಗಾರು ಇನ್ನೂ ಶೈಶಾವಸ್ಥೆಯಲ್ಲಿದ್ದರೂ ಮಳೆ ಬಾಣಗಳ ಬಿರುಸಿನಿಂದ ನೆಲವನ್ನಪ್ಪಳಿಸುತ್ತಿತ್ತು. ದಿನಕ್ಕೆ ಹೆಚ್ಚೆಂದರೆ ಅರ್ಧ ಘಂಟೆಗಳ ಬ್ರೇಕ್ ಅಷ್ಟೆ. ದಿನವಿಡೀ ಮಳೆ ಎಡೆಬಿಡದೆ ಹುಯ್ಯುತ್ತಿತ್ತು. ಅಂಥ ಸಮಯದಲ್ಲಿ ಇಂಚಿಂಚಾಗಿ ಪ್ರಾಣ ಹೀರುತ್ತಿದ್ದ ಕಾಲ ಹೆಬ್ಬೆರೆಳ ಗಾಯವನ್ನು ಹೊತ್ತುಕೊಂಡು ನನ್ನಂಥ ಹುಚ್ಚನೇ ಹೊರಡಬೇಕಷ್ಟೆ. ಕಂದವಳ್ಳಿ ನಾಲ್ಕಾರು ಮನೆಗಳ ಹಳ್ಳಿ. ಸುತ್ತಲೂ ಗವ್ವೆನ್ನುವಂಥ ಕಾಡು. ಭಟ್ಟರ ಮನೆ ಮುಂದೆ ನಾಲ್ಕೆಕರೆ ಅಡಿಕೆ ತೋಟ. ತೋಟದಾಚೆ ಬಳುಕುತ್ತ ಹರಿಯುವ ಅಘನಾಶಿನಿ ನದಿ ! ಕೆಲಸದ ಒತ್ತಡಗಳ ನಡುವೆ ಹಿಪ್ಪೆಯಾಗಿ ಜೀವನದ ಸವಿಯನ್ನೇ ಕಳೆದುಕೊಂಡವರಿಗೆ ಅತ್ಯುತ್ತಮ ಬ್ರೇಕ್ ಸ್ಪಾಟ್ ನಮ್ಮ ಗಣೇಶ್ ಭಟ್ಟರ ಮನೆ. ನಾಲ್ಕು ದಿನ ಜೀವನದ ಎಲ್ಲ ವಿಕಲ್ಪಗಳಿಂದ ವಿಮುಖರಾಗಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಊರಿನಲ್ಲಿ ದಿನಗಳನ್ನು ಕಳೆಯುವುದೇ ಒಂಥರಾ ಸುಖ ! ಕಾಲ ದೇಶಗಳ ಹಂಗಾಗಲೀ ಪರಿವೆಯಾಗಲೀ ಇಲ್ಲದೆ ಬದುಕುವ ಜನ ಇಷ್ಟು ನೆಮ್ಮದಿಯಾಗಿರುತ್ತಾರೆ ಎಂದು ನನಗೆ ಗೊತ್ತಾದದ್ದೇ ಈ ನಾಲ್ಕು ದಿನಗಳಲ್ಲಿ. ಐಷಾರಾಮಿಯಿಂದ ದೂರ ಪ್ರಕೃತಿಗೆ ಹತ್ತಿರವಾಗಿ ಬದುಕುವುದು ಕೋಪವೂ ಸೇರಿದಂತೆ ಅರಿಷಡ್ವರ್ಗಗಳಿಗೆ, ಮನೋವಿಕಾರಗಳಿಗೆ ವಿರಾಮ ಕೊಡುತ್ತದೆ ಎಂಬುದೂ ಇಲ್ಲಿ ನನ್ನ ಅನುಭವಕ್ಕೆ ಬಂತು.

ಹವ್ಯಕ ಭಾಷೆ, ಭಟ್ಟರ ತಾಯಿಯ ರುಚಿಕಟ್ಟಾದ ಕೈಯಡುಗೆ, ಮಲೆನಾಡು ಗಿಡ್ಡ ತಳಿಯ ಕಾಮಧೇನುಗಳ ಕ್ಷೀರ ರಜೆಯ ಮಜೆಯನ್ನು ನೂರ್ಮಡಿಗೊಳಿದ್ದವು. ಕಾಯರಣೆ, ತಂಬುಳಿ, ನೀರ್ ದೋಸೆ ಗಳು ಈಗಲೂ ಬಾಯಲ್ಲಿ ನೀರು ತರಿಸುತ್ತವೆ. ಬೆಳಿಗ್ಗೆ ತಿಂಡಿ ತಿಂದು ಘಟ್ಟಗಳನ್ನು ಸುತ್ತಾಡಿ ಬಂದು ಮಧ್ಯಾಹ್ನ ಪಟ್ಟಾಗಿ ಕವಳ ಕತ್ತರಿಸಿ ಮಲಗಿದರೆ ಸಂಜೆ ಎಷ್ಟೋ ಹೊತ್ತಿಗೆ ಎಚ್ಚ್ಚರವಾಗುವುದು. ಎದ್ದು ಮತ್ತೆ ಕಾಡು ಸುತ್ತಿ ಬಂದು ಸಂಜೆ ಹರಟೆ ಓದುಗಳಲ್ಲಿ ಕಾಲ ಕಳೆದರೆ ರಾತ್ರಿ ಮತ್ತೆ ಭಟ್ಟರ ತಾಯಿಯ ಕೈಯ ಸೊಗಸಾದ ಊಟ ! ಊಟ ಮಾಡುವಾಗ ನಾನು ಮುಸುರೆ ಮಾಡುವುದು ಪದೇ ಪದೇ ಕೈ ತೊಳೆಯುವುದು, ತಂಬುಳಿಯನ್ನು ಲೋಟದಲ್ಲಿ ಹಾಕಿಸಿಕೊಡು ಕುಡಿಯುವುದು , ಎರಡೂ ಕೈಲಿ ಹಪ್ಪಳ ಮುರಿದು ಮುಸುರೆಯಾಗಿದ್ದು ಅರಿವಿಗೆ ಬಂದು ಬೆಪ್ಪನಂತೆ ಭಟ್ಟರ ಮುಖ ನೋಡುವುದು,ಸಮಯ ಸಿಕ್ಕಾಗಲೆಲ್ಲ ಊರಿಗೆಲ್ಲ ಕೇಳುವಂತೆ ನಿದ್ದೆ ಮಾಡುವುದು ಭಟ್ಟರ ತಾಯಿಗೆ ಮೋಜೆನಿಸುತ್ತಿತ್ತು. ತಮಾಷೆ ಮಾಡುತ್ತಲೇ ಊಟಕ್ಕೆ ನೀಡುವ, ಗಾಯವಾದ ಕಾಲಿಗೆ ಔಷಧಿ ಹಚ್ಚುವ ಅನನ್ಯ ಪ್ರೀತಿ ಅವರದು.

ಅಂಥ ಕುಂಭದ್ರೋಣ ಮಳೆಯಲ್ಲೇ ಪಶ್ಚಿಮ ಘಟ್ಟಗಳನ್ನು ಭಟ್ಟರ ಬೈಕ್ ನಲ್ಲಿ ಸುತ್ತಾಡಿದೆವು. ಮೊದಲ ದಿನ ಹೋಗಿದ್ದು ಅಘನಾಶಿನಿ ಜನ್ಮ ತಳೆಯುವ ಘಟ್ಟಕ್ಕೆ. ಸುಮಾರು ಮೂವತ್ತೈದು ಕಿ ಮಿ ಗಳ ಪಯಣ. ದಾರಿಯುದ್ದಕ್ಕೂ ಹೊಚ್ಚ ಹೊಸ ಮಳೆಯಿಂದಾಗಿ ಜನಿಸಿದ್ದ ಶುಭ್ರ ಝರಿಗಳು, ತೊರೆಗಳು, ಹಳ್ಳಗಳು ಎದುರಾಗುತ್ತಿದ್ದವು. ಆ ಸ್ಪಟಿಕ ಜಲದಲ್ಲಿ ಜಿಗಿಯುವ ನನ್ನ ಹುಮ್ಮಸ್ಸಿಗೆ ಕಾಲಿನ ಗಾಯದ ನೆಪವೊಡ್ಡಿ ಬ್ರೇಕ್ ಹಾಕಿದರು ಭಟ್ರು. ಛೆ ! ಈ ದರಿದ್ರ ಗಾಯ ಈಗಲೆ ಆಗಬೇಕಿತ್ತೆ ಎಂದು ಬಯ್ದುಕೊಂಡೆ. ಆಗಲೇ ಗಾಯದ ಕಾರಣದಿಂದ ನನ್ನ ಪಾದ ರಕ್ತ ಕಳೆದುಕೊಂಡು ಬಿಳುಚಿಕೊಂಡಿತ್ತು. ಮನಸ್ಸು ಮಾತ್ರ ಕಾಲಿನ ನೋವಿನ ಕಡೆಗೆ ಗಮನ ಕೊಡದೆ ತನ್ನ ಸಂತೋಷವನ್ನು ಸಾಧಿಸುವ ಮಟ್ಟಿಗೆ ಸ್ವಾರ್ಥಿಯಾಗಿತ್ತು. ಮೊದಲ ದಿನವೇ ಅಘನಾಶಿನಿಯಲ್ಲಿ ಒಂದು ಸುತ್ತು ಈಜಿ ಬರೋಣವೇ ಎಂದು ಕೇಳಿದೆ. ಮಳೆಯಿಂದಾಗಿ ತೀವ್ರ ಸೆಳೆತ ಉಂಟಾಗಿತ್ತು ಅಘನಾಶಿನಿಯ ಮಡುವಿನಲ್ಲಿ. ಭಟ್ಟರು ನಿರಾಕರಿಸಿಬಿಟ್ಟರು.

ಅಘನಾಶಿನಿ ನಾವು ಹೋದ ಜಾಗೆಯಲ್ಲಿ ಬೆಟ್ಟದ ತುದಿಯಿಂದ ಕಣಿವೆಯೊಳಗೆ ಜಿಗಿಯುತ್ತಾಳೆ. ಕಣಿವೆಯಂಚಿಗೆ ಗಾಡಿ ನಿಲ್ಲಿಸಿ ಮುಂಗಾರಿನ ಕೃಪೆಯಿಂದ ಮೈದುಂಬಿ ಧುಮ್ಮಿಕುತ್ತಿದ್ದ ಅಘನಾಶಿನಿಯನ್ನು ಆಸ್ವಾದಿಸಿದ್ದಾಯಿತು. ’ಹುಟ್ಟುವ ಜಾಗ ನೋಡಬೇಕಾ ?’ ಎಂದು ಕೇಳಿದರು ಭಟ್ಟರು. ’ಹ್ಙೂ’ ಎಂದೆ. ಎಂಟು ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಎಲೆಯ ಮೇಲೆ ಚಿಕ್ಕ ಕಡ್ಡಿಯಂಥದು ಅಲುಗಿದಂತಾಯಿತು. ಏನೆಂದು ಬಗ್ಗಿ ನೋಡಿದೆ. ಅದು ’ಜಿಗಣೆ’ ! ಹಾಗಿದ್ದರೆ ನನ್ನ ಕಾಲ ಮೇಲೆ ಎರಡಾದರೂ ಇಷ್ಟು ಹೊತ್ತಿಗೆ ಹತ್ತಿರಬೇಕು. ಭಟ್ಟರ ಕಾಲು ನೋಡಿದೆ. ಆಗಲೇ ನಾಲ್ಕು ಜಿಗಣೆಗಳು ಅವರ ರಕ್ತ ಹೀರುತ್ತಿದ್ದವು. ’ಗಣೇಶ್ ಲೀಚ್ ...ಜಿಗಣೆ’ ಎಂದು ಚೀರಿದೆ. ನಮ್ಮ ಬಳಿ ಸುಣ್ಣ, ನಸ್ಯಪುಡಿ, ಬೆಂಕಿಕಡ್ಡಿಯಂಥ ಲೀಚ್ ಮೇಲೆ ಉಪಯೋಗಿಸಬಹುದಾದ ಆಯುಧಗಳು ಇರಲಿಲ್ಲ. ನನ್ನ ಕೂಗು ಕೇಳಿ ಗಣೇಶ್ ತಕ್ಷಣವೇ ಛಕಛಕನೆ ತಮ್ಮ ಹಾಗೂ ನನ್ನ ಕಾಲ ಮೇಲಿದ್ದ ಎಲ್ಲಾ ಲೀಚ್ ಗಳನ್ನು ಕಿತ್ತು ಹಾಕಿದರು. ಮುಂದೆ ಹೋಗತೊಡಗಿದಂತೆ ದಾರಿ ಕಠಿಣವಾಗತೊಡಗಿತು. ಏರು ತಗ್ಗುಗಳು ಹೆಚ್ಚಾದಂತೆ ಕಾಲಲ್ಲ್ದಿ ರಕ್ತ ಸೋರತೊಡಗಿತು. ಜೊತೆಗೆ ಜಿಗಣೆಗಳ ಕಾಟ ಬೇರೆ. ’ ಈ ದಿನ ಜಿಗಣೆಗಳಿಗೆ ಹಬ್ಬದೂಟ !’ ಎಂದು ನಕ್ಕರು ಭಟ್ಟರು. ಮುಂದೆ ಹೋಗಲು ಧೈರ್ಯ ಸಾಲಲಿಲ್ಲ. ಹಿಂದಿರುಗಿ ನಡೆಯತೊದಗಿದೆವು. ದಾರಿಯುದ್ದಕ್ಕೂ ನಾನು ಜಿಗಣೆಗಳ ಬಗ್ಗೆ ನನಗೆ ತಿಳಿದದ್ದನ್ನೆಲ್ಲಾ ಭಟ್ಟರಿಗೆ ಹೇಳತೊಡಗಿದೆ. ಕಂಡಕಂಡಲ್ಲಿ ಓದಿದ್ದನ್ನೆಲ್ಲಾ ಕೊರೆದು ಯಾವಾಗಲೂ ತಲೆ ತಿನ್ನುತ್ತಾನೆ ಎಂದುಕೊಂಡರೋ ಏನೋ ಭಟ್ಟರು ಸುಮ್ಮನೆ ತಲೆ ತಗ್ಗಿಸಿ ನಡೆಯುತ್ತಿದ್ದರು. ಮತ್ತೆ ಕಣಿವೆಯಂಚಿಗೆ ಗಾಡಿಯ ಬಳಿ ಬಂದಾಗ ಕಾಲುಗಳನ್ನು ಪರೀಕ್ಷಿಸಿಕೊಂಡೆವು. ಏಳೆಂಟು ಜಿಗಣೆಗಳು ಸಿಕ್ಕಲ್ಲಿ ಕೊಕ್ಕೆ ಹಾಕದೇ ಕಾಲಿನ ಗಾಯದ ಕಡೆಗೆ ಧಾವಿಸತೊಡಗಿದ್ದವು. ಬಿಟ್ಟಿ ರಕ್ತ ಸಿಗುತ್ತಿರುವಾಗ ಚರ್ಮ ಕೊರೆಯುವುದೇಕೆ ಎಂದುಕೊಂಡವೋ ಎನೋ ! ಸೋಮಾರಿತನದ ಪ್ರವೃತ್ತಿ ನನ್ನೊಬ್ಬನದೇ ಅಲ್ಲ; ಅದು ವಿಶ್ವವ್ಯಾಪಿ ಎಂಬುದು ಮತ್ತೆ ನನಗೆ ವೇದ್ಯವಾಯಿತು. ಭಟ್ಟರು ಮತ್ತೆ ಇವನ್ನೂ ನಿವಾರಿಸಿದರು. ರೇನ್ ಕೋಟ್ ಧರಿಸಿ ಹೊರಟೆವು. ನಾನು ನೋಡಿದ ಹಾಗೆ ನಾವು ಹೋದಲ್ಲೆಲ್ಲ ಜಿಗಣೆಗಳು ನನಗಿಂತ ಭಟ್ಟರನ್ನೇ ಹೆಚ್ಚು ಮುತ್ತಿಕೊಳ್ಳುತ್ತಿದ್ದವು. ರಾಸಾಯನಿಕ ಗೊಬ್ಬರದ ಹೈಬ್ರಿಡ್ ಆಹಾರ ತಿಂದ ನನಗಿಂತಲೂ ಸಾವಯವ ಆಹಾರ ತಿಂದ ಭಟ್ಟರ ರಕ್ತವೇ ಹೆಚ್ಚು ರುಚಿ ಎನಿಸಿತ್ತೇನೋ ಅವಕ್ಕೆ. ಅಘನಾಶಿನಿ ಕೊಳ್ಳದಿಂದ ಹಿಂದಿರುಗುವಾಗ ನಾಲ್ಕೈದು ಜನ ಏನನ್ನೋ ಅಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅದು ಒಂದು ಏಡಿ. ನನ್ನ ಜೀವನದಲ್ಲೇ ನಾನು ಅಷ್ಟು ದೊಡ್ಡ ಏಡಿಯನ್ನು ನೋಡಿರಲಿಲ್ಲ. ಅದರ ಕೊಂಡಿಗೆ ಸಿಕ್ಕಿ ಹಾಕಿಕೊಳ್ಳದಂತೆ ಒಬ್ಬ ಹಿಡಿದ. ವಿಜಯ ಸಾಧಿಸಿದವರಂತೆ ಉಳಿದವರೆಲ್ಲ ಅವನ ಹಿಂದೆ ಹೊರಟರು. ಅವರಲ್ಲೊಬ್ಬನಿಗೆ ’ಎನ್ ಸ್ವಾಮಿ ಇವತ್ತು ಏಡಿಯ ಉಪ್ಪಿನಕಾಯಿಯಾ?’ ಎಂದೆ. ’ಹೌದು ಸಾರ್ ’ ಎಂದು ಕಣ್ಣು ಕಿಸಿದು ಓಡಿದ. ಇಷ್ಟು ದೊಡ್ಡ ಏಡಿ ಈ ಕಾಡಿನ ಮಧ್ಯೆ ಹೇಗೆ ಬಂತು ಎಂದು ಕೇಳಿದಕ್ಕೆ ಭಟ್ಟರು ಅದು ಅಘನಾಶಿನಿಯಲ್ಲಿ ವಾಸಿಸುವ ಸಿಹಿನೀರಿನ ಏಡಿ, ಮಳೆ ನೀರಿನೊಡನೆ ಝರಿಯಲ್ಲಿ ದಾರಿ ತಪ್ಪಿ ಬಂದಿದೆ ಎಂದರು. ’ಏಡಿ ಬಾದಾಮಿಯ ರುಚಿ ಇರುತ್ತದಂತೆ’ ಎಂದೆ. ’ನೀನು ಸಸ್ಯಾಹಾರಿ ಅಲ್ಲವಾ ನಿಂಗೆ ಹೇಗೆ ಗೊತ್ತು ?’ ಎಂದರು. ತೇಜಸ್ವಿ ಬರೆದಿದ್ದು ಓದಿದ್ದೆ ಎಂದೆ. ಇಂಥ ಕೆಲಸಕ್ಕೆ ಬಾರದ ಮಾಹಿತಿ ನಿನ್ಹತ್ರ ತುಂಬಾ ಇದೆ ಎಂಬಂತೆ ನಕ್ಕರು.

ಮರುದಿನ ಕರಿಕಾನ ಪರಮೆಶ್ವರಿಯ ಗುಡಿಗೆ ಹೊರಟೆವು. ಈ ಗುಡಿ ಬೆಟ್ಟದ ಮೇಲಿದೆ. ನಾವು ಹೋದಾಗ ಯಾರೋ ಮಡಿಯುಟ್ಟು ಹೋಮಕ್ಕೆ ಕೂತಿದ್ದರು. ಗುಡಿಯಿಂದ ಬೆಟ್ಟ ಕೊಳ್ಳಗಳ ಮಧ್ಯೆ ಹರಿಯುವ ಅಘನಾಶಿನಿಯ ಸಂಪೂರ್ಣ ಪಾತ್ರ ಕಾಣುತ್ತದೆ. ಹಸುರು ಬೆಟ್ಟಗಳಾಚೆ ದಿಗಂತದವರೆಗೂ ಹಬ್ಬಿರುವ ಜಲಧಿ ಕಣಿವೆಗಳ ನಡುವೆ ವಿಹರಿಸುವ ಮೇಘಗಳ ಜೊತೆ ಸೌಂದರ್ಯ ಸ್ಪರ್ಧೆಗೆ ಬಿದ್ದಂತೆ ತೋರುತ್ತದೆ. ಸೃಷ್ಟಿಕರ್ತನ ಸೃಜನಶೀಲತೆಗೆ ಮನದಲ್ಲೇ ನಮಿಸಿದೆ. ಇದೇ ಬೆಟ್ಟದಲ್ಲಿ ಕಗ್ಗಾಡಿನ ನಡುವೆ ಒಂದಡಿಕೆ ಶಂಭುಲಿಂಗನ ದೇವಾಲಯವಿದೆ. ಹೊರಟೆವು. ಅರ್ಧ ದಾರಿ ಸಾಗಿದ ಮೇಲೆ ನನಗೆ ಇಲ್ಲೂ ಜಿಗಣೆಗಳು ಇರುವಂತೆ ತೋರಿತು. ನನ್ನ ಅನುಮಾನ ಸತ್ಯವಾಗುವಂತೆ ಭಟ್ಟರ ಕಾಲ ಮೇಲೆ ಆಗಲೇ ನಾಲ್ಕು ಪವಡಿಸಿದ್ದವು. ನನ್ನ ಕಾಲ ಮೇಲೂ ಜಿಗಣೆಯೊಂದು ಗಾಯದ ಕಡೆ ಧಾವಿಸುತ್ತಿದ್ದುದು ಕಾಣಿಸಿತು.ನನ್ನ ಕೂಗು ಕೇಳಿದ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ನನ್ನ ಮತ್ತು ಅವರ ಕಾಲಿನ ಮೇಲಿನ ಜಿಗಣೆಗಳನ್ನು ಕಿತ್ತೊಗೆದರು. ಆಗಲೇ ಮುಕ್ಕಾಲು ದಾರಿ ಬಂದದ್ದಾಗಿತ್ತು. ಹಿಂದಿರುಗುವ ಪ್ರಶ್ನೆಯೇ ಇರಲಿಲ್ಲ. ಶಂಭುಲಿಂಗನ ಗುಡಿಯಲ್ಲಿ ಗಣೇಶ ಹಾಗೂ ಪಾರ್ವತಿಯ ವಿಗ್ರಹಗಳಿವೆ. ಶಿವನ ತಲೆಯ ಮೇಲೆ ಬೆಟ್ಟದಿಂದ ಹರಿದು ಬಂದ ನೀರು ಬೀಳುತ್ತಿತ್ತು. ದಿನಕ್ಕೆ ಒಂದೇ ಬಾರಿ ಇಲ್ಲಿ ಪೂಜೆ ನಡೆಯುತ್ತದೆ. ಕಾಲಿಗೆ ಹತ್ತಿಕೊಂಡಿದ್ದ ಲೀಚುಗಳನ್ನು ಕಿತ್ತು ಹಾಕಿ ಬೀಗ ಹಾಕಿದ ಬಾಗಿಲ ಸಂದಿಯಿಂದ ದರ್ಶನ ಪಡೆದು ತಿರುಗಿದಾಗ ನಮ್ಮ ಕಾಲ್ಗಳ ಮೇಲೆ ಸವಾರಿ ಮಾಡಿಕೊಂಡು ಬಂದಿದ್ದ ಎರಡು ಲೀಚುಗಳು ನಮ್ಮತ್ತಲೇ ಬರುತ್ತಿರುವುದು ಕಾಣಿಸಿತು. ಅವು ಬೇಟೆಗೆ ಬರುತ್ತಿರುವ ಹಿಂಸ್ರ ಪಶುಗಳಂತೆಯೂ ನಾವು ಬೇಟೆಯ ಬಲಿಪಶುಗಳಂತೆಯೂ ನನಗೆ ಭಾಸವಾಯಿತು. ಮಳೆ ಎಡೆಬಿಡದೆ ಭೋರ್ಗರೆಯುತ್ತಿತ್ತು. ಅಘನಾಶಿನಿ ಕೊಳ್ಳಕ್ಕಿಂತ ಹೆಚ್ಚಿನ ಜಿಗಣೆಗಳು ಇಲ್ಲಿದ್ದವು. ನಾವು ಬಂದದ್ದನ್ನು ನಮ್ಮ ಹೆಜ್ಜೆಯ ವೈಬ್ರೇಷನ್ ಗಳಿಂದ ತಿಳಿದು ವಾಪಸು ಹೋಗುವ ಹೊತ್ತಿಗೆ ಎಚ್ಚೆತ್ತುಕೊಂಡಿರುತ್ತವೆ. ನಮ್ಮ ನೆತ್ತರು ಹೀರಲು ಕಾಯುತ್ತಿರುತ್ತವೆ. ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತೆ ನಮ್ಮ ಬಗ್ಗೆ ನಮಗೆ ತೋರಿತು. ವಾಪಸು ಹೋಗಲು ಒಂದು ಯುದ್ಧ ಯೋಜನೆ ಹಾಕಿದೆವು. ಜಿಗಣೆಗಳು ನಮ್ಮಗೆ ಕಚ್ಚಿಕೊಳ್ಳುವುದಕ್ಕಿಂತ ವೇಗವಾಗಿ ನಾವು ಓಡುವುದು. ಮಧ್ಯೆ ಸುಧಾರಿಸಿಕೊಳ್ಳಬೇಕಾದರೆ ತರಗೆಲೆಗಳಿಲ್ಲದ ಮಣ್ಣು ಇರುವ ಜಾಗದಲ್ಲಿ ನಿಲ್ಲುವುದು ಮತ್ತೆ ಓಡುವುದು. ಅದರಂತೆಯೇ ಓಡಿದೆವು. ಬೆಟ್ಟದ ಏರು ಹಾದಿಯಲ್ಲಿ ನನಗೆ ಬೇಗನೆ ಸುಸ್ತಾಯಿತು. ನಡುವೆ ಮಣ್ಣಿರುವ ಜಾಗೆಯಲ್ಲಿ ಒಂದೇ ನಿಮಿಷದ ಮಟ್ಟಿಗೆ ದಣಿವಾರಿಸಿಕೊಂಡು ಮತ್ತೆ ಓಡಿದೆ. ಸತತ ಒಂದೂವರೆ ಕಿ ಮಿ ಓಡಿದ್ದಾಯಿತು. ಮತ್ತೆ ಪರಮೇಶ್ವರಿ ಗುಡಿ ಸೇರಿದಾಗ ನನ್ನ ಶ್ವಾಸಕೋಶಗಳು ಬಾಯಿಗೆ ಬಂದೇ ಬಿಡುತ್ತವೇನೋ ಎಂಬಂತೆ ಎದುಸಿರು ಬಿಡುತ್ತಿದ್ದೆ. ಓಡಾಡಿ ಅಭ್ಯಾಸವಿದ್ದ ಭಟ್ಟರಿಗೆ ಅಷ್ಟು ಸುಸ್ತಾದಂತೆ ಕಾಣಲಿಲ್ಲ. ಒಂದರ್ಧ ಗಂಟೆ ಸುತ್ತಲಿನ ಹರಿತ್ತನ್ನು ಕಣ್ಣಿಗೆ ತುಂಬಿಕೊಂಡು ಮತ್ತೆ ವಾಪಸು ಹೊರಟೆವು. ಮನೆ ಸೇರಿದಾಗ ಭಟ್ಟರ ತಾಯಿ ಅನ್ನ, ತಂಬುಳಿ, ಸಾಂಬಾರ್ ಅಡುಗೆ ಮಾಡಿ ನಮಗಾಗಿ ಕಾಯುತ್ತಿದ್ದರು. ನೆನಪಿಡಿ ಮನೆ ಬಿಟ್ಟಾಗಿನಿಂದ ವಾಪಸು ಬರುವವರೆಗೆ ಒಂದು ನಿಮಿಷವೂ ಮಳೆ ನಿಂತಿರಲಿಲ್ಲ!

ಈ ಪ್ರವಾಸದಲ್ಲಿ ನಾನು ಕಲಿತಿದ್ದು ಬಹಳ. ಭಟ್ಟರ ಮನೆಯಲ್ಲಿ ಮಹಾಭಾರತವನ್ನು ಮತ್ತೊಮ್ಮೆ ಓದಿದೆ. ಈ ಬಾರಿ ಮಹಾಭಾರತ ಹೊಸದಾಗಿ ಕಂಡಿತು. ಒಂದೊಂದು ಪಾತ್ರವನ್ನೂ ಅಷ್ಟು ಅಮೋಘವಾಗಿ ನಿರೂಪಿಸಿದ ಮಹಾಕವ್ಯ ಇನ್ನೊಂದಿಲ್ಲ ಎನಿಸುತ್ತದೆ. ಅದರಲ್ಲೂ ಕರ್ಣನೆಂಬ ದುರಂತ ನಾಯಕನ ಕಥೆ ಮನಸ್ಸನ್ನು ಬಹುವಾಗಿ ಕಾಡಿತು. ಉದ್ಯೋಗ ಪರ್ವದಲ್ಲಿ ಹಾಗೂ ಭೀಷ್ಮಪರ್ವದ ಕೊನೆಯಲ್ಲಿ ಕರ್ಣ ಎದುರಿಸುವ ಕಠೋರ ಸತ್ಯಗಳು ದೃಗುಜಲವನ್ನು ಉರವಣಿಸದೇ ಬಿಡವು. ರಾಮಚಂದ್ರಾಪುರ ಮಠದ ಗೋಶಾಲೆಯ ಶಾಖೆಯೊಂದು ಕಂದವಳ್ಳಿಯ ಸಮೀಪದಲ್ಲಿ ಅಭಿವೃದ್ಧಿಯಾಗುತ್ತಿದೆ. ನಮ್ಮ ಭಟ್ಟರು ಅಲ್ಲಿಯವರಿಗೆ ತುಂಬಾ ವಿಶ್ವಾಸಿಗರು. ಮಳೆ ಕೊಯಿಲಿನ, ಔಷಧಿ ತಯಾರಿಕೆಯ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಬೆಟ್ಟದಿಂದ ಬರುವ ಮಳೆನೀರಿನಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವೆ ಎಂದು ನನ್ನನ್ನು ಕೇಳಿದರು. ಸಾಧ್ಯವೇನೋ ಇತ್ತು. ಆದರೆ ಬಜೆಟ್ ಸಾಲುತ್ತಿರಲಿಲ್ಲ.ಅಷ್ಟೊಂದು ಖರ್ಚು ಮಾಡುವುದಕ್ಕಿಂತ ವಿದ್ಯುತ್ ಇಲ್ಲದಿರುವುದೇ ಮೇಲು ಎಂದು ಅಭಿಪ್ರಾಯ ಪಟ್ಟರು. ಇನ್ನೊಂದು ಮುಖ್ಯ ವಿಷಯವನ್ನು ಹೇಳಬೇಕು. ಕಾಲು ಗಾಯವಾಗಿದ್ದನ್ನು ಮೊದಲೇ ಹೇಳಿದ್ದೆನಲ್ಲ ಆ ಗಾಯಕ್ಕೆ ಭಟ್ಟರು ಮತ್ತು ಅವರ ತಾಯಿ ತಾವೇ ತಯಾರಿಸಿದ ಔಷಧವನ್ನು ಹಚ್ಚುತ್ತಿದ್ದರು. ಗೋಮಯ, ಗೋಮೂತ್ರ, ನಿಕ್ಕೆಯ ಗಿಡ, ಎಕ್ಕದ ಎಲೆ ಇತ್ಯಾದಿಗಳಿಂದ ತಯಾರಿಸಿದ್ದಂತೆ ಅದು. ಕುಮುಟಾದಿಂದ ವಾಪಸು ಬರುವ ಹೊತ್ತಿಗಾಗಲೇ ಗಾಯ ಬಹುತೇಕ ವಾಸಿಯಾಗಿತ್ತು ! ನೀರಿನಲ್ಲಿ ಓಡಾಡದಿದ್ದರೆ ಇನ್ನೂಬೇಗ ವಾಸಿಯಾಗುತ್ತಿತ್ತು ಎಂದರು. ಗಾಯವನ್ನು ವಾಸಿ ಮಾಡಿದ್ದು ಭಟ್ಟರ ಹಾಗೂ ಅವರ ತಾಯಿಯವರ ಮದ್ದೋ ಅಥವಾ ಪ್ರೀತಿಯೋ ಎಂಬುದು ಇನ್ನೂ ನನಗೆ ರಹಸ್ಯ. ಗಾಯದ ಆಳವನ್ನು ನೋಡಿ ಆಪರೇಷನ್ನೆ ಗತಿ ಎಂದು ಹೆದರಿಸಿದ್ದವರಿಗೆ ಭಟ್ಟರು ತಮಗೆ ಗೊತ್ತಿಲ್ಲದೇ ಉತ್ತರ ಕೊಟ್ಟಿದ್ದಾರೆ. ಅಂದ ಹಾಗೆ ಭಟ್ಟರು ಗೋಮೂತ್ರ, ನ್ಯಾಚುರೋಪತಿ, ಆಕ್ಯುಪ್ರೆಷರ್ ನಲ್ಲೂ ’ಪಂಟರು’! ಇಂಥ ಒಂದು ಜಾಗೆಯಲ್ಲಿ ಹೊರಜಗತ್ತಿನ ಸಂಪರ್ಕ ಕ್ಕೂ ಸಿಗದೇ ಪುಸ್ತಕಗಳೊಡನೆ ಹಾಯಾಗಿ ಇದ್ದುಬಿಡೋಣ ಎನಿಸುತ್ತದೆ. ಮೊಬೈಲ್ ನ್ನು ಎರಡು ದಿನ ಸ್ವಿಚ್ ಆಫ್ ಮಾಡಿಟ್ಟು ನೋಡಿ; ಕೈಯಲ್ಲಿ ಗಡಿಯಾರವೂ ಬೇಡ. ನಾ ಹೇಳಿದ ಮನಸ್ಸಿನ ನೆಮ್ಮದಿಯ ಕಿಂಚಿತ್ ಭಾಗ ನಿಮ್ಮ ಅನುಭವಕ್ಕೆ ಬರುತ್ತದೆ!

ಗುರುವಾರ, ಮೇ 22, 2008

ಸೃಜನ ಶೀಲತೆ ಯಾರೊಬ್ಬನ ಸೊತ್ತು ಅಲ್ಲ

ಹಡಗಲಿಯ ಉಷಾರಾಣಿಯವರ ಈ ಕವನ ಒಂದು ವರ್ಷ ಹಳೆಯ ಕಸ್ತೂರಿ ಓದುವಾಗ ಅಕಸ್ಮಾತಾಗಿ ಕಣ್ಣಿಗೆ ಬಿತ್ತು.

ಹಾರಲು ಬಯಸುವ ಮನವನ್ನು ಕಟ್ಟಿ ಹಾಕುವ ಸಂಪ್ರದಾಯಗಳನ್ನು ಖಂಡಿಸುವ

ಸೂಕ್ಷ್ಮ ಕೊನೆಯ ಸಾಲಿನಲ್ಲಿ ಅಡಗಿದೆ.

ಖುಲ್ಲಂ ಖುಲ್ಲ ತೆರೆದಿದೆ ಬಾಗಿಲು

ಅಪ್ಪಣೆ ಕೊಟ್ಟರೆ ಬೇಕಾದಲ್ಲಿಗೆ ಹಾರುವ

ಕುದುರೆ ಎದುರಿಗಿದೆ

ಆದರೇನು ಮೊಳೆ ಹೊಡೆದ ಹೊಸ್ತಿಲು

ಕಾಲುಗಳನ್ನು ಕಟ್ಟಿ ಹಾಕಿದೆ.


ಹಟ್ಸಾಫ್ ಸೋದರಿ ....

ಬುಧವಾರ, ಮೇ 21, 2008

ಕಂಪ್ಲಿ ಸಣ್ಣ ಹನುಮಂತ ಅವರು ಕೆಲ ವರ್ಷಗಳ ಹಿಂದೆ ವಿಜಯಕರ್ನಾಟಕದಲ್ಲಿ ಬರೆದ ಹನಿಗವನ ಹೀಗಿದೆ.

ಜನರೆನ್ನುವಂತೆ ನನ್ನ ಮನಸ್ಸು ಕಬ್ಬಿಣ ಎಂದು ಗೊತ್ತಾದದ್ದು

ಆಯಸ್ಕಾಂತದಂತೆ ನಿನ್ನ ಕಣ್ಣುಗಳನ್ನು ಸೆಳೆದಾಗಲೇ !!


ಇದರ ಆಳವನ್ನು ವಿವರಿಸಲು ಶಬ್ದಗಳನ್ನು ಬಳಸುವ ಅಗತ್ಯವಿಲ್ಲ ಎಂದು ನನಗೆ ತೋರುತ್ತದೆ. ಕಬ್ಬಿಣಕ್ಕೆ ಹೋಲಿಸಲಾದ ಮನಸ್ಸು ಅದನ್ನು ಸೆಳೆದ ಆಯಸ್ಕಾಂತ ನನ್ನನ್ನು ಹನುಮಂತರ ಅಭಿಮಾನಿಯನ್ನಾಗಿ ಮಾಡಿಬಿಟ್ಟಿತು !

ಬುಧವಾರ, ಮೇ 14, 2008

ನನ್ನ ಬ್ಲಾಗಮಂಡಲದ ಬಗ್ಗೆ ...

ಬ್ಲಾಗುವುದುಹೊಚ್ಚ ಹೊಸ ಹುಚ್ಚು. ಅಂತರ್ಜಾಲದ ಮೂಲಕ ಯೋಚನೆಗಳನ್ನು ಇನ್ನೊಬ್ಬರಿಗೆ ಮುಟ್ಟಿಸಬಲ್ಲ ಈ ನವನವೀನ ಸರಳ ಸಾಧನದ ಮುಂದೆ ನಾನೂ ತಲೆಬಾ(ಬ್ಲಾ)ಗಲೆಬೇಕಾಯಿತು. ಅನುಭವಜನ್ಯವಾದ, ವಿಚಾರ ವೇದ್ಯವಾದ ಅನೇಕ ವಿಷಯಗಳನ್ನು, ಮನಸ್ಸು ಯಾವುದೋ ಲಹರಿಯಲ್ಲಿ ಓಡುವಾಗ ತಡೆ ಒಡ್ಡಿದ ಅನೇಕ ಯೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಇಲ್ಲಿ ಬ್ಲಾಗುತ್ತಿದ್ದೇನೆ. ಯಾವುದೋ ಒಂಟಿತನದಲ್ಲಿ ಕಾಡಿದ, ದೀರ್ಘ ಪ್ರಯಾಣಗಳ ನಡುವೆ ಓರೆಹಚ್ಚಿದ, ಪುಸ್ತಕಗಳನ್ನು ಓದುವಾಗ ಎದೆಯಲ್ಲಿ ಅದುರಿದ ಕೆಲವು ಚಿಂತನೆಗಳನ್ನು ಸ(ಮ)ಹೃದಯಿಗರೊಡನೆ ಹಂಚಿಕೊಳ್ಳುವ ಬಯಕೆ ನನ್ನದು. ನಿಮ್ಮ ಸಲಹೆ, ಸೂಚನೆ, ಟೀಕೆಗಳಿಗೆ ಸದಾ ಆದರದ ಸ್ವಾಗತ. ನಿಮ್ಮ ಅಮೂಲ್ಯ ಸಮಯದ ಕೆಲ ನಿಮಿಷಗಳನ್ನು ಇದಕ್ಕಾಗಿ ವ್ಯಯಿಸಿದರೆ ನಿಮಗೆ ನಾನು ಸದಾ ಋಣಿ.

ಬಾಬರಿ ದಂಗೆಯ ದಿನಗಳು !!!

ದಾವಣಗೆರೆಯ ಹೆಸರು ಇಲ್ಲಿಯವರೆಗೆ ೩ ಬಾರಿ ಬಿಬಿಸಿ ಯಲ್ಲಿ ಬಂದಿದೆ. ಮೊದಲನೆಯ ಸಾರಿ ೧೯೯೧ ರ ಬಾಬ್ರಿ ಮಸೀದಿಯ ದಂಗೆಗಳಾದಾಗ , ಎರಡನೆಯ ಬಾರಿ ದೇವರಬೇಳಕೆರೆ ಡ್ಯಾಮ್ ನಲ್ಲಿ ಬಸ್ ಉರುಳಿ ೮೦ ಜನ ಇಹ ಲೋಕ ತ್ಯಜಿಸಿದಾಗ ಮತ್ತು ಮೂರನೆಯದಾಗಿ ಕರಿಯ ಎಂಬ ಹುಡುಗ ಬೋರ್ ವೆಲ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಾಗ. ಮೂರೂ ದುರಂತಗಳೇ
ಬಾಬ್ರಿ ಮಸೀದಿಯ ದಂಗೆಗಳು ನಡೆದಾಗ ನಾನು ನಾಲ್ಕನೆಯ ಇಯತ್ತೆಯಲ್ಲಿ ಓದುತ್ತಿದ್ದೆ. ಅಕ್ಟೋಬರ್ ನ ದಸರಾ ರಜೆಯ ಸಮಯ. ಎಲ್ಲರೂ ಇಂದು ರಾತ್ರಿ ಹಿಂದೂ ಮುಸ್ಲಿಂ ಗಲಾಟೆ ಎಂದು ಮಾತಾಡಿ ಕೊಳ್ಳುತಿದ್ದರು. ಎಲ್ಲರೂ ಅಂದುಕೊಂಡಂತೆ ಅಂದು ರಾತ್ರಿ ಗಲಾಟೆ ಶುರು ಆಗಿಯೇ ಹೋಯಿತು. ಮರುದಿನ ಬೆಳಿಗ್ಗೆ ಹಾಲು ತರಲು ಹೋದ ಪಕ್ಕದ ಮನೆಯ ಮೇಸ್ಟ್ರು ಪೊಲೀಸರ ಬೆತ್ತದ ರುಚಿ ಕಂಡು ಬಂದಿದ್ದರು. ಮೇಷ್ಟ್ರಿಗೆ ಪೋಲೀಸರು ಹೊಡೆದರಂತೆ ಎಂದು ಎಲ್ಲರು ಮಾತಾಡಿ ಕೊಳ್ಳುತ್ತಿದ್ದರು. ಆಗೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಅಡ್ವಾಣಿ ಮಿಂಚುತ್ತಿದ್ದರು. ರಾಮಜನ್ಮ ಭೂಮಿ ಎಂಬ ಮಂತ್ರ ತಾರಕಕ್ಕೆರಿತ್ತು . ಎಲ್ಲೆಲ್ಲೂ ಅಯೋಧ್ಯೆಯದೆ ಮಾತು. ನನಗೆ ಈ ಗಲಾಟೆಯ ಹಿಂದಿನ ಐತಿಹಾಸಿಕ ಕಾರಣಗಳಾಗಲಿ , ರಾಜಕೀಯ ಕಾರಣಗಳಾಗಲಿ ಗೊತ್ತಿರಲಿಲ್ಲ. ಯಾವನೋ ಒಬ್ಬ ರಾಮನ ಗುಡಿಯನ್ನು ಕೆಡವಿಸಿ ಅಲ್ಲಿ ಮಸಿದಿಯನ್ನು ಕಟ್ಟಿಸಿದನಂತೆ.....ಈಗ ಅದನ್ನು ಒಡೆದು ಮತ್ತೆ ರಾಮ ಮಂದಿರವನ್ನು ಕಟ್ಟುತ್ತಾರಂತೆ ಎಂದು ನನ್ನ ಜೊತೆಯ ಹುಡುಗನೊಬ್ಬ ಕ್ವಚಿತ್ತಾಗಿ ಹೇಳಿದ್ದ. ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟಿದವನ ದುಸ್ಸಾಹಸದ ಬಗ್ಗೆ ನನಗೆ ಅಸಾಧ್ಯ ಸಿಟ್ಟು ಬಂದಿತ್ತು. ಆದರೆ ಮಸೀದಿಯನ್ನು ಕಟ್ಟಿದ್ದು ೧೫ ನೆಯ ಶತಮಾನದಲ್ಲಿ ಎಂದು ತಿಳಿದಾಗ ರಾಮಮಂದಿರವನ್ನು ಕಟ್ಟುವವರ ಬಗ್ಗೆಯೇ ಜಿಗುಪ್ಸೆ ಬಂದಿತ್ತು. ಮನೆಯಲ್ಲೇ ಬಂಧಿಯಾಗಿರಬೇಕು, ಹೊರಗೆ ಆಡಲು ಹೋಗುವ ಹೋಗುವ ಹಾಗೂ ಇಲ್ಲ , ಶಾಲೆಗೆ ಹೋಗುವ ಹಾಗೂ ಇಲ್ಲ. (ನಾನು ಆಗ ಶಾಲೆಯನ್ನು ಪ್ರೀತಿಸುತ್ತಿದ್ದೆ !!!) ಯಾವುದೋ ಕಾಲದ ಜಗಳವನ್ನು ಕಾಲು ಕೆದರಿ ಮತ್ತೆ ತೆಗೆಯುವ ಇದೆಂಥ ತರಲೆ ಈ ಅದ್ವಾನಿಯದು ಎಂದೆನಿಸಿತ್ತು
ಒಂದು ದಿನ ನನಗೆ ಚೆನ್ನಾಗಿ ನೆನಪಿದೆ. ಮನೆ ಮಹಡಿಯ ಮೇಲೆ ಹತ್ತಿ ನಾನು, ಗೆಳೆಯರು ಅಕ್ಕ ಪಕ್ಕದ ಮನೆಯ ಹಿರಿಯರೆಲ್ಲ ಮುಖ್ಯರಸ್ತೆಯ ಮೇಲೆ ಸಾಗಬೇಕಿದ್ದ ರಾಮನ ಮೆರವಣಿಗೆಯನ್ನು ನೋಡಲು ಕಾತುರರಾಗಿ ನಿಂತಿದ್ದೆವು. ವೈಭವದ ಮೆರವಣಿಗೆ ಹಾಗು ಜನಸಾಗರದ ನಡುವೆ ರಾಮನ ರಥ ತುಂಬುಗಾಂಭೀರ್ಯದಿಂದ ಸಾಗಿ ಬರುತ್ತಿತ್ತು. ಮನೆಯ ಸರಿಯಾಗಿ ಎದುರಿಗೆ ಬರುತ್ತಿದ್ದಂತೆ ಅದೇನಾಯಿತೋ ಇದ್ದಕ್ಕಿದ್ದಂತೆ ಬೊಂಬು, ಗಳಗಳನ್ನು ಹಿಡಿದ ಗುಂಪೊಂದು ಇದ್ದಕ್ಕಿದ್ದಂತೆ ಮುಸಲ್ಮಾನರ ಒಣಿಯತ್ತ ಓಡ ತೊಡಗಿತು. ಅದೇ ರೀತಿ ಇನ್ನೊಂದು ಗುಂಪು ಮೆರವಣಿಗೆಯ ಮೇಲೆ ಮುಗಿಬಿತ್ತು. ಎರಡು ಬಾರಿ ಎವೆಯಿಕ್ಕಿ ತೆರೆಯುವುದರೊಳಗೆ ಅನೇಕ ಜನ ಬೋರಲು ಬಿದ್ದಿದ್ದರು. ಕೆಲವರು ಬೃಹತ್ತಾದ ಚರಂಡಿಯೊಳಗೆ ಬಿದ್ದಿದ್ದರು. ಹಿಂದೂ ಮುಸ್ಲಿಂ ಗಲಾಟೆ ಎಂದರೆ ಎಂಥದೋ ಕೊಳಿಜಗಳ ಇರಬೇಕು ಎಂಬ ಕಲ್ಪನೆಯಲ್ಲಿದ್ದ ನಂಗೆ ಜಗಳದ ಈ ಭಯಾನಕ ರೂಪ ತೀವ್ರವಾಗಿ ದಿಗಿಲಿಕ್ಕಿಸಿ ಬಿಟ್ಟಿತ್ತು. ಎರಡು ದಿನ ರಸ್ತೆಗಳಲ್ಲಿ ಚರಂಡಿಗಳಲ್ಲಿ ಹೆಣವಾಗಿ ಬಿದ್ದಿದ್ದವರೇ ಯೋಚನೆಗಳಲ್ಲಿ ಬರುತ್ತಿದ್ದರು. ಅದೆಷ್ಟು ಹೊತ್ತು ಆ ಗಲಾಟೆ ನಡೆಯಿತೋ ! ತಿರುಗಿ ಹಲವು ದಿನ ನಮ್ಮ ಓಣಿಯಲ್ಲಿ ಯಾರು ಮನೆಯಿಂದ ಹೊರಬೀಳಲಿಲ್ಲ. ಕರ್ಫ್ಯೂ ಜಾರಿಯಾಗಿತ್ತು . ಬೀದಿಗಳಲ್ಲಿ ಪೊಲೀಸರ ಬೂಟಿನ ಸದ್ದು ಬಿಟ್ಟರೆ ನಾಯಿಗಳು ಬೊಗಳುವ ಸದ್ದು ಕೇಳುತ್ತಿತ್ತು. ಅಗಾಗೊಮ್ಮೆ ಜೀಪೊಂದರಲ್ಲಿ ಕಂಡಲ್ಲಿ ಗುಂಡು ಎಂದು ಕೂಗುತ್ತ ಪೋಲೀಸರು ಓಡಾಡುತ್ತಿದ್ದರು . ಬೆನ್ನಟ್ಟಿ ಬರುವ ನಾಯಿಗಳನ್ನು ಗದರಿಸುತ್ತಿದ್ದ ಪೋಲೀಸರು ಅಗಾಗ ಕೆಲವರ ಮನೆಯಲ್ಲಿ ನೀರನ್ನು ಕೇಳಿ ಪಡೆಯುತ್ತಿದ್ದರು. ಕಸ ಚೆಲ್ಲಲು ಇಲ್ಲವೇ ಕುತೂಹಲದಿಂದ ಹೊರಬರುತ್ತಿದ್ದ ಹೆಂಗಳೆಯರನ್ನು ಪೋಲೀಸರು ಗದರಿಸಿ ಒಳ ಕಳುಹಿಸುತ್ತಿದ್ದರು. ಕರ್ಫ್ಯೂ ದಿನಗಳಲ್ಲಿ ತರಕಾರಿ ಹಾಗಿರಲಿ ಕುಡಿಯಲು ನೀರನ್ನೂ ಚೌಕಾಸಿ ಮಾಡಿ ಬಳಸಬೇಕಾಗುತ್ತಿತ್ತು.
ಕೆಲ ದಿನಗಳಲ್ಲಿ ವಾತಾವರಣ ತಿಳಿಯಾಗತೊಡಗಿತು. ಭಯಾನಕ ಸುದ್ದಿಗಳು ಕಿವಿಗೆ ಬೀಳತೊದಗಿದವು. ಪರಿಚಯದವರ ಅಂಗಡಿ ಗಳು ಸುಟ್ಟ , ಪೊಲೀಸರ ದೌರ್ಜನ್ಯದ ವರದಿಗಳು ಭಯ ಹುಟ್ಟಿಸುತ್ತಿದ್ದವು . ಅದರಲ್ಲೂ ಪೋಲೀಸರು ಹೊಡೆದ ಗುಂಡು ಒಬ್ಬನ ಸೊಂಟಕ್ಕೆ ತಗುಲಿ ಇನ್ನೊಂದು ಕಡೆಯಿಂದ ಹೊರಸಿಡಿದದ್ದನ್ನು ರಂಜಿತವಾಗಿ ವರ್ಣಿಸುತ್ತಿದರು. ನಮ್ಮ ಶಾಲೆಗಳ ದಸರಾ ರಜವನ್ನು ೧೫ ದಿನಗಳ ಕಾಲ ವಿಸ್ತರಿಸಲಾಗಿತ್ತು. ನನಗೆ ನೆನಪಿರುವ ಮಟ್ಟಿಗೆ ಗಲಾಟೆ ೩ ಹಂತಗಳಲ್ಲಿ ನಡೆಯಿತು. ಮೊದಲನೆಯ ಹಂತದ ಗಲಾಟೆಯ ನಂತರ ನಾವೆಲ್ಲ ರಾಣೆಬೆನ್ನುರಿಗೆ ರಜೆ ಕಳೆಯಲು ತೆರಳಿದೆವು. ಈ ಸಮಯ ದಲ್ಲೇ ಬಾಬ್ರಿ ಮಸೀದಿಯ ಧ್ವಂಸ ನಡೆದದ್ದು. ಸ್ಟಾರ್ ಟಿವಿ ಯಲ್ಲಿ ಬಾಬ್ರಿ ಮಸೀದಿಯ ಧ್ವಂಸ ವನ್ನು ಹಿರಿಯರೊಡನೆ ಕೂತು ನಾನೂ ನೋಡಿದೆ. ಇದೇ ಸಮಯದಲ್ಲೇ ನಾನು ಬಿಬಿಸಿ ಯಲ್ಲಿ ದಾವಣಗೆರೆಯನ್ನು ನೋಡಿದ್ದು ! ನಿಜಕ್ಕೂ ರಕ್ತದಲ್ಲಿ ತೊಯ್ದು ಹೋಗಿತ್ತು ನನ್ನ ಪ್ರೀತಿಯ ಊರು ! ನಾನು ದಿನಾ ಸಂಚರಿಸುತ್ತಿದ್ದ ಜಾಗೆಗಳಲ್ಲೇ ತೀವ್ರತರವಾದ ಹಿಂಸೆ ಗಳಾಗಿದ್ದವು. ನನ್ನ ಶಾಲೆಯ ರಸ್ತೆಯಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದರು ! ಹಾಗೆ ನೋಡಿದರೆ ೧೯೯೧ ನಮ್ಮ ದೇಶಕ್ಕೆ ಐತಿಹಾಸಿಕ ಮಹತ್ವವುಳ್ಳ ವರ್ಷ. ಬಾಬ್ರಿ ಪ್ರಕರಣ ರಾಜೀವ್ ಗಾಂಧೀ ಹತ್ಯೆಗಳಿಗಾಗಿ ಅಲ್ಲ . ಇದೇ ವರ್ಷ ನಮ್ಮ ದೇಶ ಜಾಗತಿಕರಣವನ್ನು ಒಪ್ಪಿಕೊಂಡದ್ದು ! ಗ್ಯಾಟ್ ಒಪ್ಪಂದದ ವಿರುದ್ದ ಬರುತ್ತಿದ್ದ ಲೇಖನಗಳು , ವ್ಯಂಗ್ಯಚಿತ್ರಗಳು ನಿಂತು ಹೋಗಿ ಮಾಧ್ಯಮಗಳ ಲಕ್ಷ್ಯ ದಂಗೆಗಳ ಕಡೆಗೆ ತಿರುಗಿತು. ನಿಜ ಹೇಳಬೇಕೆಂದರೆ ಆಗ ಎಲ್ಲರು ಬೀದಿಗೆ ಇಳಿಯಬೇಕಾಗಿದ್ದುದು ಗ್ಯಾಟ್ ನ ವಿರುದ್ದ ! ರಾಜೀವ್ ಹತ್ಯೆ , ಮತೀಯ ದಂಗೆಗಳ ಮಧ್ಯೆ ದೇಶದ ಅರ್ಥವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಈ ಐತಿಹಾಸಿಕ ಒಪ್ಪಂದ ಮುಸುಕಾಗಿ ಹೋಯಿತು. ಇಡೀ ವಿಶ್ವ ನಮ್ಮನ್ನು ಮುಕ್ಕಿ ಹರಿದು ತಿನ್ನಲು ಸಿದ್ಧವಾಗುತಿದ್ದಾಗ ನಾವು ಕಿತ್ತಾಡಿಕೊಂಡು ದೇಶದ ಆಂತರ್ಯವನ್ನು ಛಿದ್ರ ಗೊಳಿಸುತ್ತಿದ್ದೆವು. ಕಡೆಗೂ ನಾವು ಇತಿಹಾಸದಿಂದ ಪಾಠ ಕಲಿಯಲಿಲ್ಲ. ೧೦ ನೆಯ ಶತಮಾನದಲ್ಲಿ ಗಜ್ನಿ , ೧೬ ನೆಯ ಶತಮಾನದಲ್ಲಿ ಬ್ರಿಟಿಷರು ಬಂದಾಗಲು ನಾವು ಹೀಗೆಯೆ ಹೊಡೆದಾಡುತ್ತಿದ್ದೆವು !