ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಭಾನುವಾರ, ಸೆಪ್ಟೆಂಬರ್ 5, 2010

ನದಿಗಳ ಕಥೆಗಳ ದಿಟ,ಪ್ರಕಟೇಶ್ವರ ಮತ್ತು ಪೂಜಾ ಭಾತ್ರಾ ಟ್ರಾಜಿಡಿ!

ಶ್ರೀನಗರ ದಾಟಿ ಬಾಲಟಾಲ್ ಕಡೆ ಹೊರಡುವ ದಾರಿಯಲ್ಲಿ ಒಂದರ್ಧ ಗಂಟೆ ಮುಂದೆ ಸಾಗುತ್ತಿದ್ದಂತೆ ಕಾಣಸಿಗುತ್ತದೆ ಸಿಂಧೂ ನದಿ."ನೋಡ್ರಿ ಹರ್ಷ ಇದು ಸಿಂದೂ ನದಿ" ಅಂತ ಸುಧೀಂದ್ರ ತೋರಿಸದಾಗ ಅಕ್ಷರಶಃ ನನಗೆ ರೋಮಾಂಚನ. ಜುಳಜುಳನೆ ಹರಿಯುತ್ತ ಬರುತ್ತಿರುವ ನೀರಿನ ಹರಿವು ನೋಡಿ ನೋಡಿದಂತೆ ಪ್ರತೀ ಕೂದಲೂ ಎದ್ದು ನಿಂತಂತೆ!ಸಾವಿರಾರು ವರ್ಷಗಳಿಂದ ಹತ್ತಾರು ನಾಗರೀಕತೆಗಳನ್ನು ಬೆಳೆಸಿ ಕೋಟ್ಟಯಂತರ ಜನರಿಗೆ ಬದುಕು ನೀಡಿ ತನಗೇನೂ ಗೊತ್ತೇ ಇಲ್ಲವೆಂಬಂತೆ ಬಳುಕುತ್ತಾ ಹರಿಯುತ್ತಾಳಲ್ಲ ಸಿಂಧೂ! ದೊಡ್ಡವರ ಲಕ್ಷಣವೇ ಇದೇ ಏನೋ. ದೊಡ್ಡ ಸಾಧನೆಗಳನ್ನು ಮಾಡುತ್ತಾರೆ. ನಂತರ ತಮಗೂ ತಮ್ಮ ಸಾಧನೆಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಬಿಡುತ್ತಾರಲ್ಲ. ಹಾಗೆಯೇ ಈಕೆ! ಯಾವುದೇ ಆರ್ಭಟಗಳಿಲ್ಲದೆ ತೆಳ್ಳಗೆ ಜುಳಜುಳನೆ ಹರಿಯುತ್ತಾ ಗಾಳಿಯನ್ನು ತಂಪಾಗಿಸುತ್ತಾ ಸಾಗಿ ಈಕೆ ಸಾವಿರಾರು ಎಕರೆ ನೆಲವನ್ನು ಹಸನಾಗಿಸುತ್ತಾಳೆ ಹಸಿರಾಗಿಸುತ್ತಾಳೆ. ನಂಬಲಸಾಧ್ಯ ಸಾಧನೆಗಳಿಗೆ ಬೆಳಕಾಗಿರುವ ಈಕೆ ಇಷ್ಟು ಸರಳವಾಗಿರುತ್ತಾಳಾ? ನಂಬಲಾಗುತ್ತಿಲ್ಲ. ಇಂಥದೊಂದು ಅಪನಂಬಿಕೆಯಿಂದಲೇ ಕಿಟಕಿಯ ಮೂಲಕ ಅರ್ಧ ಗಂಟೆ ನದಿಯ ಹರಿವನ್ನು ನೋಡಿದ್ದಾಯಿತು.ಜಮ್ಮುವಿನಿಂದ ಬಾಲಟಾಲ್ ಗೆ ಹನ್ನೆರಡು ತಾಸಿನ ಹಾದಿ. ಆಗಲೇ ತಡವಾಗಿದೆ. ನೀರು ಕಂಡಕಂಡಲ್ಲಿ ಇಳಿಯುವ ನಮ್ಮ ತೆವಲಿಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ. ನಮ್ಮ ಅದೃಷ್ಟವೆಂಬಂತೆ ಚಾಲಕ ಟೀ ಗಾಗಿ ನಡುವೆ ನಿಲ್ಲಿಸಿದ. ನನಗೂ ಸುಧೀಂದ್ರನಿಗೂ ಟೀ ಕುಡಿಯುವ ಅಭ್ಯಾಸ ಇಲ್ಲ. "ಆಚೆ ಈಚೆ ಹೋಗಬೇಡ್ರಪ್ಪಾ ಆಗಲೇ ತಡವಾಯ್ತು!" ಅಂದರು ಗೆಳೆಯರೆಲ್ಲ.

"ಇಲ್ಲ ಇಲ್ಲ. ಎರಡೇ ನಿಮಿಷ ಸೂಸೂ ಮಾಡಿ ಬರ್ತಿನಿ" ಅಂತ ಓಡಿದರು. ಸುದೀಂದ್ರನ ಈ ಮಾತಿನ ಹಿಂದೆ ಯಾವುದೋ conspiracy ಯ ಜಾಡು ಹಿಡಿದ ನಾನು "ನಂಗೂ ಅವಸರವಾಗಿದೆ ಕಣ್ರೀ ಬಂದೆ" ಅಂತ ಹೇಳಿ ಹಿಂಬಾಲು ಹತ್ತಿದೆ. ಮೋಹನನಿಗೆ ಯಾರ ಬಳಿಯೂ ಯಾವ ಕಾರಣವನ್ನೂ ಹೇಳುವ ಅವಶ್ಯಕತೆ ಕಾಣಲಿಲ್ಲ ಸುಮ್ಮನೆ ನಮ್ಮ ದಾಪುಗಾಲಿನ ಹೆಜ್ಜೆಗಳನ್ನು ಹಿಂಬಾಲಿಸಿ ಬಂದರು.ನಾನೆಣಿಸಿದಂತೆ ಸುದೀಂದ್ರ ಸೀದಾ ನದಿಗೆ ಇಳಿದರು. ಹಿಂದೆಯೇ ನಾವಿಬ್ಬರು. ತಣ್ಣಗೆ ಕೊರೆಯುವ ನೀರು. ತಳದಲ್ಲಿ ಹಾಸಲಾದ ನುಣುಪುಗಲ್ಲುಗಳ ಮೇಲೆ ಕೆಳಗೆ ಹಾರಿ ಜುಳಜುಳನೆ ಸದ್ದು ಮಾಡುತ್ತ ಹರಿಯುವ ಶುದ್ಧಜಲ. ಸುತ್ತಲೂ ಮಂಜುಕವಿದ ಬೆಟ್ಟಗಳು.

"ಹಾ ಹರ್ಷ! ಸೂರ್ಯನಿಗೆ ಅರ್ಘ್ಯ ಕೊಡ್ರೀ!" ಅಂದರು ಸುದೀಂದ್ರ.

"ಸೂರ್ಯನಿಗೆ ನಾವೇನ್ರೀ ಕೊಡೋದು ಇಷ್ಟೆಲ್ಲ ವನಿಂದನೇ ಪಡೀತಿರಬೇಕಾದರೆ?"

"ಸುಮ್ಮನ ಕೊಡಪಾ ನೀನು. ತಗಾ ಬೊಗಸೆ ನೀರು ತಗೋ" ಮೋಹನ ಉವಾಚ.ಮೂರು ಸಾರಿ "ಓಂ ಭರ್ಬುವ ಸ್ವಃ.... .....ಪ್ರಥಮಾರ್ಘ್ಯಂ ಸಮರ್ಪಯಾಮಿ" ಹಾಗೆಯೇ ದ್ವಿತೀಯ ತೃತೀಯ...."ಯಾವುದೂ ಹೇಳುತ್ತಿರಲಿಲ್ಲ ರೀ..ಇದು ಸಿಂಧೂ ನದಿ. ಇದರಲ್ಲಿ ನಿಂತು ಅರ್ಘ್ಯ ಕೊಡೋದರ ತೂಕನೇ ಬೇರೆ...!!!!"

ಭಾಗೀರಥಿಯನ್ನು ಭಗೀರತ ಭೂಮಿಗೆ ಕರೆತಂದಾಗ ಆಕೆ ವಿಪ್ಲವವಾಡಿದಳಂತೆ. ತನ್ನ ಪಾತ್ರದಲ್ಲಿ ಸಿಕ್ಕದ್ದನ್ನೆ ಕೊಚ್ಚಿಕೊಂಡು ನಡೆದಳಂತೆ. ಪ್ರಳಯ ಸೃಷ್ಟಿಯಾಯಿತಂತೆ. ಇದೆಲ್ಲ ಕಥೆ ಎಂದು ಸಾರಾಸಗಟಾಗಿ ತಿರಸ್ಕರಿಸಿಬಿಡಬಹುದು. ಕಥೆಯಲ್ಲಿ ಕೆಲವು ಸೂಕ್ಷ್ಮಗಳನ್ನು ಗಮನಿಸಿದಾಗ ಅದರಲ್ಲಿ ಅಡಗಿರುವ ಸತ್ಯಗಳು ಅಸ್ಪಷ್ಟವಾಗಿ ಕಾಣತೊಡಗುತ್ತವೆ. ಗಂಗೋತ್ರಿಯಲ್ಲಿ ಭಾಗೀರಥಿಯು ಹರಿಯುವ ವೇಗವನ್ನು ನೋಡಿದಾಗ ನನಗನ್ನಿಸಿದ್ದು ಹಾಗೆಯೇ. ಆ ವೇಗ ವಿಪ್ಲವಕಾರಿಯೇ ಸರಿ!

ಸೂರ್ಯಕುಂಡದಲ್ಲಿ ಗಂಗೆಯು ಭೋರ್ಗರೆಯುವ ವೇಗಕ್ಕೆ ಕೆಳಗಿನ ನೀರು ಕೊತಕೊತನೆ ಕುದಿಯುತ್ತಿರುವಂತೆ ಕಾಣುತ್ತದೆ. ಗೌರೀಕುಂಡದಲ್ಲಿ ಹರಿಯುವ ನೀರಿನಲ್ಲಿ ಮನುಷ್ಯನ ದೇಹವೇನಾದರೂ ಬಿದ್ದರೆ ಕೆಲವೇ ಕ್ಷಣಗಳಲ್ಲಿ ಅದು ಅಕ್ಕಪಕ್ಕದ ಬಂಡೆಗಳಿಗೆ ಅಪ್ಪಳಿಸಿ ಚೂರುಚೂರಾಗುವುದೇ ಸರಿ. ಈ ವೇಗ ವಿಪ್ಲವದ ಇನ್ನೊಂದು ರೂಪವಾಗಿ ಕಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ.ಗಂಗೋತ್ರಿಯಿರುವುದು ಉತ್ತರಕಾಶಿ ಜಿಲ್ಲೆಯಲ್ಲಿ. ಉತ್ತರಕಾಶಿಯಿಂದ ಕೆದಾರದ ಕಡೆ ಹೊರಡುವಾಗ ನಟ್ಟನಡುವೆ ಪ್ರಕಟೇಶ್ವರ ಲಿಂಗ ಸಿಗುತ್ತದೆ.ಗಂಗೋತ್ರಿಯಿಂದ ಕೇದಾರಕ್ಕೆ ಹೊರಡುವ ದಾರಿಯಲ್ಲಿ ಪ್ರಕಟೇಶ್ವರ ಲಿಂಗವಿದೆ. ರಸ್ತೆಯಿಂದ ಎಡಕ್ಕೆ ಒಂದು ಕಿಲೋಮೀಟರು ಬೆಟ್ಟ ಹತ್ತಿ ಹೋಗಬೇಕು. ಪ್ರಕಟೇಶ್ವರ ಲಿಂಗವಿರುವುದು ಒಂದು ಚಿಕ್ಕ ಗುಹೆ. ಒಬ್ಬರ ಹಿಂದೊಬ್ಬರಂತೆ ಸಾಲಾಗಿ ಹೋಗಬೇಕು. ಗುಹೆಯ ಒಳಗೆ ಐದು ಜನ ಮಾತ್ರ ನಿಲ್ಲುವಷ್ಟು ಜಾಗೆಯಿದೆ.ಗುಹೆಯ ಒಳಗೆ ಮೊಳಕಾಲುದ್ದ ನೀರಿದೆ. ಶುದ್ಧ ಮತ್ತು ತಣ್ಣಗೆ ಕಾಲು ಕೊರೆಯುವಂತಹ ನೀರು! ಅದೇ ನೀರು ಹೊರಗೆ ಜಲಪಾತದಂತೆ ಬಂದು ಕೆಳಗೆ ಹರಿಯುವ ಮಂದಾಕಿನಿಯನ್ನು ಕೂಡುತ್ತದೆ. ಪ್ರಕಟೇಶ್ವರ ಗುಹೆಯು ಉಳುವಿಯ ಗುಹೆಗಳಂತೆ ಸುಣ್ಣದ ಕಲ್ಲಿನಿಂದ ನಿರ್ಮಾಣವಾದ ಗುಹೆಎಂದಿನಂತೆ ಇದು ಭಾರತ ದೇಶವಾದುದರಿಂದ ಇದು ದೈವಿಕ ಮಹತ್ವವುಳ್ಳ ಪ್ರದೇಶವಾಗಿದೆ. ಒಂದು ಕಡೆ ಶಿವಲಿಂಗ ಅದರಮೇಲೆ ನೀರು ಬಿದ್ದು ಸುಣ್ಣದಕಲ್ಲು ಮುದುರಿ ರುದ್ರಾಕ್ಷಿಯಂತೆ ಕಾಣುವ ಕವಚ. ಹಿಂದೆ ಸುಣ್ಣದ ಕಲ್ಲು ಇಳಿಬಿದ್ದು ಸಾವಿರಾರು ಹೆಡೆಗಳುಳ್ಳ ಹಾವು. ಸಂಪೂರ್ಣ ಚಿತ್ರದಲ್ಲಿ ಸಾವಿರಾರು ಹೆಡೆಗಳ ಹಾವಿನಿಂದ ಬಳಸಲ್ಪಟ್ಟ ರುದ್ರಾಕ್ಷಿಯ ಕವಚ ತೊಟ್ಟ ಶಿವಲಿಂಗ ಇಲ್ಲಿದೆ. ಇದು ಪ್ರಕೃತಿಯಿಂದ ಉದ್ಭವಿಸಿದ ಮೂರ್ತಿ.ಒಂದು ಕಿಲೋಮೀಟರು ನಡೆದು ಗುಹೆಯ ಹತ್ತಿರ ಬರುತ್ತಿದ್ದಂತೆ ಮಧ್ಯ ವಯಸ್ಸಿನ ಹೆಣ್ಣುಮಗಳು ಕೂತಿದ್ದರು. ತಮ್ಮ ಪರಿವಾರದವರಿಗಿಂತ ಮುಂದೆ ಬಂದು ಅವರಿಗಾಗಿ ಕಾಯುತ್ತಾ ಪಾಳಿ ಹಿಡಿದು ಕೂತಿದ್ದರು ಎನಿಸುತ್ತದೆ. ಅಲ್ಲಿ ಅಂತಹ ಹೇಳಿಕೊಳ್ಳುನಂತಹ ಜನಜಂಗುಳಿಯೂ ಇರಲಿಲ್ಲ. ಆ ಮಹಿಳೆಯನ್ನು ಗಮನಿಸದೇ ನಮ್ಮ ಪಾಡಿಗೆ ನಾನು ಮುಂದೆ ನಡೆದೆವು. ಗುಹೆವನ್ನು ಪ್ರವೇಶಿಸಬೇಕೆಂಬುವಷ್ಟರಲ್ಲಿ ಆಕೆಯಿಂದ ತಡೆಯ ಸೂಚನೆ ಬಂತು.ನಮಗಿಂತ ಆಕೆಯು ಮೊದಲು ಬಂದಿದ್ದರಿಂದ ಆಕೆಗೆ ಮೊದಲು ಒಳಹೋಗಲು ಅವಕಾಶ ಕೊಡಬೇಕು ಎಂಬುದು ಆಕೆಯ ಆಶಯ. ನೀವು ಕ್ಯೂನಲ್ಲಿ ನಿಂತಿರಲಿಲ್ಲವಾದುದರಿಂದ ನಿಮಗಿಂತ ಮೊದಲು ನಾವು ಸಾಲಿನಲ್ಲಿ ನಿಂತಿದ್ದೆವಾದುದರಿಂದ ನಾವು ಮೊದಲು ಒಳಹೋಗಲು ಹಕ್ಕುದಾರರು ಎಂಬುದು ನಮ್ಮ ಸುದೀಂದ್ರನ ವಾದ. ಎರಡು ವಾಕ್ಯಗಳ ವಾದವಿವಾದ ನಡೆಯುತ್ತಿದ್ದಂತೆ ಆಕೆಯ ಪರಿವಾರ ಅಲ್ಲಿಗೆ ಬಂದು ಸೇರಿತು. ಗಟವಾಣಿಯರಿಗೆ ಗಂಡ ಯಾವಾಗಲೂ ಸಂಪನ್ನರೇ ಸಿಗುತ್ತಾರೆ ಎನ್ನಿಸುತ್ತದೆ ಅಥವಾ ಅವರು ಗಂಡನನ್ನು ಸಂಪನ್ನರನ್ನಾಗಿ ಮಾಡುತ್ತಾರೋ! ಗೊತ್ತಿಲ್ಲ. ಗಂಡನಿಗೆ ಸುಧೀಂದ್ರನ ವಾದದಲ್ಲಿ ಹುರುಳಿರುವಂತೆ ಕಾಣಿಸಿತು.

ಆದರೆ ನಾನು ಗಮನಿಸಿದ್ದನ್ನು ನಮ್ಮಲ್ಲಿ ಯಾರೂ ಗಮನಿಸಿರಲಿಲ್ಲ. ಆ ಗಟವಾಣಿ ಮಹಿಳೆಗೆ ಹದಿವಯಸ್ಸಿನ ಅವಳಿ ಜವಳಿ ಮಕ್ಕಳಿದ್ದರು. ಇಬ್ಬರೂ ಒಂದೇ ಥರ. ಥೇಟ್ ಸಿನಿಮಾ ನಟಿ ಪೂಜಾ ಭಾತ್ರಾ ಹಾಗೆ!(ಅಂದ ಹಾಗೆ ನನ್ನ ಮಟ್ಟಿಗೆ ಪೂಜಾ ಭಾತ್ರಾಳ ಮಹತ್ವ ಏನು ಎಂಬುದು ಬಹಳ ಕಡಿಮೆ ಜನರಿಗೆ ಗೊತ್ತು) ಕಣ್ಣೆದುರಿಗೆ ಇಬ್ಬರು ಪೂಜಾ ಭಾತ್ರಾಗಳು ಕಾಣುತ್ತಿರುವಂತೆ ನಾನು ಚುರುಕಾದೆ. ಸುಧೀಂದ್ರರನ್ನ ಹಿಂದೆ ಅಮುಕಿ ಥೇಟ್ ಪಾಂಡಾ ರಾವಲ್ ಶೈಲಿಯಲ್ಲಿ "ಜಾಯಿಯೇ ಮಾಜಿ ಜಾಯಿಯೇ, ಆಗೆ ಬಢಿಯೇ, ದರಸನ್ ಕಾ ಆನಂದ್ ಲೀಜಿಯೇ..!!!" ಅಂದುಬಿಟ್ಟೆ. ಇಡೀ ಪರಿವಾರ ಮುಂದೆ ಹೋಯಿತು. ಎರಡನೆಯ ಪೂಜಾ ಭಾತ್ರಾ ನನ್ನ ನೋಡಿ ನಸುನಕ್ಕಳು. ನಾನು ಹಿಗ್ಗಿಹೋದೆ.ಸಾತ್ವಿಕ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ವಾದ ಮಂಡಿಸಿ ತಮ್ಮ ಹಕ್ಕನ್ನು ಸಾಧಿಸಹೊರಟಿದ್ದ ಸುಧೀಂದ್ರರಿಗೆ ಇದರಿಂದ ರಸಭಂಗವಾದಂತಾಯಿತು. ನನ್ನ ಉದಾರತೆಯ ಹಿನ್ನೆಲೆಯರಿಯದೇ ರೇಗಿದರು. ಹಿನ್ನೆಲೆಯರಿತಿದ್ದರೆ ಬಾಲಬ್ರಹ್ಮಚಾರಿಯಾಗಿದ್ದ ಅವರು ಇನ್ನೂ ರೇಗುತ್ತಿದ್ದರೋ ಏನೋ! ಸಮಯಾವಕಾಶ ಸಾಕಷ್ಟು ಇದ್ದರೂ, ತಡವಾಗಿ ಹೋದರೆ ತೊಂದರೆ ಇಲ್ಲದಿದ್ದರೂ ತಾತ್ವಿಕವಾಗಿ ತಮಗೆ ದೊರೆಯಬೇಕಾಗಿದ್ದ ಮುನ್ನೆಲೆ ದೊರಕದೇ ಹೋದದ್ದು ಸುಧೀಂದ್ರನಿಗೆ ಅಸಮಾಧಾನವಾಗಿತ್ತು. ಸುಂದರಿಯ ಕುಡಿನೋಟಕ್ಕೆ ಪಕ್ಕಾದ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

ಥೇಟ್ ಸಾಬರ ಶೈಲಿಯಲ್ಲಿ "ಬಾಹರ್ ಆಜಾವ್ ಮಾ" ಎಂದು ಅರಚುತ್ತಿದ್ದ ಮಹೇಶನ ಮೇಲೆ ಕರುಣೆ ತೋರಿಸಿ ಕಡೆಗೂ ಒಬ್ಬೊಬ್ಬರಾಗಿ ಗುಹೆಯಿಂದ ಹೊರಬರತೊಡಗಿದರು. ಕಟ್ಟಕಡೆಗೆ ನನ್ನೆಡೆಗೆ ಕುಡಿನೋಟ ಬೀರಿದ್ದ ಹದಿಹುಡುಗಿ ಮತ್ತೆ ಒಂದು ಸ್ಮೈಲ್ ಒಗೆದಳು. ನಾನೂ ತಿರುಗಿ ಒಗೆಯುತ್ತಿದ್ದಂತೆ "ಥ್ಯಾಂಕ್ಯೂ ಭೈಯಾ!" ಎಂದು ಹೇಳಿ ನಗೆಯನ್ನು ಮುಂದುವರಿಸಿ ನಡೆಯತೊಡಗಿದಳು.ನನಗೆ ಇದ್ದಕ್ಕಿದ್ದಂತೆ ಸುಧೀಂದ್ರರು ಆ ಮಹಿಳೆಯ ಮುಂದೆ ಮಂಡಿಸುತ್ತಿದ್ದ ಸೈದ್ಧಾಂತಿಕ ವಿಚಾರಗಳಲ್ಲಿನ ಸತ್ಯದ ಬಗ್ಗೆ ನಂಬಿಕೆ ಮೂಡತೊಡಗಿತು!

3 ಕಾಮೆಂಟ್‌ಗಳು:

NilGiri ಹೇಳಿದರು...

ಹ ಹ್ಹ ಹ್ಹಾ!!!! ರಕ್ಷಾಬಂಧನ ಹಬ್ಬದ ದಿನ ಹೋಗಿದ್ರಾ ಏನ್ ಕಥೆ?! ಛೆ...ಛೆ!! ಹೀಗಾಗಬಾರದಿತ್ತು!!!

ಅನಾಮಧೇಯ ಹೇಳಿದರು...

ಏನ್ರಿ ಹರ್ಷ
ಕರ್ನಾಟಕಕ್ಕೆ ಒಬ್ರೇ ಬಂದ್ರ ಇಲ್ಲ ಎರಡನೇ ಪೂಜಾ ಭಾತ್ರಳನ್ನು ಕರ್ಕೊಂಡ್ ಬಂದ್ರ ಅಂತ ಕೇಳುವವನಿದ್ದೆ..ಅಷ್ಟರಲ್ಲಿ 'ಅಣ್ಣಾ ...' :)
ಲೇಖನದ ಶೈಲಿ ಹಿಡಿಸಿತು.ನಾನ್ ಅಲ್ಲಿಗೆ ಹೋಗ್ತಿನೋ ಇಲ್ವೋ ಗೊತ್ತಿಲ್ಲ ಇಲ್ಲೇ ದರ್ಶನ ಮಾಡಿಬಿಡ್ತೇನೆ ಮುಂದುವರೆಸೀ :)

ರಾಕೇಶ್ ಶೆಟ್ಟಿ :)

AntharangadaMaathugalu ಹೇಳಿದರು...

ಹ್ಹ ಹ್ಹ..... ಮುಂದುವರೆಸಿ ಹರ್ಷ...


ಶ್ಯಾಮಲ