ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!

ಮಂಗಳವಾರ, ಮಾರ್ಚ್ 24, 2009

ವಾಮಾಚಾರದ ಭೀಕರ ಅನುಭವಗಳು

ಇದನ್ನು ಬರೆಯುವ ಮೂಲಕ ಮೂಢನಂಬಿಕೆಗಳನ್ನು ಬಿತ್ತಬೇಕೆಂದಾಗಲೀ, ಬೆಳೆಸಬೇಕೆಂಬುದಾಗಲೀ ನನ್ನ ಉದ್ದೆಶವಲ್ಲ. ಸ್ವತಃ ಕಣ್ಣಾರೆ ಕಂಡ ನನಗೇ ಈ ಬಗ್ಗೆ ನಂಬಿಕೆ ಇಲ್ಲ. ಇದನ್ನು ಯಾರೂ ನಂಬಲೂ ಬೇಕಿಲ್ಲ. ಇದೆಲ್ಲಾ ನಡೆದ ೧೫ ದಿನಗಳಲ್ಲಿ ನನ್ನ ಮನಃಸ್ಥಿತಿ ಸಾವಿರ ಹೊರಳಾಟಗಳನ್ನು ಕಂಡು ಕಡೆಗೆ ಶಾಂತವಾಗಿದ್ದನ್ನು ಶಬ್ದಗಳಲ್ಲಿ ವಿವರಿಸಲಾರೆ. ನಂಬಿಕೆಗಳು ದಿನದಿನಕ್ಕೂ ನೂರು ಹೊಸ ದಿಕ್ಕುಗಳನ್ನು ಪಡೆಯುತ್ತಿದ್ದವು. ದೈವದ ಬಗ್ಗೆ ವಿಶ್ವದಲ್ಲಿ ಶಕ್ತಿಯ ಸಂಚಯದ ಬಗ್ಗೆ ಎಷ್ಟೋ ಪ್ರಶ್ನೆಗಳೇಳುತ್ತಿದ್ದವು. ಕೊನೆಗೆ ಸತ್ಯ ಯಾವುದು ಸುಳ್ಳು ಯಾವುದು ಎಂದೂ ತಿಳಿಯದೇ ಗೊಂದಲದ ಮಧ್ಯೆ ಕೆಲವು ಸತ್ಕಾರಣಗಳಿಗಾಗಿ ನಾನು ನೋಡಿದ್ದೆಲ್ಲಾ ಸುಳ್ಳು ಎಂದು ನನಗೆ ನಾನೇ ಆದೇಶಿಸಿಕೊಂಡೆ. ಅನುಭವವನ್ನು ಹಂಚಿಕೊಳ್ಳುವ ಆಸೆ ಇದನ್ನು ಬರೆಯಲು ಪ್ರೇರೇಪಿಸಿತು.
ಮನೆಗೆ ಬಂದ ಮಂತ್ರವಾದಿ ಮನೆಯನ್ನೊಮ್ಮೆ ತನ್ನ ಬಟ್ಟಲ ಕಂಗಳಲ್ಲಿ ಕೋಣೆಯನ್ನು ಅಳತೆ ಮಾಡಿದ. "ಏನು ತೊಂದರೆ?" ಎಂದು ಕೇಳಿದ.
ವಿವರಣೆ ಶುರು ಮಾಡಿ ಒಂದು ವಾಕ್ಯವಾಗುತ್ತಿದ್ದಂತೆ "ಒಂದು ತಟ್ಟೆ ಚೊಂಬ್‍ನೆಗ ನೀರು ತರ್ರಿ" ಅಂದ.
ಅವನ ಎದುರಿಗೆ ಸ್ಟೂಲ್ ಇಟ್ಟು ತಟ್ಟೆಯಲ್ಲಿ ನೀರು ಹಾಕಿದೆ. ಕರ್ಪೂರ ಕಡ್ಡಿಪೆಟ್ಟಿಗೆ ಬೇಕು ಅಂದ. ತಂದು ಕೊಟ್ಟೆ. ಮಾಂತ್ರಿಕನ ಶಿಷ್ಯ ತಟ್ಟೆಯಲ್ಲಿ ನೀರು ಹಾಕಿ ಎರಡು ಸಾಲಿಗ್ರಾಮಗಳನ್ನಿಟ್ಟ. ಸಾಲಿಗ್ರಾಮದ ಮೇಲೆ ತಲಾ ಎರಡೆರಡು ಕರ್ಪೂರ ಹಚ್ಚಿ ನೀರಿನಲ್ಲಿ ಎರಡು ಕರ್ಪೂರಗಳನ್ನು ಹಚ್ಚಿ ತೇಲಿಬಿಟ್ಟ. ಕರ್ಪೂರಗಳು ಗರಗರನೆ ವೇಗವಾಗಿ 8 ಆಕಾರದಲ್ಲಿ ಸಾಲಿಗ್ರಾಮದ ಸುತ್ತಲೂ ಸುತ್ತತೊಡಗಿದವು. ಸುಮಾರು ಹೊತ್ತು ಸುತ್ತಿ ನೀರಿನ ನಡುವೆ ಸ್ಥಿರವಾದವು. "ಭಾಳಾ ಜೋರಾಗೆ ಐತ್ರಿ ಮಾಟ ಮನ್ಯಾಗೆ!" ಎಂದು ಹೇಳಿ ಮಾಂತ್ರಿಕ ಕೈಯಲ್ಲಿ ಕಪ್ಪನೆಯ ಆಂಜನ ಹಿಡಿದು ಎದ್ದು ನಿಂತ. ಇದೆಲ್ಲಾ ನಡೆಯುವಾಗ ಇಬ್ಬರು ಅಪ್ಪಟ ಆಸ್ತಿಕರು, ಇಬ್ಬರು ಪರಮ ನಾಸ್ತಿಕರು, ಮಾಂತ್ರಿಕ ಮತ್ತು ಅವನ ಇಬ್ಬರು ಶಿಷ್ಯರು ಹಾಗೂ ನಾನು ಇಷ್ಟು ಜನ ಇದ್ದೆವು. ಅಪ್ಪ ಅಮ್ಮ ಇಬ್ಬರನ್ನೂ ಯಾವುದೋ ನೆಪದಲ್ಲಿ ಬೆಂಗಳೂರಿಗೆ ಕಳುಹಿಸಿದ್ದೆ.

"ನಿಮ್ಮ ಮನೇಲಿ ಯಾರದೊ ಮಾಟದ ಕೈವಾಡ ಇರಬೇಕು ನೋಡಪ್ಪಾ!" ಎಂದಿದ್ದರು ಅನೇಕ ಜನ. "ನೀವು ಈಗಿನ ಹುಡುಗರು ಇದನ್ನೆಲ್ಲಾ ನಂಬೋದಿಲ್ಲ. ಆದರೆ ನಾವು ಅನುಭವಿಸಿರೊರು ಇದ್ದಿವಿ. ಮನೆಗಳೇ ಸರ್ವನಾಶ ಆಗಿಹೋಗಿಬಿಟ್ಟಿದ್ದಾವೆ. ಸಲ್ಪ ಯಾರ ಹತ್ರನಾದ್ರು ಕೇಳ್ಸಪ್ಪ." ಅಂತೆಲ್ಲ ಹೇಳಿದ್ರು. "ಮಂತ್ರ ಹಾಕೋನು ಯಾವನಾದ್ರೇನು ಅವನೇನು ದೇವರಿಗಿಂತ ದೊಡ್ಡೊನಾ ?" "ಕಾಯೊನೊಬ್ಬ ಇದ್ದಾನೆ ಬಿಡಿ ಯಾಕೆ ಅದೆಲ್ಲಾ?" ಅಂಬುದು ನನ್ನ ವಾದ. ಕೊನೆಗೆ ಮೂರು ಜನ ಜ್ಯೊತಿಷಿಗಳನ್ನು ಬೇರೆಬೇರೆಯಾಗಿ ಸಂಪರ್ಕಿಸಿದ್ದಾಯಿತು. ಮೂವರೂ ಸಹ ನಿಮ್ಮ ಮನೆಯಲ್ಲಿ ಮಾಟದ ಕಾಟವಿದೆ. ತಕ್ಷಣ ತೆಗೆಸಿರಿ. ಸುದರ್ಶನ ಹೋಮ ಮಾಡಿಸಿರಿ ಎಂದರು. ಒಬ್ಬರಂತೂ "ನಿಮ್ಮ ಮನೆಯ ನೀರಿನ ತಾಣದ ಆಗ್ನೇಯ ದಿಕ್ಕಿಗೆ ಮಾಟದ ವಸ್ತುಗಳಿವೆ. ಇಷ್ಟು ಹೊತ್ತಿಗೆ ನಿಮ್ಮ ಮನೆಯಲ್ಲಿ ಒಂದು ಸಾವು ಸಂಭವಿಸಬೇಕಿತ್ತು. ಮನೆದೇವರ ಕೃಪೆ ನಿಮ್ಮ ಮೇಲಿರುವುದರಿಂದ ಅಂಥದು ಆಗಿಲ್ಲ." ಎಂದು ಬಿಟ್ಟರು. ಸರಿ ಮಾಟ ತೆಗೆಸಲು ಮಾಂತ್ರಿಕನನ್ನು ಹುಡುಕಿ ಎರಡು ದಿನ ಪರ್ಯಂತ ಕಾದು ಮನೆಗೆ ಕರೆತಂದದ್ದಾಯಿತು.
ಕೈಯಲ್ಲಿ ಅಂಜನ ಹಿಡಿದುಕೊಂಡ ಮಾಂತ್ರಿಕ ಮನೆಯ ಹಿತ್ತಲಿನಿಂದ ಹುಡುಕಾಟ ಶುರುಮಾಡಿದ. ಮನೆಯ ಮುಂದೆ ಬರುತಿದ್ದಂತೆ ಗಿಡಗಳನ್ನು ನೆಟ್ಟಿದ್ದ ಪಾತಿಯ ಬಳಿ ಬಂದು "ಇಲ್ಲಿ ಐತಿ ನೋಡ್ರಿ!" ಅಂದ. ಮಂತ್ರಿಕನ ಶಿಷ್ಯ ತನ್ನ ಗುರು ಹೇಳಿದ ಜಾಗೆಯಲ್ಲಿ ಅಗೆಯತೊಡಗಿದ. ಒಂದಡಿ ಅಗೆಯುತ್ತಿದಂತೆ ಪ್ಯಾಂಟಿನ ಬಟ್ಟೆಯಿಂದ ಮಾಡಿದ ಒಂದು ಗೊಂಬೆ ಮತ್ತು ದಾರದಲ್ಲಿ ಸುತ್ತಿದ್ದ ಮಡಚಿದ ತಾಮ್ರದ ಹಾಳೆಯನ್ನು ಹೊರತೆಗೆದ. ಇವೆರಡೂ ವಸ್ತುಗಳ ಸುತ್ತ ಗಟ್ಟಿಯಾಗಿ ಮಣ್ಣು ಮೆತ್ತಿಕೊಂಡಿತ್ತು. ಇದನ್ನು ತೆಗೆಯುತ್ತಿದ್ದಂತೆ ಎರಡು ಹೆಜ್ಜೆ ಹಿಂದೆ ಸರಿದ ಮಂತ್ರವಾದಿ ಹಾರೆಯಿಂದ ನೆಲವನ್ನು ಎರಡು ಸಲ ಕೆರೆದ. ಅಲ್ಲಿಂದ ಮತ್ತೆರಡು ಮಣ್ಣು ಮೆತ್ತಿದ ಸೂತ್ರ ಬಂಧಿತ ತಾಮ್ರದ ತಗಡುಗಳು ಹೊರಬಂದವು.
ಮಂತ್ರವಾದಿ ಇನ್ನೊಂದೆರಡು ಹೆಜ್ಜೆ ಮುಂದೆ ಹೋಗಿ ಹುಡುಕಿಕೊಂಡು ಬಂದ. ಅಷ್ಟರಲ್ಲಿ ನಾನು ಮತ್ತು ಗೆಳೆಯರು ಗೊಂಬೆಯನ್ನು ಮತ್ತು ತಾಮ್ರದ ತಗಡುಗಳೊಂದಿಗೆ ಆಟವಾಡಾತೊಡಗೊದ್ದೆವು. "ಅದನ್ಯಾಕ ಬಿಚ್ಚಿದ್ರಿ? ಇವನ್ನ ಮುಟ್ಟಕೂ ಮೀಟರ್ ಬೇಕು!" ಅಂದ. ಹೆದರಿಕೊಂಡು ಎಲ್ಲರೂ ವಸ್ತುಗಳನ್ನು ಕೆಳಗೆ ಹಾಕಿದೆವು.

ಮಾಂತ್ರಿಕ ಒಂದೊಂದಾಗಿ ವಸ್ತುಗಳನ್ನು ಬಿಚ್ಚತೊಡಗಿದ. ಗೊಂಬೆಯ ತಲೆಯನ್ನು ಮೊದಲು ಕತ್ತರಿಸಿದ. ಅದರಿಂದ ಉಪ್ಪು ಹೊರಗೆ ಸುರಿಯಿತು. ತಾಮ್ರದ ತಗಡನ್ನು ಸುತ್ತಿದ ದಾರ ಸಾಕಷ್ಟು ಉದ್ದವಾಗಿಯೇ ಇತ್ತು. ದಾರ ತೆಗೆದು ತಾಮ್ರದ ತಗಡನ್ನು ಬಿಚ್ಚಿದರೆ ಒಳಗೆ ಹಸಿ ಹಸಿ ರಕ್ತ! ರಕ್ತದಲ್ಲಿ ತೋಯ್ದ ಮನುಷ್ಯನ ತಲೆಬುರುಡೆಯ ಚೂರು, ಒಂದು ಸೂಜಿ, ಬಳೆ ಚೂರುಗಳು! ಹಸಿ ರಕ್ತದ ಕಮಟು ವಾಸನೆ ಮುಖಕ್ಕೆ ಬಡಿದು ಎಲ್ಲರೂ ಒಂದು ಹೆಜ್ಜೆ ಹಿಂದೆ ಸರಿದೆವು. "ಇದು ಭಾರೀ ಖರ್ಚ ಮಾಡಿ ಹಾಕ್ಯಾರ್ರಿ. ಎಲ್ಲಾರ್ಗೂ ತಡ್ಕಳಕ ಆಗಲ್ರಿ ಇದು. ಭಾರಿ ಗಟ್ಟಿ ಬಿಡ್ರಿ ನೀವು" ಅಂದ ಮಾಂತ್ರಿಕ. ಎಲ್ಲರ ಮುಖದಲ್ಲೂ ಭಯ, ಆತಂಕಗಳು ಮಡುವುಗಟ್ಟಿತ್ತು. " ದೇವರು ಅದಾನ ಬಿಡ್ರಿ ನೊಡ್ಕೆಳ್ಳಕ! ಬೇರೆ ಏನ್ ಕೆಲ್ಸ ಅವ್ನಿಗೆ ..ಹ್ಹೆ..ಹ್ಹೆ." ಅಂದೆ. ನನ್ನ ಡಬ್ಬಾ ಜೋಕಿಗೆ ನಗುವ ದುಃಸ್ಸಾಹಸವನ್ನು ಯಾರೂ ಅಲ್ಲಿ ಮಾಡಲಿಲ್ಲ. ಅವರ ಮುಖಗಳಲ್ಲಿದ್ದ ಆತಂಕದ ಗೆರೆಗಳು ಕತ್ತಲಲ್ಲೂ ಸ್ಪಷ್ಟವಾಗಿ ಕಾಣುತ್ತಿದ್ದವು.
"ಇವ್ನೆಲ್ಲಾ ಸುಟ್ಟು ಹಾಕ್ಬಕು ಸೀಮೆ ಎಣ್ಣಿನರ ಡೀಜಲ್‍ನರ ತರ್ರಿ ಅಂದ, ಹಂಗ ಕಟ್ಟಿಗೀನು ತರ್ರಿ" ಅಂದ. ಕಟ್ಟಿಗೆ ತಂದು ಸಿಕ್ಕ ಮಂತ್ರದ ಸಾಮಾನುಗಳನ್ನು ಕಟ್ಟಿಗೆಯ ನಡುವೆ ಇಟ್ಟು ಬೆಂಕಿ ಹಚ್ಚಿದೆ. ಹಸಿ ಮಣ್ಣು ಮೆತ್ತಿದ್ದಕ್ಕೊ ಏನೋ ಬಟ್ಟೆಯ ಗೊಂಬೆ ದಾರ ಯಾವುದೂ ಸುಡಲೇ ಇಲ್ಲ. ಸಾಕಷ್ಟು ಡೀಸಲ್ ಸುರಿದಾಯಿತು."ಇನ್ನು ಸಲ್ಪ ಕಟ್ಟಿಗಿ ಬೇಕಾಕತಿ ತರ್ರಿ" ಅಂದ ಮಂತ್ರವಾದಿ.
ಕಟ್ಟಿಗೆ ತರಲು ಹಿತ್ತಲಿಗೆ ಹೋದೆ. ಕಟ್ಟಿಗೆ ಆಯ್ದುಕೊಳ್ಳುವಾಗ ವಿಕಾರವಾದ ಊಳಿಡುವ ಶಬ್ದವೊಂದು ಕೇಳಿತು. ನಾಯಿ ಇಷ್ಟೊಂದು ವಿಕಾರವಾಗಿ ಊಳಿಡುವುದಿಲ್ಲ. ಮನೆಯಿಂದ ಹೊರಬಂದು ಯಾರಿಗಾದರೂ ಈ ಶಬ್ದ ಕೇಳಿತೆ ಎಂದು ವಿಚಾರಿಸಿದೆ. ಎಲ್ಲರೂ ಇಲ್ಲವೆಂದರು. ಸಂಪೂರ್ಣವಾಗಿ ಸುಟ್ಟು ಹಾಕಿದ ನಂತರ ಅವಶೇಷಗಳನ್ನೆಲ್ಲ ಶಿಷ್ಯ ಖಾಲಿ ಸೈಟೊಂದರಲ್ಲಿ ಬಿಸಾಡಿ ಬಂದ. ಸುಟ್ಟು ಅರ್ಧ ಗಂಟೆಯಾದರೂ ರಕ್ತದ ಹಸಿ ಕಮಟು ವಾಸನೆ ಹವೆಯಲ್ಲಿ ಹರಡಿಕೊಂಡಿತ್ತು. ರಕ್ತ ಹೆಪ್ಪುಗಟ್ಟದೆ ಅಷ್ಟು ಹಸಿಹಸಿಯಾಗಿ ಇದ್ದದ್ದು ಹೇಗೆ ಎಂಬುದು ನನಗೆ ಯಕ್ಷಪ್ರಶ್ನೆಯಾಗಿತ್ತು. ಜ್ಯೋತಿಷಿಯೊಬ್ಬರು ನೀರಿನ ಟ್ಯಾಂಕಿನ ಆಗ್ನೇಯ ಭಾಗಕ್ಕೆ ಎಂದು ಹೇಳಿದ ಜಾಗೆಯಲ್ಲೆ ಮಾಟದ ವಸ್ತುಗಳು ಸಿಕ್ಕಿದ್ದು ನನಗೆ ಇನ್ನೊಂಡು ಅಚ್ಚರಿಯಾಗಿತ್ತು.

ಮತ್ತೆ ತಟ್ಟೆಯಲ್ಲಿ ನೀರು ಹಾಕಿ ಕರ್ಪೂರವನ್ನು ಸುಡುವ ಪ್ರಕ್ರಿಯೆ ನಡೆಯಿತು. ಈ ಬಾರಿ ಕರ್ಪೂರಗಳು ಹೆಚ್ಚು ಸುತ್ತಾಡದೆ ನಡುವೆ ಸ್ಥಿರವಾದವು. "ಕ್ಲಿಯರ್ ಆಗೆತಿ. ನಾಳೆ ನಮ್ಮನಿಗೆ ಬರ್ರಿ ದಿಗ್ಭಂದನ ಹಾಕಿ ಕೊಡ್ತೆನಿ." ಅಂದ. ಮೊದಲಿನಿಂದಲೂ ಮಾಂತ್ರಿಕ ಏನಾದರೂ ಕಣ್ಕಟ್ಟು ಮಾಡುತ್ತಾನೇನೊ ಎಂದು ನಾವೆಲ್ಲ ಜಾಗರೂಕರಾಗಿ ಗಮನಿಸುತ್ತಿದ್ದೆವು. ಎರಡು ಬಾರಿಯೂ ನೀರು ಕರ್ಪೂರ ತಟ್ಟೆ ಎಲ್ಲ ತಂದು ಕೊಟ್ಟವನು ನಾನೇ! ಎಲ್ಲವೂ ಎಷ್ಟು ಭಯಾನಕವಾಗಿತ್ತೆಂದರೆ ಮಾಂತ್ರಿಕ ಮತ್ತು ಅವನ ಶಿಷ್ಯರನ್ನು ಬಿಟ್ಟು ಉಳಿದವರೆಲ್ಲರ ಮುಖ ಕಳೆಗುಂದಿ ಹೋಗಿತ್ತು. ದೇವರಿಗೇ ಎಂದೂ ಕೈಮುಗಿಯದ ಅಪ್ಪಟ ಆಸ್ತಿಕ ಗೆಳೆಯ ಮಾಂತ್ರಿಕನ ಕಾಲಿಗೆ ಉದ್ಧಂಡ ನಮಸ್ಕಾರ ಹಾಕಿಬಿಟ್ಟ!


ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಅವನ ಮನೆಯಲ್ಲಿ ಹಾಜರಿದ್ದೆವು. ಮಾಂತ್ರಿಕನನ್ನು ಕಾಯುತ್ತಾ ಹಲವರು ಕುಳಿತಿದ್ದರು. ಒಂದು ಮಗು ಅತ್ಯಂತ ಕಳಾಹೀನವಾಗಿ ಕುಳಿತಿತ್ತು. ಮಗುವಿಗೆ ಜಾಂಡೀಸ್ ಆಗಿತ್ತಂತೆ. ಆ ಮಗುವನ್ನು ತಂದೆ ತಾಯಿಗಳು ನೆಲಮಂಗಲದಿಂದ ಮಾಂತ್ರಿಕನಲ್ಲಿಗೆ ಕರೆತಂದಿದ್ದರು. ಅಲ್ಲೇ ಬೆಂಗಳೂರಲ್ಲಿ ಒಳ್ಳೆಯ ವೈದ್ಯರಿಗೆ ತೋರಿಸುವುದನ್ನು ಬಿಟ್ಟು ಇಲ್ಲಿಗೆ ಕರೆತಂದಿದ್ದಾರಲ್ಲ ಎಂದು ಮನಸ್ಸಲ್ಲೆ ಅಂದುಕೊಂಡೆ. ಮಾಂತ್ರಿಕ ತನ್ನ ಕುರ್ಚಿಯ ಮೇಲೆ ಕುಳಿತು "ಏ ವಾಟೆವ್ ಕೊಡ!" ಎಂದು ಹೆಂಡತಿಗೆ ಆದೇಶಿಸಿದ. ಹೆಂಡತಿ ಕೊಟ್ಟ ಲೋಟದಲ್ಲಿ ಒಂದು ಬಾಟಲಿನಿಂದ ಜೇನುತುಪ್ಪದಂತಿದ್ದ ಔಷಧವನ್ನು ತೆಗೆದು ಮಗುವಿಗೆ ಕುಡಿಸಿದ. ಈಗ ನಮ್ಮ ಸರದಿ. ಆರು ತಾಮ್ರದ ಹಾಳೆಯ ಮೇಲೆ ಚಕ್ರ ಕಮಂಡಲಗಳನ್ನು ಬರೆದು ಎಲ್ಲವನ್ನೂ ತಲಾ ಒಂದು ನಿಂಬೆ ಹಣ್ಣಿನ ಸುತ್ತ ಸುತ್ತಿ ದಾರವನ್ನು ಬಿಗಿದ. ನಾಲ್ಕು ಮಡಕೆಗಳನ್ನು ಕೊಟ್ಟು "ಇವನ್ನ ಕಾವಿ ಬಟ್ಟೆಗ ಸುತ್ತಿ ಮನಿ ನಾಕೂ ಮೂಲಿಗೂ ಕಟ್ರಿ, ಹಂಗ ಆರೂ ನಿಂಬೆ ಹಣ್ಣುಗೊಳನ್ನ ತಗಂಡು ಸ್ಮಶಾನದಗ ಮೂರು ಮೂಲಿಗೆ ಎರಡೆರಡ್ರಂಗ ಹುಗಿರಿ " ಅಂದ. "ಮುಂದೇನು ಮಾಡ್ಬಕ್ರಿ ? ತಿರುಗಿಸ್ಬಿಡನ ಮಂತ್ರ ಹಾಕಿದರಿಗೆ ?" ಅಂತ ಕೇಳಿದ.
"ಬ್ಯಾಡ್ರಿ. ಅವರ್ನೆಲ್ಲ ದೇವರು ನೋಡ್ಕೆಂತಾನ. ನಾ ಇದರ್ ಸುಳಿ ಒಳಗ ಸಿಕ್ಕಳಕೆ ಒಲ್ಲೆ. ಸಾತ್ವಿಕ ಏನರ ಇದ್ರ ಹೇಳ್ರಿ" ಅಂದೆ. ಮಾಂತ್ರಿಕನ ’ಫ಼ೀಸ್’ ತೆತ್ತು ಅಲ್ಲಿಂದ ಹೊರಟೆವು. ಇಷ್ಟು ಹೊತ್ತಿಗಾಗಲೇ ಜಾಂಡೀಸ್ ಪೀಡಿತ ಮಗು ಸಂಪೂರ್ಣ ಗೆಲುವಾಗಿ ತನ್ನ ಎಂದಿನ ತುಂಟತನದಿಂದ ಓಡಾಡಿ ಆಟವಾಡತೊಡಗಿತ್ತು!
ಸಂಜೆಯ ಹೊತ್ತಿಗೆ ಸ್ಮಶಾನಕ್ಕೆ ಬಂದೆವು. ಮೊದಲೆ ಇಂಥವುಗಳ ಪರಿಚಯವಿದ್ದ ಕಾವಲುಗಾರ ಸಾವಿರ ರೂಪಾಯಿ ಆಗುತ್ತದೆ ಅಂದ. ಚೌಕಾಸಿ ಮಾಡಿ ನೂರೈವತ್ತಕ್ಕೆ ಇಳಿಸಿ ಒಳಗೆ ಹೋದೆವು. ಗುದ್ದು ತೆಗೆಯುವವ ಒಂದೊಂದು ಏಟಿನಲ್ಲಿ ಮೂರು ಕಡೆ ಚಿಕ್ಕ ಗುಂಡಿಗಳನ್ನು ತೆಗೆದ. ಅವುಗಳಲ್ಲಿ ನಿಂಬೆಹಣ್ಣುಗಳನ್ನು ಹಾಕಿ ಮುಚ್ಚಿದೆ. ಮನೆಗೆ ಬಂದು ನಾಲ್ಕು ಮೂಲೆಗೆ ಮಡಕೆಗಳನ್ನು ಕಾವಿ ಬಟ್ಟೆಯಲ್ಲಿ ಸುತ್ತಿ ನೇತು ಹಾಕಿದೆ. ಸ್ನಾನ ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರೊಂದಿಗೆ ಅಂದಿನ ದಿನ ಮುಗಿಯಿತು.

ಇದಾಗಿ ಹದಿನೈದು ದಿನಗಳಾಗಿರಬಹುದು. ಮನೆಯ ಅಂಗಳದಲ್ಲಿ ಮತ್ತು ಗಿಡಗಳ ಮಧ್ಯೆ ಅನ್ನ ಚೆಲ್ಲಿತ್ತು. ಅದು ಆಕಸ್ಮಿಕ ಚೆಲ್ಲಿದ್ದಲ್ಲ ಉದ್ದೇಶಪೂರ್ವಕವಾಗಿವೇ ಹರಡಿದ್ದು ಎಂದು ಹರಡಿದ ವ್ಯಾಪ್ತಿ ಮತ್ತು ಮೂಲೆಯ ಜಾಗೆಗಳನ್ನು ನೋಡಿದರೇ ತಿಳಿಯುತ್ತಿತ್ತು. ಅನ್ನವನ್ನೆಲ್ಲ ಶೇಖರಿಸಿದಾಗ ಒಂದು ಮುಷ್ಟಿಯಷ್ಟಾಯಿತು. ಅನ್ನದ ಮೇಲೆ ಡೀಸೆಲ್ ಹಾಕಿ ಸುಡಲು ಪ್ರಯತ್ನಿಸಿದೆ. ಡೀಸೆಲ್ ಖಾಲಿಯಾಯಿತೆ ಹೊರತು ಅನ್ನ ಸುಡುವುದಿರಲಿ ಕಪ್ಪುಗಟ್ಟಲೂ ಇಲ್ಲ! ಮಾಂತ್ರಿಕನಿಗೆ ಫೊನಾಯಿಸಿದೆ. "ಏನೂ ಆಗಲ್ಲ. ಹೆದರ್ಬ್ಯಾಡ್ರಿ. ಕಟ್ಟಿಗಿ ಒಳಗ ಹಾಕಿ ಸುಟ್ಟುಬಿಡ್ರಿ" ಅಂದ ಮಾಂತ್ರಿಕ. ಅನ್ನ ಸುಟ್ಟು ಕರಕಲಾಗಿಯೂ ಹೋಯಿತು!


ನೇರ ಅನುಭವ ಇದು. ಇದರ ಜೊತೆ ನಾನು ಸಂಗ್ರಹಿಸಿದ, ಇನ್ನು ಕೆಲವರು ಹಂಚಿಕೊಂಡ ಮಾಹಿತಿ ಇದಕ್ಕಿಂತಲೂ ಭಯಾನಕವಾಗಿದೆ. ನಾನು ಸ್ವಭಾವತಃ ಹೆದರು ಪುಕ್ಕಲ. ಕತ್ತಲು, ಮಸಣ, ಹೆಣಗಳು ಎಂದರೆ ಭಯ. ಆ ದಿನ ಸ್ಮಶಾನಕ್ಕೆ ಹೋದಾಗ ಅದೆಲ್ಲಿಂದ ಅಂತಹ ಧೈರ್ಯ ಬಂದಿತ್ತೊ! ಹಸಿ ಸಾಮಾಧಿಗಳ ಮೇಲೆ ಕಾಲಿಟ್ಟು ನಡೆದಿದ್ದೆ. ಈ ನಂತರ ಕತ್ತಲ ಬಗ್ಗೆ ಇದ್ದ ಭಯ ಸಾಕಷ್ಟು ಕಡಿಮೆಯಾಯಿತು. ಚಿಕ್ಕಂದಿನಿಂದ ಕಷ್ಟಗಳನ್ನು ನೋಡಿಕೊಂಡೇ ಬೆಳೆದಿದ್ದರಿಂದ " ಕಷ್ಟಗಳೆಂದರೆ ಇಷ್ಟೆ ತಾನೆ ?" ಎಂಬ ಉಡಾಫ಼ೆಯೊಂದು ಜೀವನದ ಬಗ್ಗೆ ಬೆಳೆದಿತ್ತು. ಈ ಉಡಾಫ಼ೆ ಇನ್ನೂ ಜಾಸ್ತಿ ಆಯಿತು! ಏನೇ ಆದರೂ ನಮಗೆ ನಾವು ಸಹಿಸಲು ಸಾಧ್ಯವಾಗುವುದಕ್ಕಿಂಟ ಹೆಚ್ಚಿನ ಕಷ್ಟ ನಮಗೆ ಬರಲಾರದು ಎಂಬುದು ಈ ನಂತರ ಖಾತ್ರಿಯಾಗಿ ಹೋಯಿತು. ಕಾಯುವ ಕೈಯೊಂದು ಸಮಯಕ್ಕೆ ಸರಿಯಾಗಿ ಕಾಯುತ್ತಿರುತ್ತದೆ ಎಂಬುದು ದಿಟ ಎನಿಸಿತು.
ಇಷ್ಟು ವರ್ಷದ ಜೀವನದಲ್ಲಿ ನಾನು ಗಳಿಸಿದ ಸಂಪತ್ತೇನು ಎಂಬುದೂ ಅರಿವಿಗೆ ಬಂದಿತು. ನನ್ನ ಗೆಳೆಯರು ಈ ನಾಲ್ಕು ದಿನ ತಮ್ಮ ಕೆಲಸಗಳಿಗೆ ರಜೆ ಹಾಕಿ, ವ್ಯವಹಾರವನ್ನು ಬಿಟ್ಟು ನನ್ನ ಜೊತೆ ನಿಂತಿದ್ದರು. "ವರ್ಷಗಟ್ಟಲೇ ನಿನ್ನ ಕಷ್ಟದ ಬಗ್ಗೆ ಯಾಕೆ ಮುಚ್ಚಿಟ್ಟಿದ್ದೆ? ನಾವೇನು ಸತ್ತು ಹೋಗಿದ್ವಾ" ಎಂದು ಪ್ರೀತಿಯಿಂದ ಗದರಿ ಮನೆ, ಮನ ಶುಚಿಗೊಳಿಸಿ ಕಾಯ್ದರು.


ನಾನು ಮಂತ್ರ ತಂತ್ರಗಳು ಸತ್ಯ ಎಂಬ ಮಾತನ್ನು ತಳ್ಳಿಹಾಕಲು ಕಾರಣವಿದೆ. ಯಾವುದೇ ಅಡ್ಡಿ ಬಂದರೂ ನಮ್ಮ ಮನಸ್ಸು ಅದನ್ನು ನಿವಾರಿಸಲು ಪ್ರಯತ್ನಿಸದೇ ಇದು ಮಾಟದ್ದೇ ತೊಂದರೆ ಇರಬೇಕು ಎಂದು ಶಂಕಿಸತೊಡಗುತ್ತದೆ. ಆಗ ನಾವು ಸುಮ್ಮನೆ ಮಾಂತ್ರಿಕರ ಹಿಂದೆ ಬಿದ್ದು ಮನಸ್ಸು ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸಿಕೊಳ್ಳುವ ಅಪಾಯವಿದೆ. ಆದ್ದರಿಂದಲೇ ಮಾಟವನ್ನು ನಂಬುವುದು ತರವಲ್ಲ ಅಂತ ನನ್ನ ಅಭಿಪ್ರಾಯ. ಇದೆಲ್ಲಾ ನಡೆಯುವುದರ ಸಾಕಷ್ಟು ಮೊದಲೇ ಸ್ವಾಮಿರಾಮ, ಯೋಗಾನಂದರ ಅನುಭವಗಳು, ಸತ್ಯಕಾಮರ ತಂತ್ರಯೋನಿ ಪಂಚಮಗಳ ನಡುವೆ, ಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಇತ್ಯಾದಿ ಅನುಭಾವಿಗಳ ಅಧ್ಯಾತ್ಮಿಕ ಪುಸ್ತಕಗಳನ್ನು ಓದಿದ್ದೆ. ಇವುಗಳೂ ನನಗೆ ಸ್ವಲ್ಪ ಮಾನಸಿಕವಾಗಿ ಗಟ್ಟಿತನವನ್ನು ಕೊಟ್ಟಿದ್ದವು ಎಂದರೆ ಸುಳ್ಳಲ್ಲ.


ಮಾಟ ಮಂತ್ರ ಪೂಜೆ ಇತ್ಯಾದಿಗಳ ಬಗ್ಗೆ ಅನೇಕರ ಬಳಿ ಸಾಕಷ್ಟು ಚರ್ಚಿಸಿ ಬೇರೆ ಬೇರೆ ಪುಸ್ತಕಗಳನ್ನು ಓದಿದ ನಂತರ ಈ ವಿಷಯವಾಗಿ ಅನೇಕ ಸಂಗತಿಗಳನ್ನು ಸಂಗ್ರಹಿಸಿದ್ದೇನೆ. ನಮ್ಮ ಅಜ್ಜಿ( ಇವರಿಗೆ ಸುಮಾರು ೮೦ ವರ್ಷ ವಯಸ್ಸು) ನಾನು ಮಾಂತ್ರಿಕನ ಮನೆಗೆ ಹೊರಟಿರುವುದನ್ನು ತಿಳಿದು "ಅವನ್ನೆಲ್ಲಾ ನಂಬಬಾರ್ದು. ಶಿವ ಶಿವಾ ಅನ್ನು. ಶಿವ ಎಲ್ಲ ಒಳ್ಳೇದು ಮಾಡ್ತಾನ" ಅಂದಿದ್ದರು. ಈ ಅನುಭವದ ಆಮೇಲಿನ ಓದು ಚರ್ಚೆಗಳ ನಂತರ ಅಜ್ಜಿಯ ಮಾತು ನಿಜ ಅನ್ನಿಸ್ತಿದೆ ನನಗೆ!

ಮಂಗಳವಾರ, ಫೆಬ್ರವರಿ 10, 2009

ಮೂರು ಮಹಾಜಾತ್ರೆಗಳು




ಮೊದಲನೆಯದು ಸಿದ್ಧಗಂಗೆಯ ಯತಿಗಳ ಶತಮಾನೋತ್ಸವ. ಉಳುವಿಯ ನಂತರ ನನಗೆ ಅತ್ಯಂತ ಇಷ್ಟವಾದ ತಾಣ ಸಿದ್ಧಗಂಗಾ ಕ್ಷೇತ್ರ. ಸಿದ್ದಗಂಗಾ ಶ್ರೀಗಳ ಮುಂಜಾನೆಯ ಪೂಜೆಯನ್ನು ನೋಡಲೂ ಪುಣ್ಯ ಬೇಕು ಎನ್ನುತಾರೆ. ಆ ಪ್ರಕಾರ ಪುಣ್ಯವಂತ ನಾನು. ಬೆಳಿಗ್ಗೆ ನಾಲ್ಕು ಗಂಟೆಗೆ ಶುರುವಾಗುತ್ತದೆ ಇಷ್ಟಲಿಂಗ ಪೂಜೆ. ನಮಗೆ (ಸಾಮಾನ್ಯ ಜನರಿಗೆ) ಸುಮಾರು ನಾಲ್ಕು ಮುಕ್ಕಾಲಿಗೆ ಒಳಪ್ರವೇಶ. ಕೌಪೀನಧಾರಿಗಳಾದ ಸ್ವಾಮಿಗಳು ತಮ್ಮ ಕೊನೆಯ ಪೂಜೆಗೆ ಸಿದ್ಧರಾಗಿರುತ್ತಾರೆ. ಪೂಜಾ ಸಮಯಕ್ಕೆ ತೆರಳಿದವರಿಗೆ ಸ್ವಾಮಿಗಳು ಸ್ವತಃ ಕೈಯಿಂದ ವಿಭೂತಿ ಹಚ್ಚುತ್ತಾರೆ. ನಂತರ ಜೊತೆಗೆ ಲಿಂಗಪೂಜೆ. ಪೂಜೆ ಮುಗಿದ ಮೇಲೆ ತಿಂಡಿ ಬೆಳಿಗ್ಗೆ ಸುಮಾರು ಐದು ಗಂಟೆಗೆ! ನಂತರ ಸ್ವಾಮಿಗಳು ತಮ್ಮ ನಿತ್ಯಾಕಾರ್ಯಾರ್ಥ ತೆರಳುತ್ತಾರೆ. ಅಷ್ಟು ಬಾಗಿದ್ದಾಗಿಯೂ ಸ್ವಾಮಿಗಳ ಎತ್ತರ ಆರಡಿಗಿಂತಲೂ ಹೆಚ್ಚು. ಅವರ ನಡಿಗೆಯ ವೇಗಕ್ಕೆ ಹೊಂದಿಕೊಳ್ಳಲಾಗದೆ ಅವರ ಶಿಷ್ಯಂದಿರು ಓಡುತ್ತಾ ಹಿಂಬಾಲಿಸುತ್ತಾರೆ. ನನಗೆ ಅವರ ವೇಗ ಗಾಂಧೀಜಿಯನ್ನು ನೆನಪಿಸುತ್ತದೆ. ಈಗಲೂ ’ಬುದ್ಧಿ’ಯವರು ಕನ್ನಡಕ ಹಾಕುವುದಿಲ್ಲ. ಬರಹವೂ ಸ್ಪಷ್ಟ. ದಿನಕ್ಕೆ ಹೆಚ್ಚೆಂದರೆ ಎರಡು ತಾಸು ನಿದ್ದೆ. ಶಿಷ್ಯರು ಇದನ್ನು ನಾಯಿನಿದ್ದೆ ಎನ್ನುತ್ತಾರೆ!
ಕಾಲೇಜು ದಿನಗಳಲ್ಲಿ ಅಪ್ಪ ಅಮ್ಮನೊಂದಿಗೆ ಬೆಂಗಳೂರಿಗೆ ಹೊರಟೆನೆಂದರೆ ಕ್ಯಾತ್ಸಂದ್ರದಲ್ಲಿ(ಸಿದ್ಧಗಂಗೆಯಲ್ಲಿ) ಒಂದು ದಿನ ನಮ್ಮ ವಸತಿ. ಸಂಜೆ ಮಠದ ಹುಡುಗರು ಹೇಳುವ ಪ್ರಾರ್ಥನೆ ಕೇಳಿಕೊಂಡು ಬೆಟ್ಟ ಹತ್ತಿ ಗಂಗೆಯ ದರ್ಶನ ಮಾಡಿಕೊಂಡು ಚಂದ್ರಮೌಳೀಶ್ವರನಿಗೆ ಕೈಮುಗಿದು ಗೆಸ್ಟ್ ಹೌಸ್‍ನಲ್ಲಿ ತಂಗುತ್ತಿದ್ದೆವು. ಮರುದಿನ ಬೆಳಿಗ್ಗೆ ಸ್ವಾಮಿಗಳ ಜೊತೆ ಪೂಜೆ ಮುಗಿಸಿಕೊಂಡು ಮುಂದೆ ಹೊರಡುತ್ತಿದ್ದೆವು.




ಶತಮಾನೋತ್ಸವ ಸಮಾರಂಭದಲ್ಲಿ ಲಕ್ಷಾಂತರ ಜನ ಪ್ರವಾಹದಂತೆ ಹರಿದು ಬರುತ್ತಿದ್ದರು. ಎಲ್ಲೂ ಗೊಂದಲವಿಲ್ಲ. ನೂಕು ನುಗ್ಗಲಿಲ್ಲ. ಮಠದ ಹಳೆಯ ಶಿಷ್ಯಂದಿರು ಅರವಟಿಗೆಗಳನ್ನು ನಿರ್ಮಿಸಿಕೊಡು ನೀರಡಿಸಿದವರಿಗೆ ನೀರುಣಿಸುತ್ತಿದ್ದರು. ಇನ್ನು ಕೆಲವರು ಅಭಿನಂದನಾ ಗ್ರಂಥಗಳನ್ನು ಮಾರುತ್ತಿದ್ದರು. ಉಳಿದವರೆಲ್ಲ ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಪ್ರತಿದಿನ ಉಂಡವರ ಸಂಖ್ಯೆ ಹತ್ತಿರ ಹತ್ತಿರ ಒಂದೂವರೆ ಲಕ್ಷ! ಎಲ್ಲರಿಗೂ ಕರೆದು ಕರೆದು ಪ್ರಸಾದ ಉಣಬಡಿಸುತ್ತಿದ್ದರು ಸ್ವಯಂಸೇವಕರು! ಲಕ್ಷಾಂತರ ಜನರಿಗೆ ಒಟ್ಟಿಗೆ ಅಡಿಗೆ ಮಾಡಿದ್ದರೂ ರುಚಿ ಕೆಟ್ಟಿರಲಿಲ್ಲ. ಎಲ್ಲವೂ ಶಿಸ್ತುಬದ್ಧ!




ತುಮಕೂರಿನಿಂದ ಚಿತ್ರದುರ್ಗದ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ನಾಲ್ಕು ಗಂಟೆಗೆ ತಲುಪಿದೆ. ಸಾಹಿತ್ಯಪ್ರಿಯರು ಆಗಲೇ ಕಿಟ್‍ಗಾಗಿ ಹೊಡೆದಾಡಿ ಬೇಸತ್ತು ಧಿಕ್ಕಾರ ಕೂಗತೊಡಗಿದ್ದರು. ಮೈಕಿನಲ್ಲಿ ವಂಧಿಮಾಗದನೊಬ್ಬ ಅತಿಥಿಗಳನ್ನು ಇಂದ್ರಚಂದ್ರ ಎಂದೆಲ್ಲಾ ಹೊಗಳಿ ಎಲ್ಲರಿಗೂ "ಹಾದರದ" ಸ್ವಾಗತ ಎಂದು ಚೀರುತ್ತಿದ್ದ. ತಿಂಡಿಯ, ಪುಸ್ತಕದ, ವಸ್ತುಪ್ರದರ್ಶನದ ಮಳಿಗೆಗಳೆಲ್ಲಾ ಒಂದೇ ಕಡೆ ಸ್ಥಾಪಿಸಿ ಎಲ್ಲಾ ಅಧ್ವಾನವಾಗಿತ್ತು. ಜೊತೆಗೆ ಧೂಳು, ಮಣ್ಣು! ಹತ್ತು ಸಾವಿರ ಜನರಿಗೆ ಊಟದ ಕೂಪನ್ ಹಂಚಿದು ಗೊತ್ತಿದ್ದೂ ಅಷ್ಟು ಜನರಿಗೆ ಊಟ ತಯಾರಿಸಲು ಸಾಧ್ಯವಾಗಿರಲಿಲ್ಲ ಸಮ್ಮೇಳನದ ಆಯೋಜಕರಿಗೆ! ಪ್ರವಾಹದಂತೆ ಹರಿದು ಬರುವ ಲಕ್ಷ ಲಕ್ಷ ಜನರಿಗೆ ಪೂರ್ವ ಅಂದಾಜಿಲ್ಲದೆಯೂ ಸುವ್ಯವಸ್ಥಿತವಾದ ಊಟ ತಯಾರಾಗಿತ್ತು ಸಿದ್ಧಗಂಗೆಯಲ್ಲಿ. ಕೆಲಸಕ್ಕೂ ಸೇವೆಗೆ ಇದೇ ವ್ಯತ್ಯಾಸ!




ಅಧ್ವಾನಗಳು ಕ್ಷಮಾರ್ಹವೇ! ಸಹಿಸಲಾಗದ್ದು ಸಮ್ಮೇಳನಾಧ್ಯಕ್ಷ ಎಲ್.ಬಸವರಾಜು ಅವರ ಅರಳು ಮರಳು ಅಧ್ಯಕ್ಷ ಭಾಷಣ! ಅತ್ಯುತ್ತಮ ವಾಗ್ಮಿ, ಬಸವರಾಜು ಮಾತಾಡುತ್ತಿದ್ದರೆ ಸುತ್ತಲಿದವರು ಕಿವಿಯಾಗಬೇಕು ಎಂಬೆಲ್ಲಾ ಸ್ತುತಿಗಳನ್ನು ಕೇಳಿ ಹೋಗಿದ್ದೆ. ಭಾಷಣದಲ್ಲಿ ವಿನಾಕಾರಣ ಬೇಡರು ಬ್ರಾಹ್ಮಣರನ್ನು ಎಳೆತಂದು ಕೊನೆಗೆ " ಇಷ್ಟು ಹೇಳಿದ್ದೇನೆ. ಇನ್ನೇನೂ ಹೇಳುವುದಿಲ್ಲ, ಹೇಳಬೇಕಾಗಿಯೂ ಇಲ್ಲ! " ಎಂದು ಅಪದ್ಧವಾಗಿ ಭಾಷಣ ಮುಗಿಸಿದರು. ಸಮ್ಮೇಳನಾಧ್ಯಕ್ಷ ಸ್ಥಾನದ ಘನತೆ ಎಂಬುದು ಪಾತಾಳ ಚುಂಬಿಸಿತು! ಇಲ್ಲಿಯವರೆಗೆ ನಾನು ಕೇಳಿದ ಯಾವ ಸಮ್ಮೆಳನಾಧ್ಯಕ್ಷ ಭಾಷಣವೂ ಇಷ್ಟು ಕಳಪೆಯಾಗಿರಲಿಲ್ಲ.
ಸಮ್ಮೇಳನದಲ್ಲಿ ನನಗೆ ಪ್ರಮುಖ ಆಕರ್ಷಣೆ ಎಂದರೆ ಪುಸ್ತಕ ಮಳಿಗೆಗಳದ್ದು. ಅದರಲ್ಲೂ ಕೆಲ ಪ್ರಕಾಶಕರು ಮರಾಟವಾಗದ ಹಳೆಯ ಪುಸ್ತಕಗಳನ್ನು ಅರ್ಧ ಬೆಲೆಗೆ ಮಾರುತ್ತಿರುತ್ತಾರೆ. ಇಂತಹ ಕಡೆಗಳಲ್ಲಿ ಅಪರೂಪದ ಪುಸ್ತಕಗಳು ದೊರೆಯುತ್ತವೆ. ಈ ಬಾರಿಯೂ ನಿರಾಶೆಯಾಗಲಿಲ್ಲ. ನನ್ನ ಮೆಚ್ಚಿನ ಪಾವೆಂ ಹಾಗೂ ದೇವುಡು ಅವರ ಸಂಗ್ರಹಗಳು ದೊರಕಿದವು. ಇದು ಬಿಟ್ಟರೆ ದುರ್ಗದ ಸಮ್ಮೇಳನದಲ್ಲಿ ಖುಶಿ ಕೊಟ್ಟಿದ್ದು ನಡೆದಾಡುವ ಶಿಕ್ಷಕ ರುದ್ರಸ್ವಾಮಿಯವರ ಭೇಟಿ ಹಾಗೂ ಲಕ್ಷ್ಮಿ ಭವನದ ದೋಸೆ! ರುದ್ರಸ್ವಾಮಿಯವರು ತಮ್ಮ ಮಳಿಗೆಯಲ್ಲಿ ತಾವು ಮಕ್ಕಳಿಗಾಗಿ ತಯಾರಿಸಿದ ಕಲಿಕೆಯ ಆಟಿಕೆಗಳ ಬಗ್ಗೆ ಬೇಸರವಿಲ್ಲದೇ ಇಡೀ ದಿನ ಬಂದವರಿಗೆಲ್ಲಾ ವಿವರಿಸುತ್ತಿದ್ದರು. (ನನ್ನ ಡಿಜಿಟಲ್ ಕ್ಯಾಮೆರಾ ದಾವಣಗೆರೆಯಲ್ಲಿ ಮರೆತು ಬಂದು ಇವರ ಫೊಟೊ ಹಾಕಿಲ್ಲ. ಮುಂದೆಂದಾರೂ ಹಾಕುತ್ತೇನೆ.)






ದಾವಣಗೆರೆಯಲ್ಲಿ ತರಳಬಾಳು ಹುಣ್ಣಿಮೆ ನಡೆಯುತ್ತಿತ್ತು. ಸಿರಿಗೆರೆ ಜಗದ್ಗುರುಗಳ ನೇತೃತ್ವದಲ್ಲಿ ಇದು ನಡೆಯುತ್ತದೆ. ಹಾಗೆ ನೋಡಿದರೆ ತರಳಬಾಳು ಹುಣ್ಣಿಮೆಯ ಬಗ್ಗೆ ನನಗೆ ಹೆಚ್ಚಿನ ಹೆಮ್ಮೆ ಇರಬೇಕು ಏಕೆಂದರೆ ನಾನು ತರಳಬಾಳು ಸಂಸ್ಥೆಯ ಶಾಲೆಯ ವಿದ್ಯಾರ್ಥಿ. ನನಗೆ ಹೆಮ್ಮೆ ಇಲ್ಲ ಏಕೆಂದರೆ ತರಳಬಾಳು ಶಾಲೆಯಲ್ಲಿ ನಾನು ವಿದ್ಯೆಯನ್ನು ಕೊಂಡುಕೊಂಡಿದ್ದೇನೆ. ಸಿದ್ಧಗಂಗೆಯ ಹುಡುಗರಂತೆ ದಾನವಾಗಿ ಪಡೆದಿಲ್ಲ. ಅಪ್ಪ ನನಗಾಗಿ ರೊಕ್ಕ ತೆತ್ತು ವಿದ್ಯೆಯನ್ನು ಖರೀದಿಸಿದ್ದಾರೆ. ಕೊಡುವ ಸವಲತ್ತಿಗೆ ತಕ್ಕಂತೆ ಹಣ ಪಡೆಯಲಿ; ನನಗೆ ಅಭ್ಯಂತರವಿಲ್ಲ. ಪಡೆದ ಹಣಕ್ಕೆ ರಸೀದಿ ಕೊಡಬೇಡವೇ? ಹತ್ತಾರು ಸಾವಿರ ರೂಪಾಯಿ ಹಣ ಪಡೆದು ಇನ್ನೂರೊ ಮುನ್ನೂರೋ ರೂಪಾಯಿಗೆ ರಸೀದಿ ಬರೆದು ಕೊಡುತ್ತಿದ್ದರು ನಮ್ಮ ಶಾಲೆಯಲ್ಲಿ. ರಸೀದಿಯ ಹಿಂದಕ್ಕೆ ಮೂಲೆಯಲ್ಲಿ ಚಿಕ್ಕದಾಗಿ ಉಳಿದ ಹಣದ ಬಗ್ಗೆ ಬರೆಯುತ್ತಿದ್ದರು! ಯಾರೋ ರಾಜಕಾರಣಿ ಈ ಥರ ಮಾಡಿದ್ದರೆ ಬೈದುಕೊಳ್ಳಬಹುದಿತ್ತು. ಸಮಾಜಕ್ಕೆ ದಾರಿ ತೋರಬೇಕಾದ ಮಠಾಧೀಶರೇ ಕಪ್ಪುಹಣ ಸಂಗ್ರಹಿಸಿದರೆ? ಒಲೆಹತ್ತಿ ಉರಿದೊಡೆ ನಿಲ್ಲಬಹುದು ಧರೆಹತ್ತಿ ಉರಿದರೆ ? ಆದರೂ ತರಳಬಾಳು ಹುಣ್ಣಿಮೆಯಲ್ಲಿ ಒಳ್ಳೊಳ್ಳೆಯ ಕಾರ್ಯಕ್ರಮಗಳಿರುತ್ತವೆ. ದೇಶದೆಲ್ಲೆಡೆಯಿಂದ ಬಂದ ಕಲಾವಿದರಿಂದ ಜನಪದ ನರ್ತನ ಗಾಯನಗಳಿರುತ್ತವೆ. ಅನೇಕ ವಿಶೇಷಜ್ಞರಿಂದ ಉಪನ್ಯಾಸಗಳಿರುತ್ತವೆ. ಸ್ವತಃ ಮಠಾಧೀಶರು ಅತ್ಯುತ್ತಮ ವಾಗ್ಮಿಗಳು. ಅವರ ಭಾಷಣವೂ ಕೇಳಲು ಸೊಗಸಾಗಿರುತ್ತದೆ. ಇಲ್ಲಿ ದಾಸೋಹದ ವ್ಯವಸ್ಥೆ ಇರುವುದಿಲ್ಲ.




ಮೂರೂ ಜಾತ್ರೆಗಳನ್ನು ನೋಡಿ ರಾತ್ರಿ ಮನೆಗೆ ಬಂದು ಮಲಗುವಾಗ ಶರೀಫ್ ಸಾಹೇಬರ ಈ ಸಾಲುಗಳು ಯಾಕೋ ನೆನಪಾದವು.
ತಾಬೂತಿನೊಳಗೊಂದು ತಗಡಿನ ಹಸ್ತವ ಕಂಡು
ಮೆಹಬೂಬ ಶಿಶುನಾಳ ಧೀಶಗ ನಗಿ ಬಂತು !!!

ಇನ್ನೊಂದು ಮಾತು: ಬೆಳಗೆರೆ ಶಾಸ್ತ್ರಿ ತಾತ ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿದ್ದಾರೆ. ನಾನು ನೋಡಲು ಹೋಗಿಲ್ಲ. ಕಾರಣವಿದೆ. ಹಿಂದೆ ರಾಜೀವ್ ದೀಕ್ಷಿತರ ಜೊತೆ ವಿದ್ಯಾನಂದ ಶೆಣೈರನ್ನು ನೋಡಲು ನಿಮ್ಹಾನ್ಸ್‍ಗೆ ಹೋಗಿದ್ದೆ. ರಾಜೀವ್ ದೀಕ್ಷಿತರೇನೋ ಹೋಗಿ ನೋಡಿಕೊಂಡು ಬಂದರು. ನಾವು ಒಳ ಹೊರಟಾಗ ಅವರನ್ನು ಕಾಯುತ್ತಿದ್ದ ಪೋಲೀಸ್ ಪೇದೆ " ನೀವೇನೋ ಅಭಿಮಾನದಿಂದ ಅವರನ್ನು ನೋಡಲು ಬರುತ್ತೀರಿ. ಆದರೆ ಅವರಿಗೆ ಇದರಿಂದ ಎಷ್ಟು ತೊಂದರೆ ಆಗುತ್ತೆ ಗೊತ್ತೆ?" ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡ. ಅವನು ಹೇಳಿದ್ದು ಸರಿಯೇ! ಹೇಗೋ ಅನುಮತಿ ಪಡೆದು ಒಬ್ಬೊಬ್ಬರಾಗಿ ನೋಡಿಕೊಂಡು ಬಂದೆವು. ಎರಡನೆಯ ದಿನವೇ ಶೆಣೈ ನಿಧನರಾದ ದುಃಖಕರ ಸುದ್ದಿ ಬಂತು. ಮೊನ್ನೆ ತಾತನನ್ನು ನೋಡಲು ಹೊರಟಾಗ ಈ ಪೋಲಿಸ್ ನೆನಪಾದ. ಅಷ್ಟರಲ್ಲಿ ತಾತ ಹುಶಾರಾಗಿ ಆಗಲೇ ನೆನಪಿನ ಬುತ್ತಿಯನ್ನು ಬಿಚ್ಚಿ ಕಥೆಗಳನ್ನು ಹೇಳುತ್ತಿದ್ದಾರೆ ಎಂದು ಕೇಳಿ ನಿರುಮ್ಮಳನಾದೆ.

ಶನಿವಾರ, ಜನವರಿ 31, 2009

"ಕರ್ತವ್ಯಂ ದೈವಮಾಹ್ನಿಕಂ !!!!"

ನಾನು ಆರೊ ಏಳನೆಯದೊ ತರಗತಿಯಲ್ಲಿ ಇದ್ದೆ. ಭಾನುವಾರ ಪ್ರಜಾವಾಣಿಯ ಪುರವಣಿಯಲ್ಲಿ ಪ್ರೊ. ಜಿ. ವೆಂಕಟಸುಬ್ಬಯ್ಯನವರ ’ಇಗೊ ಕನ್ನಡ’ ಪ್ರಕಟವಾಗುತ್ತಿತ್ತು. ಒಂದು ಭಾನುವಾರ ಪೇಪರ್ ಓದುತ್ತಿದ್ದ ಅಪ್ಪ ನನ್ನನ್ನು ಕರೆದು ತೋರಿಸಿದರು. ತಂದೆಯ ಮುಖದಲ್ಲಿದ್ದ ತುಂಟನಗೆಯನ್ನು ನೋಡಿ ನನ್ನನ್ನು ಪರೀಕ್ಷಿಸುವುದರಲ್ಲಿದ್ದಾರೆ ಎಂಬುದು ನನಗೆ ಹೊಳೆಯಿತು. ಅದರಲ್ಲೊಬ್ಬರು ’ನಿನ್ನ ಮಂಜಾಳಾಗ’ ಅಂತಾರಲ್ಲ ಹಾಗೆಂದರೇನು ? ಎಂದು ಕೇಳಿದ್ದರು.
ಅದಕ್ಕೆ ವೆಂಕಟಸುಬ್ಬಯ್ಯನವರು ಇದು ಉತ್ತರ ಕರ್ನಾಟಕದ ಶಬ್ದ. ನಿನ್ನ ಮನೆ ಜೋಳವಾಗ. ಜೋಳವಾಗುವುದು ಎಂದರೆ ನಾಶವಾಗುವುದು ಎಂದೆಲ್ಲಾ ವಿವರಣೆ ಕೊಟ್ಟಿದ್ದರು.
"ಇದು ಹೀಗಲ್ಲ" ಎಂದೆ ನಾನು. ಅದು "ನಿನ್ ಮನೆ ಜಾಳವಾಗ ಆಗಬೇಕು" ಅಂದೆ.
ಜಾಳವಾಗುವುದು ಅಂದರೆ ಸ್ವಚ್ಚವಾಗುವುದು ಅಂತ ಅರ್ಥ. "ವಿಷಯ ಜಾಳ ಅಯ್ತಾ?" ಅಂದರೆ ವಿಷಯ ತಿಳಿಯಾಯಿತೆ (ಅರ್ಥವಾಯಿತೆ?) ಎಂಬರ್ಥ ಬರುತ್ತದೆ. ಮನೆ ಜಾಳವಾಗಲಿ ಅಂದರೆ ಸರ್ವವೂ ಸ್ವಚ್ಚವಾಗಿ ಹೋಗಲಿ ಅಂದರೆ ನಾಶವಾಗಿ ಹೋಗಲಿ ಎಂಬ ಅರ್ಥ ಬರುತ್ತದೆ. ಇದೇ ರೀತಿಯ ಅನೇಕ ವಿಶ್ಲೇಷಣೆಗಳನ್ನು ’ಇಗೊ ಕನ್ನಡ’ದಲ್ಲಿ ನೋಡಿದ್ದೇನೆ. ಬಹುಷ: ಕೋಶವನ್ನರಗಿಸಿಕೊಂಡರೂ ದೇಶವನ್ನು ಸುತ್ತದ ಪರಿಣಾಮ ಇದು ಎನ್ನಬಹುದೇನೋ ?

ಇತ್ತೀಚೆಗೆ ತೀರ ಕಿರಿಕಿ ಉಂಟು ಮಾಡುತಿರುವ ಶಬ್ದ " ವಿಕಲಚೇತನರು"! ಫಿಸಿಕಲಿ ಚಾಲೆಂಜ್ಡ್ ಎಂಬುದಕ್ಕೆ ಪರ್ಯಾಯವಾಗಿ ಕನ್ನಡಕ್ಕೆ ವಿಶ್ವೇಶ್ವರ ಭಟ್ಟರ ಕೊಡುಗೆ ಇದು. ವಿಕಲಾಂಗರಿಗಾಗಿ ಹೊಸ ಶಬ್ದ ಹುಡುಕಲು ತೆಗೆದುಕೊಂಡ ಶ್ರಮವನ್ನು ವಾರಗಟ್ಟಲೆ ತಮ್ಮ ಅಂಕಣದಲ್ಲಿ ವಿಶದಿಸಿದ್ದರು ಭಟ್ಟರು . ಕೊನೆಗೆ ವೆಂಕಟಸುಬ್ಬಯ್ಯನವರ ಸಹಾಯದಿಂದ ವಿಕಲಚೇತನರು ಎಂಬ ಪದವನ್ನು ಟಂಕಿಸಿದರು. ಅವರ ಪ್ರಯತ್ನವೇನೋ ಪ್ರಶಂಸಾರ್ಹವೇ! ಆದ್ರೆ ತಾರ್ಕಿಕವಾಗಿ ನೋಡುವುದಾದರೆ ಇಂಗ್ಲಿಶ್ ನಲ್ಲಿ ಹ್ಯಾಂಡಿಕ್ಯಾಪ್ಡ್ ಎಂಬುದಕ್ಕೆ ಬದಲಾಗಿ ಚಾಲೆಂಜ್ಡ್ ಎಂಬ ಪದ ಬಂತು; ಕನ್ನಡದಲ್ಲಿ ವಿಕಲ ಮಾಯವಾಗಿ ಪರ್ಯಾಯ ಪದ ಬರಬೇಕಿತ್ತು. ಆದರೆ ಅಂಗದ ಬದಲಾಗಿ ಚೇತನ ಬಂತು. ಮೊದಲು ಅಂಗ ಮಾತ್ರ ವಿಕಲವಾಗಿತ್ತು ಈಗ ಚೇತನವೇ ವಿಕಲವಾಗಿಬಿಟ್ಟಿತು !

ಇನ್ನೊಂದು ಶಬ್ದ "ವಿಪರೀತ"! ’ವಿಪರೀತ’ ಮೂಲತಃ ಸಂಸ್ಕೃತ ಶಬ್ದ. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಶಬ್ದಗಳು ಅಪಭ್ರಂಶವಾಗುವುದು ಸಹಜ. ಆದರೆ ಇಲ್ಲಿ ಅರ್ಥವೇ ಅಪಭ್ರಂಶವಾಗಿದೆ. ವಿಪರೀತ ಎಂದರೆ ವಿರುದ್ಧ ಎಂದರ್ಥ. ’ವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ’ ವಿರುದ್ಧವಾದ ಬುದ್ಧಿ ಎಂದು ಅರ್ಥ. ಅತಿಯಾದ ಬುದ್ಧಿ ಎಂದಲ್ಲ. ಪರಿಸ್ಥಿತಿ ನಮಗೆ ವಿಪರೀತವಾಗಿದೆ ಎಂದರೆ ಪರಿಸ್ಥಿತಿ ನಮ್ಮ ಅನುಕೂಲಕ್ಕೆ ವಿರುದ್ಧವಾಗಿದೆ ಎನ್ನಬಹುದು. ಪ್ರಕೃತಿ ವೈಪರೀತ್ಯ ಅಂದರೆ ಪ್ರಕೃತಿಯ ಅನನುಕೂಲವಾದ ಸ್ಥಿತಿ ಎಂದು ಅರ್ಥೈಸಬಹುದು.

ಶಬ್ದಗಳಿಗೆ ಮಾತ್ರವಲ್ಲ ಪದ್ಯಗಳಿಗೂ ಈ ರೀತಿಯ ಗತಿ ಒದಗಿದೆ. ಅದರಲ್ಲೊಂದು ಸರ್ವಜ್ಞ ನ ಈ ವಚನ:

ಬರೆಯದೆ ಓದುವವನ ಕರೆಯದೇ ಬರುವವನ
ಬರಿಗಾಲಲ್ಲಿ ನಡೆವವನ
ಕರೆತಂದು ಕೆರದಿಂದ ಹೊಡೆಯ ಸರ್ವಜ್ಞ.

ಮನೆಗೆ ಕರೆಯದೇ ಬರುವವನನ್ನೆ ಅತಿಥಿ ಎಂದು ಕರೆಯುವುದು. ತಿಥಿ ನಕ್ಷತ್ರಗಳನ್ನು ನೋಡದೇ ಬರುವವನೇ ಅತಿಥಿ. ಅತಿಥಿ ದೇವೋಭವ ಎಂದು ನಮ್ಮ ಸಂಸ್ಕೃತಿಯೇ ಹೇಳುವಾಗ ಸರ್ವಜ್ಞನಂತಹ ಅನುಭಾವಿ ಇಂತಹ ಮಾತನ್ನೇಕೆ ಹೇಳುತ್ತಾನೆ? ಅಲ್ಲದೇ ಸರ್ವಜ್ಞನ ಕಾಲದಲ್ಲಿ ಬರಹದ ಸಾಧನಗಳೂ ಕಡಿಮೆ ಬರೆದು ಬರೆದು ಅಭ್ಯಾಸ ಮಾಡುತ್ತಿದ್ದವರೂ ಕಡಿಮೆ. ಬರವಣಿಗೆಯ ಸಾಧನಗಳ ಅವಶ್ಯಕತೆ ಹೆಚ್ಚಾದದ್ದೇ ನೆನಪಿನ ಶಕ್ತಿ ಕಡಿಮೆಯಾಗತೊಡಗಿದಂದಿನಿಂದ ಇಂತಹ ಪದ್ಯ ಸರ್ವಜ್ಞನ ಬತ್ತಳಿಕೆಯಿಂದ ಬಂದದ್ದೇಕೆ ? ಎಂಬುದು ತುಂಬಾ ಹಳೆಯ ಪ್ರಶ್ನೆ. ಇದಕ್ಕೆ ಉತ್ತರ ದೊರಕಿಸಿಕೊಟ್ಟವರು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರೊಫ಼ೆಸರ್ ಡಾ.ಚಂದ್ರಶೇಖರ ವಸ್ತ್ರದರವರು. ಮೂಲ ಹೀಗಿದೆ.

ಬರೆಯದವನ ಓದದವನ ಬರಿಗಾಲಲ್ಲಿ ನಡೆವವನ
ಕರೆಯದೇ ಬರುವವನ ನೆನೆವವನ
ಕರೆತಂದು ಕರಮುಗಿಯ ಸರ್ವಜ್ಞ.

ಇದು ಚಂದೋಬದ್ಧವಾಗಿಯೂ ಸರಿಯಾಗಿದೆ ಅರ್ಥಬದ್ಧವಾಗಿಯೂ ಸರಿಯಾಗಿದೆ. ಇಲ್ಲಿ ಕರೆಯದೇ ಬರುವವನು ಮಳೆರಾಯ. ಬರೆಯದವನು, ಓದದವನು, ಬರಿಗಾಲಲ್ಲಿ ನಡೆವವನು, ಮಳೆರಾಯನನ್ನು ನೆನೆಯುವವನು ರೈತ. ಅನ್ನದಾತನಿಗೆ ಕೈಮುಗಿ ಎನ್ನುತ್ತಿದ್ದಾನೆ ಸರ್ವಜ್ಞ. ! ಅಪಭ್ರಂಶ ಮಾಡುವವನಿಗೆ ಕೆರದಿಂದ ಹೊಡೆಯ !

ಇನ್ನೊಂದು ಇದೇ ರೀತಿಯ ಪದಗುಚ್ಚ "ಕರ್ತವ್ಯಂ ದೈವಮಾಹ್ನಿಕಂ". ಎಲ್ಲರೂ ತಿಳಿದುಕೊಂದಿರುವ ಅರ್ಥ ಕರ್ತವ್ಯವೇ ದೇವಪೂಜೆ ಎಂದು. ಅರ್ಥವತ್ತಾಗಿ ಇದು ಸರಿಯಾಗಿಯೇ ಇದೆ. ಸಂದರ್ಭವತ್ತಾಗಿ ಇನ್ನೊಂದು ಅರ್ಥ ಬರುತ್ತದೆ. ಅಂದರೆ ಅರ್ಥೈಸುವಾಗ ದೈವಮಾಹ್ನಿಕಂ ಕರ್ತವ್ಯಂ (ದೈವಪೂಜೆಯನ್ನು ಮಾಡಬೇಕು)ಎಂದು ಅರ್ಥೈಸಬೇಕು. ಉತ್ತಿಷ್ಠ ನರಶಾರ್ಧೂಲ ಕರ್ತವ್ಯಂ ದೈವಮಾಹ್ನಿಕಂ. "ಎದ್ದೇಳು ನರಹುಲಿಯೇ ಕರ್ತವ್ಯವೇ ದೇವರು" ಎಂಬುದಕ್ಕೂ "ಎದ್ದೇಳು ನರಹುಲಿಯೇ ದೈವಪೂಜೆಯನ್ನು ಮಾಡಬೇಕು" ಎಂಬುದನ್ನು ಹೋಲಿಸಿ ನೋಡಿದಾಗ ಸಂದರ್ಭಾನುಸಾರವಾಗಿ ದೈವಮಾಹ್ನಿಕಂ ಕರ್ತವ್ಯಂ ಎನ್ನುವುದು ಸರಿಯಾದ ಬಳಕೆ. ಕರ್ತವ್ಯಂ ಎನ್ನುವುದು ’ಕೃ’ ಎಂಬ ಧಾತುವಿನಿಂದ ಬಂದದ್ದು. ತವ್ಯತ್ ಪ್ರತ್ಯಯ ಸೇರಿ ಕರ್ತವ್ಯಂ ಎಂದಾಗಿದೆ. ಪ್ರತ್ಯಯಗಳು ಬಹುತೇಕ ಉಪಯೋಗವಾಗುವುದು ವ್ಯಾಕರಣಾಬದ್ಧ ಬಳಕೆಯಲ್ಲಿ ಲೋಪ ಬಂದಾಗ. ಭಾಷೆಯ ಬೆಳವಣಿಗೆಯ ನಂತರ ವ್ಯಾಕರಣ ರಚನೆಯಾದ ಕಾರಣ ಈ ರೀತಿಯ ಲೋಪ ಕಂಡು ಬರುತ್ತವೆ. ಹಾಗಾಗಿ ಪ್ರತ್ಯಯಗಳು ವೈಜ್ಞಾನಿಕವಾದ ಭಾಷಾಬಳಾಕೆಯಲ್ಲ ಎಂಬುದು ಪಂಡಿತರ ಹೇಳಿಕೆ. ( ಇದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನದಲ್ಲಿ ಕೇಳಿದ್ದು).

ಇನ್ನೊಂದು ಪದ ನಿಟ್ಟುಸಿರು. ಇದು ಅಚ್ಚ ಕನ್ನಡದ ಶಬ್ದ. ಅರ್ಥ ಎಲ್ಲರಿಗೂ ಗೊತ್ತಿರುವುದೇ. ಪದವಿಂಗಡನೆ ಮಾಡಿದಾಗ "ನಿಡಿದಾದ ಉಸಿರು". ನಮ್ಮ ಮೇಷ್ತ್ರೊಬ್ಬರು ಇದನ್ನು ನಿಟ್ಟ ಉಸಿರು ಎಂದು ಬಿಡಿಸಿ ನಗೆಪಾಟಲಿಗೀಡಾಗಿದ್ದರು.
ಮತ್ತೊಂದು ಉದ್ಯಾನವನ. ಸ್ವತಃ ತಾವೇ ವಿಹರಿಸಲು ಮಾನವರು ನಿರ್ಮಿಸಿಕೊಂಡ ವನಕ್ಕೆ ಉದ್ಯಾನ ಎಂದು ಹೆಸರು. ಉದ್ಯಾನ ಸಾಕು. ಉದ್ಯಾನ ಎಂದರೂ ಕಾಡು (ಮಾನವನಿರ್ಮಿತ) ವನ ಎಂದರೂ ಕಾಡು. ಎರಡು ಬಾರಿ ಉಚ್ಚರಿಸುವುದು ಎಂಥದು? ಹಣ್ಣು + ಫಲ ಆಡು ಮಾತಲ್ಲಿ ಹಂಪಲು ಆಗಿದೆ. ಈಗ ಹೇಳಿ "ಹಣ್ಣು ಹಂಪಲು" ಸರಿಯಾದ ಬಳಕೆಯೇ?

ಬುಧವಾರ, ಜನವರಿ 28, 2009

ಉದರನಿಮಿತ್ಥಂ ......

ಷಡಕ್ಷರಮೂರ್ತಿಯವರ ಆರ್ಕುಟ್ ಪ್ರೊಫೈಲ್ ನಲ್ಲಿ ಕಂಡ ವಿಡಿಯೋ ಇದು. ಈ ಪುಣ್ಯಾತ್ಮನಿಗೆ ಇಂತಹ ವಿಡಿಯೋಗಳು ಹೇಗೆ ಸಿಗುತ್ತವೋ ಗೊತ್ತಿಲ್ಲ. ಹಿಂದೆಯೂ ಇದೆ ತರಹದ ವಿಡಿಯೋಗಳನ್ನು ಹಾಕಿದ್ದಾರೆ. ಈ ಬಾರಿಯದು ನಿಜಕ್ಕೂ ಸುಪರ್ಬ್. ವಿಜಯ ಕರ್ನಾಟಕದಲ್ಲಿ ನಡೆದ ಮತಾಂತರ ಚರ್ಚೆಯನ್ನು ಚೆನ್ನೈಲಿದ್ದ ನನಗೆ ಸ್ಕ್ಯಾನ್ ಮಾಡಿ ಕಳುಹಿಸಿ ಉಪಕಾರ ಮಾಡಿದ್ದರು. ಥ್ಯಾಂಕ್ಸ್ ಮೂರ್ತಿ!


ಪ್ರತಿಭೆಗಳು ಎಲ್ಲೆಲ್ಲಿರುತ್ತವೆ ಅಂತ ಹೇಳೋಕಾಗಲ್ಲ. ಈ ಹುಡುಗರ ಇಂಗ್ಲಿಶ್ ವ್ಯಾಕರಣಬದ್ಧವಾಗಿದೆ ಎನ್ನಲಾರೆ. ಆದರೆ ಕೇಳುಗರಿಗಂತೂ ಅರ್ಥವಾಗುತ್ತದೆ. ನನ್ನ ಸಾಫ್ಟ್ವೇರ್ ಸಹಯೋಗಿಗಳಿಗಿಂತಲೂ ಇವರ ಭಾಷೆ ಚೆನ್ನಾಗಿದೆ. ಕೇವಲ ಪ್ರವಾಸಿಗರೊಡನೆ ಮಾತಾಡಿ ಬಹುತೇಕ ಎಲ್ಲ ಯುರೋಪಿಯನ್ ಭಾಷೆಗಳನ್ನು ಮಾತಾಡುವ ಮಕ್ಕಳು ಇವು . ಅಪ್ಪನ ಬಳಿ ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ದೇಶದ ಕಸುವಾಗಿರಬೇಕಿದ್ದ ಇಂಥ ಪ್ರತಿಭೆಗಳು ಕಸವಾಗಿರುವುದು ಎಂಥ ದುರಂತ!!!!




ಗುರುವಾರ, ಜನವರಿ 22, 2009

ಕರ್ನಾಟಕ ಸಂಗೀತ ಎಂದೇ ಹೇಳಿ ...



ಕುನ್ನುಕ್ಕುಡಿಯವರ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿ ಹಂಸಾನಂದಿಯವರು ತುಸು ಬೇಸರಿಸಿಕೊಂಡೇ ಕಾರ್ನಾಟಿಕ್ ಪದಬಳಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ನನ್ನ ಮಾಹಿತಿಯನ್ನು ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಾದ ಅಗತ್ಯ ತೋರಿತು. ಕೂಡಲೆ ದಾಖಲೆಗಳನ್ನು, ಸಾಕ್ಷ್ಯಗಳನ್ನು ಕಲೆಹಾಕಲು ಹುಡುಕಲು ಶುರುಮಾಡಿದೆ. ನಡುವೆ ಚೆನ್ನೈನಿಂದ ಬೆಂಗಳೂರಿಗೆ ವರ್ಗಾವಣೆ, ಬೆಳಗೆರೆ, ಸೇವಾಗ್ರಾಮ, ಚಿಕ್ಕಮಗಳೂರು, ತಿರುವಯ್ಯಾರ್ ಪ್ರವಾಸಗಳಿಂದಾಗಿ ಕೆಲಸ ತಡವಾಯಿತು. ಚೆನ್ನೈನ ರಣಬಿಸಿಲಿನಿಂದ ಬೆಂಗಳೂರಿನ ರಕ್ಕಸ ಚಳಿಗೆ ಹೊಂದಿಕೊಳ್ಳಲು ದೇಹಕ್ಕೆ ಸ್ವಲ್ಪ ಸಮಯವೇ ಬೇಕಾಯಿತು.
ಎರಡೂ ರೀತಿಯ ಹೆಸರುಗಳಿಗೂ ದಾಖಲೆಗಳು ಸಿಕ್ಕಿದವು. ಕೆಲಸ ಇನ್ನೂ ಮುಗಿದಿಲ್ಲ. ಸಿಕ್ಕಷ್ಟು ಹೇಳುತ್ತಿದ್ದೇನೆ.


ಸಧ್ಯಕ್ಕೆ ಕಾರ್ನಾಟಿಕ್ ಗಿಂತ ಕರ್ನಾಟಕ ಎಂಬ ಕಡೆಗೇ ದಾಖಲೆಗಳ ತಕ್ಕಡಿ ಹೆಚ್ಚು ವಾಲುತ್ತಿದೆ. ಕರ್ನಾಟಕದ ಚರಿತ್ರೆಯ ಬಗ್ಗೆ ತುಂಬಾ ಹಳೆಯ ದಾಖಲೆಗಳು ಸಿಗುತ್ತವೆ. ಕೈಕೇಯಿ ರಾಮನನ್ನು ಅಟ್ಟಿದ ಗೋಂಡಾರಣ್ಯದ ಒಂದು ಭಾಗವಾಗಿತ್ತು ಕರ್ನಾಟಕ. ಸುಗ್ರೀವ ಹನುಮಂತರ ಪರಿಚಯ ರಾಮನಿಗಾದದ್ದು ಇಲ್ಲಿಯೇ. ಅಂಬೆ ಅಂಬಾಲಿಕೆಯರ ಸ್ವಯಂವರಕ್ಕೆ ಬಂದಿದ್ದ ಛಪ್ಪನ್ನಾರು ದೇಶಗಳ ರಾಜರಲ್ಲಿ ಕರ್ಣಾಟ ದೇಶದ ರಾಜನೂ ಒಬ್ಬ ಎಂದು ಮಹಾಭಾರತದಲ್ಲಿದೆ. ಕರ್ಣೇ ಅಟತಿ ಇತಿ ಕರ್ಣಾಟ (ಕಿವಿಗೆ ಇಂಪು) ಎಂದು ಹೇಳಲಾಗುತ್ತದೆ. ಕರುನಾಡು ಎಂಬುದರ ಅರ್ಥ ಎಲ್ಲರಿಗೂ ಗೊತ್ತು. ಇನ್ನೊಂದು ದಾಖಲೆ (ಹಟ್ಟಂಗಡಿ ನಾರಾಯಣ ರ್ಆವ್) ಎತ್ತರದ ಭೂಭಾಗ ಎಂದು ಅರ್ಥ ಹೇಳುತ್ತದೆ. ಕರ್ನಾಟಕದ ಭೂಭಾಗ ಉಬ್ಬಿಕೊಂಡಿರುವುದರಿಂದ ಹೆಸರು. ಸಹ್ಯಾದ್ರಿಯ ನದಿಗಳನ್ನು ಹೊರತುಪಡಿಸಿ ಎಲ್ಲಾ ನದಿಗಳು ಪೂರ್ವಕ್ಕೆ ಹರಿಯುವುದು ಇದೇ ಕಾರಣಕ್ಕೆ.
ನಾನು ಸೇವಾಗ್ರಾಮದಲ್ಲಿದ್ದಾಗ ಕುಂಭಕೋಣಕ್ಕೆ ಪಯಣಗೈದಿದ್ದ ಗೋಪಿ ಫೋನಾಯಿಸಿಮಗಾ ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತ ಎಂದು ಯಾಕೆ ಕರೆಯಬೇಕೆಂದು ಪುರಾವೆ ಸಿಕ್ಕಿತುಅಂತ ಹೇಳಿದ. ತ್ಯಾಗರಾಜರ ಆರಾಧನೆಯ ಉತ್ಸವಕ್ಕೆ ಹೋದಾಗ ಕುಂಭಕೋಣಕ್ಕೆ ಭೇಟಿ ನೀಡಿ ನಾನೂ ನೋಡಿದೆ. ಸಾರಾಂಶವನ್ನು ಇಲ್ಲಿಡುತ್ತಿದ್ದೇನೆ.


ಹದಿನಾರನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಕುಂಭಕೋಣದವನ್ನು ರಾಜಧಾನಿಯನ್ನಾಗಿಸಿ ಆಳುತ್ತಿದ್ದವರು ಸೇವಪ್ಪ, ಅಚ್ಯುತಪ್ಪ ಹಾಗೂ ರಘುನಾಥ ನಾಯಕರು. ಇವರ ಸಮರ್ಥ ಆಡಳಿತಕ್ಕೆ ಬೆನ್ನೆಲುಬಾಗಿ ನಿಂತವರು ಅಮಾತ್ಯರಾಗಿದ್ದ ಗೋವಿಂದ ದೀಕ್ಷಿತರು. ಗೋವಿಂದ ದೀಕ್ಷಿತರು ಅತ್ಯುತ್ತಮ ಮುತ್ಸದಿಗಳಲ್ಲದೇ ಸಾಹಿತಿ ಮತ್ತು ಸಂಗೀತ ವಿದ್ವಾಂಸರಾಗಿದ್ದರು. ಉಪಮನ್ಯು ವಶಿಷ್ಠಗೋತ್ರದ ಅಚ್ಚ ಕನ್ನಡಿಗ ಸ್ಮಾರ್ಥ ಸಂಪ್ರದಾಯದ ಬ್ರಾಹ್ಮಣರು. ಗೋವಿಂದ ದೀಕ್ಷಿತರು ತಮ್ಮ ಆಡಳಿತ ಸಾಮರ್ಥ್ಯದಿಂದಾಗಿ ತಮಿಳಿನಾಡಿನಾದ್ಯಂತ ಜನಪ್ರೀಯರಾಗಿದ್ದರು. ಇಂದಿಗೂ ತಂಜಾವೂರಿನಿಂದ ತಿರುವಣ್ಣಾಮಲ್ಲೈ ವರೆಗೆ ಗೋವಿಂದ ದೀಕ್ಷಿತರ ಹೆಸರಿನ ಗೋವಿಂದಪುರಂ, ಗೋವಿಂದನಲ್ಲುರ್, ಗೋವಿಂದವಾಡಿ, ಅಯ್ಯಂಪೆಟ್ ಇತ್ಯಾದಿ ಊರುಗಳು ಗೋವಿಂದ ದೀಕ್ಷಿತರ ಕೀರ್ತಿಯನ್ನು ಸಾರುತ್ತಿವೆ. ಇಂದಿಗೂ ಅನೇಕ ರಸ್ತೆ, ಬಡಾವಣೆಗಳಿಗೆ ಗೋವಿಂದ ದೀಕ್ಷಿತರ ಹೆಸರನ್ನಿಡಲಾಗುತ್ತಿದೆ. ರಾಮೇಶ್ವರಂ , ಕುಂಭಕೋಣಂ, ವೃದ್ಧಾಚಲಂ, ವಿಲಾನಗರದ ಗುಡಿಗಳನ್ನು ಕಟ್ಟಿಸಿದವರು ಗೋವಿಂದ ದೀಕ್ಷಿತರು. ಸಾಹಿತ್ಯಸೇವೆಯ ಅಂಗವಾಗಿ ಕುಮಾರಿಲ ದರ್ಶನ ಮತ್ತು ಜೈಮಿನಿ ಸೂತ್ರಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಜೊತೆಗೆ ಸಂಗೀತ ಸಂಶೊಧನಾ ಗ್ರಂಥ ಸಂಗೀತಸುಧಾ ಸಂಗೀತ ಸಂಶೊಧನೆಯಲ್ಲೊಂದು ಮೈಲಿಗಲ್ಲು. ತಂಜಾವೂರು ಮೇಳವೀಣೆಯನ್ನು ಗೋವಿಂದ ದೀಕ್ಷಿತರೇ ವಿನ್ಯಾಸಗೊಳಿಸಿದ್ದು. ಇದರ ಜೊತೆಗೆ ಅನೇಕ ಸಂಸ್ಕೃತ ಗ್ರಂಥಗಳ ತಮಿಳು ಅನುವಾದಗಳೂ ಗೋವಿಂದ ದೀಕ್ಷಿತರ ಕೊಡುಗೆಗಳು. ತಮಿಳುನಾಡಿನ ಅರೆಭಾಗವನ್ನು ಮುಕ್ಕಾಲು ಶತಮಾನಗಳ ಕಾಲ ಸಮರ್ಥವಾಗಿ ಆಳಿದ ಗೋವಿಂದ ದೀಕ್ಷಿತರ ಸಾಧನೆಗಳು ಎಣಿಕೆಗೆ ನಿಲುಕುವಂತಹುದಲ್ಲ.
ಗೋವಿಂದ ದೀಕ್ಷಿತರಿಗೆ ಎಂಟು ಜನ ಗಂಡುಮಕ್ಕಳು ಒಬ್ಬ ಹೆಣ್ಣುಮಗಳು. ತಂದೆಯಂತೆಯೇ ಮಕ್ಕಳು ಮಹಾಮೇಧಾವಿಗಳು. ಹಿರಿಯ ಮಗ ಲಿಂಗದ್ವಾರಿ ಶಿವಸಹಸ್ರನಾಮದ ಮೇಲೆ ಭಾಷ್ಯವನ್ನು ಬರೆದಿದ್ದಾರೆ. ಎರಡನೆಯ ಮಗ ಯಜ್ಞನಾರಾಯಣ ದೀಕ್ಷಿತರು ರಘುನಾಥಾಭ್ಯುತಂ, ಸಾಹಿತ್ಯರತ್ನಕರಂ ಕೃತಿಗಳ ಕರ್ತೃ. ಇವೆರಡು ಗ್ರಂಥಗಳು ಅಂದಿನ ರಾಜರುಗಳ ಹಾಗೂ ಗೋವಿಂದ ದೀಕ್ಷಿತರ ವಿವರವಾದ ವರ್ಣನೆಯನ್ನು ನೀಡುತ್ತವೆ. ಇವರ ಮೂರನೆಯ ಸತ್ಪುತ್ರರೇ ವೆಂಕಟಮಖಿ! ಕರ್ನಾಟದ ಸಂಗೀತದಲ್ಲಿ ವೆಂಕಟಮಖಿ ಚಿರಪರಿಚಿತ ಹೆಸರು. ಕರ್ನಾಟದ ಸಂಗೀತದ ಎಪ್ಪತ್ತೆರಡು ಮೇಳಕರ್ತಗಳ ಸೃಷ್ಠಿಕರ್ತರು ವೆಂಕಟಮಖಿಯವರು. ಎಪ್ಪತ್ತೆರಡು ಮೇಳಕರ್ತಗಳನ್ನು ವೆಂಕಟಮಖಿಗಳು ತಮ್ಮ ಸಂಗೀತ ಸಂಶೋಧನಾ ಗ್ರಂಥಚತುರ್ದಂಡಿ ಪ್ರಕಾಶಿಕಾದಲ್ಲಿ ವಿವರಿಸುತ್ತಾರೆ. ಕರ್ನಾಟಕ ಸಂಗೀತದಲ್ಲಿ ಮೇಳಕರ್ತಗಳ ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು. ಮಧ್ವಾಚಾರ್ಯರೂ ಸಂಗೀತದ ಮೂಲಕವೇ ದೈವಸಾಕ್ಷತ್ಕಾರಕ್ಕೆ ಮೊದಲು ಮಾಡಿದವರು. ಕರ್ನಾಟಕ ಎಂದರೆ ಈಗಿರುವ ಇಪ್ಪತ್ತೊಂಬತ್ತು ಜಿಲ್ಲೆಗಳ ಕರ್ನಾಟಕವಲ್ಲ. ಉತ್ತರದಲ್ಲಿ ಬೀದರ್ನಿಂದ ಸೇರಿ ದಕ್ಷಿಣದ ಪಾಲಕ್ಕಾಡ್ ಪ್ರದೇಶದವರೆಗೆ ಪಶ್ಚಿಮದಲ್ಲಿ ಸಹ್ಯಾದ್ರಿಯ ಘಟ್ಟಗಳಿಂದ ಪೂರ್ವದ ಕೋರಮಂಡಲ ತೀರದವರೆಗಿನ ಪ್ರದೇಶ ಕರ್ನಾಟಕವಾಗಿತ್ತು. ಬಹಮನಿ ರಾಜರ ನಂತರ ಕರ್ನಾಟಕ ಛಿದ್ರವಾಯಿತು. ಪ್ರಕಾರ ಕರ್ನಾಟಕವನ್ನು ಪರಿಗಣಿಸಿದರೆ ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರು, ತ್ಯಾಗರಾಜರು ಅನೇಕಾನೇಕ ಸಂಗೀತ ದಿಗ್ಗಜರು ಕರ್ನಾಟಕದಲ್ಲೇ ಓಡಾಡಿಕೊಂಡಿದ್ದರು. ಮೇಲೆ ಹೇಳಿದ ಗೋವಿಂದ ದೀಕ್ಷಿತರು ಹಾಗೂ ವೆಂಕಟಾಮಖಿಗಳು ಅಪ್ಪಟ ಕನ್ನಡಿಗರು. ಹಾಗಾಗಿ ದಕ್ಷಿಣಾದಿ ಸಂಗೀತಕ್ಕೆ ಯಾವುದೇ ಸಂಶಯಕ್ಕೆ ಎಡೆಯಿಲ್ಲದೇ ಕರ್ನಾಟಕ ಸಂಗೀತ ಎಂದು ಕರೆಯಬಹುದು. ಸ್ವತಃ ಪಾಲಕ್ಕಾಡಿನವರೇ ಚಂಬೈ ವೈದ್ಯನಾಥ, ಡಿವಿಜಿ ಅನೇಕ ಹಿರಿಯರು ಕರ್ನಾಟಕ ಸಂಗೀತ ಎಂದೇ ಸಂಬೊಧಿಸುತಿದ್ದರು.


ಹುಡುಕಾಟದ ನಡುವೆ ಕರ್ನಾಟಕದ ಬಗ್ಗೆ ನನಗೆ ಇನ್ನೂ ಅನೇಕ ಮಹತ್ವದ ಮಾಹಿತಿಗಳು ದೊರಕಿವೆ. ವಿಷಯಪಲ್ಲಟವಾಗುವುದರಿಂದ ಇಲ್ಲಿ ಹೇಳಲಾರೆ. ಮುಂದೆ ಸಂದರ್ಭಕ್ಕೆ ತಕ್ಕಂತೆ ಹಂಚಿಕೊಳ್ಳುತ್ತೇನೆ. ಮೊದಲೇ ಹೇಳಿದ ಹಾಗೆ ಹುಡುಕಾಟ ಇನ್ನೂ ಮುಗಿದಿಲ್ಲ. ಕರ್ನಾಟಕ ಸಂಗೀತದ ಬಗ್ಗೆ ನಿಮ್ಮಲ್ಲಿ ಹೆಚ್ಚಿನ ಮಾಹಿತಿ ಅಥವಾ ದಾಖಲೆಗಳೇನಾದರೂ ಇದ್ದರೆ ದಯವಿಟ್ಟು ನನ್ನೊಡನೆ ಹಂಚಿಕೊಳ್ಳಿ. ವೆಂಕಟಮಖಿಗಳ ಪುಸ್ತಕಗಳು ದೊರೆಯುತ್ತವೆ. ಆದರೆ ಗೋವಿಂದ ದೀಕ್ಷಿತರ ಪುಸ್ತಕಗಳು ಲಭ್ಯವಿಲ್ಲ ಅಥವಾ ನನಗೆ ದೊರೆಯಲಿಲ್ಲ. ಇವು ಯಾರಲ್ಲಾದರೂ ಲಭ್ಯವಿದ್ದರೆ ದಯವಿಟ್ಟು ನನಗೆ ತಿಳಿಸಿ. ಜೆರಾಕ್ಸ ಪ್ರತಿ ಮಾಡಿಸಿಕೊಂಡು ವಾಪಸು ಕೊಡುತ್ತೇನೆ.
ಚಿತ್ರ : ತಿರುವಯ್ಯಾರ್ ತ್ಯಾಗರಾಜರ ಗುಡಿಯ ಪುತ್ಥಳಿ.