ಮೊದಲನೆಯದು ಸಿದ್ಧಗಂಗೆಯ ಯತಿಗಳ ಶತಮಾನೋತ್ಸವ. ಉಳುವಿಯ ನಂತರ ನನಗೆ ಅತ್ಯಂತ ಇಷ್ಟವಾದ ತಾಣ ಸಿದ್ಧಗಂಗಾ ಕ್ಷೇತ್ರ. ಸಿದ್ದಗಂಗಾ ಶ್ರೀಗಳ ಮುಂಜಾನೆಯ ಪೂಜೆಯನ್ನು ನೋಡಲೂ ಪುಣ್ಯ ಬೇಕು ಎನ್ನುತಾರೆ. ಆ ಪ್ರಕಾರ ಪುಣ್ಯವಂತ ನಾನು. ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತದೆ ಇಷ್ಟಲಿಂಗ ಪೂಜೆ. ನಮಗೆ (ಸಾಮಾನ್ಯ ಜನರಿಗೆ) ಸುಮಾರು ನಾಲ್ಕು ಮುಕ್ಕಾಲಿಗೆ ಒಳಪ್ರವೇಶ. ಕೌಪೀನಧಾರಿಗಳಾದ ಸ್ವಾಮಿಗಳು ತಮ್ಮ ಕೊನೆಯ ಪೂಜೆಗೆ ಸಿದ್ಧರಾಗಿರುತ್ತಾರೆ. ಪೂಜಾ ಸಮಯಕ್ಕೆ ತೆರಳಿದವರಿಗೆ ಸ್ವಾಮಿಗಳು ಸ್ವತಃ ಕೈಯಿಂದ ವಿಭೂತಿ ಹಚ್ಚುತ್ತಾರೆ. ನಂತರ ಜೊತೆಗೆ ಲಿಂಗಪೂಜೆ. ಪೂಜೆ ಮುಗಿದ ಮೇಲೆ ತಿಂಡಿ ಬೆಳಿಗ್ಗೆ ಸುಮಾರು ಐದು ಗಂಟೆಗೆ! ನಂತರ ಸ್ವಾಮಿಗಳು ತಮ್ಮ ನಿತ್ಯಾಕಾರ್ಯಾರ್ಥ ತೆರಳುತ್ತಾರೆ. ಅಷ್ಟು ಬಾಗಿದ್ದಾಗಿಯೂ ಸ್ವಾಮಿಗಳ ಎತ್ತರ ಆರಡಿಗಿಂತಲೂ ಹೆಚ್ಚು. ಅವರ ನಡಿಗೆಯ ವೇಗಕ್ಕೆ ಹೊಂದಿಕೊಳ್ಳಲಾಗದೆ ಅವರ ಶಿಷ್ಯಂದಿರು ಓಡುತ್ತಾ ಹಿಂಬಾಲಿಸುತ್ತಾರೆ. ನನಗೆ ಅವರ ವೇಗ ಗಾಂಧೀಜಿಯನ್ನು ನೆನಪಿಸುತ್ತದೆ. ಈಗಲೂ ’ಬುದ್ಧಿ’ಯವರು ಕನ್ನಡಕ ಹಾಕುವುದಿಲ್ಲ. ಬರಹವೂ ಸ್ಪಷ್ಟ. ದಿನಕ್ಕೆ ಹೆಚ್ಚೆಂದರೆ ಎರಡು ತಾಸು ನಿದ್ದೆ. ಶಿಷ್ಯರು ಇದನ್ನು ನಾಯಿನಿದ್ದೆ ಎನ್ನುತ್ತಾರೆ!
ಕಾಲೇಜು ದಿನಗಳಲ್ಲಿ ಅಪ್ಪ ಅಮ್ಮನೊಂದಿಗೆ ಬೆಂಗಳೂರಿಗೆ ಹೊರಟೆನೆಂದರೆ ಕ್ಯಾತ್ಸಂದ್ರದಲ್ಲಿ(ಸಿದ್ಧಗಂಗೆಯಲ್ಲಿ) ಒಂದು ದಿನ ನಮ್ಮ ವಸತಿ. ಸಂಜೆ ಮಠದ ಹುಡುಗರು ಹೇಳುವ ಪ್ರಾರ್ಥನೆ ಕೇಳಿಕೊಂಡು ಬೆಟ್ಟ ಹತ್ತಿ ಗಂಗೆಯ ದರ್ಶನ ಮಾಡಿಕೊಂಡು ಚಂದ್ರಮೌಳೀಶ್ವರನಿಗೆ ಕೈಮುಗಿದು ಗೆಸ್ಟ್ ಹೌಸ್ನಲ್ಲಿ ತಂಗುತ್ತಿದ್ದೆವು. ಮರುದಿನ ಬೆಳಿಗ್ಗೆ ಸ್ವಾಮಿಗಳ ಜೊತೆ ಪೂಜೆ ಮುಗಿಸಿಕೊಂಡು ಮುಂದೆ ಹೊರಡುತ್ತಿದ್ದೆವು.
ಕಾಲೇಜು ದಿನಗಳಲ್ಲಿ ಅಪ್ಪ ಅಮ್ಮನೊಂದಿಗೆ ಬೆಂಗಳೂರಿಗೆ ಹೊರಟೆನೆಂದರೆ ಕ್ಯಾತ್ಸಂದ್ರದಲ್ಲಿ(ಸಿದ್ಧಗಂಗೆಯಲ್ಲಿ) ಒಂದು ದಿನ ನಮ್ಮ ವಸತಿ. ಸಂಜೆ ಮಠದ ಹುಡುಗರು ಹೇಳುವ ಪ್ರಾರ್ಥನೆ ಕೇಳಿಕೊಂಡು ಬೆಟ್ಟ ಹತ್ತಿ ಗಂಗೆಯ ದರ್ಶನ ಮಾಡಿಕೊಂಡು ಚಂದ್ರಮೌಳೀಶ್ವರನಿಗೆ ಕೈಮುಗಿದು ಗೆಸ್ಟ್ ಹೌಸ್ನಲ್ಲಿ ತಂಗುತ್ತಿದ್ದೆವು. ಮರುದಿನ ಬೆಳಿಗ್ಗೆ ಸ್ವಾಮಿಗಳ ಜೊತೆ ಪೂಜೆ ಮುಗಿಸಿಕೊಂಡು ಮುಂದೆ ಹೊರಡುತ್ತಿದ್ದೆವು.
ಶತಮಾನೋತ್ಸವ ಸಮಾರಂಭದಲ್ಲಿ ಲಕ್ಷಾಂತರ ಜನ ಪ್ರವಾಹದಂತೆ ಹರಿದು ಬರುತ್ತಿದ್ದರು. ಎಲ್ಲೂ ಗೊಂದಲವಿಲ್ಲ. ನೂಕು ನುಗ್ಗಲಿಲ್ಲ. ಮಠದ ಹಳೆಯ ಶಿಷ್ಯಂದಿರು ಅರವಟಿಗೆಗಳನ್ನು ನಿರ್ಮಿಸಿಕೊಡು ನೀರಡಿಸಿದವರಿಗೆ ನೀರುಣಿಸುತ್ತಿದ್ದರು. ಇನ್ನು ಕೆಲವರು ಅಭಿನಂದನಾ ಗ್ರಂಥಗಳನ್ನು ಮಾರುತ್ತಿದ್ದರು. ಉಳಿದವರೆಲ್ಲ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಪ್ರತಿದಿನ ಉಂಡವರ ಸಂಖ್ಯೆ ಹತ್ತಿರ ಹತ್ತಿರ ಒಂದೂವರೆ ಲಕ್ಷ! ಎಲ್ಲರಿಗೂ ಕರೆದು ಕರೆದು ಪ್ರಸಾದ ಉಣಬಡಿಸುತ್ತಿದ್ದರು ಸ್ವಯಂಸೇವಕರು! ಲಕ್ಷಾಂತರ ಜನರಿಗೆ ಒಟ್ಟಿಗೆ ಅಡಿಗೆ ಮಾಡಿದ್ದರೂ ರುಚಿ ಕೆಟ್ಟಿರಲಿಲ್ಲ. ಎಲ್ಲವೂ ಶಿಸ್ತುಬದ್ಧ!
ತುಮಕೂರಿನಿಂದ ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ನಾಲ್ಕು ಗಂಟೆಗೆ ತಲುಪಿದೆ. ಸಾಹಿತ್ಯಪ್ರಿಯರು ಆಗಲೇ ಕಿಟ್ಗಾಗಿ ಹೊಡೆದಾಡಿ ಬೇಸತ್ತು ಧಿಕ್ಕಾರ ಕೂಗತೊಡಗಿದ್ದರು. ಮೈಕಿನಲ್ಲಿ ವಂಧಿಮಾಗದನೊಬ್ಬ ಅತಿಥಿಗಳನ್ನು ಇಂದ್ರಚಂದ್ರ ಎಂದೆಲ್ಲಾ ಹೊಗಳಿ ಎಲ್ಲರಿಗೂ "ಹಾದರದ" ಸ್ವಾಗತ ಎಂದು ಚೀರುತ್ತಿದ್ದ. ತಿಂಡಿಯ, ಪುಸ್ತಕದ, ವಸ್ತುಪ್ರದರ್ಶನದ ಮಳಿಗೆಗಳೆಲ್ಲಾ ಒಂದೇ ಕಡೆ ಸ್ಥಾಪಿಸಿ ಎಲ್ಲಾ ಅಧ್ವಾನವಾಗಿತ್ತು. ಜೊತೆಗೆ ಧೂಳು, ಮಣ್ಣು! ಹತ್ತು ಸಾವಿರ ಜನರಿಗೆ ಊಟದ ಕೂಪನ್ ಹಂಚಿದು ಗೊತ್ತಿದ್ದೂ ಅಷ್ಟು ಜನರಿಗೆ ಊಟ ತಯಾರಿಸಲು ಸಾಧ್ಯವಾಗಿರಲಿಲ್ಲ ಸಮ್ಮೇಳನದ ಆಯೋಜಕರಿಗೆ! ಪ್ರವಾಹದಂತೆ ಹರಿದು ಬರುವ ಲಕ್ಷ ಲಕ್ಷ ಜನರಿಗೆ ಪೂರ್ವ ಅಂದಾಜಿಲ್ಲದೆಯೂ ಸುವ್ಯವಸ್ಥಿತವಾದ ಊಟ ತಯಾರಾಗಿತ್ತು ಸಿದ್ಧಗಂಗೆಯಲ್ಲಿ. ಕೆಲಸಕ್ಕೂ ಸೇವೆಗೆ ಇದೇ ವ್ಯತ್ಯಾಸ!
ಅಧ್ವಾನಗಳು ಕ್ಷಮಾರ್ಹವೇ! ಸಹಿಸಲಾಗದ್ದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರ ಅರಳು ಮರಳು ಅಧ್ಯಕ್ಷ ಭಾಷಣ! ಅತ್ಯುತ್ತಮ ವಾಗ್ಮಿ, ಬಸವರಾಜು ಮಾತಾಡುತ್ತಿದ್ದರೆ ಸುತ್ತಲಿದವರು ಕಿವಿಯಾಗಬೇಕು ಎಂಬೆಲ್ಲಾ ಸ್ತುತಿಗಳನ್ನು ಕೇಳಿ ಹೋಗಿದ್ದೆ. ಭಾಷಣದಲ್ಲಿ ವಿನಾಕಾರಣ ಬೇಡರು ಬ್ರಾಹ್ಮಣರನ್ನು ಎಳೆತಂದು ಕೊನೆಗೆ " ಇಷ್ಟು ಹೇಳಿದ್ದೇನೆ. ಇನ್ನೇನೂ ಹೇಳುವುದಿಲ್ಲ, ಹೇಳಬೇಕಾಗಿಯೂ ಇಲ್ಲ! " ಎಂದು ಅಪದ್ಧವಾಗಿ ಭಾಷಣ ಮುಗಿಸಿದರು. ಸಮ್ಮೇಳನಾಧ್ಯಕ್ಷ ಸ್ಥಾನದ ಘನತೆ ಎಂಬುದು ಪಾತಾಳ ಚುಂಬಿಸಿತು! ಇಲ್ಲಿಯವರೆಗೆ ನಾನು ಕೇಳಿದ ಯಾವ ಸಮ್ಮೆಳನಾಧ್ಯಕ್ಷ ಭಾಷಣವೂ ಇಷ್ಟು ಕಳಪೆಯಾಗಿರಲಿಲ್ಲ.
ಸಮ್ಮೇಳನದಲ್ಲಿ ನನಗೆ ಪ್ರಮುಖ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳದ್ದು. ಅದರಲ್ಲೂ ಕೆಲ ಪ್ರಕಾಶಕರು ಮರಾಟವಾಗದ ಹಳೆಯ ಪುಸ್ತಕಗಳನ್ನು ಅರ್ಧ ಬೆಲೆಗೆ ಮಾರುತ್ತಿರುತ್ತಾರೆ. ಇಂತಹ ಕಡೆಗಳಲ್ಲಿ ಅಪರೂಪದ ಪುಸ್ತಕಗಳು ದೊರೆಯುತ್ತವೆ. ಈ ಬಾರಿಯೂ ನಿರಾಶೆಯಾಗಲಿಲ್ಲ. ನನ್ನ ಮೆಚ್ಚಿನ ಪಾವೆಂ ಹಾಗೂ ದೇವುಡು ಅವರ ಸಂಗ್ರಹಗಳು ದೊರಕಿದವು. ಇದು ಬಿಟ್ಟರೆ ದುರ್ಗದ ಸಮ್ಮೇಳನದಲ್ಲಿ ಖುಶಿ ಕೊಟ್ಟಿದ್ದು ನಡೆದಾಡುವ ಶಿಕ್ಷಕ ರುದ್ರಸ್ವಾಮಿಯವರ ಭೇಟಿ ಹಾಗೂ ಲಕ್ಷ್ಮಿ ಭವನದ ದೋಸೆ! ರುದ್ರಸ್ವಾಮಿಯವರು ತಮ್ಮ ಮಳಿಗೆಯಲ್ಲಿ ತಾವು ಮಕ್ಕಳಿಗಾಗಿ ತಯಾರಿಸಿದ ಕಲಿಕೆಯ ಆಟಿಕೆಗಳ ಬಗ್ಗೆ ಬೇಸರವಿಲ್ಲದೇ ಇಡೀ ದಿನ ಬಂದವರಿಗೆಲ್ಲಾ ವಿವರಿಸುತ್ತಿದ್ದರು. (ನನ್ನ ಡಿಜಿಟಲ್ ಕ್ಯಾಮೆರಾ ದಾವಣಗೆರೆಯಲ್ಲಿ ಮರೆತು ಬಂದು ಇವರ ಫೊಟೊ ಹಾಕಿಲ್ಲ. ಮುಂದೆಂದಾರೂ ಹಾಕುತ್ತೇನೆ.)
ದಾವಣಗೆರೆಯಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿತ್ತು. ಸಿರಿಗೆರೆ ಜಗದ್ಗುರುಗಳ ನೇತೃತ್ವದಲ್ಲಿ ಇದು ನಡೆಯುತ್ತದೆ. ಹಾಗೆ ನೋಡಿದರೆ ತರಳಬಾಳು ಹುಣ್ಣಿಮೆಯ ಬಗ್ಗೆ ನನಗೆ ಹೆಚ್ಚಿನ ಹೆಮ್ಮೆ ಇರಬೇಕು ಏಕೆಂದರೆ ನಾನು ತರಳಬಾಳು ಸಂಸ್ಥೆಯ ಶಾಲೆಯ ವಿದ್ಯಾರ್ಥಿ. ನನಗೆ ಹೆಮ್ಮೆ ಇಲ್ಲ ಏಕೆಂದರೆ ತರಳಬಾಳು ಶಾಲೆಯಲ್ಲಿ ನಾನು ವಿದ್ಯೆಯನ್ನು ಕೊಂಡುಕೊಂಡಿದ್ದೇನೆ. ಸಿದ್ಧಗಂಗೆಯ ಹುಡುಗರಂತೆ ದಾನವಾಗಿ ಪಡೆದಿಲ್ಲ. ಅಪ್ಪ ನನಗಾಗಿ ರೊಕ್ಕ ತೆತ್ತು ವಿದ್ಯೆಯನ್ನು ಖರೀದಿಸಿದ್ದಾರೆ. ಕೊಡುವ ಸವಲತ್ತಿಗೆ ತಕ್ಕಂತೆ ಹಣ ಪಡೆಯಲಿ; ನನಗೆ ಅಭ್ಯಂತರವಿಲ್ಲ. ಪಡೆದ ಹಣಕ್ಕೆ ರಸೀದಿ ಕೊಡಬೇಡವೇ? ಹತ್ತಾರು ಸಾವಿರ ರೂಪಾಯಿ ಹಣ ಪಡೆದು ಇನ್ನೂರೊ ಮುನ್ನೂರೋ ರೂಪಾಯಿಗೆ ರಸೀದಿ ಬರೆದು ಕೊಡುತ್ತಿದ್ದರು ನಮ್ಮ ಶಾಲೆಯಲ್ಲಿ. ರಸೀದಿಯ ಹಿಂದಕ್ಕೆ ಮೂಲೆಯಲ್ಲಿ ಚಿಕ್ಕದಾಗಿ ಉಳಿದ ಹಣದ ಬಗ್ಗೆ ಬರೆಯುತ್ತಿದ್ದರು! ಯಾರೋ ರಾಜಕಾರಣಿ ಈ ಥರ ಮಾಡಿದ್ದರೆ ಬೈದುಕೊಳ್ಳಬಹುದಿತ್ತು. ಸಮಾಜಕ್ಕೆ ದಾರಿ ತೋರಬೇಕಾದ ಮಠಾಧೀಶರೇ ಕಪ್ಪುಹಣ ಸಂಗ್ರಹಿಸಿದರೆ? ಒಲೆಹತ್ತಿ ಉರಿದೊಡೆ ನಿಲ್ಲಬಹುದು ಧರೆಹತ್ತಿ ಉರಿದರೆ ? ಆದರೂ ತರಳಬಾಳು ಹುಣ್ಣಿಮೆಯಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳಿರುತ್ತವೆ. ದೇಶದೆಲ್ಲೆಡೆಯಿಂದ ಬಂದ ಕಲಾವಿದರಿಂದ ಜನಪದ ನರ್ತನ ಗಾಯನಗಳಿರುತ್ತವೆ. ಅನೇಕ ವಿಶೇಷಜ್ಞರಿಂದ ಉಪನ್ಯಾಸಗಳಿರುತ್ತವೆ. ಸ್ವತಃ ಮಠಾಧೀಶರು ಅತ್ಯುತ್ತಮ ವಾಗ್ಮಿಗಳು. ಅವರ ಭಾಷಣವೂ ಕೇಳಲು ಸೊಗಸಾಗಿರುತ್ತದೆ. ಇಲ್ಲಿ ದಾಸೋಹದ ವ್ಯವಸ್ಥೆ ಇರುವುದಿಲ್ಲ.
ಮೂರೂ ಜಾತ್ರೆಗಳನ್ನು ನೋಡಿ ರಾತ್ರಿ ಮನೆಗೆ ಬಂದು ಮಲಗುವಾಗ ಶರೀಫ್ ಸಾಹೇಬರ ಈ ಸಾಲುಗಳು ಯಾಕೋ ನೆನಪಾದವು.
ತಾಬೂತಿನೊಳಗೊಂದು ತಗಡಿನ ಹಸ್ತವ ಕಂಡು
ಮೆಹಬೂಬ ಶಿಶುನಾಳ ಧೀಶಗ ನಗಿ ಬಂತು !!!
ಇನ್ನೊಂದು ಮಾತು: ಬೆಳಗೆರೆ ಶಾಸ್ತ್ರಿ ತಾತ ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ನಾನು ನೋಡಲು ಹೋಗಿಲ್ಲ. ಕಾರಣವಿದೆ. ಹಿಂದೆ ರಾಜೀವ್ ದೀಕ್ಷಿತರ ಜೊತೆ ವಿದ್ಯಾನಂದ ಶೆಣೈರನ್ನು ನೋಡಲು ನಿಮ್ಹಾನ್ಸ್ಗೆ ಹೋಗಿದ್ದೆ. ರಾಜೀವ್ ದೀಕ್ಷಿತರೇನೋ ಹೋಗಿ ನೋಡಿಕೊಂಡು ಬಂದರು. ನಾವು ಒಳ ಹೊರಟಾಗ ಅವರನ್ನು ಕಾಯುತ್ತಿದ್ದ ಪೋಲೀಸ್ ಪೇದೆ " ನೀವೇನೋ ಅಭಿಮಾನದಿಂದ ಅವರನ್ನು ನೋಡಲು ಬರುತ್ತೀರಿ. ಆದರೆ ಅವರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತೆ ಗೊತ್ತೆ?" ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡ. ಅವನು ಹೇಳಿದ್ದು ಸರಿಯೇ! ಹೇಗೋ ಅನುಮತಿ ಪಡೆದು ಒಬ್ಬೊಬ್ಬರಾಗಿ ನೋಡಿಕೊಂಡು ಬಂದೆವು. ಎರಡನೆಯ ದಿನವೇ ಶೆಣೈ ನಿಧನರಾದ ದುಃಖಕರ ಸುದ್ದಿ ಬಂತು. ಮೊನ್ನೆ ತಾತನನ್ನು ನೋಡಲು ಹೊರಟಾಗ ಈ ಪೋಲಿಸ್ ನೆನಪಾದ. ಅಷ್ಟರಲ್ಲಿ ತಾತ ಹುಶಾರಾಗಿ ಆಗಲೇ ನೆನಪಿನ ಬುತ್ತಿಯನ್ನು ಬಿಚ್ಚಿ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಕೇಳಿ ನಿರುಮ್ಮಳನಾದೆ.
1 ಕಾಮೆಂಟ್:
ಶ್ರೀಯುತ ಸಾಲಿಮಥರೆ,
ಶ್ರೀಮಾನ್ ಕೃಷ್ಣಶಾಸ್ತ್ರಿಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ. ನೀವು ವಾಮಾಚಾರದ ಬಗ್ಗೆ ಪ್ರಸ್ತಾಪಿಸಿದ್ದೀರಿ. ನನಗೆ ಇದರ ಬಗ್ಗೆ ಸ್ವಲ್ಪ ಕುತೂಹಲ ಇದೆ. ಇದರ ಬಗ್ಗೆ ತಾವು ಸ್ವಲ್ಪ ವಿವರವಾಗಿ ಬರೆಯಲಾಗುವುದೇ?
ರಾಮ್
ಕಾಮೆಂಟ್ ಪೋಸ್ಟ್ ಮಾಡಿ