ಕುಮುಟಾದಿಂದ ಸುಮಾರು ಇಪ್ಪತ್ತು ಕಿ ಮೀ ದೂರದಲ್ಲಿದೆ ಕಂದವಳ್ಳಿ ಎಂಬ ಗ್ರಾಮ. ವಿದ್ಯುತ್ ಮತ್ತು ಮೊಬೈಲ್ ಗಳು ಈ ಊರಿನಲ್ಲಿ ಅಷ್ಟಕ್ಕಷ್ಟೆ. ಇದೇ ಊರಿನಲ್ಲಿ ನನ್ನ ಸ್ನೇಹಿತ ಗಣೇಶ ಭಟ್ಟರಿರುವುದು. ಗಣೇಶ ಭಟ್ಟರು ಮೆಕ್ಯಾನಿಕಲ್ ಇಂಜಿನೀರಿಂಗ್ ಪದವೀಧರ. ಆಝಾದಿ ಬಚಾವೊ ಆಂದೋಲನದ ಕಾರ್ಯಕರ್ತ. ರಾಜೀವ್ ದೀಕ್ಷಿತರ ಮಾತಿನಿಂದ ಪ್ರೇರಿತರಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಔಷಧೀಯ ಸಸ್ಯಗಳನ್ನು ಬೆಳೆಯುವುದು, ದೆಶೀಯ ಸಸ್ಯ ತಳಿಗಳ ಸಂರಕ್ಷಣೆಗಾಗಿ ಬೀಜ ಬ್ಯಾಂಕ್, ಗೋ ಸಂರಕ್ಷ್ಣಣೆ, ಸ್ವದೇಶಿಯ ವೈದ್ಯ ಪದ್ಧತಿಯ ಪುನರುತ್ಥಾನ ಇತ್ಯಾದಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕಂದವಳ್ಳಿಗೆ ಈ ಬಾರಿ ಭೇಟಿ ಕೊಡುವ ಆವಕಾಶ ಒದಗಿ ಬಂತು. ಭಟ್ಟರ ಪ್ರೀತಿಯ ಕರೆಯ ಮುಂದೆ ಕಾಲ ಹೆಬ್ಬೆರಳಿನ ಉಗುರು ಕಿತ್ತು ಯಮಯಾತನೆ ಕೊಡುತ್ತಿದ್ದ ಗಾಯವೂ ಲೆಕ್ಕಕ್ಕೆ ಬರಲಿಲ್ಲ. ಮುಂಗಾರು ಇನ್ನೂ ಶೈಶಾವಸ್ಥೆಯಲ್ಲಿದ್ದರೂ ಮಳೆ ಬಾಣಗಳ ಬಿರುಸಿನಿಂದ ನೆಲವನ್ನಪ್ಪಳಿಸುತ್ತಿತ್ತು. ದಿನಕ್ಕೆ ಹೆಚ್ಚೆಂದರೆ ಅರ್ಧ ಘಂಟೆಗಳ ಬ್ರೇಕ್ ಅಷ್ಟೆ. ದಿನವಿಡೀ ಮಳೆ ಎಡೆಬಿಡದೆ ಹುಯ್ಯುತ್ತಿತ್ತು. ಅಂಥ ಸಮಯದಲ್ಲಿ ಇಂಚಿಂಚಾಗಿ ಪ್ರಾಣ ಹೀರುತ್ತಿದ್ದ ಕಾಲ ಹೆಬ್ಬೆರೆಳ ಗಾಯವನ್ನು ಹೊತ್ತುಕೊಂಡು ನನ್ನಂಥ ಹುಚ್ಚನೇ ಹೊರಡಬೇಕಷ್ಟೆ. ಕಂದವಳ್ಳಿ ನಾಲ್ಕಾರು ಮನೆಗಳ ಹಳ್ಳಿ. ಸುತ್ತಲೂ ಗವ್ವೆನ್ನುವಂಥ ಕಾಡು. ಭಟ್ಟರ ಮನೆ ಮುಂದೆ ನಾಲ್ಕೆಕರೆ ಅಡಿಕೆ ತೋಟ. ತೋಟದಾಚೆ ಬಳುಕುತ್ತ ಹರಿಯುವ ಅಘನಾಶಿನಿ ನದಿ ! ಕೆಲಸದ ಒತ್ತಡಗಳ ನಡುವೆ ಹಿಪ್ಪೆಯಾಗಿ ಜೀವನದ ಸವಿಯನ್ನೇ ಕಳೆದುಕೊಂಡವರಿಗೆ ಅತ್ಯುತ್ತಮ ಬ್ರೇಕ್ ಸ್ಪಾಟ್ ನಮ್ಮ ಗಣೇಶ್ ಭಟ್ಟರ ಮನೆ. ನಾಲ್ಕು ದಿನ ಜೀವನದ ಎಲ್ಲ ವಿಕಲ್ಪಗಳಿಂದ ವಿಮುಖರಾಗಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಊರಿನಲ್ಲಿ ದಿನಗಳನ್ನು ಕಳೆಯುವುದೇ ಒಂಥರಾ ಸುಖ ! ಕಾಲ ದೇಶಗಳ ಹಂಗಾಗಲೀ ಪರಿವೆಯಾಗಲೀ ಇಲ್ಲದೆ ಬದುಕುವ ಜನ ಇಷ್ಟು ನೆಮ್ಮದಿಯಾಗಿರುತ್ತಾರೆ ಎಂದು ನನಗೆ ಗೊತ್ತಾದದ್ದೇ ಈ ನಾಲ್ಕು ದಿನಗಳಲ್ಲಿ. ಐಷಾರಾಮಿಯಿಂದ ದೂರ ಪ್ರಕೃತಿಗೆ ಹತ್ತಿರವಾಗಿ ಬದುಕುವುದು ಕೋಪವೂ ಸೇರಿದಂತೆ ಅರಿಷಡ್ವರ್ಗಗಳಿಗೆ, ಮನೋವಿಕಾರಗಳಿಗೆ ವಿರಾಮ ಕೊಡುತ್ತದೆ ಎಂಬುದೂ ಇಲ್ಲಿ ನನ್ನ ಅನುಭವಕ್ಕೆ ಬಂತು.
ಹವ್ಯಕ ಭಾಷೆ, ಭಟ್ಟರ ತಾಯಿಯ ರುಚಿಕಟ್ಟಾದ ಕೈಯಡುಗೆ, ಮಲೆನಾಡು ಗಿಡ್ಡ ತಳಿಯ ಕಾಮಧೇನುಗಳ ಕ್ಷೀರ ರಜೆಯ ಮಜೆಯನ್ನು ನೂರ್ಮಡಿಗೊಳಿದ್ದವು. ಕಾಯರಣೆ, ತಂಬುಳಿ, ನೀರ್ ದೋಸೆ ಗಳು ಈಗಲೂ ಬಾಯಲ್ಲಿ ನೀರು ತರಿಸುತ್ತವೆ. ಬೆಳಿಗ್ಗೆ ತಿಂಡಿ ತಿಂದು ಘಟ್ಟಗಳನ್ನು ಸುತ್ತಾಡಿ ಬಂದು ಮಧ್ಯಾಹ್ನ ಪಟ್ಟಾಗಿ ಕವಳ ಕತ್ತರಿಸಿ ಮಲಗಿದರೆ ಸಂಜೆ ಎಷ್ಟೋ ಹೊತ್ತಿಗೆ ಎಚ್ಚ್ಚರವಾಗುವುದು. ಎದ್ದು ಮತ್ತೆ ಕಾಡು ಸುತ್ತಿ ಬಂದು ಸಂಜೆ ಹರಟೆ ಓದುಗಳಲ್ಲಿ ಕಾಲ ಕಳೆದರೆ ರಾತ್ರಿ ಮತ್ತೆ ಭಟ್ಟರ ತಾಯಿಯ ಕೈಯ ಸೊಗಸಾದ ಊಟ ! ಊಟ ಮಾಡುವಾಗ ನಾನು ಮುಸುರೆ ಮಾಡುವುದು ಪದೇ ಪದೇ ಕೈ ತೊಳೆಯುವುದು, ತಂಬುಳಿಯನ್ನು ಲೋಟದಲ್ಲಿ ಹಾಕಿಸಿಕೊಡು ಕುಡಿಯುವುದು , ಎರಡೂ ಕೈಲಿ ಹಪ್ಪಳ ಮುರಿದು ಮುಸುರೆಯಾಗಿದ್ದು ಅರಿವಿಗೆ ಬಂದು ಬೆಪ್ಪನಂತೆ ಭಟ್ಟರ ಮುಖ ನೋಡುವುದು,ಸಮಯ ಸಿಕ್ಕಾಗಲೆಲ್ಲ ಊರಿಗೆಲ್ಲ ಕೇಳುವಂತೆ ನಿದ್ದೆ ಮಾಡುವುದು ಭಟ್ಟರ ತಾಯಿಗೆ ಮೋಜೆನಿಸುತ್ತಿತ್ತು. ತಮಾಷೆ ಮಾಡುತ್ತಲೇ ಊಟಕ್ಕೆ ನೀಡುವ, ಗಾಯವಾದ ಕಾಲಿಗೆ ಔಷಧಿ ಹಚ್ಚುವ ಅನನ್ಯ ಪ್ರೀತಿ ಅವರದು.
ಅಂಥ ಕುಂಭದ್ರೋಣ ಮಳೆಯಲ್ಲೇ ಪಶ್ಚಿಮ ಘಟ್ಟಗಳನ್ನು ಭಟ್ಟರ ಬೈಕ್ ನಲ್ಲಿ ಸುತ್ತಾಡಿದೆವು. ಮೊದಲ ದಿನ ಹೋಗಿದ್ದು ಅಘನಾಶಿನಿ ಜನ್ಮ ತಳೆಯುವ ಘಟ್ಟಕ್ಕೆ. ಸುಮಾರು ಮೂವತ್ತೈದು ಕಿ ಮಿ ಗಳ ಪಯಣ. ದಾರಿಯುದ್ದಕ್ಕೂ ಹೊಚ್ಚ ಹೊಸ ಮಳೆಯಿಂದಾಗಿ ಜನಿಸಿದ್ದ ಶುಭ್ರ ಝರಿಗಳು, ತೊರೆಗಳು, ಹಳ್ಳಗಳು ಎದುರಾಗುತ್ತಿದ್ದವು. ಆ ಸ್ಪಟಿಕ ಜಲದಲ್ಲಿ ಜಿಗಿಯುವ ನನ್ನ ಹುಮ್ಮಸ್ಸಿಗೆ ಕಾಲಿನ ಗಾಯದ ನೆಪವೊಡ್ಡಿ ಬ್ರೇಕ್ ಹಾಕಿದರು ಭಟ್ರು. ಛೆ ! ಈ ದರಿದ್ರ ಗಾಯ ಈಗಲೆ ಆಗಬೇಕಿತ್ತೆ ಎಂದು ಬಯ್ದುಕೊಂಡೆ. ಆಗಲೇ ಗಾಯದ ಕಾರಣದಿಂದ ನನ್ನ ಪಾದ ರಕ್ತ ಕಳೆದುಕೊಂಡು ಬಿಳುಚಿಕೊಂಡಿತ್ತು. ಮನಸ್ಸು ಮಾತ್ರ ಕಾಲಿನ ನೋವಿನ ಕಡೆಗೆ ಗಮನ ಕೊಡದೆ ತನ್ನ ಸಂತೋಷವನ್ನು ಸಾಧಿಸುವ ಮಟ್ಟಿಗೆ ಸ್ವಾರ್ಥಿಯಾಗಿತ್ತು. ಮೊದಲ ದಿನವೇ ಅಘನಾಶಿನಿಯಲ್ಲಿ ಒಂದು ಸುತ್ತು ಈಜಿ ಬರೋಣವೇ ಎಂದು ಕೇಳಿದೆ. ಮಳೆಯಿಂದಾಗಿ ತೀವ್ರ ಸೆಳೆತ ಉಂಟಾಗಿತ್ತು ಅಘನಾಶಿನಿಯ ಮಡುವಿನಲ್ಲಿ. ಭಟ್ಟರು ನಿರಾಕರಿಸಿಬಿಟ್ಟರು.
ಅಘನಾಶಿನಿ ನಾವು ಹೋದ ಜಾಗೆಯಲ್ಲಿ ಬೆಟ್ಟದ ತುದಿಯಿಂದ ಕಣಿವೆಯೊಳಗೆ ಜಿಗಿಯುತ್ತಾಳೆ. ಕಣಿವೆಯಂಚಿಗೆ ಗಾಡಿ ನಿಲ್ಲಿಸಿ ಮುಂಗಾರಿನ ಕೃಪೆಯಿಂದ ಮೈದುಂಬಿ ಧುಮ್ಮಿಕುತ್ತಿದ್ದ ಅಘನಾಶಿನಿಯನ್ನು ಆಸ್ವಾದಿಸಿದ್ದಾಯಿತು. ’ಹುಟ್ಟುವ ಜಾಗ ನೋಡಬೇಕಾ ?’ ಎಂದು ಕೇಳಿದರು ಭಟ್ಟರು. ’ಹ್ಙೂ’ ಎಂದೆ. ಎಂಟು ಹತ್ತು ಹೆಜ್ಜೆ ನಡೆಯುವುದರೊಳಗಾಗಿ ಎಲೆಯ ಮೇಲೆ ಚಿಕ್ಕ ಕಡ್ಡಿಯಂಥದು ಅಲುಗಿದಂತಾಯಿತು. ಏನೆಂದು ಬಗ್ಗಿ ನೋಡಿದೆ. ಅದು ’ಜಿಗಣೆ’ ! ಹಾಗಿದ್ದರೆ ನನ್ನ ಕಾಲ ಮೇಲೆ ಎರಡಾದರೂ ಇಷ್ಟು ಹೊತ್ತಿಗೆ ಹತ್ತಿರಬೇಕು. ಭಟ್ಟರ ಕಾಲು ನೋಡಿದೆ. ಆಗಲೇ ನಾಲ್ಕು ಜಿಗಣೆಗಳು ಅವರ ರಕ್ತ ಹೀರುತ್ತಿದ್ದವು. ’ಗಣೇಶ್ ಲೀಚ್ ...ಜಿಗಣೆ’ ಎಂದು ಚೀರಿದೆ. ನಮ್ಮ ಬಳಿ ಸುಣ್ಣ, ನಸ್ಯಪುಡಿ, ಬೆಂಕಿಕಡ್ಡಿಯಂಥ ಲೀಚ್ ಮೇಲೆ ಉಪಯೋಗಿಸಬಹುದಾದ ಆಯುಧಗಳು ಇರಲಿಲ್ಲ. ನನ್ನ ಕೂಗು ಕೇಳಿ ಗಣೇಶ್ ತಕ್ಷಣವೇ ಛಕಛಕನೆ ತಮ್ಮ ಹಾಗೂ ನನ್ನ ಕಾಲ ಮೇಲಿದ್ದ ಎಲ್ಲಾ ಲೀಚ್ ಗಳನ್ನು ಕಿತ್ತು ಹಾಕಿದರು. ಮುಂದೆ ಹೋಗತೊಡಗಿದಂತೆ ದಾರಿ ಕಠಿಣವಾಗತೊಡಗಿತು. ಏರು ತಗ್ಗುಗಳು ಹೆಚ್ಚಾದಂತೆ ಕಾಲಲ್ಲ್ದಿ ರಕ್ತ ಸೋರತೊಡಗಿತು. ಜೊತೆಗೆ ಜಿಗಣೆಗಳ ಕಾಟ ಬೇರೆ. ’ ಈ ದಿನ ಜಿಗಣೆಗಳಿಗೆ ಹಬ್ಬದೂಟ !’ ಎಂದು ನಕ್ಕರು ಭಟ್ಟರು. ಮುಂದೆ ಹೋಗಲು ಧೈರ್ಯ ಸಾಲಲಿಲ್ಲ. ಹಿಂದಿರುಗಿ ನಡೆಯತೊದಗಿದೆವು. ದಾರಿಯುದ್ದಕ್ಕೂ ನಾನು ಜಿಗಣೆಗಳ ಬಗ್ಗೆ ನನಗೆ ತಿಳಿದದ್ದನ್ನೆಲ್ಲಾ ಭಟ್ಟರಿಗೆ ಹೇಳತೊಡಗಿದೆ. ಕಂಡಕಂಡಲ್ಲಿ ಓದಿದ್ದನ್ನೆಲ್ಲಾ ಕೊರೆದು ಯಾವಾಗಲೂ ತಲೆ ತಿನ್ನುತ್ತಾನೆ ಎಂದುಕೊಂಡರೋ ಏನೋ ಭಟ್ಟರು ಸುಮ್ಮನೆ ತಲೆ ತಗ್ಗಿಸಿ ನಡೆಯುತ್ತಿದ್ದರು. ಮತ್ತೆ ಕಣಿವೆಯಂಚಿಗೆ ಗಾಡಿಯ ಬಳಿ ಬಂದಾಗ ಕಾಲುಗಳನ್ನು ಪರೀಕ್ಷಿಸಿಕೊಂಡೆವು. ಏಳೆಂಟು ಜಿಗಣೆಗಳು ಸಿಕ್ಕಲ್ಲಿ ಕೊಕ್ಕೆ ಹಾಕದೇ ಕಾಲಿನ ಗಾಯದ ಕಡೆಗೆ ಧಾವಿಸತೊಡಗಿದ್ದವು. ಬಿಟ್ಟಿ ರಕ್ತ ಸಿಗುತ್ತಿರುವಾಗ ಚರ್ಮ ಕೊರೆಯುವುದೇಕೆ ಎಂದುಕೊಂಡವೋ ಎನೋ ! ಸೋಮಾರಿತನದ ಪ್ರವೃತ್ತಿ ನನ್ನೊಬ್ಬನದೇ ಅಲ್ಲ; ಅದು ವಿಶ್ವವ್ಯಾಪಿ ಎಂಬುದು ಮತ್ತೆ ನನಗೆ ವೇದ್ಯವಾಯಿತು. ಭಟ್ಟರು ಮತ್ತೆ ಇವನ್ನೂ ನಿವಾರಿಸಿದರು. ರೇನ್ ಕೋಟ್ ಧರಿಸಿ ಹೊರಟೆವು. ನಾನು ನೋಡಿದ ಹಾಗೆ ನಾವು ಹೋದಲ್ಲೆಲ್ಲ ಜಿಗಣೆಗಳು ನನಗಿಂತ ಭಟ್ಟರನ್ನೇ ಹೆಚ್ಚು ಮುತ್ತಿಕೊಳ್ಳುತ್ತಿದ್ದವು. ರಾಸಾಯನಿಕ ಗೊಬ್ಬರದ ಹೈಬ್ರಿಡ್ ಆಹಾರ ತಿಂದ ನನಗಿಂತಲೂ ಸಾವಯವ ಆಹಾರ ತಿಂದ ಭಟ್ಟರ ರಕ್ತವೇ ಹೆಚ್ಚು ರುಚಿ ಎನಿಸಿತ್ತೇನೋ ಅವಕ್ಕೆ. ಅಘನಾಶಿನಿ ಕೊಳ್ಳದಿಂದ ಹಿಂದಿರುಗುವಾಗ ನಾಲ್ಕೈದು ಜನ ಏನನ್ನೋ ಅಟ್ಟಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅದು ಒಂದು ಏಡಿ. ನನ್ನ ಜೀವನದಲ್ಲೇ ನಾನು ಅಷ್ಟು ದೊಡ್ಡ ಏಡಿಯನ್ನು ನೋಡಿರಲಿಲ್ಲ. ಅದರ ಕೊಂಡಿಗೆ ಸಿಕ್ಕಿ ಹಾಕಿಕೊಳ್ಳದಂತೆ ಒಬ್ಬ ಹಿಡಿದ. ವಿಜಯ ಸಾಧಿಸಿದವರಂತೆ ಉಳಿದವರೆಲ್ಲ ಅವನ ಹಿಂದೆ ಹೊರಟರು. ಅವರಲ್ಲೊಬ್ಬನಿಗೆ ’ಎನ್ ಸ್ವಾಮಿ ಇವತ್ತು ಏಡಿಯ ಉಪ್ಪಿನಕಾಯಿಯಾ?’ ಎಂದೆ. ’ಹೌದು ಸಾರ್ ’ ಎಂದು ಕಣ್ಣು ಕಿಸಿದು ಓಡಿದ. ಇಷ್ಟು ದೊಡ್ಡ ಏಡಿ ಈ ಕಾಡಿನ ಮಧ್ಯೆ ಹೇಗೆ ಬಂತು ಎಂದು ಕೇಳಿದಕ್ಕೆ ಭಟ್ಟರು ಅದು ಅಘನಾಶಿನಿಯಲ್ಲಿ ವಾಸಿಸುವ ಸಿಹಿನೀರಿನ ಏಡಿ, ಮಳೆ ನೀರಿನೊಡನೆ ಝರಿಯಲ್ಲಿ ದಾರಿ ತಪ್ಪಿ ಬಂದಿದೆ ಎಂದರು. ’ಏಡಿ ಬಾದಾಮಿಯ ರುಚಿ ಇರುತ್ತದಂತೆ’ ಎಂದೆ. ’ನೀನು ಸಸ್ಯಾಹಾರಿ ಅಲ್ಲವಾ ನಿಂಗೆ ಹೇಗೆ ಗೊತ್ತು ?’ ಎಂದರು. ತೇಜಸ್ವಿ ಬರೆದಿದ್ದು ಓದಿದ್ದೆ ಎಂದೆ. ಇಂಥ ಕೆಲಸಕ್ಕೆ ಬಾರದ ಮಾಹಿತಿ ನಿನ್ಹತ್ರ ತುಂಬಾ ಇದೆ ಎಂಬಂತೆ ನಕ್ಕರು.
ಮರುದಿನ ಕರಿಕಾನ ಪರಮೆಶ್ವರಿಯ ಗುಡಿಗೆ ಹೊರಟೆವು. ಈ ಗುಡಿ ಬೆಟ್ಟದ ಮೇಲಿದೆ. ನಾವು ಹೋದಾಗ ಯಾರೋ ಮಡಿಯುಟ್ಟು ಹೋಮಕ್ಕೆ ಕೂತಿದ್ದರು. ಗುಡಿಯಿಂದ ಬೆಟ್ಟ ಕೊಳ್ಳಗಳ ಮಧ್ಯೆ ಹರಿಯುವ ಅಘನಾಶಿನಿಯ ಸಂಪೂರ್ಣ ಪಾತ್ರ ಕಾಣುತ್ತದೆ. ಹಸುರು ಬೆಟ್ಟಗಳಾಚೆ ದಿಗಂತದವರೆಗೂ ಹಬ್ಬಿರುವ ಜಲಧಿ ಕಣಿವೆಗಳ ನಡುವೆ ವಿಹರಿಸುವ ಮೇಘಗಳ ಜೊತೆ ಸೌಂದರ್ಯ ಸ್ಪರ್ಧೆಗೆ ಬಿದ್ದಂತೆ ತೋರುತ್ತದೆ. ಸೃಷ್ಟಿಕರ್ತನ ಸೃಜನಶೀಲತೆಗೆ ಮನದಲ್ಲೇ ನಮಿಸಿದೆ. ಇದೇ ಬೆಟ್ಟದಲ್ಲಿ ಕಗ್ಗಾಡಿನ ನಡುವೆ ಒಂದಡಿಕೆ ಶಂಭುಲಿಂಗನ ದೇವಾಲಯವಿದೆ. ಹೊರಟೆವು. ಅರ್ಧ ದಾರಿ ಸಾಗಿದ ಮೇಲೆ ನನಗೆ ಇಲ್ಲೂ ಜಿಗಣೆಗಳು ಇರುವಂತೆ ತೋರಿತು. ನನ್ನ ಅನುಮಾನ ಸತ್ಯವಾಗುವಂತೆ ಭಟ್ಟರ ಕಾಲ ಮೇಲೆ ಆಗಲೇ ನಾಲ್ಕು ಪವಡಿಸಿದ್ದವು. ನನ್ನ ಕಾಲ ಮೇಲೂ ಜಿಗಣೆಯೊಂದು ಗಾಯದ ಕಡೆ ಧಾವಿಸುತ್ತಿದ್ದುದು ಕಾಣಿಸಿತು.ನನ್ನ ಕೂಗು ಕೇಳಿದ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ನನ್ನ ಮತ್ತು ಅವರ ಕಾಲಿನ ಮೇಲಿನ ಜಿಗಣೆಗಳನ್ನು ಕಿತ್ತೊಗೆದರು. ಆಗಲೇ ಮುಕ್ಕಾಲು ದಾರಿ ಬಂದದ್ದಾಗಿತ್ತು. ಹಿಂದಿರುಗುವ ಪ್ರಶ್ನೆಯೇ ಇರಲಿಲ್ಲ. ಶಂಭುಲಿಂಗನ ಗುಡಿಯಲ್ಲಿ ಗಣೇಶ ಹಾಗೂ ಪಾರ್ವತಿಯ ವಿಗ್ರಹಗಳಿವೆ. ಶಿವನ ತಲೆಯ ಮೇಲೆ ಬೆಟ್ಟದಿಂದ ಹರಿದು ಬಂದ ನೀರು ಬೀಳುತ್ತಿತ್ತು. ದಿನಕ್ಕೆ ಒಂದೇ ಬಾರಿ ಇಲ್ಲಿ ಪೂಜೆ ನಡೆಯುತ್ತದೆ. ಕಾಲಿಗೆ ಹತ್ತಿಕೊಂಡಿದ್ದ ಲೀಚುಗಳನ್ನು ಕಿತ್ತು ಹಾಕಿ ಬೀಗ ಹಾಕಿದ ಬಾಗಿಲ ಸಂದಿಯಿಂದ ದರ್ಶನ ಪಡೆದು ತಿರುಗಿದಾಗ ನಮ್ಮ ಕಾಲ್ಗಳ ಮೇಲೆ ಸವಾರಿ ಮಾಡಿಕೊಂಡು ಬಂದಿದ್ದ ಎರಡು ಲೀಚುಗಳು ನಮ್ಮತ್ತಲೇ ಬರುತ್ತಿರುವುದು ಕಾಣಿಸಿತು. ಅವು ಬೇಟೆಗೆ ಬರುತ್ತಿರುವ ಹಿಂಸ್ರ ಪಶುಗಳಂತೆಯೂ ನಾವು ಬೇಟೆಯ ಬಲಿಪಶುಗಳಂತೆಯೂ ನನಗೆ ಭಾಸವಾಯಿತು. ಮಳೆ ಎಡೆಬಿಡದೆ ಭೋರ್ಗರೆಯುತ್ತಿತ್ತು. ಅಘನಾಶಿನಿ ಕೊಳ್ಳಕ್ಕಿಂತ ಹೆಚ್ಚಿನ ಜಿಗಣೆಗಳು ಇಲ್ಲಿದ್ದವು. ನಾವು ಬಂದದ್ದನ್ನು ನಮ್ಮ ಹೆಜ್ಜೆಯ ವೈಬ್ರೇಷನ್ ಗಳಿಂದ ತಿಳಿದು ವಾಪಸು ಹೋಗುವ ಹೊತ್ತಿಗೆ ಎಚ್ಚೆತ್ತುಕೊಂಡಿರುತ್ತವೆ. ನಮ್ಮ ನೆತ್ತರು ಹೀರಲು ಕಾಯುತ್ತಿರುತ್ತವೆ. ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತೆ ನಮ್ಮ ಬಗ್ಗೆ ನಮಗೆ ತೋರಿತು. ವಾಪಸು ಹೋಗಲು ಒಂದು ಯುದ್ಧ ಯೋಜನೆ ಹಾಕಿದೆವು. ಜಿಗಣೆಗಳು ನಮ್ಮಗೆ ಕಚ್ಚಿಕೊಳ್ಳುವುದಕ್ಕಿಂತ ವೇಗವಾಗಿ ನಾವು ಓಡುವುದು. ಮಧ್ಯೆ ಸುಧಾರಿಸಿಕೊಳ್ಳಬೇಕಾದರೆ ತರಗೆಲೆಗಳಿಲ್ಲದ ಮಣ್ಣು ಇರುವ ಜಾಗದಲ್ಲಿ ನಿಲ್ಲುವುದು ಮತ್ತೆ ಓಡುವುದು. ಅದರಂತೆಯೇ ಓಡಿದೆವು. ಬೆಟ್ಟದ ಏರು ಹಾದಿಯಲ್ಲಿ ನನಗೆ ಬೇಗನೆ ಸುಸ್ತಾಯಿತು. ನಡುವೆ ಮಣ್ಣಿರುವ ಜಾಗೆಯಲ್ಲಿ ಒಂದೇ ನಿಮಿಷದ ಮಟ್ಟಿಗೆ ದಣಿವಾರಿಸಿಕೊಂಡು ಮತ್ತೆ ಓಡಿದೆ. ಸತತ ಒಂದೂವರೆ ಕಿ ಮಿ ಓಡಿದ್ದಾಯಿತು. ಮತ್ತೆ ಪರಮೇಶ್ವರಿ ಗುಡಿ ಸೇರಿದಾಗ ನನ್ನ ಶ್ವಾಸಕೋಶಗಳು ಬಾಯಿಗೆ ಬಂದೇ ಬಿಡುತ್ತವೇನೋ ಎಂಬಂತೆ ಎದುಸಿರು ಬಿಡುತ್ತಿದ್ದೆ. ಓಡಾಡಿ ಅಭ್ಯಾಸವಿದ್ದ ಭಟ್ಟರಿಗೆ ಅಷ್ಟು ಸುಸ್ತಾದಂತೆ ಕಾಣಲಿಲ್ಲ. ಒಂದರ್ಧ ಗಂಟೆ ಸುತ್ತಲಿನ ಹರಿತ್ತನ್ನು ಕಣ್ಣಿಗೆ ತುಂಬಿಕೊಂಡು ಮತ್ತೆ ವಾಪಸು ಹೊರಟೆವು. ಮನೆ ಸೇರಿದಾಗ ಭಟ್ಟರ ತಾಯಿ ಅನ್ನ, ತಂಬುಳಿ, ಸಾಂಬಾರ್ ಅಡುಗೆ ಮಾಡಿ ನಮಗಾಗಿ ಕಾಯುತ್ತಿದ್ದರು. ನೆನಪಿಡಿ ಮನೆ ಬಿಟ್ಟಾಗಿನಿಂದ ವಾಪಸು ಬರುವವರೆಗೆ ಒಂದು ನಿಮಿಷವೂ ಮಳೆ ನಿಂತಿರಲಿಲ್ಲ!
ಈ ಪ್ರವಾಸದಲ್ಲಿ ನಾನು ಕಲಿತಿದ್ದು ಬಹಳ. ಭಟ್ಟರ ಮನೆಯಲ್ಲಿ ಮಹಾಭಾರತವನ್ನು ಮತ್ತೊಮ್ಮೆ ಓದಿದೆ. ಈ ಬಾರಿ ಮಹಾಭಾರತ ಹೊಸದಾಗಿ ಕಂಡಿತು. ಒಂದೊಂದು ಪಾತ್ರವನ್ನೂ ಅಷ್ಟು ಅಮೋಘವಾಗಿ ನಿರೂಪಿಸಿದ ಮಹಾಕವ್ಯ ಇನ್ನೊಂದಿಲ್ಲ ಎನಿಸುತ್ತದೆ. ಅದರಲ್ಲೂ ಕರ್ಣನೆಂಬ ದುರಂತ ನಾಯಕನ ಕಥೆ ಮನಸ್ಸನ್ನು ಬಹುವಾಗಿ ಕಾಡಿತು. ಉದ್ಯೋಗ ಪರ್ವದಲ್ಲಿ ಹಾಗೂ ಭೀಷ್ಮಪರ್ವದ ಕೊನೆಯಲ್ಲಿ ಕರ್ಣ ಎದುರಿಸುವ ಕಠೋರ ಸತ್ಯಗಳು ದೃಗುಜಲವನ್ನು ಉರವಣಿಸದೇ ಬಿಡವು. ರಾಮಚಂದ್ರಾಪುರ ಮಠದ ಗೋಶಾಲೆಯ ಶಾಖೆಯೊಂದು ಕಂದವಳ್ಳಿಯ ಸಮೀಪದಲ್ಲಿ ಅಭಿವೃದ್ಧಿಯಾಗುತ್ತಿದೆ. ನಮ್ಮ ಭಟ್ಟರು ಅಲ್ಲಿಯವರಿಗೆ ತುಂಬಾ ವಿಶ್ವಾಸಿಗರು. ಮಳೆ ಕೊಯಿಲಿನ, ಔಷಧಿ ತಯಾರಿಕೆಯ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಬೆಟ್ಟದಿಂದ ಬರುವ ಮಳೆನೀರಿನಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವೆ ಎಂದು ನನ್ನನ್ನು ಕೇಳಿದರು. ಸಾಧ್ಯವೇನೋ ಇತ್ತು. ಆದರೆ ಬಜೆಟ್ ಸಾಲುತ್ತಿರಲಿಲ್ಲ.ಅಷ್ಟೊಂದು ಖರ್ಚು ಮಾಡುವುದಕ್ಕಿಂತ ವಿದ್ಯುತ್ ಇಲ್ಲದಿರುವುದೇ ಮೇಲು ಎಂದು ಅಭಿಪ್ರಾಯ ಪಟ್ಟರು. ಇನ್ನೊಂದು ಮುಖ್ಯ ವಿಷಯವನ್ನು ಹೇಳಬೇಕು. ಕಾಲು ಗಾಯವಾಗಿದ್ದನ್ನು ಮೊದಲೇ ಹೇಳಿದ್ದೆನಲ್ಲ ಆ ಗಾಯಕ್ಕೆ ಭಟ್ಟರು ಮತ್ತು ಅವರ ತಾಯಿ ತಾವೇ ತಯಾರಿಸಿದ ಔಷಧವನ್ನು ಹಚ್ಚುತ್ತಿದ್ದರು. ಗೋಮಯ, ಗೋಮೂತ್ರ, ನಿಕ್ಕೆಯ ಗಿಡ, ಎಕ್ಕದ ಎಲೆ ಇತ್ಯಾದಿಗಳಿಂದ ತಯಾರಿಸಿದ್ದಂತೆ ಅದು. ಕುಮುಟಾದಿಂದ ವಾಪಸು ಬರುವ ಹೊತ್ತಿಗಾಗಲೇ ಗಾಯ ಬಹುತೇಕ ವಾಸಿಯಾಗಿತ್ತು ! ನೀರಿನಲ್ಲಿ ಓಡಾಡದಿದ್ದರೆ ಇನ್ನೂಬೇಗ ವಾಸಿಯಾಗುತ್ತಿತ್ತು ಎಂದರು. ಗಾಯವನ್ನು ವಾಸಿ ಮಾಡಿದ್ದು ಭಟ್ಟರ ಹಾಗೂ ಅವರ ತಾಯಿಯವರ ಮದ್ದೋ ಅಥವಾ ಪ್ರೀತಿಯೋ ಎಂಬುದು ಇನ್ನೂ ನನಗೆ ರಹಸ್ಯ. ಗಾಯದ ಆಳವನ್ನು ನೋಡಿ ಆಪರೇಷನ್ನೆ ಗತಿ ಎಂದು ಹೆದರಿಸಿದ್ದವರಿಗೆ ಭಟ್ಟರು ತಮಗೆ ಗೊತ್ತಿಲ್ಲದೇ ಉತ್ತರ ಕೊಟ್ಟಿದ್ದಾರೆ. ಅಂದ ಹಾಗೆ ಭಟ್ಟರು ಗೋಮೂತ್ರ, ನ್ಯಾಚುರೋಪತಿ, ಆಕ್ಯುಪ್ರೆಷರ್ ನಲ್ಲೂ ’ಪಂಟರು’! ಇಂಥ ಒಂದು ಜಾಗೆಯಲ್ಲಿ ಹೊರಜಗತ್ತಿನ ಸಂಪರ್ಕ ಕ್ಕೂ ಸಿಗದೇ ಪುಸ್ತಕಗಳೊಡನೆ ಹಾಯಾಗಿ ಇದ್ದುಬಿಡೋಣ ಎನಿಸುತ್ತದೆ. ಮೊಬೈಲ್ ನ್ನು ಎರಡು ದಿನ ಸ್ವಿಚ್ ಆಫ್ ಮಾಡಿಟ್ಟು ನೋಡಿ; ಕೈಯಲ್ಲಿ ಗಡಿಯಾರವೂ ಬೇಡ. ನಾ ಹೇಳಿದ ಮನಸ್ಸಿನ ನೆಮ್ಮದಿಯ ಕಿಂಚಿತ್ ಭಾಗ ನಿಮ್ಮ ಅನುಭವಕ್ಕೆ ಬರುತ್ತದೆ!
3 ಕಾಮೆಂಟ್‌ಗಳು:
ಶ್ರೀ ಹರ್ಷ,
ತುಂಬಾ ಆಸಕ್ತಿಯಿಂದ ಓದಿದೆ. ಬಹಳ ಖುಷಿಯೂ ಆಯಿತು. ಕಂದಳಿಕೆ ಎಲ್ಲಿದೆ ಮಾರಾಯ್ರೆ? ಕುಮಟಾದಿಂದ ಯಾವ ದಾರಿಯಲ್ಲಿ?
le sakatha agi bardiya maga nin fan agbitte nanu........... nin bardid nodidre nane alli idde anastu:)
ತು೦ಬಾ ಚೆನ್ನಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ