ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ್ಲಿ ನನ್ನ ಮನಃಸ್ಥಿತಿ ಸಾವಿರ ಹೊರಳಾಟಗಳನ್ನು ಕಂಡು ಕಡೆಗೆ ಶಾಂತವಾಗಿದ್ದನ್ನು ಶಬ್ದಗಳಲ್ಲಿ ವಿವರಿಸಲಾರೆ. ನಂಬಿಕೆಗಳು ದಿನದಿನಕ್ಕೂ ನೂರು ಹೊಸ ದಿಕ್ಕುಗಳನ್ನು ಪಡೆಯುತ್ತಿದ್ದವು. ದೈವದ ಬಗ್ಗೆ ವಿಶ್ವದಲ್ಲಿ ಶಕ್ತಿಯ ಸಂಚಯದ ಬಗ್ಗೆ ಎಷ್ಟೋ ಪ್ರಶ್ನೆಗಳೇಳುತ್ತಿದ್ದವು. ಕೊನೆಗೆ ಸತ್ಯ ಯಾವುದು ಸುಳ್ಳು ಯಾವುದು ಎಂದೂ ತಿಳಿಯದೇ ಗೊಂದಲದ ಮಧ್ಯೆ ಕೆಲವು ಸತ್ಕಾರಣಗಳಿಗಾಗಿ ನಾನು ನೋಡಿದ್ದೆಲ್ಲಾ ಸುಳ್ಳು ಎಂದು ನನಗೆ ನಾನೇ ಆದೇಶಿಸಿಕೊಂಡೆ. ಅನುಭವವನ್ನು ಹಂಚಿಕೊಳ್ಳುವ ಆಸೆ ಇದನ್ನು ಬರೆಯಲು ಪ್ರೇರೇಪಿಸಿತು.
ಮನೆಗೆ ಬಂದ ಮಂತ್ರವಾದಿ ಮನೆಯನ್ನೊಮ್ಮೆ ತನ್ನ ಬಟ್ಟಲ ಕಂಗಳಲ್ಲಿ ಕೋಣೆಯನ್ನು ಅಳತೆ ಮಾಡಿದ. "ಏನು ತೊಂದರೆ?" ಎಂದು ಕೇಳಿದ.
ವಿವರಣೆ ಶುರು ಮಾಡಿ ಒಂದು ವಾಕ್ಯವಾಗುತ್ತಿದ್ದಂತೆ "ಒಂದು ತಟ್ಟೆ ಚೊಂಬ್‍ನೆಗ ನೀರು ತರ್ರಿ" ಅಂದ.
ಅವನ ಎದುರಿಗೆ ಸ್ಟೂಲ್ ಇಟ್ಟು ತಟ್ಟೆಯಲ್ಲಿ ನೀರು ಹಾಕಿದೆ. ಕರ್ಪೂರ ಕಡ್ಡಿಪೆಟ್ಟಿಗೆ ಬೇಕು ಅಂದ. ತಂದು ಕೊಟ್ಟೆ. ಮಾಂತ್ರಿಕನ ಶಿಷ್ಯ ತಟ್ಟೆಯಲ್ಲಿ ನೀರು ಹಾಕಿ ಎರಡು ಸಾಲಿಗ್ರಾಮಗಳನ್ನಿಟ್ಟ. ಸಾಲಿಗ್ರಾಮದ ಮೇಲೆ ತಲಾ ಎರಡೆರಡು ಕರ್ಪೂರ ಹಚ್ಚಿ ನೀರಿನಲ್ಲಿ ಎರಡು ಕರ್ಪೂರಗಳನ್ನು ಹಚ್ಚಿ ತೇಲಿಬಿಟ್ಟ. ಕರ್ಪೂರಗಳು ಗರಗರನೆ ವೇಗವಾಗಿ 8 ಆಕಾರದಲ್ಲಿ ಸಾಲಿಗ್ರಾಮದ ಸುತ್ತಲೂ ಸುತ್ತತೊಡಗಿದವು. ಸುಮಾರು ಹೊತ್ತು ಸುತ್ತಿ ನೀರಿನ ನಡುವೆ ಸ್ಥಿರವಾದವು. "ಭಾಳಾ ಜೋರಾಗೆ ಐತ್ರಿ ಮಾಟ ಮನ್ಯಾಗೆ!" ಎಂದು ಹೇಳಿ ಮಾಂತ್ರಿಕ ಕೈಯಲ್ಲಿ ಕಪ್ಪನೆಯ ಆಂಜನ ಹಿಡಿದು ಎದ್ದು ನಿಂತ. ಇದೆಲ್ಲಾ ನಡೆಯುವಾಗ ಇಬ್ಬರು ಅಪ್ಪಟ ಆಸ್ತಿಕರು, ಇಬ್ಬರು ಪರಮ ನಾಸ್ತಿಕರು, ಮಾಂತ್ರಿಕ ಮತ್ತು ಅವನ ಇಬ್ಬರು ಶಿಷ್ಯರು ಹಾಗೂ ನಾನು ಇಷ್ಟು ಜನ ಇದ್ದೆವು. ಅಪ್ಪ ಅಮ್ಮ ಇಬ್ಬರನ್ನೂ ಯಾವುದೋ ನೆಪದಲ್ಲಿ ಬೆಂಗಳೂರಿಗೆ ಕಳುಹಿಸಿದ್ದೆ.
"ನಿಮ್ಮ ಮನೇಲಿ ಯಾರದೊ ಮಾಟದ ಕೈವಾಡ ಇರಬೇಕು ನೋಡಪ್ಪಾ!" ಎಂದಿದ್ದರು ಅನೇಕ ಜನ. "ನೀವು ಈಗಿನ ಹುಡುಗರು ಇದನ್ನೆಲ್ಲಾ ನಂಬೋದಿಲ್ಲ. ಆದರೆ ನಾವು ಅನುಭವಿಸಿರೊರು ಇದ್ದಿವಿ. ಮನೆಗಳೇ ಸರ್ವನಾಶ ಆಗಿಹೋಗಿಬಿಟ್ಟಿದ್ದಾವೆ. ಸಲ್ಪ ಯಾರ ಹತ್ರನಾದ್ರು ಕೇಳ್ಸಪ್ಪ." ಅಂತೆಲ್ಲ ಹೇಳಿದ್ರು. "ಮಂತ್ರ ಹಾಕೋನು ಯಾವನಾದ್ರೇನು ಅವನೇನು ದೇವರಿಗಿಂತ ದೊಡ್ಡೊನಾ ?" "ಕಾಯೊನೊಬ್ಬ ಇದ್ದಾನೆ ಬಿಡಿ ಯಾಕೆ ಅದೆಲ್ಲಾ?" ಅಂಬುದು ನನ್ನ ವಾದ. ಕೊನೆಗೆ ಮೂರು ಜನ ಜ್ಯೊತಿಷಿಗಳನ್ನು ಬೇರೆಬೇರೆಯಾಗಿ ಸಂಪರ್ಕಿಸಿದ್ದಾಯಿತು. ಮೂವರೂ ಸಹ ನಿಮ್ಮ ಮನೆಯಲ್ಲಿ ಮಾಟದ ಕಾಟವಿದೆ. ತಕ್ಷಣ ತೆಗೆಸಿರಿ. ಸುದರ್ಶನ ಹೋಮ ಮಾಡಿಸಿರಿ ಎಂದರು. ಒಬ್ಬರಂತೂ "ನಿಮ್ಮ ಮನೆಯ ನೀರಿನ ತಾಣದ ಆಗ್ನೇಯ ದಿಕ್ಕಿಗೆ ಮಾಟದ ವಸ್ತುಗಳಿವೆ. ಇಷ್ಟು ಹೊತ್ತಿಗೆ ನಿಮ್ಮ ಮನೆಯಲ್ಲಿ ಒಂದು ಸಾವು ಸಂಭವಿಸಬೇಕಿತ್ತು. ಮನೆದೇವರ ಕೃಪೆ ನಿಮ್ಮ ಮೇಲಿರುವುದರಿಂದ ಅಂಥದು ಆಗಿಲ್ಲ." ಎಂದು ಬಿಟ್ಟರು. ಸರಿ ಮಾಟ ತೆಗೆಸಲು ಮಾಂತ್ರಿಕನನ್ನು ಹುಡುಕಿ ಎರಡು ದಿನ ಪರ್ಯಂತ ಕಾದು ಮನೆಗೆ ಕರೆತಂದದ್ದಾಯಿತು.
ಕೈಯಲ್ಲಿ ಅಂಜನ ಹಿಡಿದುಕೊಂಡ ಮಾಂತ್ರಿಕ ಮನೆಯ ಹಿತ್ತಲಿನಿಂದ ಹುಡುಕಾಟ ಶುರುಮಾಡಿದ. ಮನೆಯ ಮುಂದೆ ಬರುತಿದ್ದಂತೆ ಗಿಡಗಳನ್ನು ನೆಟ್ಟಿದ್ದ ಪಾತಿಯ ಬಳಿ ಬಂದು "ಇಲ್ಲಿ ಐತಿ ನೋಡ್ರಿ!" ಅಂದ. ಮಂತ್ರಿಕನ ಶಿಷ್ಯ ತನ್ನ ಗುರು ಹೇಳಿದ ಜಾಗೆಯಲ್ಲಿ ಅಗೆಯತೊಡಗಿದ. ಒಂದಡಿ ಅಗೆಯುತ್ತಿದಂತೆ ಪ್ಯಾಂಟಿನ ಬಟ್ಟೆಯಿಂದ ಮಾಡಿದ ಒಂದು ಗೊಂಬೆ ಮತ್ತು ದಾರದಲ್ಲಿ ಸುತ್ತಿದ್ದ ಮಡಚಿದ ತಾಮ್ರದ ಹಾಳೆಯನ್ನು ಹೊರತೆಗೆದ. ಇವೆರಡೂ ವಸ್ತುಗಳ ಸುತ್ತ ಗಟ್ಟಿಯಾಗಿ ಮಣ್ಣು ಮೆತ್ತಿಕೊಂಡಿತ್ತು. ಇದನ್ನು ತೆಗೆಯುತ್ತಿದ್ದಂತೆ ಎರಡು ಹೆಜ್ಜೆ ಹಿಂದೆ ಸರಿದ ಮಂತ್ರವಾದಿ ಹಾರೆಯಿಂದ ನೆಲವನ್ನು ಎರಡು ಸಲ ಕೆರೆದ. ಅಲ್ಲಿಂದ ಮತ್ತೆರಡು ಮಣ್ಣು ಮೆತ್ತಿದ ಸೂತ್ರ ಬಂಧಿತ ತಾಮ್ರದ ತಗಡುಗಳು ಹೊರಬಂದವು.
ಮಂತ್ರವಾದಿ ಇನ್ನೊಂದೆರಡು ಹೆಜ್ಜೆ ಮುಂದೆ ಹೋಗಿ ಹುಡುಕಿಕೊಂಡು ಬಂದ. ಅಷ್ಟರಲ್ಲಿ ನಾನು ಮತ್ತು ಗೆಳೆಯರು ಗೊಂಬೆಯನ್ನು ಮತ್ತು ತಾಮ್ರದ ತಗಡುಗಳೊಂದಿಗೆ ಆಟವಾಡಾತೊಡಗೊದ್ದೆವು. "ಅದನ್ಯಾಕ ಬಿಚ್ಚಿದ್ರಿ? ಇವನ್ನ ಮುಟ್ಟಕೂ ಮೀಟರ್ ಬೇಕು!" ಅಂದ. ಹೆದರಿಕೊಂಡು ಎಲ್ಲರೂ ವಸ್ತುಗಳನ್ನು ಕೆಳಗೆ ಹಾಕಿದೆವು.
ಮಾಂತ್ರಿಕ ಒಂದೊಂದಾಗಿ ವಸ್ತುಗಳನ್ನು ಬಿಚ್ಚತೊಡಗಿದ. ಗೊಂಬೆಯ ತಲೆಯನ್ನು ಮೊದಲು ಕತ್ತರಿಸಿದ. ಅದರಿಂದ ಉಪ್ಪು ಹೊರಗೆ ಸುರಿಯಿತು. ತಾಮ್ರದ ತಗಡನ್ನು ಸುತ್ತಿದ ದಾರ ಸಾಕಷ್ಟು ಉದ್ದವಾಗಿಯೇ ಇತ್ತು. ದಾರ ತೆಗೆದು ತಾಮ್ರದ ತಗಡನ್ನು ಬಿಚ್ಚಿದರೆ ಒಳಗೆ ಹಸಿ ಹಸಿ ರಕ್ತ! ರಕ್ತದಲ್ಲಿ ತೋಯ್ದ ಮನುಷ್ಯನ ತಲೆಬುರುಡೆಯ ಚೂರು, ಒಂದು ಸೂಜಿ, ಬಳೆ ಚೂರುಗಳು! ಹಸಿ ರಕ್ತದ ಕಮಟು ವಾಸನೆ ಮುಖಕ್ಕೆ ಬಡಿದು ಎಲ್ಲರೂ ಒಂದು ಹೆಜ್ಜೆ ಹಿಂದೆ ಸರಿದೆವು. "ಇದು ಭಾರೀ ಖರ್ಚ ಮಾಡಿ ಹಾಕ್ಯಾರ್ರಿ. ಎಲ್ಲಾರ್ಗೂ ತಡ್ಕಳಕ ಆಗಲ್ರಿ ಇದು. ಭಾರಿ ಗಟ್ಟಿ ಬಿಡ್ರಿ ನೀವು" ಅಂದ ಮಾಂತ್ರಿಕ. ಎಲ್ಲರ ಮುಖದಲ್ಲೂ ಭಯ, ಆತಂಕಗಳು ಮಡುವುಗಟ್ಟಿತ್ತು. " ದೇವರು ಅದಾನ ಬಿಡ್ರಿ ನೊಡ್ಕೆಳ್ಳಕ! ಬೇರೆ ಏನ್ ಕೆಲ್ಸ ಅವ್ನಿಗೆ ..ಹ್ಹೆ..ಹ್ಹೆ." ಅಂದೆ. ನನ್ನ ಡಬ್ಬಾ ಜೋಕಿಗೆ ನಗುವ ದುಃಸ್ಸಾಹಸವನ್ನು ಯಾರೂ ಅಲ್ಲಿ ಮಾಡಲಿಲ್ಲ. ಅವರ ಮುಖಗಳಲ್ಲಿದ್ದ ಆತಂಕದ ಗೆರೆಗಳು ಕತ್ತಲಲ್ಲೂ ಸ್ಪಷ್ಟವಾಗಿ ಕಾಣುತ್ತಿದ್ದವು.
"ಇವ್ನೆಲ್ಲಾ ಸುಟ್ಟು ಹಾಕ್ಬಕು ಸೀಮೆ ಎಣ್ಣಿನರ ಡೀಜಲ್‍ನರ ತರ್ರಿ ಅಂದ, ಹಂಗ ಕಟ್ಟಿಗೀನು ತರ್ರಿ" ಅಂದ. ಕಟ್ಟಿಗೆ ತಂದು ಸಿಕ್ಕ ಮಂತ್ರದ ಸಾಮಾನುಗಳನ್ನು ಕಟ್ಟಿಗೆಯ ನಡುವೆ ಇಟ್ಟು ಬೆಂಕಿ ಹಚ್ಚಿದೆ. ಹಸಿ ಮಣ್ಣು ಮೆತ್ತಿದ್ದಕ್ಕೊ ಏನೋ ಬಟ್ಟೆಯ ಗೊಂಬೆ ದಾರ ಯಾವುದೂ ಸುಡಲೇ ಇಲ್ಲ. ಸಾಕಷ್ಟು ಡೀಸಲ್ ಸುರಿದಾಯಿತು."ಇನ್ನು ಸಲ್ಪ ಕಟ್ಟಿಗಿ ಬೇಕಾಕತಿ ತರ್ರಿ" ಅಂದ ಮಂತ್ರವಾದಿ.
ಕಟ್ಟಿಗೆ ತರಲು ಹಿತ್ತಲಿಗೆ ಹೋದೆ. ಕಟ್ಟಿಗೆ ಆಯ್ದುಕೊಳ್ಳುವಾಗ ವಿಕಾರವಾದ ಊಳಿಡುವ ಶಬ್ದವೊಂದು ಕೇಳಿತು. ನಾಯಿ ಇಷ್ಟೊಂದು ವಿಕಾರವಾಗಿ ಊಳಿಡುವುದಿಲ್ಲ. ಮನೆಯಿಂದ ಹೊರಬಂದು ಯಾರಿಗಾದರೂ ಈ ಶಬ್ದ ಕೇಳಿತೆ ಎಂದು ವಿಚಾರಿಸಿದೆ. ಎಲ್ಲರೂ ಇಲ್ಲವೆಂದರು. ಸಂಪೂರ್ಣವಾಗಿ ಸುಟ್ಟು ಹಾಕಿದ ನಂತರ ಅವಶೇಷಗಳನ್ನೆಲ್ಲ ಶಿಷ್ಯ ಖಾಲಿ ಸೈಟೊಂದರಲ್ಲಿ ಬಿಸಾಡಿ ಬಂದ. ಸುಟ್ಟು ಅರ್ಧ ಗಂಟೆಯಾದರೂ ರಕ್ತದ ಹಸಿ ಕಮಟು ವಾಸನೆ ಹವೆಯಲ್ಲಿ ಹರಡಿಕೊಂಡಿತ್ತು. ರಕ್ತ ಹೆಪ್ಪುಗಟ್ಟದೆ ಅಷ್ಟು ಹಸಿಹಸಿಯಾಗಿ ಇದ್ದದ್ದು ಹೇಗೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿತ್ತು. ಜ್ಯೋತಿಷಿಯೊಬ್ಬರು ನೀರಿನ ಟ್ಯಾಂಕಿನ ಆಗ್ನೇಯ ಭಾಗಕ್ಕೆ ಎಂದು ಹೇಳಿದ ಜಾಗೆಯಲ್ಲೆ ಮಾಟದ ವಸ್ತುಗಳು ಸಿಕ್ಕಿದ್ದು ನನಗೆ ಇನ್ನೊಂಡು ಅಚ್ಚರಿಯಾಗಿತ್ತು.
ಮತ್ತೆ ತಟ್ಟೆಯಲ್ಲಿ ನೀರು ಹಾಕಿ ಕರ್ಪೂರವನ್ನು ಸುಡುವ ಪ್ರಕ್ರಿಯೆ ನಡೆಯಿತು. ಈ ಬಾರಿ ಕರ್ಪೂರಗಳು ಹೆಚ್ಚು ಸುತ್ತಾಡದೆ ನಡುವೆ ಸ್ಥಿರವಾದವು. "ಕ್ಲಿಯರ್ ಆಗೆತಿ. ನಾಳೆ ನಮ್ಮನಿಗೆ ಬರ್ರಿ ದಿಗ್ಭಂದನ ಹಾಕಿ ಕೊಡ್ತೆನಿ." ಅಂದ. ಮೊದಲಿನಿಂದಲೂ ಮಾಂತ್ರಿಕ ಏನಾದರೂ ಕಣ್ಕಟ್ಟು ಮಾಡುತ್ತಾನೇನೊ ಎಂದು ನಾವೆಲ್ಲ ಜಾಗರೂಕರಾಗಿ ಗಮನಿಸುತ್ತಿದ್ದೆವು. ಎರಡು ಬಾರಿಯೂ ನೀರು ಕರ್ಪೂರ ತಟ್ಟೆ ಎಲ್ಲ ತಂದು ಕೊಟ್ಟವನು ನಾನೇ! ಎಲ್ಲವೂ ಎಷ್ಟು ಭಯಾನಕವಾಗಿತ್ತೆಂದರೆ ಮಾಂತ್ರಿಕ ಮತ್ತು ಅವನ ಶಿಷ್ಯರನ್ನು ಬಿಟ್ಟು ಉಳಿದವರೆಲ್ಲರ ಮುಖ ಕಳೆಗುಂದಿ ಹೋಗಿತ್ತು. ದೇವರಿಗೇ ಎಂದೂ ಕೈಮುಗಿಯದ ಅಪ್ಪಟ ಆಸ್ತಿಕ ಗೆಳೆಯ ಮಾಂತ್ರಿಕನ ಕಾಲಿಗೆ ಉದ್ಧಂಡ ನಮಸ್ಕಾರ ಹಾಕಿಬಿಟ್ಟ!
ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಅವನ ಮನೆಯಲ್ಲಿ ಹಾಜರಿದ್ದೆವು. ಮಾಂತ್ರಿಕನನ್ನು ಕಾಯುತ್ತಾ ಹಲವರು ಕುಳಿತಿದ್ದರು. ಒಂದು ಮಗು ಅತ್ಯಂತ ಕಳಾಹೀನವಾಗಿ ಕುಳಿತಿತ್ತು. ಮಗುವಿಗೆ ಜಾಂಡೀಸ್ ಆಗಿತ್ತಂತೆ. ಆ ಮಗುವನ್ನು ತಂದೆ ತಾಯಿಗಳು ನೆಲಮಂಗಲದಿಂದ ಮಾಂತ್ರಿಕನಲ್ಲಿಗೆ ಕರೆತಂದಿದ್ದರು. ಅಲ್ಲೇ ಬೆಂಗಳೂರಲ್ಲಿ ಒಳ್ಳೆಯ ವೈದ್ಯರಿಗೆ ತೋರಿಸುವುದನ್ನು ಬಿಟ್ಟು ಇಲ್ಲಿಗೆ ಕರೆತಂದಿದ್ದಾರಲ್ಲ ಎಂದು ಮನಸ್ಸಲ್ಲೆ ಅಂದುಕೊಂಡೆ. ಮಾಂತ್ರಿಕ ತನ್ನ ಕುರ್ಚಿಯ ಮೇಲೆ ಕುಳಿತು "ಏ ವಾಟೆವ್ ಕೊಡ!" ಎಂದು ಹೆಂಡತಿಗೆ ಆದೇಶಿಸಿದ. ಹೆಂಡತಿ ಕೊಟ್ಟ ಲೋಟದಲ್ಲಿ ಒಂದು ಬಾಟಲಿನಿಂದ ಜೇನುತುಪ್ಪದಂತಿದ್ದ ಔಷಧವನ್ನು ತೆಗೆದು ಮಗುವಿಗೆ ಕುಡಿಸಿದ. ಈಗ ನಮ್ಮ ಸರದಿ. ಆರು ತಾಮ್ರದ ಹಾಳೆಯ ಮೇಲೆ ಚಕ್ರ ಕಮಂಡಲಗಳನ್ನು ಬರೆದು ಎಲ್ಲವನ್ನೂ ತಲಾ ಒಂದು ನಿಂಬೆ ಹಣ್ಣಿನ ಸುತ್ತ ಸುತ್ತಿ ದಾರವನ್ನು ಬಿಗಿದ. ನಾಲ್ಕು ಮಡಕೆಗಳನ್ನು ಕೊಟ್ಟು "ಇವನ್ನ ಕಾವಿ ಬಟ್ಟೆಗ ಸುತ್ತಿ ಮನಿ ನಾಕೂ ಮೂಲಿಗೂ ಕಟ್ರಿ, ಹಂಗ ಆರೂ ನಿಂಬೆ ಹಣ್ಣುಗೊಳನ್ನ ತಗಂಡು ಸ್ಮಶಾನದಗ ಮೂರು ಮೂಲಿಗೆ ಎರಡೆರಡ್ರಂಗ ಹುಗಿರಿ " ಅಂದ. "ಮುಂದೇನು ಮಾಡ್ಬಕ್ರಿ ? ತಿರುಗಿಸ್ಬಿಡನ ಮಂತ್ರ ಹಾಕಿದರಿಗೆ ?" ಅಂತ ಕೇಳಿದ.
"ಬ್ಯಾಡ್ರಿ. ಅವರ್ನೆಲ್ಲ ದೇವರು ನೋಡ್ಕೆಂತಾನ. ನಾ ಇದರ್ ಸುಳಿ ಒಳಗ ಸಿಕ್ಕಳಕೆ ಒಲ್ಲೆ. ಸಾತ್ವಿಕ ಏನರ ಇದ್ರ ಹೇಳ್ರಿ" ಅಂದೆ. ಮಾಂತ್ರಿಕನ ’ಫ಼ೀಸ್’ ತೆತ್ತು ಅಲ್ಲಿಂದ ಹೊರಟೆವು. ಇಷ್ಟು ಹೊತ್ತಿಗಾಗಲೇ ಜಾಂಡೀಸ್ ಪೀಡಿತ ಮಗು ಸಂಪೂರ್ಣ ಗೆಲುವಾಗಿ ತನ್ನ ಎಂದಿನ ತುಂಟತನದಿಂದ ಓಡಾಡಿ ಆಟವಾಡತೊಡಗಿತ್ತು!
ಸಂಜೆಯ ಹೊತ್ತಿಗೆ ಸ್ಮಶಾನಕ್ಕೆ ಬಂದೆವು. ಮೊದಲೆ ಇಂಥವುಗಳ ಪರಿಚಯವಿದ್ದ ಕಾವಲುಗಾರ ಸಾವಿರ ರೂಪಾಯಿ ಆಗುತ್ತದೆ ಅಂದ. ಚೌಕಾಸಿ ಮಾಡಿ ನೂರೈವತ್ತಕ್ಕೆ ಇಳಿಸಿ ಒಳಗೆ ಹೋದೆವು. ಗುದ್ದು ತೆಗೆಯುವವ ಒಂದೊಂದು ಏಟಿನಲ್ಲಿ ಮೂರು ಕಡೆ ಚಿಕ್ಕ ಗುಂಡಿಗಳನ್ನು ತೆಗೆದ. ಅವುಗಳಲ್ಲಿ ನಿಂಬೆಹಣ್ಣುಗಳನ್ನು ಹಾಕಿ ಮುಚ್ಚಿದೆ. ಮನೆಗೆ ಬಂದು ನಾಲ್ಕು ಮೂಲೆಗೆ ಮಡಕೆಗಳನ್ನು ಕಾವಿ ಬಟ್ಟೆಯಲ್ಲಿ ಸುತ್ತಿ ನೇತು ಹಾಕಿದೆ. ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರೊಂದಿಗೆ ಅಂದಿನ ದಿನ ಮುಗಿಯಿತು.
ಇದಾಗಿ ಹದಿನೈದು ದಿನಗಳಾಗಿರಬಹುದು. ಮನೆಯ ಅಂಗಳದಲ್ಲಿ ಮತ್ತು ಗಿಡಗಳ ಮಧ್ಯೆ ಅನ್ನ ಚೆಲ್ಲಿತ್ತು. ಅದು ಆಕಸ್ಮಿಕ ಚೆಲ್ಲಿದ್ದಲ್ಲ ಉದ್ದೇಶಪೂರ್ವಕವಾಗಿವೇ ಹರಡಿದ್ದು ಎಂದು ಹರಡಿದ ವ್ಯಾಪ್ತಿ ಮತ್ತು ಮೂಲೆಯ ಜಾಗೆಗಳನ್ನು ನೋಡಿದರೇ ತಿಳಿಯುತ್ತಿತ್ತು. ಅನ್ನವನ್ನೆಲ್ಲ ಶೇಖರಿಸಿದಾಗ ಒಂದು ಮುಷ್ಟಿಯಷ್ಟಾಯಿತು. ಅನ್ನದ ಮೇಲೆ ಡೀಸೆಲ್ ಹಾಕಿ ಸುಡಲು ಪ್ರಯತ್ನಿಸಿದೆ. ಡೀಸೆಲ್ ಖಾಲಿಯಾಯಿತೆ ಹೊರತು ಅನ್ನ ಸುಡುವುದಿರಲಿ ಕಪ್ಪುಗಟ್ಟಲೂ ಇಲ್ಲ! ಮಾಂತ್ರಿಕನಿಗೆ ಫೊನಾಯಿಸಿದೆ. "ಏನೂ ಆಗಲ್ಲ. ಹೆದರ್ಬ್ಯಾಡ್ರಿ. ಕಟ್ಟಿಗಿ ಒಳಗ ಹಾಕಿ ಸುಟ್ಟುಬಿಡ್ರಿ" ಅಂದ ಮಾಂತ್ರಿಕ. ಅನ್ನ ಸುಟ್ಟು ಕರಕಲಾಗಿಯೂ ಹೋಯಿತು!
ನೇರ ಅನುಭವ ಇದು. ಇದರ ಜೊತೆ ನಾನು ಸಂಗ್ರಹಿಸಿದ, ಇನ್ನು ಕೆಲವರು ಹಂಚಿಕೊಂಡ ಮಾಹಿತಿ ಇದಕ್ಕಿಂತಲೂ ಭಯಾನಕವಾಗಿದೆ. ನಾನು ಸ್ವಭಾವತಃ ಹೆದರು ಪುಕ್ಕಲ. ಕತ್ತಲು, ಮಸಣ, ಹೆಣಗಳು ಎಂದರೆ ಭಯ. ಆ ದಿನ ಸ್ಮಶಾನಕ್ಕೆ ಹೋದಾಗ ಅದೆಲ್ಲಿಂದ ಅಂತಹ ಧೈರ್ಯ ಬಂದಿತ್ತೊ! ಹಸಿ ಸಾಮಾಧಿಗಳ ಮೇಲೆ ಕಾಲಿಟ್ಟು ನಡೆದಿದ್ದೆ. ಈ ನಂತರ ಕತ್ತಲ ಬಗ್ಗೆ ಇದ್ದ ಭಯ ಸಾಕಷ್ಟು ಕಡಿಮೆಯಾಯಿತು. ಚಿಕ್ಕಂದಿನಿಂದ ಕಷ್ಟಗಳನ್ನು ನೋಡಿಕೊಂಡೇ ಬೆಳೆದಿದ್ದರಿಂದ " ಕಷ್ಟಗಳೆಂದರೆ ಇಷ್ಟೆ ತಾನೆ ?" ಎಂಬ ಉಡಾಫ಼ೆಯೊಂದು ಜೀವನದ ಬಗ್ಗೆ ಬೆಳೆದಿತ್ತು. ಈ ಉಡಾಫ಼ೆ ಇನ್ನೂ ಜಾಸ್ತಿ ಆಯಿತು! ಏನೇ ಆದರೂ ನಮಗೆ ನಾವು ಸಹಿಸಲು ಸಾಧ್ಯವಾಗುವುದಕ್ಕಿಂಟ ಹೆಚ್ಚಿನ ಕಷ್ಟ ನಮಗೆ ಬರಲಾರದು ಎಂಬುದು ಈ ನಂತರ ಖಾತ್ರಿಯಾಗಿ ಹೋಯಿತು. ಕಾಯುವ ಕೈಯೊಂದು ಸಮಯಕ್ಕೆ ಸರಿಯಾಗಿ ಕಾಯುತ್ತಿರುತ್ತದೆ ಎಂಬುದು ದಿಟ ಎನಿಸಿತು.
ಇಷ್ಟು ವರ್ಷದ ಜೀವನದಲ್ಲಿ ನಾನು ಗಳಿಸಿದ ಸಂಪತ್ತೇನು ಎಂಬುದೂ ಅರಿವಿಗೆ ಬಂದಿತು. ನನ್ನ ಗೆಳೆಯರು ಈ ನಾಲ್ಕು ದಿನ ತಮ್ಮ ಕೆಲಸಗಳಿಗೆ ರಜೆ ಹಾಕಿ, ವ್ಯವಹಾರವನ್ನು ಬಿಟ್ಟು ನನ್ನ ಜೊತೆ ನಿಂತಿದ್ದರು. "ವರ್ಷಗಟ್ಟಲೇ ನಿನ್ನ ಕಷ್ಟದ ಬಗ್ಗೆ ಯಾಕೆ ಮುಚ್ಚಿಟ್ಟಿದ್ದೆ? ನಾವೇನು ಸತ್ತು ಹೋಗಿದ್ವಾ" ಎಂದು ಪ್ರೀತಿಯಿಂದ ಗದರಿ ಮನೆ, ಮನ ಶುಚಿಗೊಳಿಸಿ ಕಾಯ್ದರು.
ನಾನು ಮಂತ್ರ ತಂತ್ರಗಳು ಸತ್ಯ ಎಂಬ ಮಾತನ್ನು ತಳ್ಳಿಹಾಕಲು ಕಾರಣವಿದೆ. ಯಾವುದೇ ಅಡ್ಡಿ ಬಂದರೂ ನಮ್ಮ ಮನಸ್ಸು ಅದನ್ನು ನಿವಾರಿಸಲು ಪ್ರಯತ್ನಿಸದೇ ಇದು ಮಾಟದ್ದೇ ತೊಂದರೆ ಇರಬೇಕು ಎಂದು ಶಂಕಿಸತೊಡಗುತ್ತದೆ. ಆಗ ನಾವು ಸುಮ್ಮನೆ ಮಾಂತ್ರಿಕರ ಹಿಂದೆ ಬಿದ್ದು ಮನಸ್ಸು ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸಿಕೊಳ್ಳುವ ಅಪಾಯವಿದೆ. ಆದ್ದರಿಂದಲೇ ಮಾಟವನ್ನು ನಂಬುವುದು ತರವಲ್ಲ ಅಂತ ನನ್ನ ಅಭಿಪ್ರಾಯ. ಇದೆಲ್ಲಾ ನಡೆಯುವುದರ ಸಾಕಷ್ಟು ಮೊದಲೇ ಸ್ವಾಮಿರಾಮ, ಯೋಗಾನಂದರ ಅನುಭವಗಳು, ಸತ್ಯಕಾಮರ ತಂತ್ರಯೋನಿ ಪಂಚಮಗಳ ನಡುವೆ, ಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಇತ್ಯಾದಿ ಅನುಭಾವಿಗಳ ಅಧ್ಯಾತ್ಮಿಕ ಪುಸ್ತಕಗಳನ್ನು ಓದಿದ್ದೆ. ಇವುಗಳೂ ನನಗೆ ಸ್ವಲ್ಪ ಮಾನಸಿಕವಾಗಿ ಗಟ್ಟಿತನವನ್ನು ಕೊಟ್ಟಿದ್ದವು ಎಂದರೆ ಸುಳ್ಳಲ್ಲ.
ಮಾಟ ಮಂತ್ರ ಪೂಜೆ ಇತ್ಯಾದಿಗಳ ಬಗ್ಗೆ ಅನೇಕರ ಬಳಿ ಸಾಕಷ್ಟು ಚರ್ಚಿಸಿ ಬೇರೆ ಬೇರೆ ಪುಸ್ತಕಗಳನ್ನು ಓದಿದ ನಂತರ ಈ ವಿಷಯವಾಗಿ ಅನೇಕ ಸಂಗತಿಗಳನ್ನು ಸಂಗ್ರಹಿಸಿದ್ದೇನೆ. ನಮ್ಮ ಅಜ್ಜಿ( ಇವರಿಗೆ ಸುಮಾರು ೮೦ ವರ್ಷ ವಯಸ್ಸು) ನಾನು ಮಾಂತ್ರಿಕನ ಮನೆಗೆ ಹೊರಟಿರುವುದನ್ನು ತಿಳಿದು "ಅವನ್ನೆಲ್ಲಾ ನಂಬಬಾರ್ದು. ಶಿವ ಶಿವಾ ಅನ್ನು. ಶಿವ ಎಲ್ಲ ಒಳ್ಳೇದು ಮಾಡ್ತಾನ" ಅಂದಿದ್ದರು. ಈ ಅನುಭವದ ಆಮೇಲಿನ ಓದು ಚರ್ಚೆಗಳ ನಂತರ ಅಜ್ಜಿಯ ಮಾತು ನಿಜ ಅನ್ನಿಸ್ತಿದೆ ನನಗೆ!
1 ಕಾಮೆಂಟ್:
ಪ್ರೀತಿಯ ಹರ್ಷ,
ಈ ಪ್ರಕಟಣೆಗೆ ಧನ್ಯವಾದಗಳು.
<<
ಸಾಕಷ್ಟು ಚರ್ಚಿಸಿ ಬೇರೆ ಬೇರೆ ಪುಸ್ತಕಗಳನ್ನು ಓದಿದ ನಂತರ ಈ ವಿಷಯವಾಗಿ ಅನೇಕ ಸಂಗತಿಗಳನ್ನು ಸಂಗ್ರಹಿಸಿದ್ದೇನೆ.
>>
ಆ ಸಂಗತಿಗಳನ್ನು ತಿಳಿದು ಕೊಳ್ಳುವ ಆಸಕ್ತಿ ಇದೆ. ನನಗೆ ಆ ಸಂಗತಿಗಳನ್ನು (ದಯವಿಟ್ಟು) ಇಮೇಲ್ ಮಾಡುವಿರ? ಏಕೆಂದರೆ ನನಗೂ ನಿಮ್ಮ ಹಾಗೆ ಕೆಲವು ಅನುಭವಗಳಾಗಿವೆ. ಆದರೆ ನಿಮ್ಮಷ್ಟು ಘೋರವಾಗಿ ಅಲ್ಲ ಅನ್ನಿಸುತ್ತೆ.
ಕಾಮೆಂಟ್ ಪೋಸ್ಟ್ ಮಾಡಿ