ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಶುಕ್ರವಾರ, ಫೆಬ್ರವರಿ 19, 2010

ಎಲ್ಲಿ ಕಳೆದು ಹೋದ ನಾಗಪ್ಪ?

ನಾಗಪ್ಪ ಹೆಜ್ಜೆ ಹಾಕುತ್ತಿದ್ದ ವೇಗವೇ ಅಂಥದು! ಎಂಥ ವೇಗ ಎಂದರೆ ಫ್ಯಾನು ಗರಗರ ತಿರುಗಿದಾಗ ಅದರ ರೆಕ್ಕೆಗಳು ಮಾಯವಾಗುತ್ತವಲ್ಲ ಹಾಗೆ ಅವನ ಕಾಲುಗಳು ಮಾಯವಾಗುತ್ತಿದ್ದವು. ಪಕ್ಕದ ಆನೆಕೊಂಡದಿಂದ ಹಾಲು ಕೊಡಲು ನಾಗಪ್ಪ ದಾವಣಗೆರೆಗೆ ಬರುತ್ತಿದ್ದ. ಒಂದು ಕೈಯಲ್ಲಿ ಹಾಲು ಇನ್ನೊಂದು ಕೈಯಲ್ಲಿ ಮೊಸರು. ಸರಸರನೆ ಹೆಜ್ಜೆ ಹಾಕಿ ಊರೊಳಗೆ ನಡೆಯುತ್ತಿದ್ದ. ಗಡಿಯಾರದ ಮುಳ್ಳು ವೇಗ ಕಡಿಮೆ ಮಾಡುತ್ತಿತ್ತೇನೋ ಆದರೆ ನಾಗಪ್ಪ ಮಾತ್ರ ಬೇವಿನ ಮರದ ನೆರಳು ಹುಣಸೆಮರದ ಬುಡಕ್ಕೆ ಮುಟ್ಟುವ ಹೊತ್ತಿಗೆ ಸರಿಯಾಗಿ ಊರೊಳಗೆ ಕಾಲಿಡುತ್ತಿದ್ದ. ಬೆಳಗ್ಗಿನ ಆಟ ಮುಗಿಸಿಕೊಂಡು ಮನೆಗೆ ತೆರಳುವ ನಾವೆಲ್ಲ "ಹುಳಿಮೊಸರು ನೀರು ಹಾಲು ನಾಗಪ್ಪ ಬಂದ" ಅಂತ ಚಪ್ಪಾಳೆ ತಟ್ಟುತ್ತಾ ಅವನ ಹಿಂದೆ ಓಡುತ್ತಿದ್ದೆವು. "ಲೇ, ನಡ್ರಲೆ ಮನಿ ಕಡಿಗೆ, ಅವ್ವಗ ಹೇಳತನಿ." ಅಂತ ಗದರಿಸಿ ಮನೆ ಹತ್ತಿರ ಬಂದು "ಯಕಾ ನೋಡಕಾ, ಹೆಂಗಂತಾರಾ!" ಅಂತಿದ್ದ. ಅಮ್ಮ "ಏ..ಯಾಕ..ಅಪ್ಪಾಜಿಗೆ ಹೇಳಲೆನು?" ಅಂತ ಗದರುತ್ತಿದ್ದರು.

"ಅಣ್ಣರಿಗೆ ಹೇಳಬ್ಯಾಡ್ರಕಾ..ಹೊಡದುಬಿಡತಾರ ಹುಡ್ರನ್ನ! " ಅನ್ನುತ್ತಿದ್ದ ನಾಗಪ್ಪ! ಹಾಗಂತ ನಾವೇನೂ ಸುಮ್ಮನಿರುತ್ತಿರಲಿಲ್ಲರಲಿಲ್ಲ. ಮರುದಿನ ಮತ್ತೆ ಅವನ ಹಿಂದೆ ಹೆಜ್ಜೆ ಹಾಕುತ್ತಾ ಅದೇ ಹಾಡು ಹಾಡಿಕೊಂಡು ಓಡುತ್ತಿದ್ದೆವು.

ಒಮ್ಮೊಮ್ಮೆ ಅಮ್ಮನ ಹಿಂದೆ ಒಂದೂವರೆ ವರ್ಷದ ತಂಗಿ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಒಂದು ಪಾತ್ರೆಯನ್ನು ಹಿಡಿದು ತರುತ್ತಿದ್ದಳು. "ಏ ಮತ್ಯಾಕ ತಂದಿ, ನನ್ ಹತ್ರ ಐತಿ ಬಿಡು" ಅಂತಿದ್ದರು ಅಮ್ಮ.

"ಇರ್ಲಿ ಬಿಡಕಾ, ತಾಯಿ ಎಂತಾ ಚಂದ ಪಾತ್ರಿ ತಂದತಿ, ಇಗಾಳವಾ ಇಗಾ.." ಅಂತ ಹೇಳಿ ತಂಗಿಯ ಪಾತ್ರೆಯನ್ನೂ ತುಂಬಿಸುತ್ತಿದ್ದ. ತಂಗಿಯ ಪಾತ್ರೆಗೆ ತುಂಬಿದ ಮೊಸರಿಗೆ ಹಣ ಬೇಡುತ್ತಿರಲಿಲ್ಲ. ’ಇರ್ಲಿ ಬಿಡಕಾ ...ಅದೇನು ಸಣ್ಣ ಪಾತ್ರಿ" ಅಂತಿದ್ದ.

ಜಂಬಿಗಿ ರುದ್ರಪ್ಪನವರ ಅಂಗಡಿಯಲ್ಲಿ ಅಮ್ಮ ಯಾವಾಗಲೂ ಕಿರಾಣಿ ತರುವುದು. ಜಂಬಿಗೇರ ಅಂಗಡಿಗೆ ಹೋಗಿ ಬರೋದು ಅಂದರೆ ತಿಂಗಳಿಗಾಗುವಷ್ಟು ದಿನಸಿ ಸಾಮಾನು ತರುವದು ಎಂದರ್ಥ. ಚಿಕ್ಕಂದಿನಿಂದಲೂ ಅಮ್ಮನ ಜೋಡಿ ನಾನೇ ಹೋಗುತ್ತಿದ್ದುದು. ಹೋದಾಗಲೆಲ್ಲ ಎರಡು ಉತ್ತತ್ತಿ ನನ್ನ ಕೈಗೆ ಕೊಡುತ್ತಿದ್ದರು ರುದ್ರಪ್ಪ. ಎರಡು ನನ್ನ ಜೇಬಿಗಿಡುತ್ತಿದ್ದರು "ತಂಗಿಗೆ ಕೊಡಪ್ಪ" ಅಂತ! ಈ ಸಂಪ್ರದಾಯ ಇನ್ನೂ ಬಿಟ್ಟಿಲ್ಲ.

"ಇಂಜಿನಿಯರಿಂಗ್ ಮುಗಿಸಿದನ್ರೀ ಮಗ...ಇನ್ನೂ ಉತ್ತತ್ತ್ತಿಇಡತೀರಿ" ಅಂತಾರೆ ಅಮ್ಮ. ಜಂಬಿಗೇರ ಉತ್ತರ ಒಂದು ಸ್ಮೈಲ್ ಅಷ್ಟೇ! ಮೊನ್ನೆ ಮೊನ್ನೆ ಹೋದಾಗಲೂ ಎರಡು ಉತ್ತತ್ತಿ ಕೊಟ್ಟರು. "ಮಗ ನೌಕರಿ ಮಾಡತಾನ್ರೀ..ಇನ್ನು ಉತ್ತತ್ತಿ ಕೊಡುತ್ತೀರಲ್ಲ...." ಮತ್ತದೇ ಸ್ಮೈಲ್ "ಎಲ್ಲಿ ನೌಕರಿ ಮಾಡುತೀಯಪ್ಪಾ?" ಎಂಬ ಕುಶಲೋಪರಿ.

ವರ್ಗೀಸ ಕುರಿಯನ್ನರು ಬಿಳಿಕ್ರಾಂತಿ ತಂದರು. ಹಾಲುನಾಗಪ್ಪನ ಮನೆಗೆ ಬಂದು ಹಾಲನ್ನು ಕೊಂಡೊಯ್ಯುತ್ತಾರೆ. ನಾಗಪ್ಪನಿಗೆ ಹಣ ಸರಿಯಾದ ಸಮಯಕ್ಕೆ ದೊರಕುತ್ತದೆ. ಉದ್ರಿಯ ಚಿಂತೆ ಇಲ್ಲ. ನಾಗಪ್ಪ ಖುಶಿಯಾಗಿದ್ದಾನೆ. ಹಾಲು ಬಾತಿಯ ಡೈರಿಗೆ ಹೋಗಿ ಪ್ಯಾಶ್ಚರೀಕರಣವಾಗುತ್ತದೆ. ಬೆಳಿಗ್ಗೆ ಆರು ಗಂಟೆಗೆ ಪಕ್ಕದ ಅಂಗಡಿಯಲ್ಲಿ ಲಭ್ಯ. ನಾವೂ ಖುಷ್!

ಜಂಬಗಿಯವರದು ಈಗ ಡಿಪಾರ್ಟ್‌ಮೆಂಟಲ್ ಸ್ಟೋರ್‍. ಜನ ಬಂದು ತಮಗೇನು ಬೇಕೋ ಅದನ್ನು ಚೀಲದಲ್ಲಿ ತುಂಬಿಕೊಳ್ಳುತ್ತಾರೆ. ಬಿಲ್ ಮಾಡುವ ಕಡೆಗೆ ಪಾಳಿ ಹಚ್ಚುತ್ತಾರೆ. ಕೆಲಸದ ಹುಡುಗರು ಬಿಲ್ ಮಾಡಿತ್ತಾರೆ. ಮನೆಯಲ್ಲೇ ಕೂತು ಸರಿಯಾದ ಲೆಕ್ಕ ಕಂಪ್ಯೂಟರ್‍ ಮೂಲಕ ಸಿಗುತ್ತದೆ. ಸರಿಯಾದ ಲಾಭ ಕೈಗೆ ಬರುತ್ತಿದೆ. ಅಲ್ಲಿ ಜಂಬಿಗಿಯವರು ಖುಷ್. ಹೇಳಿ ಕೇಳುವ ಗೊಂದಲವಿಲ್ಲದೇ ಬೇಕಾದ ಪ್ಯಾಕೆಟನ್ನು ಆರಿಸಿಕೊಳ್ಳುತ್ತೇವೆ. ಬಿಲ್ಲಿಂಗ್ ನ ವೇಗ ಅದ್ಭುತ. ನಾವೂ ಖುಷ್!

ಹಾಲು ಕೊಳ್ಳುವಾಗ, ದಿನಸಿ ಕೊಳ್ಳುವಾಗ ಮೊದಲಿನ ಕಾಲದಲ್ಲಿ ಸಿಗುತ್ತಿದ್ದ attention ಈಗ ನನಗೆ ಸಿಗುತ್ತಿಲ್ಲವೇನೋ ಅನ್ನಿಸುತ್ತದೆ. ಸಾವಿರಾರು ಗಿರಾಕಿಗಳ ಮಧ್ಯೆ ಇಲ್ಲಿ ನಾನೊಬ್ಬ. ನೂರಾರು ಡಿಸ್ಕೌಂಟುಗಳ ಸ್ಟೊರುಗಳಲ್ಲಿ ಜೆಂಬಿಗಿಯವರು ಒಂದು option. ನೂರಾರು ಹಾಲು ಪ್ಯಾಕೆಟ್ಟುಗಳ ಮಧ್ಯೆ ನಾಗಪ್ಪನದೊಂದು ಪ್ಯಾಕೆಟ್ಟು. ಈಗ ನನಗೂ ಅವನಿಗೂ ನೇರ ಸಂಬಂಧವಿಲ್ಲ. ಅವನ(ಉತ್ಪಾದಕರ)ಗುಂಪು, ನನ್ನ(ಗಿರಾಕಿಗಳ) ಗುಂಪು. ಅಷ್ಟೇ ನಮ್ಮ ಕುರುಹು! ನಿಜಕ್ಕೂ ಕಳೆದು ಹೊದದ್ದು ಅವನಾ? ನಾನಾ?

ನಾನಂತೂ ನಾಗಪ್ಪ, ರುದ್ರಪ್ಪರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ! ಆದರೆ ಅವರು ನನ್ನನ್ನು..?? ಗೊತ್ತಿಲ್ಲಾ.

ನಮ್ಮನ್ನು ಬೇರೆ ಮಾಡಿದ್ದು ಯಾರು? ಹಣವಾ? ನಾಗರೀಕತೆಯಾ? ತಂತ್ರಜ್ಞಾನವಾ? ಸಾರಿಗೆಯಾ? ಜಾಗತೀಕರಣವಾ? ಗೊತ್ತಿಲ್ಲ.

1 ಕಾಮೆಂಟ್‌:

Nirliptha ಹೇಳಿದರು...

ಪ್ರಿಯ ಮಿತ್ರ,
ಲೇಖನ ಚೆನ್ನಾಗಿತ್ತು. ನನ್ನ ಸಹೋದ್ಯೋಗಿಯೊಬ್ಬ ತನ್ನ ಹೊಸ ನೋಕಿಯಾ ಫೋನಲ್ಲಿನ ವಿಶೇಷತೆಗಳ ಬಗ್ಗೆ ಹೇಳ್ತಾ ಇದ್ದನು. ಒಂದೊರಿಂದ ಇನ್ನೊಂದೂರಿಗೆ ಹೋಗುವ ದಾರಿಯನ್ನು ಅದು ನಿರ್ದಿಷ್ಟವಾಗಿ ಅದು ಹೇಳುತ್ತಂತೆ. ಎಷ್ಟು ದೂರ ಹೋದ ಮೇಲೆ ಎಡಕ್ಕೆ ತಿರುಗಬೇಕು? ಬಲಕ್ಕೆ ತಿರುಗಬೇಕು? ಇತ್ಯಾದಿ..
ಮೊದಲಾದರೆ ಅಪರಿಚಿತ ಊರಿಗೆ ಹೋಗುವಾಗ ದಾರಿಹೋಕರನ್ನು ಕೇಳುವುದು, ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು, ಅವರ ಜೊತೆ ಸಂವಹನ, ಊರಿನ ಬಗ್ಗೆ ತಿಳಿದುಕೊಳ್ಳುವುದು ಮುಂತಾದವು ನಡೆದು ಮಾನವ ಸಂಬಂಧಗಳು ಬೆಳೆಯುತ್ತಿದ್ದವು. ಇಂದು ತಂತ್ರಜ್ಞಾನದಿಂದಾಗಿ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಗಂಡನಿಗೊಂದು ಮೊಬೈಲ್, ಹೆಂಡತಿಗೆ - ಮಕ್ಕಳಿಗೆರದು ಮೊಬೈಲ್, ಒಂದು TV , ಒಂದು ಗಣಕ ಯಂತ್ರ , ಮನೆಯೊಳಗಿನ ವಸ್ತುಗಳಂತೆ ಎಲ್ಲವೂ ಜಡ!